ಎತ್ತಿನಹೊಳೆ ಯೋಜನೆಯಲ್ಲಿ 24 ಟಿಎಂಸಿ ನೀರು: ಪಾಟೀಲ್
ಕ.ಪ್ರ.ವಾರ್ತೆ ವಿಧಾನಸಭೆ ಜು.22
ಬಯಲುಸೀಮೆಯ ಐದು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆಯಲ್ಲಿ 24 ಟಿಎಂಸಿ ನೀರು ಲಭ್ಯವಾಗಲಿದ್ದು, ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಸೋಮವಾರ ಕಾಂಗ್ರೆಸ್ ಸದಸ್ಯ ಡಾ. ಸುಧಾಕರ್ ಮತ್ತಿತರರು ನಿಯಮ 69ರಡಿ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು, ಐಐಎಸ್ಸಿ ತಜ್ಞ ರಾಮ್ಪ್ರಸಾದ್ ಅವರು ಎಲ್ಲಾ ವಿಚಾರಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿದ್ದು, ಅದರಂತೆ ಎತ್ತಿನಹೊಳೆ ಯೋಜನೆ ಮೂಲಕ ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ 24 ಟಿಎಂಸಿ ನೀರು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಎತ್ತಿನಹೊಳೆ 8323.50 ಕೋಟಿ ಮೊತ್ತದ ಯೋಜನಾ ವರದಿಯನ್ನು ಕಾರ್ಯಸಾಧ್ಯತಾ ವರದಿ ಆಧಾರದ ಮೇಲೆ ತಯಾರಿಸಲಾಗಿದೆ. ಈ ಯೋಜನಾ ವರದಿಗೆ ತಾಂತ್ರಿಕ ಉಪಸಮಿತಿ ಮತ್ತು ನಿಗಮದ ನಿರ್ದೇಶಕ ಮಂಡಳಿಯ ಶಿಫಾರಸಿನೊಂದಿಗೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿದೆ. ಹೀಗಾಗಿ ಯೋಜನೆ ಜಾರಿಯಾಗುವ ಬಗ್ಗೆಯೂ ಅನುಮಾನ ಬೇಡ ಎಂದರು.
10 ಟಿಎಂಸಿ ನೀರು: ಎತ್ತಿನಹೊಳೆ ಯೋಜನೆಯಲ್ಲಿ 10 ಟಿಎಂಸಿ ನೀರು ಲಭ್ಯವಾಗುತ್ತದೆ ಎಂದು ಕೇಂದ್ರ ಜಲ ಆಯೋಗ ಹೇಳಿತ್ತು. ಆದರೆ, ನಂತರ ಅದು 24 ಟಿಎಂಸಿ ಆಗಲು ಹೇಗೆ ಸಾಧ್ಯ ಎಂಬ ಡಾ. ಸುಧಾಕರ್ ಪ್ರಶ್ನೆಗೆ ಉತ್ತರಿಸಿದ ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಕೇಂದ್ರ ಜಲ ಆಯೋಗ ವರದಿ ನೀಡುವಾಗ ಎತ್ತಿನಹೊಳೆ ಹಳ್ಳದಿಂದ ಮಾತ್ರ ನೀರು ತರುವ ಯೋಜನೆಯಿತ್ತು. ಆದರೆ, ಹೆಚ್ಚು ನೀರು ತರಬೇಕು ಎಂಬ ಕಾರಣಕ್ಕೆ ಇನ್ನೂ ಏಳು ಹಳ್ಳಗಳನ್ನು ಈ ಯೋಜನೆಯಡಿ ಸೇರಿಸಿಕೊಳ್ಳಲಾಗಿದೆ. ಹೀಗಾಗಿ ನೀರಿನ ಪ್ರಮಾಣ 24 ಟಿಎಂಸಿ ಆಗಿದೆ ಎಂದು ಸ್ಪಷ್ಟನೆ ನೀಡಿದರು.
ಎತ್ತಿನಹೊಳೆ ಯೋಜನೆ ಜಾರಿಗೆ ಮುನ್ನ ಸಮಗ್ರ ಯೋಜನಾ ವರದಿ ಸಿದ್ಧಪಡಿಸದೆ ಏಕಾಏಕಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಇದರಿಂದ ಯೋಜನೆ ಸಮರ್ಪಕವಾಗಿ ಜಾರಿಯಾಗುವುದು ಸಾಧ್ಯವಿಲ್ಲ ಎಂಬ ಸದಸ್ಯರ ಆತಂಕಕ್ಕೆ ಪ್ರತಿಕ್ರಿಯಿಸಿದ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಇತರೆ ನೀರಾವರಿ ಯೋಜನೆಗಳಂತೆ ಈ ಯೋಜನೆಗೂ ಸಮಗ್ರ ವರದಿ ತಯಾರಿಸಲಾಗಿದೆ. ಏತ ನೀರಾವರಿ ಮತ್ತು ನೀರು ಸರಬರಾಜು ಎಂದು ಎರಡು ಹಂತಗಳಲ್ಲಿ ಯೋಜನೆ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ರೀತಿ ಮಾಡಲಾಗಿದೆ. ಮೇಲಾಗಿ ಈ ಯೋಜನೆಯ ಗುತ್ತಿಗೆ ಪಡೆಯುವವರು ಯೋಜನೆಯನ್ನು ಕಾರ್ಯಗತಗೊಳಿಸುವುದರ ಜತೆಗೆ ಸಮಗ್ರ ಯೋಜನಾ ವರದಿಯನ್ನೂ (ಇಪಿಸಿ ಮಾದರಿ) ಸಿದ್ಧಪಡಿಸಬೇಕಾಗುತ್ತದೆ ಎಂದು ಹೇಳಿದರು.
3296.50 ಕೋಟಿ ಅಂದಾಜು: ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ಬಳಿಕವೇ ಮೊದಲ ಹಂತದಲ್ಲಿ 3296.50 ಕೋಟಿ ಮೊತ್ತದ ಅಂದಾಜು ತಯಾರಿಸಿ ಅದನ್ನು ಐದು ಪ್ಯಾಕೇಜ್ಗಳಾಗಿದ ವಿಂಗಡಿಸಲಾಗಿದೆ. ಇದಕ್ಕೆ 2650.41 ಕೋಟಿ ನಿಗದಿಪಡಿಸಿದ್ದು, ತಾಂತ್ರಿಕ ಉಪಸಮಿತಿ ಮತ್ತು ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಿ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಗುತ್ತಿಗೆ ಪಡೆದ ಕಂಪನಿ ಇಪಿಸಿ ಸಿದ್ಧಪಡಿಸಿದ ಬಳಿಕ ಮತ್ತೆ ತಾಂತ್ರಿಕ ಸಮಿತಿ ಮತ್ತು ಮಂಡಳಿ ಸಭೆಯಲ್ಲಿ ವಿವರವಾಗಿ ಚರ್ಚಿಸಿ ಅನುಮೋದನೆ ನೀಡಲಾಗುತ್ತದೆ. ಎಲ್ಲಾ ಪ್ರಕ್ರಿಯೆಗಳೂ ನಿಯಮಬದ್ಧವಾಗಿಯೇ ನಡೆದಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

