ಹಾಸ್ಟೆಲ್ ಅವ್ಯವಸ್ಥೆ: ವಿದ್ಯಾರ್ಥಿಗಳ ಪ್ರತಿಭಟನೆ
ಕ.ಪ್ರ.ವಾರ್ತೆ ಮಾಲೂರು ಜೂ. 25
ತಾಲೂಕಿನ ಚಿಕ್ಕಕುಂತೂರು ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಸಾರ್ವಜನಿಕ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಕಾಡುತ್ತಿರುವ ಮೂಲ ಸೌಕರ್ಯ ಸೇರಿದಂತೆ ಮಕ್ಕಳಿಗೆ ಊಟ ನೀಡದೆ ಸತಾಯಿಸುತ್ತಿರುವುದನ್ನು ಪ್ರತಿಭಟಿಸಿ ಗ್ರಾಮಸ್ಥರು ಹಾಸ್ಟೆಲ್ ಮುಂದೆ ಪ್ರತಿಭಟಿಸಿದ ಘಟನೆ ಮಂಗಳವಾರ ನಡೆದಿದೆ.
ಹಾಜರಾತಿ ಪುಸ್ತಕದಲ್ಲಿ 50 ಎಂದು ನಮೂದಿಸಿದ್ದರೂ ವಾಸ್ತವವಾಗಿ ಇರುವ ಕೇವಲ ಹತ್ತು ವಿದ್ಯಾರ್ಥಿಗಳಿಗೆ ಊಟ ನೀಡದೆ ವಾರ್ಡ್ನ್ ಸತಾಯಿಸುತ್ತಿದ್ದಾರೆ ಎಂದು ಅಪಾದಿಸಿದ ವಿದ್ಯಾರ್ಥಿಗಳು ಬೆಳಗ್ಗೆ ಒಮ್ಮೆ ಅನ್ನ- ಸಾರು ಬಿಟ್ಟರೆ ರಾತ್ರಿ ಒಂದು ಮುದ್ದೆ ನೀಡುತ್ತಿದ್ದಾರೆ, ಬಾಳೆಹಣ್ಣು, ಮೊಟ್ಟೆ ಇದುವರೆಗೂ ವಿತರಿಸಿಲ್ಲ ಎಂದು ಅಪಾದಿಸಿದರು.
ಗ್ರಾಮದ ಮುಂಖಡ ಆನಂದ್ ರೆಡ್ಡಿ ಮಾತನಾಡಿ, ಸೋಲಾರ್ ವ್ಯವಸ್ಥೆ ಇದ್ದರೂ ಬಿಸಿ ನೀರು ನೀಡದೆ ವಾರಕ್ಕೊಮ್ಮೆ ಸ್ನಾನ ಮಾಡಲು ಅವಕಾಶ ಕಲ್ಪಿಸಿಕೊಡುತ್ತಿರುವ ಹಾಸ್ಟೆಲ್ ವಾರ್ಡ್ನ್ ಶನಿವಾರ ಹಾಗೂ ಭಾನುವಾರ ಮಕ್ಕಳನ್ನು ಗ್ರಾಮಗಳಿಗೆ ವಾಪಸ್ ಕಳುಹಿಸುವ ಮೂಲಕ ಹಾಸ್ಟೆಲ್ಅನ್ನು ಕಡ್ಡಾಯ ರಜೆ ಮಾಡಲಾಗುತ್ತಿದೆ ಎಂದು ದೂರಿದರು.
ಶೌಚಾಲಯ ಇದ್ದರೂ ಹೊರಗೆ ಹೋಗುವಂತೆ ತಿಳಿಸುತ್ತಾರೆ. ಅಡುಗೆ ಮಾಡುವ ನಾರಾಯಣಮ್ಮ ರಾತ್ರಿ ಹೊತ್ತಿನಲ್ಲಿ ಕುಡಿದು ಬಂದು ಮಕ್ಕಳನ್ನು ಅವ್ಯಾಚ್ಯ ಶಬ್ದದಿಂದ ಬೈಯುತ್ತಾಳೆ ಎಂದು ಆರೋಪಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ವಾರ್ಡ್ನ್ ಸಂಪಂಗಿ ಅವರನ್ನು ಇಲ್ಲಿನ ಸೌಲಭ್ಯಗಳ ಕೊರತೆ ಬಗ್ಗೆ ವಿಚಾರಿಸಿದರೆ, ತಾಲೂಕಿನಲ್ಲಿ ನಾಲ್ಕು ಹಾಸ್ಟೆಲ್ಗಳನ್ನು ವಾರ್ಡ್ನ್ ಆಗಿ ನೋಡಿಕೊಳ್ಳಬೇಕಾಗಿರುವುದರಿಂದ ನನ್ನ ಕೈಯಲ್ಲಿ ಸಾಧ್ಯವಾಗುವಷ್ಟು ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಿರುವುದಾಗಿ ತಿಳಿಸಿದರು.
ವಾರ್ಡ್ನ್ ಮಾತನ್ನು ಒಪ್ಪದ ಗ್ರಾಮಸ್ಥರು ಹಾಜರಾತಿಯಲ್ಲಿ ಕೇವಲ ಹತ್ತು ಮಕ್ಕಳಿದ್ದರೂ ಹಾಜರಾತಿ ಪುಸ್ತಕಗಳಲ್ಲಿ 50 ವಿದ್ಯಾರ್ಥಿಗಳನ್ನು ತೋರಿಸುತ್ತಿರುವುದೆ ನಿಮ್ಮ ಪ್ರಾಮಾಣಿಕತೆಯ ಪ್ರಮಾಣ ತೋರಿಸುತ್ತಿದೆ ಎಂದು ದೂರಿದರಲ್ಲದೆ ಇಲಾಖೆಯ ಅಧಿಕಾರಿಗಳು ಬರುವವರೆಗೂ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.
ನಂತರ ಸ್ಥಳಕ್ಕೆ ಬಂದ ಕ್ಷೇತ್ರ ಜಿಲ್ಲಾ ಪಂಚಾಯಿತಿ ಸದಸ್ಯ ರಾಮಸ್ವಾಮಿ ರೆಡ್ಡಿ, ಪ್ರತಿಭಟನೆಕಾರರ ಸಮಸ್ಯೆ ಆಲಿಸಿದರು. ನಂತರ ಮಾತನಾಡಿ, ಇಲ್ಲಿರುವ ಪ್ರತಿ ಸಮಸ್ಯೆಗಳನ್ನು ಹಂತಹಂತವಾಗಿ ಶೀಘ್ರ ಬಗೆಹರಿಸುವ ಜೊತೆಗೆ ಹಾಲಿ ಇರುವ ಸಿಬ್ಬಂದಿಯನ್ನು ವರ್ಗಾಯಿಸುವುದಾಗಿ ತಿಳಿಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ವಿ.ಗೋಪಾಲ್ ರೆಡ್ಡಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಸಿ.ಕೆ. ಕೃಷ್ಣಾ ರೆಡ್ಡಿ, ಶಿವ ಶಂಕರ್ ರೆಡ್ಡಿ, ಕೃಷ್ಣಾ ರೆಡ್ಡಿ, ವೆಂಕಟಸ್ವಾಮಿ, ಮಂಜುನಾಥ್, ಮುನಿಯಪ್ಪ ಇದ್ದರು.
ಎಟಿಎಂ ಕಾರ್ಡ್ ಬಳಸಿ 3.6 ಲಕ್ಷ ವಂಚನೆ
ಕ.ಪ್ರ.ವಾರ್ತೆ ಕೆಜಿಎಫ್ ಜೂ. 25
ಮಹಿಳೆಯೊಬ್ಬರ ಎಟಿಎಂ ಕಾರ್ಡ್ ಬಳಸಿ ಅವರ ಖಾತೆಯಲ್ಲಿದ್ದ 3.6 ಲಕ್ಷ ವಂಚನೆ ಮಾಡಿರುವ ಘಟನೆ ನಡೆದಿದೆ.
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾರೋನೇಷನ್ ನಿವಾಸಿ ಜೋಸೆಫ್ ಎಂಬವರ ಪತ್ನಿ ಜಯಲಕ್ಷ್ಮಿ ಎಂಬವರು ಕಳೆದ 2011ರಲ್ಲಿ ಸರ್ಕಾರದ ಕೆಲಸದಿಂದ ನಿವೃತ್ತಿ ಪಡೆದ ನಂತರ ಅವರಿಗೆ ಅರಿಹರ್ಸ್ ಹಣ 3.16 ಲಕ್ಷ ಬಂದಿದ್ದು, ಬೆಂಗಳೂರಿನ ಸಿಂಗಸಂದ್ರ ಹೊಸೂರು ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕ್ನಲ್ಲಿ ಖಾತೆ ತೆರೆದು ಠೇವಣಿ ಇಟ್ಟು ಬೆಂಗಳೂರಿನಲ್ಲೇ ವಾಸವಾಗಿದ್ದರು.
ಜಯಲಕ್ಷ್ಮಿ ಅವರು ಕೆಲ ತಿಂಗಳ ಹಿಂದೆ ತಮ್ಮ ತವರು ಮನೆ ಕೆಜಿಎಫ್ಗೆ ಹಿಂತಿರುಗಿ ಬಂದು ವಾಸವಿದ್ದರು. ಕಳೆದ ಫೆಬ್ರವರಿ 23ರಂದು ಜಯಲಕ್ಷ್ಮೀ ಕೊನೆಯದಾಗಿ ತಮ್ಮ ಎಸ್ಬಿಎಂನ ಎಟಿಎಂನಿಂದ 10 ಸಾವಿರ ಹಣವನ್ನು ಡ್ರಾ ಮಾಡಿಕೊಂಡಿದ್ದರು. ನಂತರ ಅವರ ಎಟಿಎಂ ಕಾರ್ಡ್ ಕಳೆದು ಹೋಗಿತ್ತು.
ಈ ಬಗ್ಗೆ ಬೆಂಗಳೂರಿನ ಶಾಖೆಯ ವ್ಯವಸ್ಥಾಪಕರಿಗೆ ಸಂಪರ್ಕಿಸಿ ವಿಚಾರಿಸಿದಾಗ ಯಾರೋ ಅಪರಿಚಿತರು ತಮ್ಮ ಎಟಿಎಂ ಕಾರ್ಡ್ ಬಳಸಿ ಬೆಂಗಳೂರಿನ ಜೀವನಭೀಮನಗರ, ಎಚ್ಎಎಲ್, ಏರ್ಪೋರ್ಟ್, ದೊಮ್ಮಲೂರು, ಕೋರಮಂಗಲ, ಮಾರತಹಳ್ಳಿ ಮುಂತಾದ ಸ್ಥಳಗಳಲ್ಲಿ 3.6 ಲಕ್ಷ ಡ್ರಾ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಜಯಲಕ್ಷ್ಮೀ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆಗಾಗ ತಮ್ಮ ಮನೆಗೆ ಬಂದು ಹೋಗುವ ತಮ್ಮ ಅತ್ತಿಗೆ ರುಕ್ಮಿಣಿ ಅವರ ಮೇಲೆ ಅನುಮಾನವಿರುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

