ಯುವಜನತೆ ಸ್ವಾತಂತ್ರ್ಯದ ನಿಜವಾದ ಅರ್ಥ ಅರಿಯಲಿ
ಕ.ಪ್ರ.ವಾರ್ತೆ ಬಂಗಾರಪೇಟೆ ಜು. 24
ಹಲವು ತ್ಯಾಗ, ಬಲಿದಾನಗಳಿಂದ ದಕ್ಕಿರುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವಲ್ಲಿ ಇಂದಿನ ಪೀಳಿಗೆ ಎಡವುತ್ತಿದೆ. ಸ್ವಾತಂತ್ರ್ಯದ ನಿಜವಾದ ಅರ್ಥ ಅರಿತು ಯುವಜನತೆ ದೇಶ ರಕ್ಷಣೆಯತ್ತ ಸಾಗಬೇಕು. ಆಗ ಮಾತ್ರ ಸ್ವಾತಂತ್ರ್ಯ ಸಾರ್ಥಕವಾಗುವುದು ಎಂದು ಹಿರಿಯ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹೇಳಿದರು.
ಪಟ್ಟಣದ ಶಾಂತಿನಗರದ ಬಡಾವಣೆಯಲ್ಲಿ ನಾಗರಿಕ ಸಮಿತಿ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 150ನೇ ವರ್ಷದ ಜನ್ಮ ವರ್ಷಾಚರಣೆ ಸವಿ ನೆನಪಿನಲ್ಲಿ ಸ್ವಾತಂತ್ರ್ಯ ಸೇನಾನಿ ಚಂದ್ರಶೇಖರ ಆಜಾದ್ ಅವರ 108ನೇ ಹುಟ್ಟುಹಬ್ಬದ ಪ್ರಯುಕ್ತ ಆಜಾದ್ ಪುತ್ಥಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ದಕ್ಕಿದ ಮೇಲೆ ಜನರಲ್ಲಿ ದೇಶಪ್ರೇಮ ಸಂಪೂರ್ಣವಾಗಿ ಮಾಯವಾಗಿದೆ. ಯಾರಲ್ಲಿಯೂ ಬದ್ಧತೆ ಎಂಬುದೇ ಇಲ್ಲ. ಪ್ರತಿಯೊಬ್ಬರೂ ಮೊದಲು ದೇಶ ಪ್ರೇಮ ಮೈಗೂಡಿಸಿಕೊಳ್ಳಬೇಕು. ಅನ್ಯಾಯದ ವಿರುದ್ಧ ಸಂಘಟಿತರಾಗಿ ಹೋರಾಟ ಮಾಡಿದಾಗ ಮಾತ್ರ ನಮ್ಮದು ಪ್ರಜಾಪ್ರಭುತ್ವ ದೇಶ ಎಂದು ಹೇಳಲು ಸಾಧ್ಯ. ಜನರು ಕುಂಭಕರ್ಣ ನಿದ್ದೆಯಲ್ಲಿದ್ದಾರೆ. ಇದರ ಪರಿಣಾಮ ಬಡವರು ಬಡವರಾಗೇ ಉಳಿದಿದ್ದಾರೆ. ಶ್ರೀಮಂತರು ಮತ್ತಷ್ಟು ಬಲಿಷ್ಠರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳನ್ನು ಸ್ಥಾಪಿಸುವುದರಿಂದ ಯಾವುದೇ ಸಮಾಜಕ್ಕೆ ಉಪಯೋಗಿಲ್ಲ. ಪ್ರತಿಮೆ ಹಿಂದಿರುವ ಉದ್ದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಿದಾಗ ಮಾತ್ರ ಇಂತಹ ವೀರ ಸೇನಾನಿಗಳ ಪ್ರತಿಮೆಗಳನ್ನು ಪ್ರಾರಂಭಿಸಿದಕ್ಕೆ ಸಾರ್ಥಕವಾಗುವುದು. ಪ್ರತಿಯೊಬ್ಬರಲ್ಲಿಯೂ ಸ್ವದೇಶಿ ಪ್ರೇಮ ಮೆರೆಯಬೇಕು. ವಿದೇಶಿ ವ್ಯಾಮೋಹ ಕೈ ಬಿಟ್ಟಾಗ ಮಾತ್ರ ದೇಶದ ಆರ್ಥಿಕ ಸ್ಥಿತಿಗತಿ ಸಹ ಸುಧಾರಿಸಲು ಸಾಧ್ಯ ಎಂದು ಹೇಳಿದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವಿರೇಶಾನಂದ ಸ್ವಾಮಿಜಿ ಮಾತನಾಡಿ, ಜನರಲ್ಲಿ ರಾಷ್ಟ್ರಪ್ರೇಮ ದಿನೇದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇಂತಹ ವೇಳೆ ಚಂದ್ರಶೇಖರ ಆಜಾದ್ ಪ್ರತಿಮೆ ಸ್ಥಾಪಿಸಿ ಎಲ್ಲರಲ್ಲಿಯೂ ಮತ್ತೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನೆನಪಿಸುವಂತೆ ಮಾಡಿರುವುದು ಶ್ಲಾಘನೀಯವಾಗಿದೆ. ಮಕ್ಕಳಲ್ಲಿ ಸ್ವಾತಂತ್ರ್ಯಕ್ಕಾಗಿ ಪ್ರಾಣ -ಬಲಿದಾನಗಳನ್ನು ಮಾಡಿರುವ ಸೇನಾನಿಗಳ ಬಗ್ಗೆ ತಿಳಿವಳಿಕೆ ಮೂಡಿಸುವ ಕೆಲಸ ಸಹ ನಿರಂತರವಾಗಿ ಆಗಬೇಕಿದೆ ಎಂದರು. ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ವಿದ್ಯಾಧರ ಗುರೂಜೀ ಅವರು ಚಂದ್ರಶೇಖರ ಆಜಾದ್ ಅವರ ಪುತ್ಥಳಿ ಅನಾವರಣಗೊಳಿಸಿದರು. ಮುಖ್ಯ ಅತಿಥಿಗಳಾಗಿ ಡಾ.ಬಾಬು ಕೃಷ್ಣಮೂರ್ತಿ, ಪುರಸಭೆ ಸದಸ್ಯರಾದ ಕೆ.ಚಂದ್ರಾರೆಡ್ಡಿ, ಬಿ.ಸಿ.ಶ್ರೀನಿವಾಸಮೂರ್ತಿ, ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ, ವಿಹಿಂಪ ಜಿಲ್ಲಾಧ್ಯಕ್ಷ ರಘುರಾಮರೆಡ್ಡಿ, ಟಿ.ಎನ್. ರಾಮಕೃಷ್ಣ, ವಕೀಲ ಕುಸುಮಾ ಕೃಷ್ಣಮೂರ್ತಿ, ಪುತ್ತಳಿ ದಾನಿ ಬಿ.ಎಂ.ಜನಾರ್ಧನ ರೆಡ್ಡಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

