ಸರ್ಕಾರಿ ನೌಕರರ ಸಂಘಕ್ಕೆ ಬಿರುಸಿನ ಮತದಾನ
ಕ.ಪ್ರ.ವಾರ್ತೆ ಕೋಲಾರ ಜು. 22
ಸಾರ್ವತ್ರಿಕ ಚುನಾವಣೆಯನ್ನು ನಾಚಿಸುವ ರೀತಿಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆ ಸೋಮವಾರ ಅತ್ಯಂತ ಬಿರುಸಿನಿಂದ ನಡೆಯಿತು.
ಶಿಕ್ಷಕರ ಕ್ಷೇತ್ರದ ಚುನಾವಣೆ ಈ ಹಿಂದಿಗಿಂತಲೂ ಬಿರುಸಿನಿಂದ ಹಾಗೂ ಜಿದ್ದಾಜಿದ್ದಿಯೊಂದಿಗೆ ನಡೆಯಿತು. ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಮತಗಟ್ಟೆ ಸಮೀಪ ಹಲವಾರು ರೀತಿಯಲ್ಲಿ ಕಸರತ್ತು ನಡೆಸಿದರು, ಪ್ರಚಾರಕ್ಕಾಗಿ ಬಳಸಿದ್ದ ಬೃಹತ್ ಫ್ಲೆಕ್ಸ್ಗಳು ರಾಜಕೀಯ ಚುನಾವಣೆಗಳನ್ನು ಮೀರಿಸುವಂತಿತ್ತು. ಮತದಾರರನ್ನು ಕರೆತರುವ ಸಲುವಾಗಿ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು, ತಿಂಡಿ-ಊಟದ ವ್ಯವಸ್ಥೆಯೂ ಇತ್ತು. ಮುಕ್ತ ಹಾಗೂ ಶಾಂತಿಯುತ ಮತದಾನಕ್ಕಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ಚುನಾವಣೆಯಲ್ಲಿ ಇತರೆ ಇಲಾಖೆಗಳಿಗಿಂತ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರ ಕ್ಷೇತ್ರದ ಚುನಾವಣೆ ಹೆಚ್ಚು ಪೈಪೋಟಿ ಕಂಡುಬಂದಿತ್ತು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಬೆಂಬಲಿತ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಂಬಲಿತರ ನಡುವೆ ನೇರ ಹಣಾಹಣಿ ಉಂಟಾಗಿದ್ದು ಈ ಬಾರಿಯ ಚುನಾವಣೆಗೆ ರಾಜಕಾರಣಿಗಳು ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ತಮ್ಮ ಕೈಚಳಕ ತೋರಿಸುವ ಮೂಲಕ ಸರ್ಕಾರಿ ನೌಕರರ ಸಂಘದಲ್ಲೂ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳುವುದಕ್ಕೆ ಮುಂದಾಗಿರುವುದು ಕುತೂಹಲ ಮೂಡಿಸಿದೆ.
ಇಲ್ಲಿನ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ವಿವಿಧ 36 ಇಲಾಖೆಗಳಿಂದ 42 ಮಂದಿ ಪ್ರತಿನಿಧಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 3 ಸ್ಥಾನಕ್ಕೆ ಕಣದಲ್ಲಿ 6 ಅಭ್ಯರ್ಥಿಗಳು ಸ್ಪರ್ಧಿಸಿದ್ದರು, 201 ಮತದಾರರಿದ್ದರು. ಆದರೆ ಚುನಾವಣೆ ನಡೆಸಲು ಕೆಲವು ತಾಂತ್ರಿಕ ತೊಂದರೆಗಳು ಇರುವ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲಾಗಿದೆ.
ಉಳಿದ 5 ಇಲಾಖೆಗಳಾದ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು, ಸಮಾಜ ಕಲ್ಯಾಣ-ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಇಲಾಖೆ, ಕರ್ನಾಟಕ ಸಹಕಾರ ವಿಮಾ ಇಲಾಖೆ, ಎನ್.ಸಿ.ಸಿ. ಮತ್ತು ಕಾರಗೃಹ ಈ ಇಲಾಖೆಗಳಿಂದ 29 ಸ್ಥಾನಗಳಿಗೆ 32 ಮಂದಿ ಸ್ಪರ್ಧಿಸಿದ್ದರು.
ಜೆಡಿಎಸ್ ಅಭ್ಯರ್ಥಿಗಳ ಜಯಭೇರಿ: ಕೈಗೆ ಮುಖಭಂಗ
ಶ್ರೀನಿವಾಸಪುರ: ಸೋಮವಾರ 5 ಸ್ಥಾನಗಳಿಗೆ ನಡೆದ ತಾಲೂಕು ಸರ್ಕಾರಿ ನೌಕರರ ಸಂಘದ ಪ್ರತಿನಿಧಿಗಳ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರ ಅಭ್ಯರ್ಥಿಗಳು ಗೆಲವು ಸಾಧಿಸಿ, ಆಡಳಿತ ಪಕ್ಷ ಕಾಂಗ್ರೆಸ್ಗೆ ಮುಖಭಂಗ ತಂದಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದಲ್ಲಿ 3 ಸ್ಥಾನಗಳಿಗೆ 9 ಮಂದಿ ಶಿಕ್ಷಕರು ಸ್ಪರ್ಧಿಸಿದ್ದರು. ಅವರಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಎಲ್.ಆನಂದ 465 ಮತ ಹಾಗೂ ರವಿಕುಮಾರ್ 453 ಮತ ಪಡೆದು ಜಯಶೀಲರಾದರು. ಕಾಂಗ್ರೆಸ್ನ ಎಂ.ನಾಗರಾಜ್ 489 ಮತಗಳಿಗೆ ತೃಪ್ತಿಪಡಬೇಕಾಯಿತು. ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳೆಂದರೆ, ಎಲ್.ಆನಂದ - 465, ವಿ. ಬಯ್ಯಾರೆಡ್ಡಿ- 279, ಜಿ.ಎಂ. ಗೋವಿಂದರೆಡ್ಡಿ-442, ಎಚ್.ಜಯರಾಮರೆಡ್ಡಿ- 52, ಎಂ.ನಾಗರಾಜ್ 489, ಸಿ.ನಾಗೇಂದ್ರ- 53, ಎಂ.ಪಿ. ನಾರಾಯಣಸ್ವಾಮಿ -30, ವಿ.ರವಿಕುಮಾರ್ -453, ವಿ.ಶಾರದಮ್ಮ-298 ಹಾಗೂ ಕಂದಾಯ ಇಲಾಖೆಯ ಎಸ್.ವಿ. ಜನಾರ್ದನ್- 19 ಮತ ಪಡೆದು ಜಯಶೀಲರಾಗಿದ್ದಾರೆ. ಇವರ ಪ್ರತಿಸ್ಪರ್ಧಿ ಗೋಪಾಲಕೃಕಷ್ಣರೆಡ್ಡಿ 8 ಮತ ಪಡೆದು ಸೋಲನುಭವಿಸಿದ್ದಾರೆ. ಸಿಆರ್ಪಿಯ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಿ.ವಿ. ನಾರಾಯಣಸ್ವಾಮಿ 19 ಮತ ಪಡೆದು ಗೆದ್ದರೆ, ವೇಣುಗೋಪಾಲ 10 ಮತ ಪಡೆದು ಸೋಲನುಭವಿಸಿದ್ದಾರೆ. ಒಟ್ಟಾರೆ ಹೇಳಬೇಕೆಂದರೆ ಸರ್ಕಾರಿ ನೌಕರರ ಚುನಾವಣೆ ರಾಜಕೀಯ ಪಕ್ಷಗಳ ಚುನಾವಣೆಗಳಿಂತ ಕಡಿಮೆಯೇನು ಇರಲಿಲ್ಲ. ಪಟ್ಟಣ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಎಸ್.ಎಲ್. ರಾಮರೆಡ್ಡಿ ನೇತೃತ್ವದಲ್ಲಿ ಬಿಗಿ ಬ ಂದೋಬಸ್ತ್ ಕಲ್ಪಿಸಲಾಗಿತ್ತು.
ಚುನಾವಣೆ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ
ಚಿಂತಾಮಣಿ: ಪಟ್ಟಣದ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ನಡೆದ ಸರ್ಕಾರಿ ನೌಕರರ ಸಂಘದ ಚುನಾವಣೆ ತೀವ್ರ ಕುತೂಹಲದಿಂದ ಕೂಡಿತ್ತು. ರಾಜಕೀಯ ಮುಖಂಡರಂತೆ ಶಿಕ್ಷಕರು ಸಹ ತಮ್ಮ ಅಭ್ಯರ್ಥಿಗಳ ಪರ ಲಾಭಿ ನಡೆಸಿ ಮತ ಚಲಾಯಿಸುವಂತೆ ಮತಗಟ್ಟೆ ಹತ್ತಿರ ಗುಂಪು ಗುಂಪುಗಳಾಗಿ ಸೇರಿದ ಪರಿಣಾಮ ಪೊಲೀಸರು ಚುನಾವಣೆ ಶಾಂತಿಯುತವಾಗಿ ನಡೆಸಲು ಸಹಕಾರ ನೀಡುವಂತೆ ಕೋರಿದರು. ಸಂಘದ ಚುನಾವಣೆಗೆ ಮತ ಹಾಕಲು ಪ್ರಾಥಮಿಕ ಶಾಲಾ ಶಿಕ್ಷಕರ ಹಾಗೂ ಪ್ರೌಢಶಾಲಾ ಸಹಶಿಕ್ಷಕರ ಚುನಾವಣೆ ಸೇರಿದಂತೆ ಇನ್ನೂ ಹಲವು ಇಲಾಖೆಗಳಿಗೆ ಸಂಬಂಧಪಟ್ಟಂತೆ ಸೋಮವಾರ ಬಿರುಸಿನ ಮತದಾನ ನ ನಡೆಯಿತು. ಶಿಕ್ಷಕರು ಸಹ ತಮ್ಮ ಅಭ್ಯರ್ಥಿಗಳ ಪರ ಮತ ಚಲಾಯಿಸುವಂತೆ ಮತಗಟ್ಟೆಯ ಬಳಿ ಗುಂಪು ಗುಂಪುಗಳಾಗಿ ಸೇರಿ ಮನವಿ ಮಾಡುತ್ತಿದ್ದರು.
ಶಿಕ್ಷಕರ ಅಸಮದಾನ: ಗುರುಭವನ ಅಥವಾ ವಿಶಾಲವಾದ ಕಾಲೇಜು ವ್ಯಾಪ್ತಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಸದೆ ಹಾಗೂ ಶಿಕ್ಷಕರ ಗುರುತಿನ ಚೀಟಿ ಒಂದೇ ದಿನದಲ್ಲಿ ಜೊತೆಯಲ್ಲಿ ತರುವಂತೆ ಸೂಚಿಸಿರುವುದು ಸರಿಯಲ್ಲವೆಂದು ಹಲವಾರು ಶಿಕ್ಷಕರು ಚುನಾವಣೆಯ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ.
ಜಟಾಪಟಿ: ಸರ್ಕಾರಿ ನೌಕರರ ಚುನಾವಣೆ ಮತಗಟ್ಟೆ ಬಳಿ ಪೊಲೀಸರು ವಿನಾಕಾರಣ ಶಿಕ್ಷಕರ ಜೊತೆ ಅನುಚಿತವಾಗಿ ವರ್ತಿಸಿದ ಕಾರಣಕ್ಕಾಗಿ ಶಿಕ್ಷಕರು ಪೊಲೀಸರ ವಿರುದ್ಧ ರಸ್ತೆಯಲ್ಲೆ ತಿರುಗಿ ಬಿದ್ದರು. ಮತ್ತೊಂದು ಕಡೆ ಪೊಲೀಸರು ಚುನಾವಣೆ ಸುಗಮವಾಗಿ ನಡೆಸಲು ಶಿಕ್ಷಕರ ಸಹಕಾರ ಬಹಳ ಮುಖ್ಯವೆಂದು ಮನವಿ ಮಾಡಿದರೂ ಸಹ ಹಲವು ಶಿಕ್ಷಕರು ಪೊಲೀಸರು ಮಾತನಾಡಿದ ದರ್ಪದ ಮಾತುಗಳಿಗೆ ಹಲವು ಸಮಯ ಬಿಗುವಿನ ವಾತಾವರಣದಿಂದ ಕೂಡಿತ್ತು. ನಂತರ ರಾಜಿ ಸಂದಾನದ ಮೂಲಕ ಚುನಾವಣೆ ಸುಗಮವಾಗಿ ನಡೆಯಲು 2 ಕಡೆ ಸ್ಪಂದಿಸಿದರು. ಇದರಿಂದ ನೌಕರರ ಚುನಾವಣೆ ಫಲಿತಾಂಶ ಸೋಮವಾರ ಸಂಜೆ ಹೊರಬೀಳುವ ತನಕ ಅಭ್ಯರ್ಥಿಗಳು ಕಾದು ನೋಡಬೇಕಾಗಿದೆ.
ಚುನಾವಣೆ: ವಿಜೇತರು
ಚಿಂತಾಮಣಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಚಿಂತಾಮಣಿ ಶಾಖೆಗೆ 2013-18 ನೇ ಸಾಲಿಗೆ ಉಮೇದುವಾರಿಕೆ ಸಲ್ಲಿಸಿದ್ದ ವಿವಿಧ ಇಲಾಖೆಯ ಅಭ್ಯರ್ಥಿಗಳ ಹೆಸರು ಮತ್ತು ಪಡೆದ ಮತಗಳ ವಿವರ ಇಂತಿದೆ. ಪ್ರೌಢಶಾಲೆಗಳ ವಿಭಾಗದಲ್ಲಿ ಜನಾರ್ದನ ರೆಡ್ಡಿ ಬಿ. 103 ಮತ, ಪ್ರತಿಸ್ಪರ್ಧಿ, ಆರ್.ನಾರಾಯಣರೆಡ್ಡಿ 44, ಯಲ್ಲಪ್ಪ. ಕೆ.ಬಿ (84). ಕಿರಿಯ ಕಾಲೇಜು ಮತ್ತು ಪದವಿ ಕಾಲೇಜುಗಳ ವಿಭಾಗದಲ್ಲಿ ಮುನಿರೆಡ್ಡಿ 30, ರಾಮಸುಬ್ಬಾರೆಡ್ಡಿ ಬಿ.ಆರ್ 28. ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆ ವಿಭಾಗದಲ್ಲಿ ಜಗದೀಶ್ ಎಚ್. 39, ಮಂಜುನಾಥ್ ವೈ.ಎನ್. 25. ಅರಣ್ಯ ಇಲಾಖೆಯಲ್ಲಿ ವೆಂಕಟರೆಡ್ಡಿ ಬಿ.ಎಂ. 8, ಶ್ರೀನಿವಾಸ ಕೆ.ಸಿ. 6. ತಾಲ್ಲೂಕು ಪಂಚಾಯ್ತಿ: ನಂಜರೆಡ್ಡಿ 30, ಮಲ್ಲಿಕಾರ್ಜುನಸ್ವಾಮಿ ಎಸ್. 28. ಪ್ರಾಥಮಿಕ ಶಾಲಾ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಅಭ್ಯರ್ಥಿಗಳ ವಿವರ ಸಮಯದ ಅಭಾವದಿಂದ ಪ್ರಕಟಗೊಂಡಿಲ್ಲ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಆಯ್ಕೆ
ಮಾಲೂರು: ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸ್ಥಾನಕ್ಕಾಗಿ ಸೋಮವಾರ ನಡೆದ ಚುನಾವಣೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮಾಜಿ ಅಧ್ಯಕ್ಷ ಜಯರಾಂ (454 ಮತ), ಆಂಜಿನಪ್ಪ (598) ಹಾಗೂ ಗುಂಡಪ್ಪ (565) ಆಯ್ಕೆಯಾಗಿದ್ದಾರೆ. ಅಶ್ವತ್ಥ್ನಾರಾಯಣ್ಗೌಡ, ಸೋಮಶೇಖರ್ (426), ಚಂದ್ರಮ್ಮ (39) ಪರಾಭವಗೊಂಡವರು. ಪ್ರೌಢಶಾಲೆ ವಿಭಾಗದಲ್ಲಿ ಎಂ.ಶ್ರೀನಿವಾಸ್ (147), ವೆಂಕಟಸ್ವಾಮಿ (147) ಆಯ್ಕೆಯಾಗಿದ್ದು, ಸಿ.ಬಿ. ವೀರಭದ್ರಾಚಾರಿ (102) ಸೋತಿದ್ದಾರೆ. ಕಂದಾಯ ಇಲಾಖೆಯ ಬೀರಪ್ಪ (44), ಜಯರಾಂ (50) ಆಯ್ಕೆಯಾಗಿದ್ದು, ಸತ್ಯ ಪ್ರಕಾಶ್ (30) ಸೋಲಪ್ಪಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಿಂದ ಪಿಳ್ಳಪ್ಪ (13) ಆಯ್ಕೆಯಾಗಿದ್ದು, 6 ಮತ ಪಡೆದ ಅಶ್ವತ್ಥಪ್ಪ ಸೋತಿದ್ದಾರೆ. ಸಂಘದಲ್ಲಿರುವ 32 ನಿರ್ದೇಶಕ ಸ್ಥಾನಕ್ಕೆ ಈಗಾಗಲೇ ವಿವಿಧ ಇಲಾಖೆಗಳ 24 ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 8 ಸ್ಥಾನಕ್ಕಾಗಿ ಸೋಮವಾರ ಚುನಾವಣೆ ನಡೆದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

