ಕೋಲಾರ

ಹಿರಿಯರನ್ನು ನಿರ್ಲಕ್ಷಿಸೀರಿ ಆಸ್ತಿ ವಾಪಸು ಪಡೆದಾರು...

Published On :

ಕ.ಪ್ರ.ವಾರ್ತೆ     ಕೋಲಾರ     ಅ. 1
ಜನ್ಮ ನೀಡಿದ ತಂದೆ-ತಾಯಿಗೆ ಊರುಗೋಲು ಆಗಬೇಕಾದ ಮಕ್ಕಳು ಹಿಂದೆ ಸರಿಯುತ್ತಿದ್ದಾರೆ. ಸಂಧ್ಯಾಕಾಲದಲ್ಲಿ ಹಿರಿಯರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಮಕ್ಕಳದ್ದಾಗಿದೆ. ಒಂದು ವೇಳೆ ಹಿರಿಯರನ್ನು ನಿರ್ಲಕ್ಷಿಸಿದರೆ ಅಂತಹ ಮಕ್ಕಳಿಗೆ ನೀಡಿರುವ ಆಸ್ತಿಯನ್ನು ಹಿಂದಕ್ಕೆ ಪಡೆಯಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.  ರೇಣುಕಾ ಪ್ರಸಾದ್ ತಿಳಿಸಿದರು.
ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಕೀಲರ ಸಂಘ ಹಾಗೂ ವಿವಿಧ ಸ್ವಯಂ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಕ್ಕಳ ಮಮತೆ ಹಾಗೂ ಪೋಷಣೆಯಿಂದ ವಂಚಿತರಾಗುತ್ತಿರುವ ಹಿರಿಯರಿಗೆ ರಕ್ಷಣೆ ನೀಡಲು ಸರ್ಕಾರ ಅನೇಕ ಕಾರ್ಯಕ್ರಮ ಹಾಗೂ ಕಾನೂನು ಜಾರಿಗೆ ತಂದಿದೆಯಾದರೂ ಈ ಬಗ್ಗೆ ಅನೇಕರಿಗೆ ಅರಿವು ಇಲ್ಲದಿರುವುದರಿಂದ ನ್ಯಾಯ ಪಡೆಯಲು ಕಷ್ಟವಾಗುತ್ತಿದೆ ಎಂದರು.
ಹಿಂದಿನ ಕಾಲದಲ್ಲಿ ಪ್ರತಿಯೊಂದು ಕುಟುಂಬದಲ್ಲಿ ಸೌಹಾರ್ದತೆ ಇತ್ತು. ಆದರೆ, ಪ್ರೀತಿಯಿಂದ ಬಾಳ್ವೆ ಮಾಡುವ ಒಟ್ಟು ಕುಟುಂಬದ ಪರಿಕಲ್ಪನೆ ಈಗ ಮಾಯವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ನ್ಯಾಯಾಧೀಶ ಎಸ್. ರೇಣುಕಾ ಪ್ರಸಾದ್, ಹೆಂಡತಿ, ಮಕ್ಕಳು ಬಂದ ನಂತರ ಅನೇಕರು ತಮ್ಮ ತಂದೆ-ತಾಯಿಯರನ್ನು ನಿರ್ಲಕ್ಷಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಕಾಯಿದೆ ಹಾಗೂ ಕಾನೂನುಗಳನ್ನು ಜಾರಿಗೆ ತಂದಿದ್ದು ಇದನ್ನು ಉಲ್ಲಂಘಿಸಿದರೆ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಕ್ಕಳಿಂದ ನಿರ್ಲಕ್ಷಕ್ಕೆ ಒಳಪಡುವ ಹಿರಿಯರು ಜೀವನಾಂಶ ಪಡೆಯಲು ಕಾನೂನು ಜಾರಿಗೆ ತರಲಾಗಿದೆ, ಯಾರು ಆಸ್ತಿಗಾಗಿ ತಂದೆ-ತಾಯಿಯರನ್ನು ಶೋಷಣೆ ಮಾಡುತ್ತಾರೋ, ವೃದ್ಧಾಶ್ರಮಕ್ಕೆ ದೂಡುತ್ತಾರೋ, ಜೀವನಾಂಶದಿಂದ ವಂಚಿಸುತ್ತಾರೋ ಅಂತಹವರ ವಿರುದ್ಧ ನ್ಯಾಯಾಲಯಗಳಿಗೆ ದೂರು ನೀಡಿದಲ್ಲಿ ವಿಚಾರಣೆ ನಡೆಸಿ ಹಿರಿಯವರು ತಮ್ಮ ಮಕ್ಕಳಿಗೆ ನೀಡಿರುವ ನೀಡಿರುವ ಆಸ್ತಿಯನ್ನು ವಾಪಸ್ ಕೊಡಿಸಲು ಅವಕಾಶವಿದೆ ಎಂದು ಹೇಳಿದರು.
ಹಿರಿಯ ನಾಗರಿಕರ ರಕ್ಷಣೆಗಾಗಿ ಜಾರಿಗೆ ತಂದಿರುವ ಕಾನೂನುಗಳ ಬಗ್ಗೆ ಸಾಕಷ್ಟು ಜನರಿಗೆ ಅರಿವು ಇಲ್ಲದಿರುವುದರಿಂದ ಇಂದು ಅನೇಕರು ತೊಂದರೆ ಅನುಭವಿಸುತ್ತಿದ್ದಾರೆ, ಸ್ವಯಂ ಸೇವಾ ಸಂಸ್ಥೆಗಳು ಕಾರ್ಯಗಾರಗಳ ಮೂಲಕ ಹಿರಿಯ ನಾಗರಿಕರ ಹಿತ ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಕೊನೆಯುಸಿರು ಇರುವವರೆಗೆ ಹಿರಿಯರು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಿಸಬೇಕೆಂದು ಕರೆ ನೀಡಿದರು.
ಕ್ಷುಲ್ಲಕ ಜಗಳದಿಂದ ಸಂಸಾರಗಳು ಹಾಳು:
2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಕಿಣಿಕೇರಿ ಮಾತನಾಡಿ, ಇಂದು ಅನೇಕ ಮನೆಗಳಲ್ಲಿ ಅತ್ತೆ ಮತ್ತು ಸೊಸೆ ನಡುವೆ ಕ್ಷುಲ್ಲಕ ಕಾರಣಗಳಿಗೆ ಮನಸ್ತಾಪ, ಜಗಳ ಉಂಟಾಗುತ್ತಿದೆ. ಇದರಿಂದ ಮನಸ್ಸುಗಳು ಮುರಿದು ಸಂಸಾರಗಳು ಹಾಳಾಗುತ್ತಿದೆ ಎಂದು ತಿಳಿಸಿದರು.
ಹಿರಿಯರು ಕಿರಿಯರಿಗೆ ಆದರ್ಶಪ್ರಾಯರಾಗಿರಬೇಕು. ಅದೇ ರೀತಿ ಹಿರಿಯರು ಹೇಳುವ ಬುದ್ಧಿ ಮಾತನ್ನು ಕಿರಿಯರು ತಾಳ್ಮೆಯಿಂದ ಕೇಳಿ, ಪರಸ್ಪರ ಸೌಹಾರ್ದತೆಯಿಂದ ಜೀವನ ನಡೆಸುವುದನ್ನು ಕಲಿತಲ್ಲಿ ವೃದ್ಧಾಶ್ರಮಗಳ ಅವಶ್ಯಕತೆ ಉಂಟಾಗುವುದಿಲ್ಲ ಎಂದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ವಿ. ರೇಣುಕಾ ಮಾತನಾಡಿ, ವರ್ಷಕ್ಕೆ ಒಮ್ಮೆ ಹಿರಿಯರ ದಿನಾಚರಣೆ ಮಾಡಿದರೆ ಸಾಲದು, ಪ್ರತಿದಿನ ಗೌರವ ನೀಡುವ ಮೂಲಕ ಋಣ ತೀರಿಸಬೇಕೆಂದರು.
ಹಿರಿಯರನ್ನು ವೃದ್ಧಾಶ್ರಮಕ್ಕೆ ತಳ್ಳುವುದು ಸರಿಯಲ್ಲ, ಇಳಿ ವಯಸ್ಸಿನಲ್ಲಿ ತಂದೆ-ತಾಯಿಯನ್ನು ದೂರ ಮಾಡಿದಲ್ಲಿ ಮುಂದೊಂದು ದಿನ ತಮಗೂ ಇದೇ ಗತಿ ಎದುರಾದಾಗ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.
ಕಾನೂನು ಮೂಲಕ ಹಿರಿಯ ಪಾವನೆ ಮಾಡುವ ಪರಿಸ್ಥಿತಿ ಒದಗಿರುವುದು ದುರ್ದೈವ. ಆದರೆ, ಕಾನೂನು ಕಾಯಿದೆ ಜಾರಿಗೆ ಬರದಿದ್ದಲ್ಲಿ ಹಿರಿಯರ ಶೋಷಣೆ ಇನ್ನಷ್ಟು ಹೆಚ್ಚಾಗುತ್ತಿತ್ತು. ಅನೇಕರಿಗೆ ಕಾನೂನು ಬಗ್ಗೆ ಅರಿವು ಇಲ್ಲದಿರುವುದರಿಂದ ಜಾಗೃತಿ ಮೂಡಿಸಬೇಕಾಗಿದೆ, ಪೊಲೀಸ್ ಇಲಾಖೆಯವರು ಹಿರಿಯರಿಗೆ ರಕ್ಷಣೆ ನೀಡುವ ಜವಾಬ್ದಾರಿಯಿದೆ ಎಂದರು.
ಮಕ್ಕಳಿಂದ ದೂರವಿರುವ ವೃದ್ಧರು ರಕ್ಷಣೆ ಇಲ್ಲದೆ ಅಪಾಯ ಎದುರಿಸುತ್ತಿದ್ದಾರೆ. ಕಳ್ಳರು, ಡಕಾಯಿತರು ಹಾಗೂ ಕೊಲೆಗಡುಕರಿಂದ ನಾನಾ ರೀತಿಯ ತೊಂದರೆ ಅನುಭವಿಸುವಂತಾಗಿರುವುದರಿಂದ ಪೊಲೀಸರು ಅಸಹಾಯಕ ಹಿರಿಯ ನಾಗರಿಕರಿಗೆ ಸೂಕ್ತ ರಕ್ಷಣೆ ನೀಡಬೇಕು. ಹಿರಿಯ ನಾಗರಿಕರು ತಮಗಾಗಿ ಸ್ಥಾಪಿಸಿರುವ ಸಹಾಯವಾಣಿಯ ಸದುಪಯೋಗ ಮಾಡಿಕೊಳ್ಳಬೇಕು, ಕಾನೂನು ಸೇವಾ ಪ್ರಾಧಿಕಾರ ಇಲ್ಲವೇ ಜನತಾ ನ್ಯಾಯಾಲಯ ಮೂಲಕ ನೆರವು ಪಡೆಯುವುದಕ್ಕೆ ಅವಕಾಶವಿದೆ. ಸರ್ಕಾರ ಜಾರಿಗೆ ತಂದಿರುವ ಸವಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಟಿ.ಎಂ. ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಡಾ.ಎಸ್.ಜಿ. ನಾರಾಯಣಸ್ವಾಮಿ, ವಕೀಲರ ಸಂಘದ ಕಾರ್ಯದರ್ಶಿ ಎಂ.ಪಿ. ನಾರಾಯಣಸ್ವಾಮಿ, ವಕೀಲರು ಹಾಗೂ ಜಾಗೃತಿ ಸೇವಾ ಸಂಸ್ಥೆಯ ಅಧ್ಯಕ್ಷ ಕೆ.ಆರ್.ಧನರಾಜ್ ಅವರುಗಳು ಹಿರಿಯರ ಸಲುವಾಗಿ ಸರ್ಕಾರ ರೂಪಿಸಿರುವ ಕಾರ್ಯಕ್ರಮ ಹಾಗೂ ಕಾನೂನುಗಳ ಕುರಿತು ಮಾತನಾಡಿದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಎ. ಶಕುಂತಲಾ ಇದ್ದರು. ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಅಧಿಕಾರಿ ಹೆಚ್.ಸಿ. ನಾಗಮಣಿ ಸ್ವಾಗತಿಸಿ, ಅನಿತಾ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.