'ಮಳೆ ನೀರು ಬಯಲುಸೀಮೆಗೆ ಹರಿಸಿ'
ಕ.ಪ್ರ.ವಾರ್ತೆ , ಕೋಲಾರ , ಜು.6
ಕರಾವಳಿ ಭಾಗದಲ್ಲಿ ಸುರಿಯುವ ಮಳೆಯ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದ್ದು, ಈ ನೀರನ್ನು ಬಯಲು ಸೀಮೆ ಜಿಲ್ಲೆಗಳಿಗೆ ಹರಿಸಬೇಕೆಂದು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಶನಿವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಅನೇಕ ವರ್ಷಗಳಿಂದ ಶಾಶ್ವತ ನೀರಾವರಿಗಾಗಿ ಹೋರಾಟ ನಡೆಯುತ್ತಿದ್ದು ಯಾವುದೇ ಸರ್ಕಾರ ಜನತೆಯ ಸಮಸ್ಯೆ ನಿವಾರಣೆ ಮಾಡಲಾಗಿಲ್ಲ, ಕಾಂಗ್ರೆಸ್ ನೇತೃತ್ವದ ಸರ್ಕಾರ ಚುನಾವಣೆ ಪ್ರಾಣಾಳಿಕೆಯಲ್ಲಿ ನೀಡಿರುವ ಭರವಸೆಯನ್ನು ಈಡೇರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದ ಜನರು ವರ್ಷದ ಆರು ತಿಂಗಳ ಕಾಲ ಮಳೆಯ ಪ್ರವಾಹಕ್ಕೆ ತುತ್ತಾಗಿ ಅಪಾರ ನಷ್ಟವನ್ನು ಅನುಭವಿಸುತ್ತಿದ್ದಾರೆ, ಸಾವಿರಾರು ಟಿ.ಎಂ.ಸಿ ನೀರು ಸಮುದ್ರ ಪಾಲಾಗುತ್ತಿದೆ, ರಾಜ್ಯದ ಬಯಲು ಸೀಮೆಯ ಜನ ಶುದ್ಧವಾದ ನೀರಿಲ್ಲದೆ ರೋಗ ರುಜುನುಗಳಿಂದ ಬಳಲುತ್ತಿರುವುದರಿಂದ ರಾಜ್ಯ ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ಶಾಶ್ವತ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ಮೀಸಲಿಟ್ಟು ತ್ವರಿತಗತಿಯಲ್ಲಿ ಯೋಜನೆ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಸೌಕರ್ಯ ಕಲ್ಪಿಸಿದಲ್ಲಿ ಸಮಗ್ರ ಅಭಿವೃದ್ಧಿಗೆ ಸಹಾಯವಾಗುತ್ತದೆ, ರಾಜ್ಯ ಸರ್ಕಾರ ಕೆರೆಗಳ ಅಭಿವೃದ್ಧಿ, ರೈತರ ಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜಿಲ್ಲೆಯನ್ನು ಉಳಿಸಬೇಕೆಂದು ಜಿಲ್ಲಾ ಪ್ರಭಾರ ಜಿಲ್ಲಾಧಿಕಾರಿಗಳಾದ ಅಪರ ಜಿಲ್ಲಾಧಿಕಾರಿ ಡಾ. ವೆಂಕಟೇಶಮೂರ್ತಿ ಅವರಿಗೆ ಮನವಿ ಸಲ್ಲಿಸಿ, ಮುಖ್ಯಮಂತ್ರಿಗಳಿಗೆ ಕಳುಹಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಕೆ. ಶ್ರೀನಿವಾಸಗೌಡ, ನಾರಾಯಣ ಗೌಡ, ಹೂಲ್ಕೂರು ಹರಿ ಕುಮಾರ್, ಮೂರಡಂಹಳ್ಳಿ ಶಿವಾರೆಡ್ಡಿ, ಹೂವಳ್ಳಿ ನಾಗರಾಜ್, ರಂಜಿತ್ಕುಮಾರ್, ನೀಲಕಂಠಪುರ ಮುನೇಗೌಡ, ತೇರನಹಳ್ಳಿ ಅಂಜಿನಪ್ಪ, ಬಂಗೋದಿ ನಾಗರಾಜ ಗೌಡ, ಐತಂಡಹಳ್ಳಿ ಉದಯ್, ಮರಗಲ್ ಶ್ರೀನಿವಾಸ್, ಕಾರಿ ವಿಶ್ವನಾಥ್, ಕ್ಯಾಸಂಬಳ್ಳಿ ಪ್ರತಾಪ್, ಬೇತಮಂಗಲ ಮಂಜು, ಬಂಗಾರಪೇಟೆ ನಾರಾಯಣ ಸ್ವಾಮಿ, ಅಬಿದ್ ಉಲ್ಲಾ ಖಾನ್, ಈ ಕಬಂಹಳ್ಳಿ ಮಂಜುನಾಥ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

