ಕೋಲಾರ

ಹನಿ ನೀರಾವರಿ ಬಾಕಿಗಾಗಿ ಕಾದು ಕುಳಿತ ನೇಗಿಲಯೋಗಿ

Published On :

-ಪಾ.ಶ್ರೀ.ಅನಂತರಾಮ್
ಕ.ಪ್ರ. ವಾರ್ತೆ ಕೋಲಾರ ಜು.4
ನೀರಿನ ಸಮಸ್ಯೆ ನಡುವೆಯೂ ತೋಟಗಾರಿಕೆ ಬೆಳೆಗಳ ಮೂಲಕ ಜೀವನ ಸಾಗಿಸುತ್ತಿರುವ ಕೋಲಾರ ಜಿಲ್ಲೆಯ ರೈತರು ಕೇಂದ್ರ ಸರ್ಕಾರದಿಂದ ತಮಗೆ ಬರ ಬೇಕಾಗಿರುವ ಹನಿ ನೀರಾವರಿ ಯೋಜನೆ ಬಾಕಿ ಹಣಕ್ಕಾಗಿ ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ.
ಯಾವುದೇ ನದಿ ನಾಲೆ ಇಲ್ಲದೆ ಮಳೆಯನ್ನು ಆಶ್ರಯಿಸಿ ಸುಮಾರು 1,01,643 ಹೆಕ್ಟೆರ್ ಪ್ರದೇಶದಲ್ಲಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ.
ಮಾವು, ತರಕಾರಿ, ಹೂವು ಇನ್ನಿತರ ಬೆಳೆಗಳನ್ನು ರೈತರು ಬೆಳೆದು ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಮಳೆಯಿಲ್ಲದೆ ಅಂತರ್ಜಲ ಬತ್ತಿ ಹೋಗುತ್ತಿದೆ, ಹೊಸದಾಗಿ 1200ರಿಂದ 1400 ಅಡಿಗಳವರೆಗೆ ಕೊಳವೆ ಬಾವಿಗಳನ್ನು ಕೊರೆದರೂ ಹನಿ ನೀರು ಸಿಗುತ್ತಿಲ್ಲ, ಅಂತರ್ಜಲ ಪಾತಾಳ ಸೇರಿದೆ, ಹೆಚ್ಚಿನ ಸಾಮರ್ಥ್ಯದ ಪಂಪ್‌ಸೆಟ್‌ಗಳನ್ನು ಅಳವಡಿಸಿದರೂ ನೀರು ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ ರೈತರು ಹನಿ ನೀರಾವರಿಗೆ ಹೆಚ್ಚಿನ ಅದ್ಯತೆ ನೀಡುತ್ತಿದ್ದಾರೆ.
16.34 ಕೋಟಿ ಬಾಕಿ: ಅಂತರ್ಜಲ ಸಮಸ್ಯೆ ಇರುವ ಕಡೆ ಮಿತವಾಗಿ ನೀರು ಬಳಕೆ ಮಾಡಿ ಕೃಷಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹನಿ ನೀರಾವರಿ ಪದ್ಧತಿಗಾಗಿ ಸಹಾಯ ಧನ ನೀಡುವ ಯೋಜನೆ ಜಾರಿಗೆ ತಂದಿರುವುದರಿಂದ ರೈತರು ಕೊಂಚ ಮಟ್ಟಿಗೆ ಉಸಿರಾಡುವಂತಾಗಿದೆ. ಆದರೆ, 2012-13ನೇ ಸಾಲಿನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿರುವ ರೈತರಿಗೆ ಸರ್ಕಾರ ಬಾಕಿ ಇರುವ ಅನುದಾನ ಬರೋಬ್ಬರಿ ರು. 16.34 ಕೋಟಿ.
ರೈತರಿಗೆ ಆರ್ಥಿಕ ಹೊರೆ: ಕೋಲಾರ ಜಿಲ್ಲೆಯ 2440 ಮಂದಿ ರೈತರು ತೋಟಗಾರಿಕೆ ಅಭಿವೃದ್ಧಿಗಾಗಿ ಹನಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ತಂದಿದ್ದಾರೆ. ಇದರ ಬಾಬ್ತು ಒಟ್ಟು ರು.16.34 ಕೋಟಿ ಕೇಂದ್ರ ಸರ್ಕಾರದಿಂದ ಬಿಡುಗಡೆ ಆಗುವುದಕ್ಕೆ ವಿಳಂಬವಾಗಿರುವುದರಿಂದ ರೈತರಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ.
ಮನ ಮಾಡುವರೆ ಮುನಿಯಪ್ಪ: ಕೇಂದ್ರ ಸರ್ಕಾರ ಪ್ರತಿನಿಧಿಸುತ್ತಿರುವ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಸಚಿವ ಕೆ.ಹೆಚ್.ಮುನಿಯಪ್ಪ ಕೃಷಿ ಮತ್ತು ಸಹಕಾರ ಇಲಾಖೆ ಸಚಿವ ಶರದ್ ಪವಾರ್ ಮೇಲೆ ಒತ್ತಡ ತಂದು ಬಾಕಿ ಹಣವನ್ನು ಬಿಡುಗಡೆ ಮಾಡಿಸಿದಲ್ಲಿ ರೈತರಿಗೆ ಅನುಕೂಲವಾಗುತ್ತದೆ. ಅದೇ ರೀತಿ ಇನ್ನಷ್ಟು ರೈತರು ಹನಿ ನೀರಾವರಿ ಯೋಜನೆ ಅನುಷ್ಟಾನಕ್ಕೆ ಮುಂದಾಗಿದ್ದು ಜಿಲ್ಲಾ ತೋಟಗಾರಿಕೆ ಇಲಾಖೆಯಿಂದ ಸಲ್ಲಿಸಿರುವ ಪ್ರಸ್ತಾವನೆಗೆ ಮಂಜೂರಾತಿ ದೊರಕಿಸಿದಲ್ಲಿ ರೈತರು ನೆಮ್ಮದಿಯಿಂದ ಜೀವನ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಜಿಲ್ಲೆಯ ಜನಪ್ರತಿನಿಧಿಗಳು ಸಹ ರೈತರ ಸಂಕಟ ಅರ್ಥ ಮಾಡಿಕೊಂಡು ರಾಜ್ಯ ಸರ್ಕಾರದ ಮೂಲಕ ಕೇಂದ್ರದ ಮೇಲೆ ಒತ್ತಡ ತಂದು ಬಾಕಿ ಇರುವ ಅನುದಾನ ಬಿಡುಗಡೆಗೆ ಇಚ್ಛಾಶಕ್ತಿ ಪ್ರದರ್ಶಿಸಿದಲ್ಲಿ ಜಿಲ್ಲೆಯಲ್ಲಿ ತೋಟಗಾರಿಕೆ ಇನ್ನಷ್ಟು ಪ್ರಗತಿ ಸಾಧಿಸಲು ಸಹಾಯವಾಗುತ್ತದೆ.
ರಾಜ್ಯದ19.67 ಲಕ್ಷ ಹೆಕ್ಟೆರ್‌ನಲ್ಲಿ: ಕೋಲಾರ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಒಟ್ಟು 19.67 ಲಕ್ಷ ಹೆಕ್ಟೆರ್ಪ್ರ್‌ದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದ್ದು ಪ್ರತಿ ವರ್ಷ ಹಣ್ಣು, ತರಕಾರಿ, ಹೂವು, ಸಂಬಾರು ಪದಾರ್ಥ, ಸುಗಂಧ ಪರಿಣಾಮ ಬೀರುವ ಗಿಡಗಳಿಂದ ತಯಾರಿಸುವ ದ್ರವ್ಯಗಳು ಸೇರಿದಂತೆ 154.99 ಲಕ್ಷ ಟನ್ ಉತ್ಪಾದನೆ ಮಾಡಲಾಗುತ್ತಿದೆ.
ಧನ ಸಹಾಯಕ್ಕೆ ಮುಂದಾಗಬೇಕಿದೆ: ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಬಯಲು ಸೀಮೆ ಜಿಲ್ಲೆಗಳಲ್ಲಿ ರೈತರು ಹನಿ ನೀರಾವರಿ ಮೂಲಕ ತೋಟಗಾರಿಕೆ ಬೆಳೆಗಳನ್ನು ಬೆಳೆದು ಬದುಕಿನ ದೋಣಿಯನ್ನು ಯಶಸ್ವಿಯಾಗಿ ಮುನ್ನಡೆಸಲು ಇಚ್ಚಿಸಿರುವುದರಿಂದ ರಾಜ್ಯ ಸರ್ಕಾರ ಹನಿ ನೀರಾವರಿ ಯೋಜನೆಗೆ ಶೇ.100ರಷ್ಟು ಸಹಾಯಧನ ಕಲ್ಪಿಸುವ ಮೂಲಕ ರೈತರ ಹಿತ ಕಾಪಾಡಬೇಕಾಗಿದೆ.
ಹನಿ ನೀರಾವರಿ ಯೋಜನೆಯ ಫಲಾನುಭವಿಗಳಿಗೆ ಸರ್ಕಾರದ ಸಹಾಯಧನ ಪಾರದರ್ಶಕವಾಗಿ ಹಾಗೂ ಪ್ರಾಮಾಣಿಕವಾಗಿ ತಲುಪುವಂತಾಗಲು ಕೇಂದ್ರ ಸರ್ಕಾರ ಮೈಕ್ರೋ ಇರಿಗೇಷನ್ಮಾನಿಟರಿಂಗಗ್ಸಿಸ್ಟಮ್( ಎಂಐಎಂಎಸ್)್ಜಾರಿಗೆ ತಂದಿದೆ.ಇದರಿಂದ ಹಿರಿತನ ಅಥವಾ ಜೇಷ್‌ಠತೆ ಆಧರಿಸಿ ಫಲಾನುಭವಿಗಳ ಅರ್ಜಿಗಳನ್ನು ವಿಲೇವಾರಿ ಮಾಡುವುದಕ್ಕೆ ಅವಕಾಶ ಮಾಡಲಾಗಿದೆ. ಜತೆಗೆ ಸಹಾಯಧನವನ್ನು ಫಲಾನುಭವಿಗಳ ಬ್ಯಾಂಕ್ಖಾತೆಗೆ ನೇರವಾಗಿ ಜಮಾ ಮಾಡುವುದಕ್ಕಾಗಿ ಎಲೆಟ್ಕ್ರಾನಿಕಕ್ಕ್ಲಿಯರೆನನ್ಸ್ಸಿಸ್ಟಮ್( ಇಸಿಎಸ್)ಅನ್ನು ಸಹ ಅನುಷ್ಟಾನಕ್ಕೆ ತರಲಾಗಿದ್ದು ಕೇಂದ್ರ ಸರ್ಕಾರ ರೈತರಿಗೆ ಬಾಕಿ ಇರುವ ಹಣವನ್ನು ಹಾಗೂ ಹೊಸದಾಗಿ ಅರ್ಜಿ ಸಲ್ಲಿಸುವ ಅರ್ಹರಿಗೆ ಹನಿ ನೀರಾವರಿ ಯೋಜನೆಯ ಅನುಷ್ಟಾನಕ್ಕೆ ಆರ್ಥಿಕ ನೆರವು ಮಾಡಿದಲ್ಲಿ ರೈತರು ಕೃಷಿ ಭೂಮಿಯನ್ನು ಮಾರಾಟ ಮಾಡದೆ ಇಲ್ಲವೇ ಬೆಳೆ ನಷ್ಟದಿಂದ ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪುತ್ತದೆ.
ಜಿಲ್ಲೆಗೆ ಬರಬೇಕಾದ ಬಾಕಿ: ಕೋಲಾರ ತಾಲೂಕಿನ 418 ಮಂದಿ ರೈತರು, ಬಿಡುಗಡೆ ಆಗಬೇಕಾಗಿರುವ ಹಣ 3 ಕೋಟಿ, ಮುಳಬಾಗಿಲು- 589 ರೈತರು, 1.50 ಕೋಟಿ, ಶ್ರೀನಿವಾಸಪುರ-337 ರೈತರು, 1.50 ಕೋಟಿ, ಮಾಲೂರು-596 ರೈತರು, 4.22 ಕೋಟಿ ಹಾಗೂ ಬಂಗಾರಪೇಟೆ ತಾಲೂಕಿನ 500 ಮಂದಿ ರೈತರಿಗೆ 3.50 ಕೋಟಿ ರು.ಬಾಕಿ ಪಾವತಿಯಾಗಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.