ಕೋಲಾರ

ದಲಿತರ ಮೇಲೆ ದೌರ್ಜನ್ಯ ತಡೆಗೆ ನಿರ್ದಾಕ್ಷಿಣ್ಯ ಕ್ರಮ

Published On :

ಕ.ಪ್ರ. ವಾರ್ತೆ ಕೆಜಿಎಫ್ ಜು.28
ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಯಲು ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ಜಿಲ್ಲಾ ಎಸ್ಪಿ ಡಾ.ರೋಹಿಣಿ ಕಟೋಚ್ ಸಫೆಟ್ ಅವರು ಹೇಳಿದರು.
ಅವರು ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ ಪಂಗಡದವರ ಕುಂದುಕೊರತೆಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ದಲಿತರು ತಂತಮ್ಮ ಸಮಸ್ಯೆಗಳ ಕುರಿತು ಆಗಿಂದಾಗ್ಗೆ ನಿರ್ಭಯದಿಂದ ದೂರುಗಳನ್ನು ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಕರೆ ನೀಡಿದರು. ದಲಿತರ ಸಮಸ್ಯೆಗಳಿಗೆ ಸ್ಪಂದಿಸದ ಪೊಲೀಸ್ ಅಧಿಕಾರಿಗಳ ವಿರುದ್ದ ದೂರು ನೀಡಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ದಲಿತ ಸಿಂಹ ಸೇನೆ ಜಿಲ್ಲಾಧ್ಯಕ್ಷ ಸೂಲಿಕುಂಟೆ ಆನಂದ್ ಮಾತನಾಡಿ, ಕೆಜಿಎಫ್ ಪೊಲೀಸ್ ಜಿಲ್ಲೆಯ ಬಂಗಾರಪೇಟೆ ಹೊರತುಪಡಿಸಿ ಯಾವುದೇ ಪೊಲೀಸ್ ಠಾಣೆಗಳಲ್ಲಿ ದಲಿತರ ಸಭೆಗಳನ್ನು ಸರಿಯಾಗಿ ನಡೆಸುತ್ತಿಲ್ಲವೆಂದು ಆಪಾದಿಸಿದರು. ಅನಾಮಧೇಯ ಅರ್ಜಿಗಳ ವಿರುದ್ದ ಯಾವುದೇ ಕ್ರಮ ಜರುಗಿಸಬಾರದು ಎಂದು ಆಗ್ರಹಿಸಿದರು. ಕೆಜಿಎಫ್ ಘಟಕದ ಎಲ್ಲಾ ವೃತ್ತಗಳು, ಪೊಲೀಸ್ ಠಾಣೆಗಳಲ್ಲಿ ಕ್ರಮವಾಗಿ ದಲಿತ ಸಭೆಗಳು ನಡೆಯುತ್ತಿರುವುದಾಗಿ ಎಸ್ಪಿ ತಿಳಿಸಿದರು.
ದಲಿತ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷ ಡಾ.ಚಂದ್ರಶೇಖರ್ ಮಾತನಾಡಿ, ಸಭಾ ಸಡವಳಿಕೆಗಳನ್ನು ಸಂಬಂಧಪಟ್ಟವರಿಗೆ ಕಳುಹಿಸಬೇಕೆಂದು, ಪೊಲೀಸ್ ಠಾಣೆಗಳಲ್ಲಿ ಸ್ವೀಕರಿಸುವ ದೂರುಗಳಿಗೆ ಸ್ವೀಕೃತಿಯನ್ನು ಕಡ್ಡಾಯವಾಗಿ ನೀಡುವಂತೆ, ದೂರು ಪ್ರತಿ ದೂರು ದಾಖಲಿಸುವ ಪ್ರವೃತ್ತಿಯನ್ನು ಹೋಗಲಾಡಿಸಬೇಕೆಂದು, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯಬೇಕೆಂದು, ಮಹಿಳೆಯರಿಗೆ ಕಾನೂನು ಅರಿವು ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಸ್ಥಳದಲ್ಲೇ ಹಾಜರಿದ್ದ ಪೊಲೀಸ್ ಅಧಿಕಾರಿಗಳಿಗೆ ಎಸ್ಪಿ ಸೂಚಿಸಿದರು.
ಪಬ್ಲಿಕ್ ಕೇರ್ ಸೊಸೈಟಿಯ ಮುಖಂಡ ಶಶಿಕುಮಾರ್, ದಲಿತರ ಮೇಲಿನ ದೈರ್ಜನ್ಯ ಪ್ರಕರಣಗಳ ಕುರಿತು ಸಂಬಂಧಪಟ್ಟ ಠಾಣಾ ಪಿಎಸ್‌ಐಗಳಿಂದ ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿದರು.
 ಮಾಜಿ ಶಾಸಕ ಎಸ್.ರಾಜೇಂದ್ರನ್ ಇತ್ತೀಚೆಗೆ ದಲಿತರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಬಂಗಾರಪೇಟೆ ಪುರಸಭೆ ಮಾಜಿ ಸದಸ್ಯ ಅನ್ಬಳಗನ್ ಮಾತನಾಡಿ ಕೆಲವು ದಲಿತ ಸಂಘಟನೆಗಳವರು ದಂದೆ ನಡೆಸುತ್ತಿದ್ದಾರೆ, ದಲಿತ ಸಂಘಟನೆಯ ಹೆಸರಲ್ಲಿ ರಾಜಕೀಯ ಮಾಡುತ್ತಾ ಬಂಗಾರಪೇಟೆ ರೈಸ್ ಮಿಲ್ಲುಗಳಲ್ಲಿ ಹಫ್ತಾ ವಸೂಲಿ ಮಾಡುತ್ತಿದ್ದು, ಇದರಿಂದ ದಲಿತ ಸಮುದಾಯಕ್ಕೆ ಧಕ್ಕೆ ತರುವಂತಾಗಿ ಈ ಬಗ್ಗೆ ಇಲಾಖೆ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದರು.
ದಲಿತ ರಕ್ಷಣಾ ವೇದಿಕೆಯ ಅನ್ಬರಸಲ್, ಯಮುನಾಗಾಂಧಿ, ಸಮತಾ ಸೈನಿಕ ದಳದ ಸಂಚಾಲಕ ಜಯಕುಮಾರ್, ದಲಿತ ಮುಖಂಡರಾದ ಕುಪೇಂದ್ರ, ಯಲ್ಲಪ್ಪ, ಕೆ.ವಿ.ಕೃಷ್ಣ, ಆನಂದ್, ನರಸಿಂಹ ಮತ್ತಿತರರು ಮಾತನಾಡಿ ಮೋಟಾರು ವಾಹನ ಕಾಯ್ದೆಯಡಿ ವಾಹನಗಳನ್ನು ತಪಾಸಣೆ ನಡೆಸುವ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಂದ ಹಣಕ್ಕಾಗಿ ಪೀಡಿಸುತ್ತಿದ್ದಾರೆ. ದಲಿತ ಕುಂದುಕೊರತೆ ಸಭೆಗಳಿಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ಸಹ ಆಹ್ವಾನಿಸಬೇಕು, ಜಿಲ್ಲೆಯಾದ್ಯಂತ ಮಾದಕ ವಸ್ತುಗಳ ಮಾರಾಟವು ಕಾಳಸಂತೆಯಲ್ಲಿ ನಡೆಯುತ್ತಿದ್ದರೂ ಪೊಲೀಸರು ತಮಗೇನೂ ತಿಳಿಯದಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ದಲಿತ ಸಾರ್ವಜನಿಕ ಬಂಧುಗಳು ಯಾವುದೇ ಸಂದರ್ಭದಲ್ಲೂ ತಮ್ಮನ್ನು ಭೇಟಿಯಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ದಲಿತರಿಗೆ ಅನ್ಯಾಯವೆಸಗುವ ಪೊಲೀಸ್ ಅಧಿಕಾರಿಗಳ ವಿರುದ್ದ ದೂರುಗಳು ಬಂದಲ್ಲಿ ನಿಸ್ಪಕ್ಷಪಾತವಾಗಿ ತನಿಖೆ ನಡೆಸಿ ಕ್ರಮ ಜರುಗಿಸುವುದಾಗಿ ಡಾ.ರೋಹಿಣಿ ಕಟೋಚ್ ಸಫೆಟ್ ಅವರು ತಿಳಿಸಿದರು. ಉಪರಕ್ಷಣಾಧಿಕಾರಿ ಎಚ್.ಪಿ.ರಾಜಣ್ಣ, ವೃತ್ತ ನಿರೀಕ್ಷಕರಾದ ಟಿ.ಸಿ.ವೆಂಕಟೇಶ್, ಅಬ್ದುಲ್ ಸಲೀಂ, ಜಿ.ಟಿ.ಸ್ವಾಮಿ, ಶಿವಕುಮಾರ್, ಪುಟ್ಟಮಾದಯ್ಯ, ಪಿಎಸ್‌ಐಗಳು, ಗೃಹ ರಕ್ಷಕದಳ ಉಪ ಕಮಾಂಡೆಂಟ್ ಎನ್.ಆರ್.ಪುರುಷೋತ್ತಮ, ದಲಿತ ಸಂಘದ ಮುಖಂಡರು, ಸಮುದಾಯದವರು ಭಾಗವಹಿಸಿದ್ದರು.

ದಲಿತ ಸಾರ್ವಜನಿಕ ಬಂಧುಗಳು ಯಾವುದೇ ಸಂದರ್ಭದಲ್ಲೂ ತಮ್ಮನ್ನು ಭೇಟಿಯಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ದಲಿತರಿಗೆ ಅನ್ಯಾಯವೆಸಗುವ ಪೊಲೀಸ್ ಅಧಿಕಾರಿಗಳ ವಿರುದ್ದ ದೂರುಗಳು ಬಂದಲ್ಲಿ ನಿಸ್ಪಕ್ಷಪಾತವಾಗಿ ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು.
-ಡಾ.ರೋಹಿಣಿ ಕಟೋಚ್ ಸಫೆಟ್, ಜಿಲ್ಲಾ ಎಸ್ಪಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.