ಮತದಾರರ ಋಣ ತೀರಿಸಲು ಪ್ರಾಮಾಣಿಕ ಯತ್ನ; ವರ್ತೂರು
ಕೋಲಾರ: ನಾನು ಶಾಸಕನಾದ ನಂತರ ವೈಯಕ್ತಿಕ ಬದುಕಿಗಿಂತ ನನಗೆ ರಾಜಕೀಯವಾಗಿ ಸ್ಥಾನ ಮಾನ ನೀಡಿದ ಕೋಲಾರ ಕ್ಷೇತ್ರದ ಜನತೆಯ ಪ್ರಗತಿಗಾಗಿ ಕೆಲಸ ಮಾಡುತ್ತಿದ್ದೇನೆಂದು ಶಾಸಕ ಆರ್. ವರ್ತೂರ್ ಪ್ರಕಾಶ್ ತಿಳಿಸಿದರು.
ತಾಲೂಕಿನ ಕಲ್ಲಂಡೂರು ಗ್ರಾಮದಲ್ಲಿ 6 ಲಕ್ಷ ರು. ವೆಚ್ಚದಲ್ಲಿ ಸಿಮೆಂಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಲ್ಲಂಡೂರು ನವಗ್ರಾಮವಾಗಿ ಘೋಷಿತಗೊಂಡ ಮೇಲೆ ಉತ್ತಮ ರಸ್ತೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಹೇಳಿದರು.
ಜಾತಿ ತಾರತಮ್ಯವನ್ನು ಬದಿಗಿಟ್ಟು ಕಳೆದ ಐದಾರು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ, ನನ್ನ ಮೇಲೆ ವಿಶ್ವಾಸವಿಟ್ಟು ಮತ ನೀಡಿದ ಜನತೆಯ ಋಣ ತೀರಿಸುತ್ತೇನೆ. ಎಲ್ಲಾ ವರ್ಗಗಳನ್ನು ಸಮಾನವಾಗಿ ಕಾಣುವುದರಿಂದಲೇ ಪ್ರತಿಯೊಬ್ಬರು ನನ್ನನ್ನು ಅಭಿಮಾನದಿಂದ ಕಾಣುತ್ತಾರೆ ಎಂದು ತಿಳಿಸಿದರು. ತಾಲೂಕಿನ ಕಲ್ಲಂಡೂರು ಗ್ರಾಮದಿಂದ ಬೆಗ್ಲಿ ಗ್ರಾಮದವರೆಗೂ 1.25 ಕೋಟಿ ರು. ವೆಚ್ಚದಲ್ಲಿ ಡಾಂಬರು ರಸ್ತೆ ಕಾಮಗಾರಿ ಶೀಘ್ರವೇ ಆರಂಭಿಸುವುದಾಗಿ ಶಾಸಕ ಆರ್. ವರ್ತೂರ್ ಪ್ರಕಾಶ್ ಪ್ರಕಟಿಸಿದರು.
ಈ ಸಂದರ್ಭದಲ್ಲಿ ಬೆಗ್ಲಿ ಪ್ರಕಾಶ್, ತಾಪಂ ಮಾಜಿ ಅಧ್ಯಕ್ಷೆ ರಮಾದೇವಿ ಚಲಪತಿ, ತಾಪಂ ಉಪಾಧ್ಯಕ್ಷೆ ಸರಸ್ವತಿ ಮುನಿಕೃಷ್ಣ, ಗ್ರಾಪಂ ಅಧ್ಯಕ್ಷರಾದ ಆಂಜಿನಮ್ಮ, ವಕ್ಕಲೇರಿ ರಾಜಪ್ಪ, ಅನುಸೂಯಮ್ಮ, ಸದಸ್ಯ ಶ್ರೀನಿವಾಸ್, ರಾಜಣ್ಣ, ಎಂ.ನಾಗರಾಜ್, ಜಿ. ನಾರಾಯಣಸ್ವಾಮಿ, ಶತ್ರುಜ್ಞ, ಎಂ.ಮಂಜುನಾಥ್, ವೆಂಕಟೇಶಪ್ಪ, ಕೃಷ್ಣಮೂರ್ತಿ ಮತ್ತಿತರರು ಇದ್ದರು.
ಹಾಸ್ಟೆಲ್ ವಿದ್ಯಾರ್ಥಿಗಳಿಗೆ ತಟ್ಟೆ, ಲೋಟ, ಹೊದಿಕೆ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಕೋಲಾರ ಜೂ.28
ಜಿಲ್ಲೆಯ ಪರಿಶಿಷ್ಟ ಜಾತಿ ವರ್ಗ ಸೇರಿದಂತೆ ಎಲ್ಲಾ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಈ ಕೂಡಲೇ ತಟ್ಟೆ, ಲೋಟ ಮತ್ತು ಹೊದಿಕೆಗಳನ್ನು ನೀಡಬೇಕು. ಖಾಸಗಿ ಶಾಲಾ ಕಾಲೇಜುಗಳಲ್ಲಿ ಮೀತಿ ಮೀರಿದ ಡೊನೇಷನ್ ಹಾವಳಿಗೆ ಕಡಿವಾಣ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಅಖಿಲ ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತ ಸಮಿತಿ ಜಿಲ್ಲಾ ಶಾಖೆ ವತಿಯಿಂದ ಪ್ರತಿಭಟನೆ ನಡೆಯಿತು.
ನಗರದ ನಚಿಕೇತನ ನಿಲಯದಿಂದ ಜಿಲ್ಲಾ ಪಂಚಾಯಿತಿ ಕಚೇರಿವರೆಗೆ ಮೆರವಣಿಗೆ ಮೂಲಕ ಬಂದ ಪ್ರತಿಭಟನಾಕಾರರು ಕೆಲವು ನಿಮಿಷಗಳ ಕಾಲ ಧರಣಿ ನಡೆಸಿದರು.
ಹಾಸ್ಟೆಲ್‌ಗಳಿಗೆ ಮೂಲ ಸೌಕರ್ಯ ಕಲ್ಪಿಸುವುದಕ್ಕಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಬೇಕು, ಶಾಲಾ ಕಾಲೇಜುಗಳಲ್ಲಿ ಡೊನೇಷನ್ ಹಾವಳಿ ತಪ್ಪಿಸಲು ಡಿಡಿಪಿಐ ಮತ್ತು ಬಿಇಓಗಳು ಸಂಬಂಧಿಸಿದ ಆಡಳಿತ ಮಂಡಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕೆಂದು ಆಗ್ರಹಿಸಿದರು. ಸಮಾಜದ ಎಲ್ಲಾ ವರ್ಗದ ಬಡವರಿಗೆ ಬಿಪಿಎಲ್ ಕಾರ್ಡು ಸಿಗುವಂತಾಗಬೇಕು. ಈ ಕಾರ್ಡು ವಿತರಣೆಯಲ್ಲಿ ನಡೆದಿರುವ ಅವ್ಯವಹಾರವನ್ನು ಬಯಲುಗೊಳಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸರ್ಕಾರದ ಸುತ್ತೋಲೆ ಪ್ರಕಾರ ಆರ್.ಟಿ.ಇ ಯಲ್ಲಿ ವಾರ್ಷಿಕ ಆದಾಯ 3.5 ಲಕ್ಷ ರು. ಇದ್ದು ಇದನ್ನು 1.5 ಲಕ್ಷಕ್ಕೆ ಇಳಿಸಬೇಕು. ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ನೀರು, ಶೌಚಾಲಯ, ಕೊಠಡಿ ಮುಂತಾದ ಮೂಲ ಸೌಲಭ್ಯಗಳನ್ನು ಈ ಕೂಡಲೇ ಒದಗಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್, ಜಿಲ್ಲಾ ಮಹಿಳಾ ಅಧ್ಯಕ್ಷರಾದ ಎಸ್. ಪ್ರಭಾವತಿ, ಬಂಗಾರಪೇಟೆ ಮಂಜುನಾಥ್, ಜೆಂಟಿ ಕಾರ್ಯದರ್ಶಿ ಆನಂದ್, ಸತೀಶ್‌ಕುಮಾರ್ ,ನಾಗೇಶ್, ನಾಸೀರ್‌ಪಾಷಾ, ಶಿವು, ಗಂಗಾದರ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

