ಕೋಲಾರ

ಏಕಾಏಕಿ ತೆರವು: ಫುಟ್‌ಪಾತ್ ವ್ಯಾಪಾರಿಗಳ ದಿಢೀರ್ ಧರಣಿ

ಚಿಂತಾಮಣಿಯಲ್ಲಿ ಅಧಿಕಾರಿಗಳ ಕ್ರಮ ವಿರೋಧಿಸಿ ನಗರಸಭೆ ಕಚೇರಿ ಎದುರು ಪ್ರತಿಭಟನೆ ಐ ಅಧಿಕಾರಿಗಳ ಮಲತಾಯಿ ಧೋರಣೆ: ವ್ಯಾಪಾರಸ್ಥರ ಆರೋಪ

Published On :

ಚಿಂತಾಮಣಿ: ಫುಟ್‌ಪಾತ್ ವ್ಯಾಪಾರಿಗಳನ್ನು ಏಕಾಏಕಿ ತೆರವುಗೊಳಿಸಿದ ನಗರಸಭೆ ಅಧಿಕಾರಿಗಳ ಕ್ರಮ ವಿರೋಧಿಸಿ ಮಂಗಳವಾರ ನೂರಾರು ವ್ಯಾಪಾರಸ್ಥರು ನಗರಸಭೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಐ.ಡಿ.ಎಸ್.ಎಂ.ಟಿ ಕಾಂಪ್ಲೆಕ್ಸ್‌ನ ಮುಂಭಾಗದಲ್ಲಿ ಫುಟ್‌ಪಾತ್ ವ್ಯಾಪಾರಿಗಳು ಸಾಲ- ಸೂಲ ಮಾಡಿ ಜೀವನ ಮಾಡುತ್ತಿರುವಾಗ ಶ್ರೀಮಂತ ವರ್ತಕರ ಮಾತು ಕೇಳಿ ಹಾಗೂ ಏಕಪಕ್ಷೀಯವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ನಗರಸಭೆ ಅಧಿಕಾರಿಗಳು ಏಕಾಏಕಿ ಬಡವರ ಹೊಟ್ಟೆ ಮೇಲೆ ಬರೆ ಎಳೆದಂತೆ ಅಂಗಡಿಗಳನ್ನು ಎತ್ತಂಗಡಿ ಮಾಡಿರುವ ಅಧಿಕಾರಿಗಳ ಧೋರಣೆಯನ್ನು ಖಂಡಿಸಿದರು.
ಮಂಗಳವಾರ ಬೆಳಗ್ಗೆ ನಗರಸಭೆ ರಾಜ್ಯಸ್ವ ನಿರೀಕ್ಷಕ ಸಮೀಉಲ್ಲಾ ಹಾಗೂ ಅಧಿಕಾರಿಗಳು ಏಕಾಏಕಿ ಫುಟ್‌ಪಾತ್ ಅಂಗಡಿಗಳನ್ನು ತೆರವುಗೊಳಿಸಲು ಮುಂದಾದಾಗ ಹಲವು ವ್ಯಾಪಾರಿಗಳು ಬಡಜನರು ವ್ಯಾಪಾರ ಕೈಬಿಟ್ಟು ಭಿಕ್ಷಾಟನೆ ಮಾಡುವುದಾಗಿ ಅಧಿಕಾರಿಗಳನ್ನು ಎಚ್ಚರಿಸಿದರು.
ನಗರಸಭೆ ಆಯುಕ್ತರು ಬಡಜನರ ಕಷ್ಟ ಅರಿಯದೇ ಈ ನಿರ್ಧಾರವನ್ನು ತೆಗೆದುಕೊಂಡಿರುವುದು ಸರಿಯಿಲ್ಲವೆಂದು ಹೇಳಿದರು. ಜತೆಗೆ ಅಧಿಕಾರಿಗಳು ಬಲವಂತದಿಂದ ತೆರವುಗೊಳಿಸಲು ಮುಂದಾದಾಗ ಅಧಿಕಾರಿಗಳ ವಿರುದ್ಧ ಇಳಿದ ಧನಮ್ಮ, ತಪತೇಶ್ವರ ಕಾಲೋನಿ ಜನಾರ್ಧನ್, ಪೂಲ್ ಮುನಿಯಪ್ಪ ಸೇರಿದಂತೆ ಇನ್ನೂ ಹಲವರು ತಿರುಗಿಬಿದ್ದು, ಮಾತಿನ ಚಕಮಕಿ ನಡೆಸಿದರು.
ನಗರಸಭೆ ಮುತ್ತಿಗೆ: ಬಡ ಫುಟ್‌ಪಾತ್ ವ್ಯಾಪಾರಿಗಳು ತಮ್ಮ ಕುಟುಂಬಗಳ ಪೋಷಣೆಗಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಐ.ಡಿ.ಎಸ್.ಎಂ.ಟಿ ಕಾಂಪ್ಲೆಕ್ಸ್‌ನ ಮುಂಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಪರ್ಯಾಯ ವ್ಯವಸ್ಥೆಯಿಲ್ಲದೆ ಸಣ್ಣಪುಟ್ಟ ವ್ಯಾಪಾರ ಮಾಡಿ ಜೀವನ ನಿರ್ವಹಣೆ ಮಾಡಲಾಗುತ್ತಿತ್ತು.
ಆದರೆ, ನಗರಸಭೆ ಅಧಿಕಾರಿಗಳು ನಮ್ಮ ಮೇಲೆ ದೌರ್ಜನ್ಯದಿಂದ ಅಂಗಡಿ ತೆರವುಗೊಳಿಸುತ್ತಿದ್ದಾರೆ ಎಂದು ಹೇಳಿ ಮಂಗಳವಾರ ಬೆಳಗ್ಗೆ ನಗರಸಭೆ ಮುಂಭಾಗದಲ್ಲಿ ನೂರಾರು ಜನ ಫುಟ್‌ಪಾತ್ ವ್ಯಾಪಾರಸ್ಥರು ಪ್ರತಿಭಟಿಸಿದರು.
ಅಧಿಕಾರಿಗಳ ತಾರತಮ್ಯ: 1981 ರಲ್ಲಿ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಪ್ರಾರಂಭವಾದಾಗ ಮಾಜಿ ಗೃಹ ಸಚಿವ ಎ.ಚೌಡರೆಡ್ಡಿ ಅವರು ಹಳೆ ಮಾರುಕಟ್ಟೆಯಲ್ಲಿರುವ ನಗರಸಭೆಯ ವ್ಯಾಪ್ತಿಗೆ ಸೇರಿದ ವ್ಯಾಪಾರಸ್ಥರಿಗೂ ಹಾಗೂ ಪೆಟ್ಟಿಗೆ ಅಂಗಡಿಗಳಲ್ಲಿರುವ ವ್ಯಾಪಾರಸ್ಥರಿಗೂ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿ ಈಗಿರುವ ಐ.ಡಿ.ಎಸ್.ಎಂ.ಟಿ ಕಾಂಪ್ಲೆಕ್ಸ್‌ನ ನೂರಾರು ಅಂಗಡಿಗಳನ್ನು ನಿರ್ಮಿಸಿರುವುದು ಸರಿಯಷ್ಟೆ.
ಆದರೆ ನಗರಸಭೆ ವ್ಯಾಪ್ತಿಗೆ ಕೇವಲ 27 ಅಂಗಡಿಗಳನ್ನು ನೀಡಿ ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ. ಆದರೆ ಪೆಟ್ಟಿಗೆ ಅಂಗಡಿಗಳನ್ನು ಇಟ್ಟುಕೊಂಡು 20 ವರ್ಷಗಳ ಕಾಲ ಅಲ್ಲೆ ಜೀವನ ನಡೆಸಿದ ವ್ಯಾಪಾರಸ್ಥರನ್ನು ಕಡೆಗಣಿಸಿ ಅವರಿಗೆ ಅಂಗಡಿಗಳನ್ನು ಕಾನೂನು ಅಡಿಯಲ್ಲಿ ವಿತರಿಸದೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಅಧಿಕಾರಿಗಳು ಎಂದು ವರ್ತಕರಾದ ನಾಗರಾಜ್, ಪಾಂಡುರಂಗ, ಪೂಲ್ ಮುನಿಯಪ್ಪ, ರಾಜಣ್ಣ, ಉಮರ್ ಸಾಬಿ ಸೇರಿದಂತೆ ಹಲವಾರು ವರ್ತಕರು ದೂಷಿಸಿದರು.
ವೆಂಕಟೇಶ್, ಮಂಜು, ಬಟ್ಟಿ ಸೀನಪ್ಪ, ರೆಡ್ಡೆಮ್ಮ, ರಾಮುಲಮ್ಮ, ಉಮಾದೇವಿ, ನರಸಿಂಹಪ್ಪ, ಶಬೀರ್, ಏಜಾಜ್, ತಾಜ್, ಬಾಬು ಸೇರಿದಂತೆ ನೂರಾರು ವ್ಯಾಪಾರಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.