ಅಣಕು ಚುನಾವಣೆಗೆ ಮಕ್ಕಳೇ ಚುನಾವಣಾಧಿಕಾರಿಗಳು...
ಕ.ಪ್ರ.ವಾರ್ತೆ ಕೋಲಾರ ಜು.5
ಮತದಾನದ ಮಹತ್ವ ಮತ್ತು ವಿಧಾನದ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಲು ಅಣಕು ಚುನಾವಣೆಯನ್ನು ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು.ಶಾಲೆಯ ಮಕ್ಕಳು ಅಣಕು ಚುನಾವಣೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರು. ಅಣಕು ಚುನಾವಣೆಯಾದರೂ ವಿದ್ಯಾರ್ಥಿಗಳು ಭಾರತ ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಚುನಾವಣೆ ನಡೆಸಿ ಗಮನ ಸೆಳೆದರು.ಚುನಾವಣಾ ಅಧಿಕಾರಿಯಿಂದ ಹಿಡಿದು ಸಿಬ್ಬಂದಿ ಹಾಗೂ ಮತದಾರರ ಪಾತ್ರಗಳನ್ನು ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ನಿರ್ವಹಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಮಕ್ಕಳು ತಮ್ಮ ಅನುಭವ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದರು.ಮತದಾನ ಪ್ರಕ್ರಿಯೆ ಮುಗಿದ ನಂತರ ಮತ ಎಣಿಕೆ ಕಾರ್ಯವನ್ನು ವಿದ್ಯಾರ್ಥಿಗಳೇ ನಿರ್ವಹಿಸಿ ಫಲಿತಾಂಶ ಘೋಷಣೆ ಮಾಡಿ ವಿದ್ಯಾರ್ಥಿ ಪುನೀತ್ಕುಮಾರ್ ನಾಯಕನಾಗಿ ಆಯ್ಕೆ ಆಗಿರುವುದನ್ನು ಪ್ರಕಟಿಸಿದರು.ಮತಗಟ್ಟೆ ಅಧಿಕಾರಿಗಳಾಗಿ ವಿದ್ಯಾರ್ಥಿಗಳಾದ ಕೋಮಲ, ರಂಜಿತಾ, ಅಬ್ರಹಂ, ಮಹಮದ್ ಖಾಸೀಂ, ಪೊಲೀಸ್ ಸಿಬ್ಬಂದಿಯಾಗಿ ಮನೋಜ್ಕುಮಾರ್ ಕಾರ್ಯನಿರ್ವಹಿಸಿದರು.ಇಡೀ ಚುನಾವಣಾ ಪ್ರಕ್ರಿಯೆಯ ಉಸ್ತುವಾರಿಯನ್ನು ಶಿಕ್ಷಕರಾದ ಸತೀಶ್ ಎಸ್. ನ್ಯಾಮತಿ ವಹಿಸಿದ್ದು, ಮುಖ್ಯ ಶಿಕ್ಷಕಿ ಡಿ.ಆಶಾ, ಶಿಕ್ಷಕರಾದ ಲೋಕೇಶಪ್ಪ ದಟ್ಟೇರ್, ಎಸ್. ರಘುನಾಥ್, ಸಿ.ಎಂ. ವೆಂಕಟರಮಣಪ್ಪ, ಎಂ. ವೆಂಕಟೇಶ್, ಮಂಗಳಾ, ಸಿ.ಎಲ್. ಶ್ರೀನಿವಾಸಲು ಮಕ್ಕಳಿಗೆ ಆಗಾಗ ಸಲಹೆ ಸೂಚನೆ ನೀಡಿ ಅಣಕು ಚುನಾವಣೆ ಯಶಸ್ವಿಗೊಳಿಸಿದರು.
ಗ್ರಾನೈಟ್ ಗಣಿಗಾರಿಕೆ ಬಗ್ಗೆ ಸಿಬಿಐ ತನಿಖೆ ಅನಗತ್ಯ: ಹೈಕೋರ್ಟ್
ಬೆಂಗಳೂರು: ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗ್ರ್ಯಾನೆಟ್ ಗಣಿಗಾರಿಕೆಯ ತನಿಖೆಗೆ ಸರ್ಕಾರ ಆದೇಶಿಸಿರುವುದರಿಂದ ಸಿಬಿಐ ತನಿಖೆಗೆ ವಹಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಮೀರ್ ಮಹ್ಮದ್ ಸಾದಿಕ್ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾ.ಡಿ.ಎಚ್.ವಘೇಲ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ಇತ್ಯರ್ಥಗೊಳಿಸಿದೆ. ಬಾಗೇಪಲ್ಲಿಯ ಹೊನ್ನಂಪಲ್ಲಿ, ಮದ್ದಟಂಪಲ್ಲಿ, ಹೊಕ್ಕಂಪಲ್ಲಿ, ದೇವಿನ್ಗುಂಟೆ, ಗುಟ್ಟಪಾಳ್ಯ ಮತ್ತಿತರರ ಗ್ರಾಮಗಳಲ್ಲಿ 75 ಎಕರೆ ಭೂಮಿಯಲ್ಲಿ ಗಣಿಗಾರಿಕೆಗೆ ಪರವಾನಗಿ ನೀಡಲಾಗಿತ್ತು. ಆದರೆ, ಅದೀಗ 2,200 ಎಕರೆಗೆ ವಿಸ್ತರಿಸಿದೆ. ಕಳೆದ 8 ವರ್ಷಗಳಿಂದ ಈ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ನಷ್ಟ ಉಂಟಾಗುತ್ತಿದೆ. ಈ ಅಕ್ರಮವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಇದಕ್ಕೆ ಪ್ರತಿಕ್ರಯಿಸಿದ ಸರ್ಕಾರಿ ವಕೀಲರು, ಗಣಿಗಾರಿಕೆಯಲ್ಲಿ ಅಕ್ರಮ ನಡೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ತಿಳಿಸಿದರು. ಇದನ್ನು ಪರಿಗಣಿಸಿದ ಪೀಠ, ಅರ್ಜಿಯನ್ನು ಇತ್ಯರ್ಥಗೊಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

