ಮತ್ತೊಂದು ಸಮಾವೇಶಕ್ಕೆ ಸಚಿವ ವರ್ತೂರು ಸಿದ್ಧತೆ
ಕೋಲಾರ: ಫೆ.13ರಂದು ತಾಲೂಕಿನ ವೇಮಗಲ್ ಮತ್ತು ಕ್ಯಾಲನೂರು ಹೋಬಳಿ ಕಾರ್ಯಕರ್ತರ ಸಮಾವೇಶವನ್ನು ಕ್ಯಾಲನೂರಿನಲ್ಲಿ ಜಂಟಿಯಾಗಿ ನಡೆಸಲು ಉದ್ದೇಶಿಸಲಾಗಿದ್ದು, ವಕ್ಕಲೇರಿಯಲ್ಲಿ ಸಮಾವೇಶವನ್ನು ಯಶಸ್ವಿಗೊಳಿಸಿದ ರೀತಿಯಲ್ಲೇ ಜಂಟಿ ಸಮಾವೇಶವನ್ನು ಯಶಸ್ವಿಗೊಳಿಸಲು ಕಾರ್ಯಕರ್ತರು ಶ್ರಮಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರ್ ಪ್ರಕಾಶ್ ಕರೆ ನೀಡಿದರು.
ತಾಲೂಕಿನ ಸೀತಿ ಗ್ರಾಮದಲ್ಲಿ ಬುಧವಾರ ಶ್ರೀ ಭೈರವೇಶ್ವರ ದೇವಾಲಯದ ಪ್ರಾಂಗಣದಲ್ಲಿ ನಡೆದ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ವಕ್ಕಲೇರಿ ಹೋಬಳಿ ಸಮಾವೇಶ ಅಭೂತಪೂರ್ವ ಯಶಸ್ಸು ಕಂಡಿದ್ದು, ಈ ಜಂಟಿ ಹೋಬಳಿಗಳ ಸಮಾವೇಶಕ್ಕೆ 20 ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಮುಂಬರುವ ವಿಧಾನಸಭೆ ಚುನಾವಣೆಯನ್ನು ತಮ್ಮ ಬಣದ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಷ್ಠೆಯಾಗಿ ಸ್ವೀಕರಿಸಬೇಕು. ನಾನು ಕಳೆದ ನಾಲ್ಕೂ ಮುಕ್ಕಾಲು ವರ್ಷದಲ್ಲಿ ನಡೆಸಿರುವ ಅಭಿವೃದ್ಧಿ ಸಾಧನೆಯ ಮಾನದಂಡದ ಮೇಲೆ ಜನತೆಯನ್ನು ಮತ ಕೇಳುವ ನೈತಿಕತೆ ಉಳಿಸಿಕೊಂಡಿದ್ದೇವೆ ಎಂದರು.
ಫೆ.13ರಂದು ನಡೆಯಲಿರುವ ಸಮಾವೇಶದ ಬಗ್ಗೆ ಜಿಲ್ಲಾ ಮಟ್ಟಕ್ಕೆ ಸಂದೇಶ ರವಾನಿಸುವಲ್ಲಿ ಯಶಸ್ವಿಯಾಗಬೇಕು. ಈ ನಿಟ್ಟಿನಲ್ಲಿ ತಮ್ಮ ಬಣದ ಕಾರ್ಯಕರ್ತರು, ಮುಖಂಡರು ಶ್ರಮಿಸಬೇಕು ಎಂದರು.
ಬೇಸಿಗೆ ದಿನಗಳು ಆರಂಭವಾಗುವ ಮುನ್ನವೇ ಕುಡಿಯುವ ನೀರಿನ ಬವಣೆ ಉಂಟಾಗದಂತೆ ಸಮರೋಪಾದಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸಚಿವರು ಪ್ರಕಟಿಸಿದರು.
ದರಖಾಸ್ತು ಸಮಿತಿ ಅಧ್ಯಕ್ಷ ಬೆಗ್ಲಿ ಪ್ರಕಾಶ್ ಮಾತನಾಡಿ, ಸಚಿವ ವರ್ತೂರು ಬಣದ ಕಾರ್ಯಕರ್ತರು ಮತ್ತು ಮುಖಂಡರು ಚುನಾವಣಾ ಯುದ್ಧಕ್ಕೆ ಸಿದ್ಧರಾಗಬೇಕು. ಯುದ್ಧಭೂಮಿಯಲ್ಲಿ ಸಂಧಾನಕ್ಕೆ ಅವಕಾಶವಿಲ್ಲವಾದ್ದರಿಂದ ಕಾರ್ಯಕರ್ತರು ಎಚ್ಚೆತ್ತು ಕೆಲಸ ಮಾಡಬೇಕು ಎಂದರು.
ಜೆಡಿಎಸ್ ಕಳೆದ ಒಂದು ತಿಂಗಳಿಂದ ನಿದ್ದೆಯಿಂದ ಎದ್ದು ಚುನಾವಣೆಗಾಗಿ ಕೆಲಸ ಮಾಡುತ್ತಿದೆ. ನಿದ್ದೆಗಣ್ಣಿನಲ್ಲಿ ಎಲ್ಲ ಅವಾಂತರಗಳನ್ನು ಸೃಷ್ಟಿಸುತ್ತಾ ಜನರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದೆ ಎಂದರು.
ಬಸವ ವಸತಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಮನೆ ವಿತರಿಸಿದರೆ ಸಚಿವರಿಗೆಲ್ಲಿ ಉತ್ತಮ ಹೆಸರು ಬರುತ್ತದೋ ಎಂಬ ಭೀತಿಯಲ್ಲಿ ತಾಪಂಗೆ ನುಗ್ಗಿ ದಾಖಲೆಗಳನ್ನು ಹರಿದ ಜೆಡಿಎಸ್ಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಸ್ತಿಯನ್ನು ಜನತೆ ಮಾಡಲಿದ್ದಾರೆ ಎಂದರು.
ಅಧ್ಯಕ್ಷ ಮುನಿನಾರಾಯಣಪ್ಪ, ಮುಕ್ಕಡ್ ವೆಂಕಟೇಶ್, ಪಿಎಲ್ಡಿ ಬ್ಯಾಂಕ್ ಮಾಜಿ ನಿರ್ದೇಶಕ ಕೃಷ್ಣಾಪುರ ಶ್ರೀನಿವಾಸ್, ಹಾಲಿ ನಿರ್ದೇಶಕ ಜಂಭಾಪುರ ವೆಂಕಟರಾಂ, ತಾಪಂ ಅಧ್ಯಕ್ಷೆ ಭಾಗ್ಯಲಕ್ಷ್ಮೀ ನಾರಾಯಣಮೂರ್ತಿ, ಸದಸ್ಯ ಮುನಿಭೈರಪ್ಪ, ಗ್ರಾಪಂ ಅಧ್ಯಕ್ಷರಾದ ರಾಜಣ್ಣ, ಸೌಭಾಗ್ಯಮ್ಮ, ಉಪಾಧ್ಯಕ್ಷ ಸುಬ್ಬಾರೆಡ್ಡಿ, ಮಾಜಿ ಅಧ್ಯಕ್ಷ ಭೈರಪ್ಪ, ಕುರುಗಲ್ ತಮ್ಮಣ್ಣ, ಚೋಳಘಟ್ಟ ನಂಜಪ್ಪ, ಪೆದ್ದಪ್ಪಯ್ಯ, ಕಡಗಟ್ಟೂರು ದೇವರಾಜ್, ಕುರುಬರಹಳ್ಳಿ ಕುಮಾರ್, ಕ್ಯಾಲನೂರು ಮುನ್ನಾ, ಚಾನ್, ಗೋಪಾಲಕೃಷ್ಣ, ಕೃಷ್ಣಯ್ಯ, ಬೈರಂಡಹಳ್ಳಿ ರಾಮೇಗೌಡ, ಬೈಚಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸೋಮಶೇಖರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

