ಕೋಲಾರ

ವಸತಿ ಯೋಜನೆ: ಶಾಸಕರಿಂದ ಅರ್ಜಿ ಸ್ವೀಕಾರ

Published On :

ಬಂಗಾರಪೇಟೆ: ಬಸವ ವಸತಿ ಯೋಜನೆಯಲ್ಲಿ ಕ್ಷೇತ್ರಕ್ಕೆ ಬಂದಿರುವ ನಾಲ್ಕು ಸಾವಿರ ಮನೆಗಳ ಫಲಾನುಭವಿಗಳ ಆಯ್ಕೆಗೆ ಖುದ್ದಾಗಿ ಶಾಸಕರೇ ಪ್ರತಿ ಪಂಚಾಯಿತಿಗೂ ಭೇಟಿ ನೀಡಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಸ್ವೀಕರಿಸಿಲು ಆಗಮಿಸಿದಾಗ ಗ್ರಾಮಸ್ಥರಿಂದ ನೂರಾರು ಅರ್ಜಿಗಳು ಹರಿದು ಬಂದವು.
ಈ ಹಿಂದೆ ಕ್ಷೇತ್ರಕ್ಕೆ ಬಸವ ವಸತಿ ಯೋಜನೆಯಲ್ಲಿ ಬಂದಿದ್ದ ಆರು ಸಾವಿರ ಮನೆಗಳಿಗೆ ಫಲಾನುಭವಿಗಳ ಆಯ್ಕೆಯಲ್ಲಿ ಹತ್ತಾರು ಲೋಪದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಹಾಗೂ ಇದನ್ನೇ ವಿರೋಧ ಪಕ್ಷಗಳು ದೊಡ್ಡ ರಾದ್ಧಾಂತ ಮಾಡಿದ್ದರಿಂದಾಗಿ ಭಾರಿ ವಿವಾದವೇ ಸೃಷ್ಟಿಯಾಗಿ ಮನೆಗಳ ನಿರ್ಮಾಣ ಪ್ರಕ್ರಿಯೆಗೆ ಸರ್ಕಾರ ಬ್ರೇಕ್ ಹಾಕುವ ಮಟ್ಟಕ್ಕೂ ಬಂದು ತಲುಪಿತ್ತು.
ಕ್ಷೇತ್ರಕ್ಕೆ ಒಟ್ಟು ಹತ್ತು ಸಾವಿರ ಮನೆಗಳನ್ನು ಶಾಸಕರ ಒತ್ತಡಕ್ಕೆ ಮಣಿದು ಸರ್ಕಾರ ನೀಡಿತ್ತು. ಆರು ಸಾವಿರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಉಳಿದ ನಾಲ್ಕು ಸಾವಿರ ಫಲಾನುಭವಿಗಳ ಆಯ್ಕೆಯಲ್ಲಿ ಮತ್ತೆ ಯಾವುದೇ ಗೊಂದಲಗಳಿಲ್ಲದೆ ಅರ್ಹರಿಗೆ ಮಾತ್ರ ಸರ್ಕಾರದ ಯೋಜನೆ ದಕ್ಕಬೇಕೆಂದು ಖುದ್ದಾಗಿ ಶಾಸಕ ಎಂ. ನಾರಾಯಣಸ್ವಾಮಿ ಅವರೇ ಎಲ್ಲಾ ಪಂಚಾಯಿತಿಗಳಿಗೆ ಭೇಟಿ ನೀಡಿ ಅರ್ಹರಿಂದ ಅರ್ಜಿ ಪಡೆಯುವುದಾಗಿ ತಿಳಿಸಿದ್ದರು.
ಅದರಂತೆ ಕಾರಹಳ್ಳಿ, ಮಾವಹಳ್ಳಿ, ಡಿಕೆಹಳ್ಳಿ, ಹುನ್ಕುಂದ ಹಾಗೂ ಘಟ್ಟಕಾಮದೇನಹಳ್ಳಿ ಪಂಚಾಯಿತಿಗಳಿಗೆ ಭೇಟಿ ನೀಡಿ ವಸತಿಹೀನರಿಂದ ಅರ್ಜಿ ಪಡೆದುಕೊಂಡಾಗ ಪ್ರತಿ ಪಂಚಾಯಿತಿಯಲ್ಲಿಯೂ ನೂರಕ್ಕೂ ಹೆಚ್ಚಿನ ಅರ್ಜಿಗಳು ಹರಿದು ಬಂದವು. ಇವುಗಳನ್ನು ನೋಡಿದ ಶಾಸಕರು ಇನ್ನೂ ಇಷ್ಟು ಮಂದಿ ವಸತಿಹೀನರು ಇದ್ದಾರೆಯೇ ಎಂದು ಆಶ್ಚರ್ಯಗೊಂಡು ಅತಿ ಶೀಘ್ರದಲ್ಲೆ ಮನೆ ನಿರ್ಮಾಣಕ್ಕೆ ಆದೇಶ ಪತ್ರ ನೀಡುವುದಾಗಿ ಭರವಸೆ ನೀಡಿದರು.
ಈ ವೇಳೆ ಕಾರಹಳ್ಳಿ ಗ್ರಾಮದಲ್ಲಿ ಪಂಚಾಯಿತಿ ಕಾರ್ಯದರ್ಶಿ ಹಾಗೂ ಕೆಲ ಮುಖಂಡರ ಕೈಚಳಕದಿಂದಾಗಿ ಅರ್ಹರಿಗೆ ಈ ಹಿಂದಿನ ಪಟ್ಟಿಯಲ್ಲಿ ಅವಕಾಶ ನೀಡದೆ ಉಳ್ಳವರಿಗೆ ನೀಡಲಾಗಿದೆ. ಕೇಳಿದರೆ ಲಂಚ ಕೇಳಿ ಬಡವರನ್ನು ಶೋಷಣೆ ಮಾಡುವರು ಎಂದು ಶಾಸಕರಿಗೆ ದೂರು ನೀಡಿ ಆಕ್ರೋಶ ವ್ಯಕ್ತಪಡಿಸಿದಾಗ ಕೆಲಕಾಲ ಸಭೆ ಗೊಂದಲದ ಗೂಡಾಗಿತ್ತು..
ನಂತರ ಕುಪಿತರನ್ನು ಸಮಾಧಾನಪಡಿಸಿದ ಶಾಸಕರು, ಈ ಹಿಂದೆ ನಡೆದಿರುವ ಕೆಲವು ದೋಷಗಳು ಮರುಕಳಿಸದೆ ಎಚ್ಚರ ವಹಿಸಿ ತಾವೇ ಫಲಾನುಭವಿಗಳನ್ನು ನೇರವಾಗಿ ಆಯ್ಕೆ ಮಾಡಲು ಬಂದಿದ್ದು, ಯಾರಿಗೂ ಅನ್ಯಾಯವಾದಗಂತೆ ಅರ್ಹರಿಗೆ ಮಾತ್ರ ಮನೆಗಳನ್ನು ನೀಡುವುದಾಗಿ ಹೇಳಿದರು.
ಶಾಸಕರು ಭೇಟಿ ನೀಡಿದ ಎಲ್ಲಾ ಪಂಚಾಯಿತಿಗಳಲ್ಲಿ ಮನೆ ಹಂಚಿಕೆಯಲ್ಲಿ ಉಂಟಾಗಿರುವ ದೋಷಗಳ ಬಗ್ಗೆ ಶಾಸಕರ ಗಮನಕ್ಕೆ ಗ್ರಾಮಸ್ಥರು ತಂದರು. ಇಒ ಶ್ರೀನಿವಾಸ್, ಕಾರಹಳ್ಳಿ ಪಂಚಾಯಿತಿ ಅಧ್ಯಕ್ಷ ಶಾರದಮ್ಮ, ಸದಸ್ಯ ತಿಮ್ಮಾಪುರ ಕೃಷ್ಣಮೂರ್ತಿ, ಪ್ರತಾಪ್, ತಾಪಂ ಸದಸ್ಯ ಹನುಮಪ್ಪ,ಅಮರೇಶ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.