ಕೋಲಾರ

'ಹೊಸ ಪಠ್ಯಕ್ರಮಕ್ಕೆ ವಿದ್ಯಾರ್ಥಿಗಳ ತಯಾರು ಮಾಡಿ'

Published On :

ಕನ್ನಡಪ್ರಭ ವಾರ್ತೆ ಕೋಲಾರ ಜು.24
ರಾಷ್ಟ್ರೀಯ ಪಠ್ಯಕ್ರಮದಂತೆ ಪಿಯುಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅನುವಾಗುವಂತೆ ಉಪನ್ಯಾಸಕರಿಗೆ ತರಬೇತಿ ಅಗತ್ಯವಾಗಿದೆ ಎಂದು ಪದವಿ ಪೂರ್ವಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಜಿ. ದೊರೆಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಕಠಾರಿಪಾಳ್ಯದ ಬಿಆರ್‌ಸಿಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಪಿಯುಸಿ ಹೊಸ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಉಪನ್ಯಾಸಕರಿಗೆ ಬುಧವಾರ ಹಮ್ಮಿಕೊಂಡಿದ್ದ ದೂರಸಂಪರ್ಕ ಉಪಗ್ರಹ ಆಧಾರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹೊಸ ಪಠ್ಯಕ್ರಮದಂತೆ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪೈಪೋಟಿಗೆ ಅನುಗುಣವಾಗಿ ಸಿದ್ದಗೊಳಿಸುವ ಹೊಣೆ ಇಲಾಖೆ ಹಾಗೂ ಉಪನ್ಯಾಸಕರ ಮೇಲಿದ್ದು, ಈ ನಿಟ್ಟಿನಲ್ಲಿ ನೀಡುತ್ತಿರುವ ತರಬೇತಿ ಸಹಕಾರಿಯಾಗಲಿದೆ ಎಂದರು.
ವಿದ್ಯಾರ್ಥಿಗಳಿಗೆ ಮತ್ತಷ್ಟು ಉತ್ತಮ ಬೋಧನಾ ಕ್ರಮಗಳ ಅಳವಡಿಕೆ, ಗುಣಮಟ್ಟದ ಶಿಕ್ಷಣ ನೀಡಿಕೆ ಉದ್ದೇಶದಿಂದ ಸರಕಾರ ಎಲ್ಲಾ ಪಿಯು ಉಪನ್ಯಾಸಕರಿಗೂ ಇಂದಿನಿಂದ ಆ.16 ರವರೆಗೆ 18 ದಿನಗಳ ತರಬೇತಿಯನ್ನು ಹಮ್ಮಿಕೊಂಡಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ವಿಷಯವಾರು ವೇಳಾಪಟ್ಟಿ: ಜು.25 ರಂದು ಗುರುವಾರ ಇಂಗ್ಲೀಷ್, ಜು.26 ರ ಶುಕ್ರವಾರ ಇತಿಹಾಸ, ಜು.27ರ ಶನಿವಾರ ಅರ್ಥಶಾಸ್ತ್ರ, ಜು.29ರ ಸೋಮವಾರ ರಾಜ್ಯಶಾಸ್ತ್ರ ಉಪನ್ಯಾಸಕರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಜು.30ರ ಮಂಗಳವಾರ ಸಮಾಜಶಾಸ್ತ್ರ,  ಜು.31ರ ಬುಧವಾರ ಭೌತಶಾಸ್ತ್ರ, ಆ.1 ರ ಗುರುವಾರ ರಸಾಯನ ಶಾಸ್ತ್ರ, ಆ.2 ರ ಶುಕ್ರವಾರ ಗಣಿತ, ಆ.3 ರ ಶನಿವಾರ ಜೀವಶಾಸ್ತ್ರ ಉಪನ್ಯಾಸಕರಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆ.5 ರ ಸೋಮವಾರ ಎಲೆಕ್ಟ್ರಾನಿಕ್ಸ್, ಆ.6 ರ ಮಂಗಳವಾರ ಗಣಕವಿಜ್ಞಾನ, ಆ.7 ರ ಬುಧವಾರ ಲೆಕ್ಕಶಾಸ್ತ್ರ, ಆ.8ರ ಗುರುವಾರ ಭೂಗೋಳ ಶಾಸ್ತ್ರ, ಆ.12 ರ ಸೋಮವಾರ ಶಿಕ್ಷಣ ಶಾಸ್ತ್ರ, ಆ.13 ರ ಮಂಗಳವಾರ ವ್ಯವಹಾರ ಅಧ್ಯಯನ, ಆ.14ರ ಬುಧವಾರ ಹಿಂದಿ, ಆ.16 ರ ಶುಕ್ರವಾರ ಸಂಸ್ಕೃತ ವಿಷಯಗಳ ಉಪನ್ಯಾಸಕರಿಗೆ ಈ ತರಬೇತಿ ನೀಡಲಾಗುತ್ತಿದ್ದು, ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಅನುದಾನರಹಿತ ಪಿಯು ಕಾಲೇಜುಗಳ ಉಪನ್ಯಾಸಕರು ಕಡ್ಡಾಯವಾಗಿ ಹಾಜರಾಗಿ ತರಬೇತಿಯ ಪ್ರಯೋಜನ ಪಡೆದುಕೊಳ್ಳಬೇಕೆಂದು ಸೂಚಿಸಿದರು.
ಉಪಗ್ರಹ ಆಧಾರಿತ ತರಬೇತಿ ನೀಡಿಕೆಯಲ್ಲಿ ರಾಜ್ಯದ ಹಲವಾರು ಹಿರಿಯ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದು, ಉಪನ್ಯಾಸಕರು ಬೋಧನಾ ಸಂದರ್ಭದಲ್ಲಿ ಎದುರಾಗುವ ತಮ್ಮ ಸಮಸ್ಯೆಗಳಿಗೆ ದೂರವಾಣಿ ಮೂಲಕ ಉತ್ತರವನ್ನು ಸಹಾ ಪಡೆದುಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಿಯು ಒಕ್ಕೂಟದ ಅಧ್ಯಕ್ಷ ಎಸ್.ವೆಂಕಟಸ್ವಾಮಿ, ಹಿರಿಯ ಉಪನ್ಯಾಸಕರಾದ ಎಂ.ನಾರಾಯಣಪ್ಪ,  ಜೆ.ಜಿ. ನಾಗರಾಜ್, ಗೋಪಿಕೃಷ್ಣ, ಅಶ್ವತ್ಥನಾರಾಯಣಗೌಡ, ಅಶ್ವತ್ಥಗೌಡ, ಪಿ.ಎಸ್. ಮಂಜುಳಾ, ಕೆ.ಎಂ. ವಿಮಲಾ, ಅಪ್ಪಯ್ಯಾಚಾರಿ ಸೇರಿದಂತೆ ಜಿಲ್ಲೆಯ ಎಲ್ಲಾ ಪಿಯು ಕಾಲೇಜುಗಳ ಕನ್ನಡ ಭಾಷಾ ಉಪನ್ಯಾಸಕರು ಭಾಗವಹಿಸಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.