ಕೋಲಾರ

ಬೋರ್ವೆಲ್‌ನಲ್ಲಿ ಮಹಿಳೆ ಶವದ ಅವಶೇಷ ಪತ್ತೆ

Published On :

ಕೋಲಾರ: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಕಿರುಕುಳ ತಾಳಲಾರದೆ ಆಕೆಯನ್ನು ಕೊಲೆ ಮಾಡಿ ಶವವನ್ನು ತುಂಡು ತುಂಡಾಗಿ ಕತ್ತರಿಸಿ ಕೊಳವೆಬಾವಿಯಲ್ಲಿ ಹಾಕಿದ್ದ ಆರೋಪಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ನಂದಂಬಳ್ಳಿಯ ಸುಶೀಲಮ್ಮ (38) ಕೊಲೆಯಾದ ಮಹಿಳೆ. ಇದೇ ತಾಲೂಕಿನ ನೀಲಕಂಠಪುರದ ಕೃಷ್ಣಯ್ಯ (50) ಕೊಲೆ ಆರೋಪಿಯಾಗಿದ್ದಾನೆ.
ಕೃಷ್ಣಯ್ಯ ಮತ್ತು ಕೊಲೆಯಾಗಿರುವ ಮಹಿಳೆಯ ನಡುವೆ ಅಕ್ರಮ ಸಂಬಂಧವಿತ್ತು. ಮದುವೆಗಾಗಿ ಮಹಿಳೆ ಒತ್ತಾಯ ಮಾಡುತ್ತಿದ್ದರಿಂದ ಬೇಸತ್ತು ಕೊಲೆ ಮಾಡಿ ನಂತರ ಆಕೆಯ ಶವವನ್ನು ಕತ್ತರಿಸಿ ಕೊಳವೆ ಬಾವಿಯಲ್ಲಿ ಹಾಕಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ಸುಶೀಲಮ್ಮನ ಮನೆಯವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿ ಕೃಷ್ಣಯ್ಯ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದರು.
ಜು.9ರಂದು ಸುಶೀಲಮ್ಮ ನಂದಂಬಳ್ಳಿಯಿಂದ ಕಾಣೆಯಾಗಿದ್ದಾರೆ ಎಂದು ಆಕೆಯ ಅಣ್ಣ ಮುನಿಯಪ್ಪ ದೂರು ನೀಡಿದ್ದರು. ಗ್ರಾಮಾಂತರ ಪೊಲೀಸರು ತನಿಖೆ ನಡೆಸಿದಾಗ ಕೃಷ್ಮಯ್ಯ ಮತ್ತು ಸುಶೀಲಮ್ಮ ನಡುವೆ ಅಕ್ರಮ ಸಂಬಂಧವಿರುವುದು ಗೊತ್ತಾಯಿತು. ಪೊಲೀಸರು ಕೃಷ್ಣಯ್ಯನನ್ನು ಠಾಣೆ ಕರೆ ತಂದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ತನಿಖೆ ಮುಂದುವರಿಸಿದ ಪೊಲೀಸರು ಗುರುವಾರ ನಂದಂಬಳ್ಳಿಗೆ ಆರೋಪಿಯನ್ನು ಕರೆತಂದು ಕೊಲೆ ಮಾಡಿದ ಜಾಗ ಹಾಗೂ ಶವ ಮುಚ್ಚಿಟ್ಟಿರುವ ಪ್ರದೇಶವನ್ನು ಪತ್ತೆ ಮಾಡಿದ್ದಾರೆ. ಆರೋಪಿ ನೀಡಿದ ಸುಳಿವಿನ ಮೇರೆಗೆ ಪೊಲೀಸರು ಕೊಳವೆ ಬಾವಿಯಿಂದ ಶವ ಹೊರ ತೆಗೆಯಲು ಎರಡು ಜೆಸಿಬಿ ಯಂತ್ರಗಳನ್ನು ತರಿಸಿ ಶವ ಹೊರ ತೆಗೆಯಲು ಕಾರ್ಯಾಚರಣೆ ನಡೆಸಿದ್ದಾರೆ.
ತನಗೆ ಈಗಾಗಲೇ ಮದುವೆಯಾಗಿ ಬೆಳೆದ ಮೂರು ಹೆಣ್ಣು ಮಕ್ಕಳಿರುವುದರಿಂದ ಸುಶೀಲಮ್ಮನನ್ನು ಮದುವೆಯಾಗಲು ಒಪ್ಪಲಿಲ್ಲ. ಇದರಿಂದ ಮಾನಸಿಕ ಕಿರುಕುಳ ನೀಡಲಾರಂಭಿಸಿದ್ದರಿಂದ ಕೃತ್ಯ ಎಸಗಿರುವುದಾಗಿ ಆರೋಪಿ ತಿಳಿಸಿದ್ದು ವಿಚಾರಣೆ ಮುಂದುವರೆಸಿದೆ.
12 ವರ್ಷಗಳ ಹಿಂದೆ ಕೋಲಾರ ತಾಲೂಕಿನ ಕೊಂಡೇನಹಳ್ಳಿಯ ನಾಗರಾಜ್ ಎಂಬುವರನ್ನು ಸುಶೀಲಮ್ಮ ಮದುವೆ ಆಗಿದ್ದು, ತನಗೆ ಮಕ್ಕಳಾಗಲಿಲ್ಲವೆಂಬ ಕಾರಣಕ್ಕೆ ಗಂಡನಿಂದ ದೂರವಾಗಿ ಹತ್ತು ವರ್ಷದಿಂದಲೂ ತವರು ಮನೆಯಲ್ಲೇ ಇದ್ದಳಲ್ಲದೆ, ಎರಡು ವರ್ಷದಿಂದ ನೀಲಕಂಠಪುರದ ಕೃಷ್ಣಯ್ಯನ ಜೊತೆ ಸಂಬಂಧ ಬೆಳೆಸಿ ಮುದುವೆಗೆ ಒತ್ತಾಯಿಸಿದ್ದರಿಂದ ಕುಪಿತನಾಗಿ ಈ ಕೃತ್ಯ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.