ಕೋಲಾರ

ಸಮಾಜಮುಖಿ ಸಂದೇಶ ನೀಡಿದ ರಂಗೋಲಿ ಸ್ಪರ್ಧೆ

Published On :

ಚಿಕ್ಕಬಳ್ಳಾಪುರ: ಸಂಕ್ರಾಂತಿ- ಸಾಂಸ್ಕೃತಿಕ ಸುಗ್ಗಿ ಕಾರ್ಯಕ್ರಮದ ಪ್ರಯುಕ್ತ ಸಾಯಿಕೃಷ್ಣ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಕರ್ಷಕ ರಂಗೋಲಿ ಬಿಡಿಸುವುದರ ಮೂಲಕ ಗಮನ ಸೆಳೆದರು.
ನಗರದ ಜಿಲ್ಲಾ ಸರ್ ಎಂ.ವಿ. ಕ್ರೀಡಾಂಗಣವನ್ನು ರಜಾದಿನವಾದ ಭಾನುವಾರ ಕ್ರೀಡಾಪಟುಗಳಿಗೆ ಬದಲಾಗಿ ಮಹಿಳೆಯರು ಆಕ್ರಮಿಸಿಕೊಂಡಿದ್ದರು. ಫುಟ್‌ಬಾಲ್ ಮತ್ತು ಕ್ರಿಕೆಟ್ ಮೈದಾನ ಸಂಪೂರ್ಣವಾಗಿ ಬಗೆಬಗೆಯ ಬಣ್ಣಗಳಿಂದ ಬರೆದ ರಂಗೋಲಿಗಳಿಂದ ತುಂಬಿ ಹೋಗಿತ್ತು. ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ನಾಟ್ಯವಾಡುತ್ತಿರುವ ನವಿಲು, ಅರಳಿದ ಹೂಗಳು, ಆಕರ್ಷಕವಾಗಿ ಮೂಡಿ ಬಂದ ಗಣಪ, ಭಾರತ ನಕ್ಷೆ, ರಾಷ್ಟ್ರಧ್ವಜ, ನಂದಿ, ಸಂಕ್ರಾಂತಿಯ ಸೊಗಡು, ದೀಪಗಳು ಸೇರಿದಂತೆ ನಾನಾ ಬಗೆಯ ರಂಗೋಲಿ ಬಿಡಿಸಲಾಗಿತ್ತು. ಹೆಣ್ಣು ಭ್ರೂಣ ಹತ್ಯೆ ಮಹಾಪಾಪ, ಹೆಣ್ಣು ಶಿಶು ಕೊಲ್ಲಬೇಡಿ ಎಂಬ ಸಂದೇಶ ಸಹ ಸಾರುವ ಮೂಲಕ ಮಹಿಳೆಯರು ರಂಗೋಲಿಯಲ್ಲೂ ವಿಶೇಷತೆ ಮೆರೆದರು. ಬಿಸಿಲಿನ ಪ್ರಭಾವ ನಿಧಾನವಾಗಿ ಏರುತ್ತಿದ್ದಂತೆ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಲಾಯಿತು. ಚಿಕ್ಕಬಳ್ಳಾಪುರ ನಗರದ 31 ವಾರ್ಡುಗಳ ಜನರಿಗೂ ಪ್ರತ್ಯೇಕವಾಗಿ ರಂಗೋಲಿ ಬಿಡಿಸಲು ಸ್ಥಳ ಗುರುತಿಸಲಾಗಿತ್ತು. ಇದಕ್ಕೆ ತಕ್ಕಂತೆ ಸ್ಥಳವನ್ನು ಆಯ್ಕೆ ಮಾಡಿಕೊಂಡು ರಂಗೋಲಿ ಬಿಡಿಸುತ್ತಿದ್ದವರಿಗೆ ಅವರ ಪೋಷಕರು ಸಹಾಯ ಮಾಡುತ್ತಿದ್ದರು. ಕೆಲವರು ಸಲಹೆ ನೀಡುತ್ತಿದ್ದರೆ, ಬಣ್ಣ ಹಾಕುವ ಕೆಲಸವನ್ನು ಹಲವರು ಮಾಡಿದರು.
ಮೊದಲ ಬಹುಮಾನ ಫ್ರಿಜ್, ಎರಡನೇ ಬಹುಮಾನ ಟಿವಿ, ಮೂರನೇ ಬಹುಮಾನ ಮಿಕ್ಸಿ ಮತ್ತು ಸಮಾಧಾನಕಾರ ಬಹುಮಾನ ಕುಕ್ಕರ್ ಆಗಿದ್ದು, ಸುಡು ಬಿಸಿಲು ಬೆವರಿಳಿಯುವಂತೆ ಮಾಡುತ್ತಿದ್ದರೂ ಬಹುಮಾನದ ಆಕರ್ಷಣೆಗೆ ಅನೇಕರು ಬೇರೆಯವರಿಗಿಂತ ಚೆನ್ನಾಗಿ ರಂಗೋಲಿ ಬಿಡಿಸಬೇಕೆಂದುಕೊಂಡು ಅದರಲ್ಲಿ ತಲ್ಲೀನರಾಗುವ ಮೂಲಕ ಪೈಪೋಟಿಗೆ ಬಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.