ಕೋಲಾರ

ತಪ್ಪಿತು ಬಾಲಕಿಯೊಂದಿಗೆ ಮುದುಕನ ಮದುವೆ

Published On :

ಚಿಕ್ಕಬಳ್ಳಾಪುರ: ಹಣದ ಆಮಿಷವೊಡ್ಡಿ ಬಡ ಕುಟುಂಬಕ್ಕೆ ಸೇರಿದ್ದ ಬಾಲಕಿಯೊಬ್ಬಳನ್ನು ಮದುವೆಯಾಗಲು ಹೊರಟಿದ್ದ ವೃದ್ಧನ ವಿವಾಹಕ್ಕೆ ಮಹಿಳಾ ಸಾಂತ್ವನ ಕೇಂದ್ರ ಕಡಿವಾಣ ಹಾಕಿದೆ.
ಶಿಡ್ಲಘಟ್ಟ ತಾಲೂಕಿನ ಕರಿಯಪ್ಪನಹಳ್ಳಿಯ ಮಸ್ತಾನ್‌ಸಾಬ್ ಮತ್ತು ಫಾತಿಮಾ ದಂಪತಿಯ 14 ವರ್ಷದ ಮಗಳನ್ನು ಆಂಧ್ರದ ಹಿಂದೂಪುರ ಮೂಲದ 58 ವರ್ಷದ ಫೈರೋಜ್ ಸಾಬಿ ಮದುವೆಯಾಗಲು ಸಿದ್ಧನಾಗಿದ್ದ. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯ ಕುಟುಂಬಕ್ಕೆ ಈತ ಹಣದ ಆಮಿಷ ತೋರಿದ್ದ.
ಸರಳ ವಿವಾಹಕ್ಕೆ ಎಲ್ಲ ಸಿದ್ಧತೆ ನಡೆದಿತ್ತು. ಆದರೆ, ಬಾಲಕಿ ಅದೃಷ್ಟ ಚೆನ್ನಾಗಿತ್ತು. ಮದುವೆಗಾಗಿ ಸಂಪ್ರದಾಯ ಬದ್ಧವಾಗಿ ಆಚರಣೆಗಳನ್ನು ಕೈಗೊಳ್ಳುತ್ತಿದ್ದಾಗಲೇ ಸ್ಥಳೀಯ ಮಹಿಳಾ ಸಾಂತ್ವನ ಕೇಂದ್ರದ ಡಾ. ವಿಜಯಾ ವಿಷಯ ತಿಳಿದು ದಿಬ್ಬೂರುಹಳ್ಳಿ ಪೊಲೀಸರ ನೆರವಿನೊಂದಿಗೆ ಬಾಲಕಿಯನ್ನು ರಕ್ಷಿಸಿದ್ದಾರೆ.
ಅಸಹಾಯಕ ಕುಟುಂಬ: ಮಸ್ತಾನ್‌ಸಾಬ್‌ಗೆ ನಾಲ್ವರು ಹೆಣ್ಣು ಮಕ್ಕಳು. ಆರ್ಥಿಕ ಸಮಸ್ಯೆಯಿಂದ ತಮ್ಮ ಮಕ್ಕಳಿಗೆ ಮದುವೆ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿದ್ದರು. ಆಗಲೇ ಮಧ್ಯವರ್ತಿಗಳ ಮೂಲಕ ಪರಿಚಿತನಾದ ಹುಣಸೇಹಣ್ಣಿನ ವ್ಯಾಪಾರಿ ಫೈರೋಜ್ ಸಾಬಿ, ತಾನು ನಿಮ್ಮ ಮಗಳನ್ನು ವರದಕ್ಷಿಣೆ ಇಲ್ಲದೇ ಮದುವೆಯಾಗುತ್ತೇನೆ. ಮಾತ್ರವಲ್ಲ, ಮದುವೆಯ ಖರ್ಚು ವೆಚ್ಚವೂ ನನ್ನದೇ, ಕುಟುಂಬಕ್ಕೆ ಆರ್ಥಿಕ ನೆರವೂ ನೀಡುವುದಾಗಿ ಹೇಳಿ ಮದುವೆಗೆ ಒಪ್ಪಿಸಿದ್ದ. ಅನಿವಾರ್ಯವಾಗಿ ಬಾಲಕಿಯೂ ಮದುವೆಗೆ ಒಪ್ಪಿಗೆ ಸೂಚಿಸಿದ್ದಳು.
ಡಾ.ವಿಜಯಾ ಬಾಲಕಿಯ ಪೋಷಕರ ಮನವೊಲಿಸಿದ್ದು, ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಗಳ ಬಗ್ಗೆ ವಿವರಿಸಿದ್ದಾರೆ. ಪೊಲೀಸರು ಮತ್ತು ಅಧಿಕಾರಿಗಳು ಯಾವುದೇ ಕಾರಣಕ್ಕೂ ಬಾಲಕಿ ಪ್ರಾಪ್ತ ವಯಸ್ಸಿಗೆ ಬರುವವರೆಗೂ ಮದುವೆ ಮಾಡದಿರುವಂತೆ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಅಗತ್ಯ ನೆರವು ನೀಡುವ ಭರವಸೆಯನ್ನೂ ನೀಡಿದ್ದಾರೆ. ಈ ನಡುವೆ ಬಾಲಕಿಯನ್ನು ವಿವಾಹವಾಗಲು ಬಂದಿದ್ದ ಫೈರೋಜ್ ಸಾಬಿ, ಅಧಿಕಾರಿಗಳ ಕಾರ್ಯಾಚರಣೆ ಬಗ್ಗೆ ತಿಳಿಯುತ್ತಿದ್ದಂತೆ ನಾಪತ್ತೆಯಾಗಿದ್ದಾನೆ.  

ಮಾರುಕಟ್ಟೆ ಸಮಿತಿಗೆ ಶುಲ್ಕ ಹಸ್ತಾಂತರ
ಮುಳಬಾಗಲು: ತಾಲೂಕಿನ ಕಪ್ಪಲಮೊಡಗು ಗ್ರಾಮದ ಎಂಜಿ-6 ಮಾರುಕಟ್ಟೆ ವತಿಯಿಂದ ಒಂದು ವಾರದ ಮಾರುಕಟ್ಟೆ ಶುಲ್ಕವನ್ನು ಮಾರುಕಟ್ಟೆ  ವ್ಯವಸ್ಧಾಪಕ ಎಂ.ಜಿ.ಗೋಪಾಲ್ ಮತ್ತು ಗಂಗಿರೆಡ್ಡಿ ಅವರು ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಕುರುಡುಮಲೆ ಮಂಜುನಾಥ್ ಅವರಿಗೆ  ನೀಡಿದರು. ಶಿವಾರೆಡ್ಡಿ, ಗೋಪಾಲ್, ಸೀನ, ಮಾರಾಂಡಹಳ್ಳಿ ಸುಂದರ್, ನಕ್ಷತ್ರ ಮುಂತಾದವರು ಭಾಗವಹಿಸಿದ್ದರು.

ಆಧಾರ್: ದಲ್ಲಾಳಿ ಕಾಟ ಇದ್ದರೆ ದೂರು ಕೊಡಿ
ಮುಳಬಾಗಲು: 2 ಲಕ್ಷ 57 ಸಾವಿರ ಜನಸಂಖ್ಯೆಯಲ್ಲಿ 81,350 ಮಂದಿ ಆಧಾರ್ ಕಾರ್ಡ್‌ಗೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ತಹಸೀಲ್ದಾರ್ ಡಿ.ವಿ.ರಾಮಮೂರ್ತಿ ತಿಳಿಸಿದ್ದಾರೆ. ಪಟ್ಟಣದ ವಿಕಾಸ ಕೇಂದ್ರ ತಾಲೂಕಿನ ಬೈರಕೂರು, ಹೆಬ್ಬಣೆ, ಪಿಚ್ಚಗುಂಟ್ಲಹಳ್ಳಿ, ಗ್ರಾಮಗಳಲ್ಲಿ ಆಧಾರ್ ನೋಂದಣಿ ನಡೆಯುತ್ತಿದ್ದು, ಆಧಾರ್ ಅರ್ಜಿಗಳು ಉಚಿತವಾದುದಾಗಿದೆ. ಆದರೆ ಕೆಲವು ಮಧ್ಯವರ್ತಿಗಳು ಜೆರಾಕ್ಸ್ ಅರ್ಜಿಗಳನ್ನು ಮಾರಾಟ ಮಾಡುತ್ತಿದ್ದು ತಾಲೂಕಿನ ಜನತೆ ಆಧಾರ್ ಅರ್ಜಿ ಪಡೆಯಲು ಹಣ ನೀಡಬಾರದೆಂದು ಕೋರಿದ್ದಾರೆ.

ನಾಳೆ ಬಾಬುಜೀ ಪುಣ್ಯತಿಥಿ
ಚಿಕ್ಕಬಳ್ಳಾಪುರ: ನಗರದ ಅಂಬೇಡ್ಕರ್ ಭವನದಲ್ಲಿ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ 27ನೇ ಪುಣ್ಯತಿಥಿ ಕಾರ್ಯಕ್ರಮ ಜು.6 ರಂದು ಬೆಳಗ್ಗೆ 9.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಡಾ. ಬಾಬು ಜಗಜೀವನರಾಮ್ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ಮಾಲಾರ್ಪಣೆ ಮಾಡಲಿದ್ದಾರೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು, ದಲಿತ ಮುಖಂಡರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.