ಕೋಲಾರ

ಬಡಾವಣೆ ನಿರ್ಮಾಣಕ್ಕೆ ವಿರೋಧಿಸಿ ಕಪ್ಪು ಬಾವುಟ ಪ್ರದರ್ಶನ

Published On :

ರಾಮನಗರ: ಕನಕಪುರ ಪಟ್ಟಣದ ರಾಯಸಂದ್ರ ಮತ್ತು ತುಂಗಣಿ ಬಳಿ ಕರ್ನಾಟಕ ಗೃಹ ಮಂಡಳಿಯಿಂದ ಬಡಾವಣೆ ನಿರ್ಮಾಣಕ್ಕೆ ವಿರೋಧಿಸಿ ಕಪ್ಪು ಬಾವುಟ ಪ್ರದರ್ಶನದೊಂದಿಗೆ ಪ್ರತಿಭಟನೆಗೆ ಮುಂದಾದ 50ಕ್ಕೂ ಹೆಚ್ಚು ಭೂ ಸಂತ್ರಸ್ತ ರೈತರಿಗೆ ಪೊಲೀಸರು ದಿಗ್ಬಂಧನ ವಿಧಿಸಿದರು.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗೈರು ಹಾಜರಿಯಲ್ಲಿ ಬಡಾವಣೆಗೆ ಶಂಕುಸ್ಥಾಪನೆ ನೆರವೇರಿಸಿದ ವಸತಿ ಸಚಿವ ವಿ.ಸೋಮಣ್ಣ ಅವರನ್ನು ಘೇರಾವ್ ಮಾಡಲು ರೈತರು ನಿರ್ಧರಿಸಿದ್ದರು. ವಿಷಯ ತಿಳಿದ ಪೊಲೀಸರು ರೈತರನ್ನು ತುಸು ದೂರದ ಬಯಲಲ್ಲೇ ಅಡ್ಡಗಟ್ಟಿದರು.  
ಹೈಕೋರ್ಟ್ ತಡೆಯಾಜ್ಞೆ: ರಾಯಸಂದ್ರ, ಸಂಪನದೊಡ್ಡಿ, ತುಂಗಣಿ, ಕರೀಗೌಡನದೊಡ್ಡಿ ಗ್ರಾಮಗಳ ವಿವಿಧ ಸರ್ವೆ ನಂಬರ್‌ಗಳಿಗೆ ಸೇರಿದ 450 ಎಕರೆಯಷ್ಟು ಜಮೀನಿನಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ಬಡಾವಣೆ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಈ ಪೈಕಿ 70 ಮಂದಿ ರೈತರು ನಿವೇಶನ ನೀಡಲು ನಿರಾಕರಿಸಿ, ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ.
ಭೂಮಿ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವ ರೈತರು ಬಡಾವಣೆ ಶಂಕುಸ್ಥಾಪನೆ ವಿಷಯ ತಿಳಿದು ಕಪ್ಪು ಬಾವುಟದೊಂದಿಗೆ  ಸ್ಥಳಕ್ಕೆ ಆಗಮಿಸಿದರು. ಪ್ರತಿಭಟನೆಯ ಸುಳಿವನ್ನರಿತ ಪೊಲೀಸರು ರೈತರನ್ನು ವೇದಿಕೆಯಿಂದ ಸುಮಾರು 50 ಮೀಟರ್ ದೂರದಲ್ಲೇ ತಡೆದು, ದಿಗ್ಬಂಧನ ಹಾಕಿದ್ದರು.
ಶಂಕುಸ್ಥಾಪನೆ ಸಮಾರಂಭದ ಸ್ಥಳಕ್ಕೆ ತೆರಳಲು ರೈತರ ದಂಡು ಹರ ಸಾಹಸ ನಡೆಸಿತಾದರೂ ಪೊಲೀಸರು ಅವಕಾಶ ನೀಡಲಿಲ್ಲ. ರೈತರು ತಮ್ಮ ಸ್ಥಿತಿಗೆ ಕಾರಣರಾದ ಪೊಲೀಸರು, ವಸತಿ ಸಚಿವ ಸೋಮಣ್ಣ, ಶಾಸಕ ಡಿ.ಕೆ.ಶಿವಕುಮರ್ ವಿರುದ್ಧ ಘೋಷಣೆ ಕೂಗಿದರು.
ಒಕ್ಕೆಲೆಬ್ಬಿಸಲು ಬಿಡೆವು: ತುಂಡು ಭೂಮಿಯಲ್ಲಿ ಕೃಷಿ ಚಟುವಟಿಕೆ ಅವಲಂಬಿಸಿ ಜೀವನ ಸಾಗಿಸುತ್ತಿರುವ ತಮ್ಮನ್ನು ಬಡಾವಣೆ ಹೆಸರಿನಲ್ಲಿ ಇಲ್ಲಿಂದ ಒಕ್ಕಲೆಬ್ಬಿಸುವ ಷಡ್ಯಂತ್ರ ನಡೆದಿದೆ. ಯಾವುದೇ ಕಾರಣಕ್ಕೂ ತಮಗೆ ಸೇರಿದ ಒಂದಿಂಚು ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಪ್ರತಿಭಟನಾನಿರತ ರೈತರು ಎಚ್ಚರಿಸಿದರು. ಸಚಿವ ಸೋಮಣ್ಣ ಅವರಿಗೆ ನೈತಿಕತೆ ಇದ್ದಲ್ಲಿ ತಕ್ಷಣ ಈ ವಸತಿ ಯೋಜನೆಯನ್ನು ಕೈಬಿಡಬೇಕು. ಕೃಷಿ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವ ಬದಲು ಕೃಷಿಕರಿಗೆ ಸೂಕ್ತ ಉತ್ತೇಜನ ನೀಡಬೇಕು. ಇಲ್ಲವಾದಲ್ಲಿ ನಿರಂತರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಭೂ ಸ್ವಾಧೀನ ಪ್ರಕ್ರಿಯೆಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರೂ ಈ ಶಂಕುಸ್ಥಾಪನಾ ಸಮಾರಂಭ ನಡೆಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಲಾಗಿದೆ. ಈ ಕುರಿತು ಕೋರ್ಟ್ ಮೊರೆ ಹೋಗಲಾಗುವುದು. ಕಾನೂನು ಹೋರಾಟ ಮುಂದುವರೆಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ದಿಕ್ಕು ತಪ್ಪಿದ ಸಚಿವರು: ಬಡಾವಣೆಗೆ ಶಂಕುಸ್ಥಾಪನೆ ನೆರವೇರಿಸಿ ಆ ಸ್ಥಳದಿಂದ ನಿರ್ಗಮಿಸುವಾಗ ಸಚಿವ ವಿ. ಸೋಮಣ್ಣ ಅವರು ಮನವಿ ಸ್ವೀಕರಿಸುವುದಕ್ಕಾಗಿ ಪ್ರತಿಭಟನಾಕಾರರನ್ನು ಕರೆಯುವಂತೆ ಸೂಚಿಸಿದರು. ಆದರೆ, ಸಚಿವರನ್ನು ಸುತ್ತುವರೆದಿದ್ದ ಪೊಲೀಸರು ಮತ್ತು ಡಿ.ಕೆ.ಶಿವಕುಮಾರ್ ಬಂಟರು ಅವರ್‌ಯಾರೂ(ಪ್ರತಿಭಟನಾಕಾರರು) ಇಲ್ಲಿಗೆ ಬರುವುದಿಲ್ಲವಂತೆ ಎಂದು ಹೇಳಿ ದಿಕ್ಕು ತಪ್ಪಿಸಿದರು.
ಅಲ್ಲಿ ಪ್ರತಿಭಟನಾಕಾರರಿಗೆ ಪೊಲೀಸರೇ ತಡೆಯೊಡ್ಡಿರುವ ಸಂಗತಿಯನ್ನು ಸಚಿವರಿಂದ ಮರೆಮಾಚಲಾಯಿತು. ವೇದಿಕೆಯಿಂದ ತುಸು ದೂರದಲ್ಲೇ ರೈತರನ್ನು ಪೊಲೀಸರು ಸುತ್ತುವರೆದಿದ್ದ ದೃಶ್ಯ ಸಚಿವರಿಗೂ ಕಾಣಲಿಲ್ಲ. ಧಿಮಾಕಿನಿಂದಲೇ ರೈತರು ಸಚಿವರ ಬಳಿ ಬರಲಿಲ್ಲವೆಂದು ದಿಕ್ಕು ತಪ್ಪಿಸಿ, ಮನವಿ ನೀಡುವುದಕ್ಕೂ ಅವಕಾಶ ತಪ್ಪಿಸಲಾಯಿತು.
ರು.60 ಲಕ್ಷ ಪರಿಹಾರ : ಬೆಂಗಳೂರು ಸೇರಿದಂತೆ ಬೇರೆಡೆ ನೀಡುವುದಕ್ಕಿಂತಲೂ ಹೆಚ್ಚಿನ ಪರಿಹಾರವನ್ನು ಈ ಬಡಾವಣೆ ಜಮೀನಿಗೆ ನೀಡಲಾಗಿದೆ. ಪ್ರತಿ ಎಕರೆಗೆ ರು.60 ಲಕ್ಷ ಪರಿಹಾರ ಕಮ್ಮಿಯೇನಲ್ಲ. ಎಕರೆ ಜಮೀನಿಗೆ ಒಂದರಂತೆ ಇಲ್ಲಿ ನಿವೇಶನವನ್ನು ಪುಕ್ಕಟೆಯಾಗಿ ಕೊಡಲಾಗುತ್ತದೆ. ಇಷ್ಟಾಗಿಯೂ ರೈತರಿಂದ ವಿರೋಧ ಸರಿಯಲ್ಲ ಎಂದು ಸಚಿವ ಸೋಮಣ್ಣ ಸುದ್ದಿಗಾರರಿಗೆ ತಿಳಿಸಿದರು.
ವಾಸ್ತವದಲ್ಲಿ ಪರಿಹಾರದಿಂದ ರೈತರು ಸಂತೃಪ್ತರಾಗಿದ್ದಾರೆ. ಕೈಲಾಗದವನು ಮೈ ಪರಚಿಕೊಂಡ ಎನ್ನುವಂತೆ ಬಡ ರೈತರನ್ನು ಎತ್ತಿಕಟ್ಟಿ, ಅವರನ್ನು ಪ್ರತಿಭಟನೆಗೆ ಇಳಿಸಲಾಗಿದೆ ಎಂದು ಹೇಳುವ ಮೂಲಕ ಅವರು ಹೋರಾಟವನ್ನು ರಾಜಕೀಯ ಪ್ರೇರಿತವಾದುದು ಎಂದು ನೇರವಾಗಿ ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.