ಗ್ರಾಪಂ ಮಾಜಿ ಅಧ್ಯಕ್ಷನ ಮೇಲೆ ಹಲ್ಲೆ
ಚಿಂತಾಮಣಿ: ಕ್ಷುಲ್ಲಕ ಕಾರಣಕ್ಕೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷನ ಮೇಲೆ ಗುಂಪೊಂದು ಹಲ್ಲೆ ಮಾಡಿದ ಪರಿಣಾಮ ವ್ಯಕ್ತಿಯು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಮುರುಗಮಲ್ಲ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಮುರುಗಮಲ್ಲ ದರ್ಗಾ ಹಜರತ್ ಅಮ್ಮಜಾನ್ಬಾಬಾಜಾನ್ ಅವರ ಗಂಧದ ಅಭಿಷೇಕ ಮತ್ತು ಉರುಸ್ ಕಾರ್ಯಕ್ರಮದ ಸಿದ್ಧತೆ ಭರದಿಂದ ನಡೆಯುತ್ತಿತ್ತು. ಶುಕ್ರವಾರ ಬೆಳಗ್ಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಬ್ಬೀರ್ ಅಹಮದ್ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮದ ಸಿದ್ಧತೆ ಬಗ್ಗೆ ಸಂಬಂಧಪಟ್ಟವರ ಜೊತೆ ಚರ್ಚಿಸುತ್ತಿದ್ದರು ಎನ್ನಲಾಗಿದೆ. ಇದನ್ನು ಕಂಡ ದರ್ಗಾ ಸಮಿತಿಯ ಅನ್ಸರ್ ಮತ್ತು ನೂರ್ಜಾನ್ ಹಾಗೂ ಅಮಾನುಲ್ಲಾ ಇತರರು ಗುಂಪು ಕಟ್ಟಿಕೊಂಡು ಕ್ಲುಲ್ಲಕ ಕಾರಣಕ್ಕೆ ಶಬ್ಬೀರ್ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ ಪರಿಣಾಮ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲಾರಿ- ಬೈಕ್ ಡಿಕ್ಕಿ: ಇಬ್ಬರ ಸಾವು
ಮುಳಬಾಗಲು: ತಾಲೂಕಿನ ಶ್ರೀನಿವಾಸಪುರ ರಸ್ತೆಯ ಬೇವಹಳ್ಳಿ ಗ್ರಾಮದ ಗೇಟ್ ಬಳಿ ಮರಳು ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಶುಕ್ರವಾರ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಚಿಂತಾಮಣಿ ತಾಲೂಕಿನ ಚಿನ್ನಶೆಟ್ಟಿಹಳ್ಳಿ ಗ್ರಾಮದ ಕೃಷ್ಣಪ್ಪ(35) ಮತ್ತು ಗೋಪಸಂದ್ರ ಗ್ರಾಮದ ನರಸಿಂಹಪ್ಪ(40) ಎಂದು ಗುರುತಿಸಲಾಗಿದೆ. ಮೃತರು ಟೋಮೆಟೋ ವ್ಯಾಪಾರಿಗಳಾಗಿದ್ದು, ವ್ಯಾಪಾರ ಮುಗಿಸಿಕೊಂಡು ವಾಪಸ್ಸು ಬರುತ್ತಿದ್ದಾಗ ದುರಂತ ಸಂಭವಿಸಿದೆ. ಮುಳಬಾಗಲು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ವ್ಯಕ್ತಿ ಆತ್ಮಹತ್ಯೆ
ಮಾಲೂರು: ದುಡಿಮೆಯ ವಿಷಯದಲ್ಲಿ ತಂದೆ- ಸಹೋದರರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವ್ಯಕ್ತಿ ವಿಷ ಸೇವಿಸಿ ಮೃತಪಟ್ಟ ಘಟನೆ ತಾಲೂಕಿನ ದ್ಯಾಪಸಂದ್ರದಲ್ಲಿ ನಡೆದಿದೆ. ಗ್ರಾಮದ ವೆಂಕಟೇಶಪ್ಪರ ಎರಡನೇ ಮಗನಾದ ಸುಬ್ರಹ್ಮಣ್ಯ(26) ವಿಷ ಸೇವಿಸಿ ಮೃತಪಟ್ಟ ವ್ಯಕ್ತಿ. ತನ್ನ ತಂದೆ- ಸಹೋದರರು ತಾನೂ ಹೊಡೆಯುತ್ತಿದ್ದ ಟ್ಯಾಂಕರ್ ಟ್ರಿಪ್ನಲ್ಲಿ ವ್ಯತ್ಯಾಸದ ಲೆಕ್ಕ ನೀಡುತ್ತಿದ್ದಾನೆ ಎಂದು ಅನುಮಾನ ವ್ಯಕ್ತಪಡಿಸಿ ಹೇಳಿದ ಬುದ್ಧಿವಾದ ಹೇಳಿದ್ದರು. ಇದರಿಂದ ನೊಂದಿದ್ದ ಸುಬ್ರಹ್ಮಣ್ಯ ಗ್ರಾಮದ ಹೊರವಲಯದ ತಮ್ಮ ಇಟ್ಟಿಗೆ ಕಾರ್ಖಾನೆಯಲ್ಲಿ ಮದ್ಯದೊಂದಿಗೆ ವಿಷ ಸೇವಿಸಿದ್ದಾನೆ. ಸಂಜೆ ಹೊತ್ತಿಗೆ ವಿಷಯ ತಿಳಿದ ಮನೆಯವರು ತಕ್ಷಣ ಕೋಲಾರದ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಪಟ್ಟರಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಕೇವಲ 11 ತಿಂಗಳ ಹಿಂದೆ ತಾಲೂಕಿನ ರಾಜೇನಹಳ್ಳಿಯ ಮಧು ಎಂಬರನ್ನು ಮದುವೆಯಾಗಿದ್ದ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

