ಕೋಲಾರ

'ವಕೀಲರು ನಿರಂತರ ಅಧ್ಯಯನಶೀಲರಾಗಲಿ'

Published On :

ಚಿಕ್ಕಬಳ್ಳಾಪುರ: ನ್ಯಾಯಾಲಯದಲ್ಲಿ ಒಳ್ಳೆಯ ರೀತಿಯಲ್ಲಿ ವಾದ- ವಿವಾದಗಳು ನಡೆದಾಗ ಮಾತ್ರ ನ್ಯಾಯ ಕಾಪಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಾದ ಮಾಡುವ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಈರಣ್ಣವರ್ ವಕೀಲರಿಗೆ ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಖಿಲ ಭಾರತ ವಕೀಲರ ಪರಿಷತ್ ಮತ್ತು ಜಿಲ್ಲಾ ವಕೀಲರ ಸಂಘ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು.
ಕಲಿಯುವಾಗ ಹಿರಿಯರು ಕಿರಿಯರು ಎನ್ನುವ ಮಾತೇ ಬರುವುದಿಲ್ಲ. ಇದರಿಂದ ಯಾರೇ ಆಗಲಿ ನನಗೆ ಎಲ್ಲಾ ಚೆನ್ನಾಗಿ ಗೊತ್ತಿದೆ ಎಂಬ ಭಾವನೆ ಹೊಂದಿರಬಾರದು. ಕಲಿಕೆ ಎನ್ನುವುದು ಸಹ ನಿಂತ ನೀರಲ್ಲ.
ಅದು ಹರಿಯುವ ನದಿಯಿದ್ದಂತೆ. ಈ ಹಿನ್ನೆಲೆಯಲ್ಲಿ ತಾವು ಎಷ್ಟೇ ಕಲಿತರೂ ಕಲಿಯಬೇಕೆಂಬ ಉತ್ಸಾಹ ಪ್ರತಿಯೊಬ್ಬರಲ್ಲಿರಬೇಕೆಂದರು. ವಕೀಲರು ತಮ್ಮ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳಬೇಕು.
ಕೇವಲ ಅಲ್ಪ- ಸ್ವಲ್ಪ ಜ್ಞಾನ ಹೊಂದಿದ್ದರೆ ವಾದ ಮಾಡುವ ಸಂದರ್ಭದಲ್ಲಿ ಹಿನ್ನಡೆ ಅನುಭವಿಸಬೇಕಾಗುತ್ತದೆ. ಗೊಂದಲಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ ಎಂದರು.
ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವಂತಾಗಲು ತುಂಬಾ ಸಹಕಾರಿಯಾಗಿರುವ ಕಾರ್ಯಾಗಾರಗಳು ಆಗಾಗ ಹೆಚ್ಚಿಗೆ ನಡೆಯುತ್ತಿರಬೇಕು. ಇದಕ್ಕೆ ಅನುಗುಣವಾಗಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಾಗ ಹೆಚ್ಚಿನ ಸಂಖ್ಯೆಯಲ್ಲಿ ವಕೀಲರು ಭಾಗವಹಿಸಬೇಕು. ಅನುಭವಸ್ಥರು ಮತ್ತು ಹಿರಿಯರು ತಿಳಿಸುವ ಅಂಶಗಳನ್ನು ಮನದಟ್ಟು ಮಾಡಿಕೊಳ್ಳುವುದರ ಜತೆಗೆ ತಮ್ಮಲ್ಲಿ ಏನೇ ಆದರೂ ಸಂದೇಹಗಳಿದ್ದರೆ ಅವುಗಳನ್ನು ಬಗೆಹರಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು.
ಹಿರಿಯ ವಕೀಲ ಸುಬ್ಬರಾವ್, ನರಸಿಂಹಮೂರ್ತಿ ಮಾತನಾಡಿದರು. ವಕೀಲ ಸೂರ್ಯನಾರಾಯಣರಾವ್, ಹಿಂದೂ ಕಾನೂನು ಮತ್ತು ಪಾಪಿರೆಡ್ಡಿ, ಸ್ಪೆಸಿಫಿಕ್ ರೂಲ್ಸ್ ಆಕ್ಟ್ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ನ್ಯಾಯಾಧೀಶ ರಾಜೇಶ್ವರಿ ಹೆಗಡೆ, ರವಿಕಾಂತ್, ವಕೀಲರ ಸಂಘದ ಅಧ್ಯಕ್ಷ ಕೆ.ಎಚ್. ತಮ್ಮೇಗೌಡ, ವಕೀಲರಾದ ಜಿ.ಆರ್. ಹರಿಕುಮಾರ್, ರಘುರಾಂ, ಟಿ. ನಾರಾಯಣಸ್ವಾಮಿ, ಗೋಪಾಲರೆಡ್ಡಿ, ಮುನೇಗೌಡ, ಕೋಟೇಶ್ವರ್‌ರಾವ್, ಅಶ್ವತ್ಥ ನಾರಾಯಣ, ಪಿ. ಸುಬ್ರಮಣ್ಯ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.