ಕೋಲಾರ

ಶುರುವಾಯ್ತು ಕರಪತ್ರಗಳ ರಾಜಕೀಯ

Published On :

ಚಿಕ್ಕಬಳ್ಳಾಪುರ: ಈ ಬಾರಿಯ ವಿಧಾನಸಭಾ ಚುನಾವಣೆಗೆ ಇನ್ನೂ ಅದ್ಧೂರಿ ಪ್ರಚಾರದ ಕಾರ್ಯ ಸಮರ್ಪಕವಾಗಿ ಶುರುವಾಗದಿದ್ದರೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪ, ವೈಯಕ್ತಿಕ ಟೀಕೆಗಳನ್ನು ಮಾಡಿದ ಕರಪತ್ರಗಳ ಸಮರ ನಡೆಯುತ್ತಿದೆ.
ತಮ್ಮ ಎದುರಾಳಿಗಳ ಬಲ ಕುಗ್ಗಿಸಿ, ಜನರಲ್ಲಿ ಒಲವು ಕಳೆದುಕೊಳ್ಳುವಂತೆ ಮಾಡುವ ಸಲುವಾಗಿ ಮನೆ ಮನೆಗಳಿಗೂ ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧವಾಗಿ ಕರಪತ್ರಗಳನ್ನು ಹಂಚುವ ಮೂಲಕ ಮಸಿ ಬಳಿಯುವ ಕೆಲಸವನ್ನು ಹಲವರು ಮಾಡುತ್ತಿದ್ದಾರೆ.
ಸ್ಯಾಂಪಲ್:  ತಮ್ಮ ಅಧಿಕಾರವಧಿಯಲ್ಲಿ ಜೆಡಿಎಸ್ ಶಾಸಕರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕುಂಭಕರ್ಣನಂತೆ ನಿದ್ದೆ ಮಾಡಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತಿದ್ದಾರೆಯೇ ಹೊರತು ಕ್ಷೇತ್ರ ಪ್ರಗತಿ ಕಾಣುವಂತೆ ಮಾಡುವಲ್ಲಿ ವಿಫಲರಾಗಿದ್ದಾರೆ. ಅನೇಕ ಸಮಸ್ಯೆಗಳಿಂದ ಚಿಕ್ಕಬಳ್ಳಾಪುರ ನಲುಗಿ ಹೋಗುತ್ತಿದ್ದರೂ ಸಹ ಶಾಸಕರಾಗಿದ್ದವರು ಏನು ಮಾಡಿದರೂ ಕ್ಷೇತ್ರ 6ಕ್ಕೆ ಏರಲಿಲ್ಲ, ಮೂರಕ್ಕೆ ಇಳಿಯಲಿಲ್ಲ. ಅವರು ತಮಗೆ ಬೇಕಾದವರನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ಉಳಿದವರ ಬಗ್ಗೆ ನಿರ್ಲಕ್ಷ್ಯ ವಹಿಸಿದರು. ಇಂತಹವರು ಮತ್ತೆ ಶಾಸಕರಾಗಬೇಕೆ? ಎಂಬ ಪ್ರಶ್ನೆ ಮಾಡಿರುವ ಕರಪತ್ರವನ್ನು ಈಗಾಗಲೇ ಕಾಂಗ್ರೆಸ್ ಕಾರ್ಯಕರ್ತರ ಹೆಸರಿನಲ್ಲಿ ಎಲ್ಲೆಡೆ ಹಂಚಲಾಗಿದೆ. ಈ ಬಗ್ಗೆಯೇ ಇದೀಗ ಜನರಲ್ಲಿ ಚರ್ಚೆಯಾಗುತ್ತಿದ್ದು, ವಿಧಾನಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿರುವುದರ ನಡುವೆ ತಮ್ಮ ಪಕ್ಷದ ಶಾಸಕರ ವಿರುದ್ಧ ಟೀಕೆಗಳನ್ನು ಮಾಡಿದ ಕರಪತ್ರಗಳನ್ನು ಹಂಚಿರುವುದಕ್ಕೆ ಜೆಡಿಎಸ್ ಕೆಂಡ ಕಾರುತ್ತಿದೆ.
ಮುಂದುವರಿದ ಚಾಳಿ:  ತಮ್ಮ ಲಾಭಕ್ಕಾಗಿ ಚುನಾವಣೆಯ ಸಂದರ್ಭದಲ್ಲಿ ಗಿಮಿಕ್ ಮಾಡಲು ತೇಜೋವಧೆಯ ಕರಪತ್ರಗಳನ್ನು ಹಂಚುವ ಚಾಳಿಯು ಚಿಕ್ಕಬಳ್ಳಾಪುರದಲ್ಲಿ ಸಾಮಾನ್ಯ ಎನ್ನುವ ರೀತಿಯಲ್ಲಿ ನಡೆದುಕೊಂಡು ಬರುತ್ತಿದೆ. ಕಳೆದ ಬಾರಿಯ ವಿಧಾನಸಭಾ ಕ್ಷೇತ್ರದ ಚುನಾವಣೆ ವೇಳೆಯಲ್ಲಿ ಕಾಂಗ್ರೆಸ್‌ಗೆ ಬಂಡಾಯವಾಗಿ ಸ್ಪರ್ಧಿಸಿದ್ದ ಮಾಜಿ ಸಂಸದರ ಅಳಿಯ, ಪ್ರಭಾವಿ ಮುಖಂಡರೆನಿಸಿಕೊಂಡಿದ್ದವರ ವಿರುದ್ಧ ಕೆಟ್ಟದ್ದಾಗಿ ವೈಯಕ್ತಿಕ ಟೀಕೆಗಳನ್ನು, ಗಂಭೀರ ಆರೋಪಗಳನ್ನು ಮಾಡಿ ಕರಪತ್ರಗಳನ್ನು ಹಂಚಲಾಗಿತ್ತು. ಈ ಹಿನ್ನೆಲೆಯಲ್ಲಿ ಗೆಲುವಿನ ಕನಸು ಕಾಣುತ್ತಿದ್ದ ಮಾಜಿ ಸಂಸದರ ಅಳಿಯರಾದವರು ಚುನಾವಣೆಯಲ್ಲಿ ಸೋಲನ್ನು ಅನುಭವಿಸಬೇಕಾಯಿತು. ಮತ್ತೊಮ್ಮೆ ಚಿಕ್ಕಬಳ್ಳಾಪುರ ನಗರಸಭೆಗೆ ಅಧ್ಯಕ್ಷರನ್ನು ಆಯ್ಕೆ ಮಾಡುವ ವಿಷಯದಲ್ಲಿ ಸದಸ್ಯರು ತೋರುತ್ತಿದ್ದ ವರ್ತನೆಯ ವಿರುದ್ಧ ಕರಪತ್ರಗಳನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡು ತೇಜೋವಧೆ ಮಾಡುವಂತಹ ಕೆಲಸ ಕೆಲವರಿಂದಾಯಿತು. ಈ ಮೂಲಕ ಅವಾಚ್ಯ ಶಬ್ದಗಳಿಂದ ಅನೇಕ ಸದಸ್ಯರನ್ನು ವಿಲನ್‌ಗಳಾಗಿ ಬಿಂಬಿಸಲಾಯಿತು. ಇದೀಗ ವಿಧಾನಸಭಾ ಚುನಾವಣೆಯಲ್ಲೂ ಕರಪತ್ರಗಳು ವೈಯಕ್ತಿಕ ಟೀಕೆಗಳಿಗೆ ಬಳಕೆಯಾಗುತ್ತಿದೆ. ಭರವಸೆಗಳನ್ನು ಹೊಂದಿರುವ ಕರಪತ್ರಗಳ ಮೂಲಕ ತಮ್ಮ ಪರವಾಗಿ ಅದ್ಧೂರಿ ಪ್ರಚಾರ  ಕೈಗೊಳ್ಳಬೇಕಾದವರು, ತಮ್ಮ ಎದುರಾಳಿಗಳ ತೇಜೋವಧೆ ಮಾಡಲು ಕರಪತ್ರಗಳನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಮಾತ್ರ ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ ನೀಡುತ್ತಿದೆ.
-ಎನ್.ವೆಂಕಟೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.