ಕೋಲಾರ

ಮಾನವನ ಅಭಿವೃದ್ಧಿಯಿಂದ ದೇಶದ ಪ್ರಗತಿ ಸಾಧ್ಯ

Published On :

ಕ.ಪ್ರ.ವಾರ್ತೆ ಕೋಲಾರ ಜು.25
ದೇಶದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಮಾನವನ ಒಟ್ಟಾರೆ ಅಭಿವೃದ್ಧಿ ಅಲವಂಬಿಸಿರುವುದರಿಂದ ಅರ್ಥಶಾಸ್ತ್ರಜ್ಞರು ಆಳುವ ಸರ್ಕಾರಗಳಿಗೆ ಸರಿಯಾದ ಸಲಹೆ, ಮಾರ್ಗದರ್ಶನ ನೀಡಬೇಕೆಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಅರ್ಥಶಾಸ್ತ್ರ ಅಧ್ಯಯನ ಕೇಂದ್ರ ವತಿಯಿಂದ ಹಮ್ಮಿಕೊಂಡಿದ್ದ ದ್ವಿತೀಯ ಪಿಯುಸಿ ಅರ್ಥಶಾಸ್ತ್ರ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು 2013- 14ನೇ ಸಾಲಿನ ವಾರ್ಷಿಕ ಪಠ್ಯ ಯೋಜನೆ ಮತ್ತು ದಿನಚರಿ ಬಿಡುಗಡೆ ಮಾಡಿ ಮಾತನಾಡಿದರು.
ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಆರ್ಥಿಕತೆ ಪ್ರಮುಖ ಪಾತ್ರ ವಹಿಸುವುದರಿಂದ ಅರ್ಥಶಾಸ್ತ್ರಜ್ಞರು ಸರ್ಕಾರಕ್ಕೆ ರಚನಾತ್ಮಕ ಸಲಹೆಗಳು ನೀಡುವ ಮೂಲಕ ಸರ್ಕಾರ ರೂಪಿಸುವ ಯೋಜನೆಗಳು ಫಲಪ್ರದವಾಗುವಂತೆ ನೋಡಿಕೊಳ್ಳಬೇಕು ಹಾಗೆಯೇ ಅರ್ಥಶಾಸ್ತ್ರ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಗೆ ಪೂರಕವಾಗುವ ಜ್ಞಾನ ಸಂಪಾದಿಸಿ ರಾಷ್ಟ್ರಕ್ಕೆ ಪ್ರಯೋಜನವಾಗುವ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತಾಗಬೇಕೆಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಪ್ರಿಯತೆಗೋಸ್ಕರ ತಮ್ಮ ಬಜೆಟಟ್ನಲ್ಲಿ 4500 ಕೋಟಿ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿರುವುದು ವಿಪರ್ಯಸ. ಯಾವುದೇ ಯೋಜನೆ ರೂಪಿಸಿ ಅದನ್ನು ಅನುಷ್ಟಾನಕ್ಕೆ ತರುವಾಗ ಅದರಿಂದಾಗುವಂತಹ ಸ್ಥಿತಿ-ಗತಿ ತಿಳಿದುಕೊಳ್ಳಬೇಕು, ಕೇವಲ ಜನಪ್ರಿಯತೆಗೋಸ್ಕರ ಯೋಜನೆಗಳನ್ನು ಘೋಷಣೆ ಮಾಡುವುದರಿಂದ ಆರ್ಥಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.
ದೇಶದಲ್ಲಿ ಸಿಎಜಿ ಇಲ್ಲದಿದ್ದರೆ ಕೋಟ್ಯಂತರ ಹಗರಣಗಳು ಬೆಳಕಿಗೆ ಬರುತ್ತಲೇ ಇರಲಿಲ್ಲ. ಆಳುವಂತಹ ಸರ್ಕಾರಗಳು ಮಾನವನ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರದಿದ್ದರೆ ದೇಶದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಕೆಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಜಿ. ದೊರೆಸ್ವಾಮಿ ಮಾತನಾಡಿ, ದೇಶದ ಆರ್ಥಿಕ ಸಂಗತಿಗಳು ಮತ್ತು ಸಮಸ್ಯೆಗಳ ಬಗ್ಗೆ ವಿದ್ಯಾಥಿಗಳಲ್ಲಿ ಅರಿವು ಮೂಡಿಸಬೇಕು ಎಂದು ಅರ್ಥಶಾಸ್ತ್ರ ಉಪನ್ಯಾಸಕರಿಗೆ ಸಲಹೆ ನೀಡಿದರು.
ದೇಶದಲ್ಲಿ ಡಾಲರ್ ಮುಂದೆ ರುಪಾಯಿ ಮೌಲ್ಯ ಕುಸಿದು, ಆರ್ಥಿಕ ಪರಿಸ್ಥಿತಿ ಹದಗೆಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೆ ಆರ್ಥಿಕ ತಜ್ಞರು ಆಗುವಂತಹ ವಿದ್ಯಾರ್ಥಿಗಳಿಗೆ ಇದರ ಅರಿವು ಅಗತ್ಯವಾಗಿದೆ. ಸರ್ಕಾರದ ಆರ್ಥಿಕ ನೀತಿಗಳನ್ನು ವಿಮರ್ಶೆ ಮಾಡಿ ಲೋಪಗಳು ಸರಿಪಡಿಸುವ ಶಕ್ತಿಯನ್ನು ಅರ್ಥಶಾಸ್ತ್ರ ಅಧ್ಯಯನ ಮಾಡುವ ವಿದ್ಯಾರ್ಥಿಗಳಲ್ಲಿ ತುಂಬದಿದ್ದರೆ ಬಡವರ ಸ್ಥಿತಿ ಬದಲಾಯಿಸಲು ಕಷ್ಟವಾಗುತ್ತದೆ ಎಂದು ಅಭಿಪ್ರಾಯಿಸಿದರು.
ಜಿಲ್ಲೆಯಲ್ಲಿ ಕೆಲವು ಕಾಲೇಜುಗಳಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಕಡಿಮೆ ಫಲಿತಾಂಶ ಬಂದಿದೆ ಎಂದ ಅವರು, ಆಯಾ ಕಾಲೇಜಿನ ಪ್ರಾಂಶುಪಾಲರು ಕಾಳಜಿ ವಹಿಸಿ ಕೆಲಸ ನಿರ್ವಹಿಸಬೇಕೆಂದು ತಿಳಿಸಿದರು.
ಪದವಿ ಪೂರ್ವ ಕಾಲೇಜುಗಳು ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಾಗರಾಜ್ ಮಾತನಾಡಿ, ಯಾವುದೇ ರಾಷ್ಟ್ರ ಬಲಿಷ್ಠವಾಗಿ ಬೆಳೆಯಬೇಕಾಗಿದರೆ ಆ ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕು ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಜಿ.ನಾಗರಾಜ್, ಅರ್ಥಶಾಸ್ತ್ರ ಅಧ್ಯಯನ ಕೇಂದ್ರದ ರೀತಿಯಲ್ಲಿ ಕನ್ನಡ ಅಧ್ಯಯನ ಕೇಂದ್ರವನ್ನು ರಚನೆ ಮಾಡಲು ಕನ್ನಡ ಉಪನ್ಯಾಸಕರು ಮುಂದಾಗಬೇಕೆಂದರು.
ಅರ್ಥಶಾಸ್ತ್ರ ಆಧ್ಯಯನ ಕೇಂದ್ರದ ಗೌರವಾಧ್ಯಕ್ಷ ವೆಂಕಟರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ವರದರಾಜು, ಪಿಯು ಒಕ್ಕೂಟ ಅಧ್ಯಕ್ಷ ಎಸ್.ವೆಂಕಟಸ್ವಾಮಿ ಇದ್ದರು. ನಿವೃತ್ತ ಪ್ರಾಂಶುಪಾಲರಾದ ಆರ್.ಎಸ್.ಲಿಂಗದೇವರು, ಟಿ.ಫ್ರಾನ್ಸಿಸ್ ಜೀವಿಯರ್ ಮತ್ತು ಪಿ.ಎಚ್.ಡಿ ಪದವಿ ಪಡೆದ ಡಾ. ಪಿ.ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿಯ ಅರ್ಥಶಾಸ್ತ್ರ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಅರ್ಥಶಾಸ್ತ್ರ ಆಧ್ಯಯನ ಕೇಂದ್ರದ ಕಾರ್ಯದರ್ಶಿ ನಾರಾಯಣಪ್ಪ ಸ್ವಾಗತಿಸಿ, ಅಧ್ಯಕ್ಷ ಟಿ.ಚಂದ್ರಪ್ಪ ಅರ್ಥಶಾಸ್ತ್ರ ಅಧ್ಯಯನ ಕೇಂದ್ರದಿಂದ ಕಳೆದ 4 ವರ್ಷಗಳ ಕಾರ್ಯಚಟುವಟಿಕೆ ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.