ಪದಾಧಿಕಾರಿಗಳ ಆಯ್ಕೆ
ಕೋಲಾರ: ಭಾರತೀಯ ಜನತಾ ಪಾರ್ಟಿಯ ನಗರ ಘಟಕಕ್ಕೆ ಉಪಾಧ್ಯಕ್ಷರನ್ನಾಗಿ ಎನ್. ಚಲಪತಿ, ಎಸ್. ಸುರೇಶ್ ಕುಮಾರ್, ವಿ. ಶಂಕರ್ ನಾರಾಯಣ. ಡಿ.ಸಿ.ಹರೀಶ್ ಬಾಬು, ಸಿ. ರಾಜೇಶ್ ಮತ್ತು ಕಾರ್ಯದರ್ಶಿಗಳನ್ನಾಗಿ ಎಲ್. ಶಂಕರ್, ದಿಲೀಪ್, ಕನಕಮಂಜು, ಮಂಜುಳ, ಕೋಲಾರ ನಗರದ ವಿವಿಧ ಮೋರ್ಚಾಗಳಾದ ಯುವ ಮೋರ್ಚಾ ಅಧ್ಯಕ್ಷರಾಗಿ ಎಸ್. ಪ್ರದೀಪ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಜಿ. ಸಂತೋಷ್, ಎಸ್.ಸಿ. ಮೋರ್ಚಾ ಅಧ್ಯಕ್ಷರಾಗಿ ರಾಜ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಎಲ್. ನಾಗೇಶ್, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಎನ್. ಶಕುಂತಲಾ ದೀಕ್ಷಿತ್, ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಜ್ಯೋತಿ ಅವರನ್ನು ಆಯ್ಕೆ ಮಾಡಲಾಗಿದೆಯೆಂದು ಬಿ.ಜೆ.ಪಿ.ನಗರ ಘಟಕ ಅಧ್ಯಕ್ಷ ಜಯಂತಿಲಾಲ್ ಜೈನ್ ತಿಳಿಸಿದ್ದಾರೆ.
ಯಶಸ್ವಿನಿ ನೊಂದಣಿಗೆ ಕಾಲಾವಕಾಶ
ಕೋಲಾರ: 2013-14 ನೇ ಸಾಲಿಗೆ ಯಶಸ್ವಿನಿ ಯೋಜನೆಯ ಸವಲತ್ತು ಪಡೆಯಲು ಹೆಸರು ಸಹಕಾರ ಸಂಘಗಳ ಸದಸ್ಯರಿಗೆ ಇದೇ ತಿಂಗಳ 31 ರವರೆಗೆ ಕಾಲಾವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಸಹಕಾರ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಮತ್ತು ಪದನಿಮಿತ್ತ ಜಂಟಿ ಕಾರ್ಯದರ್ಶಿ ಹೆಚ್.ಎಸ್, ನಾಗರಾಜಯ್ಯನವರು ಆದೇಶ ಹೊರಡಿಸಿದ್ದು ಯಶಸ್ವಿನಿ ಯೋಜನೆಗೆ ಒಳಪಡುವ ಎಲ್ಲರೂ ಯೋಜನೆಯಲ್ಲಿ ನೊಂದಾಯಿಸಿಕೊಂಡು ಯಶಸ್ವಿನಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.
ಗೋಡೆ ತೆರವು ಬೇಡ
ಕೋಲಾರ: ನಗರದ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಲ್ಲಿ ನಿಂರ್ಸಿರುವ ಗೋಡೆಗಳನ್ನು ಯಾವುದೇ ಕಾರಣಕ್ಕೂ ಕೆಡವಲು ಅನುಮತಿ ನೀಡಬಾರದೆಂದು ಒತ್ತಾಯಿಸಿ ಮಾನವ ಹಕ್ಕುಗಳ ಜಾಗೃತಿ ಸಮಿತಿ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿ ಮನವಿ ಸಲ್ಲಿಸಿತು.ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷ ಎಸ್. ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷ ಯುವರಾಜ್ ಮತ್ತು ಜಿಲ್ಲಾ ಕಾರ್ಯದರ್ಶಿ ಕನ್ನಸಂದ್ರ ವಿ. ಸುಕುಮಾರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಹಿಂದೆ ಅನಧಿಕೃತವಾಗಿ ಕಾಂಪೌಂಡ್ ಒಡೆದು ದಾರಿಯಾಗಿಸಿಕೊಂಡಿದ್ದ ಕಾರಣ ಅನೇಕ ರೀತಿಯ ಅಹಿತಕರ ಘಟನೆಗಳು ನಡೆದಿರುವುದರಿಂದ ಗೋಡೆ ತೆರವು ಮಾಡದಂತೆ ತಿಳಿಸಿದ್ದಾರೆ. ಬಸ್ಸು ನಿಲ್ದಾಣಕ್ಕೆ ಹೊಂದಿಕೊಂಡಿರುವ ಕೆಲ ಅಂಗಡಿ ಮಾಲೀಕರು ಗೋಡೆ ಕೆಡವಿಸಲು ಪ್ರಯತ್ನಿಸುತ್ತಿದ್ದು ಇದಕ್ಕೆ ಅವಕಾಶ ನೀಡದಂತೆ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಬಾಣಂತಿ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪಿಸಿ ಪ್ರತಿಭಟನೆ
ಗೌರಿಬಿದನೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮೃತಪಟ್ಟಿದ್ದಾಳೆ ಎಂದು ಆರೋಪಿಸಿ ಆಕೆಯ ಸಂಬಂಧಿಕರು ಹಾಗೂ ದಲಿತ ಸಂಘಟನೆ ಕಾರ್ಯಕರ್ತರು ಶವವನ್ನು ಆಸ್ಪತ್ರೆ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರು. ಕೊರಟಗೆರೆ ತಾಲೂಕು ಶಟ್ಟೇನಹಳ್ಳಿ ಗ್ರಾಮದ ರತ್ಮಮ್ಮ(32) ಮೃತಪಟ್ಟವರಾಗಿದ್ದು ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಸಮೀಪದ ಹೊಸೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು, ಸಹಜ ಹೆರಿಗೆಯಾಗಿ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಳು, ರಕ್ತಸ್ರಾವ ನಿಲ್ಲದೆ ನಿತ್ರಾಣಗೊಂಡಾಗ ಆಕೆಯನ್ನು ಕೂಡಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ರವಾನಿಸದೆ ನಿರ್ಲಕ್ಷ್ಯವಹಿಸಿದ್ದಾರೆ, ಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಬಂದಾಗ ಅಲ್ಲಿಯೂ ವೈದ್ಯರು ಇಲ್ಲದೆ ತಕ್ಷಣ ಚಿಕಿತ್ಸೆ ದೊರೆಯದ ಕಾರಣ ಆಕೆ ಮೃತಪಟ್ಟಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ. ಬಾಣಂತಿ ಸಾವಿಗೆ ಕಾರಣರಾದ ವೈದ್ಯಾಧಿಕಾರಿಗಳನ್ನು ಕೂಡಲೇ ಅಮಾನತ್ತುಗೊಳಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮೃತ ಸಂಬಂಧಿಕರು ಹಾಗೂ ದಲಿತ ಸಂಘಟನೆ ಕಾರ್ಯಕರ್ತರು ಶವವನ್ನು ಆಸ್ಪತ್ರೆ ಮುಂದಿಟ್ಟು ಪ್ರತಿಭಟನೆ ನಡೆಸಿದರು. ಜಿಲ್ಲಾ ವೈದ್ಯಾಧಿಕಾರಿಗಳು ಬಂದು ತಪ್ಪಿತಸ್ಥ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆ ಅಧ್ಯಕ್ಷೆ ಸಿದ್ದಮ್ಮ, ದಲಿತ ಸಂಘಟನೆಗಳ ಯುವ ಒಕ್ಕೂಟದ ಉದಯ್ಕುಮಾರ್, ಅಂಜನಮೂರ್ತಿ ಪಟ್ಟು ಹಿಡಿದರು.
ಸೈಕಲ್ ಯಾತ್ರೆಗೆ ಸಂಭ್ರಮದ ಸ್ವಾಗತ
ಕೋಲಾರ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ವತಿಯಿಂದ ಉಜ್ವಲ ಭಾರತಕ್ಕಾಗಿ ಆಂಧ್ರಪ್ರದೇಶದ ಕಡಪಾದಿಂದ ಬೆಂಗಳೂರಿನವರೆಗೆ ಹಮ್ಮಿಕೊಂಡಿರುವ ಶಾಂತಿಧೂತ ಯುವ ಸೈಕಲ್ ಯಾತ್ರೆಗೆ ಕೋಲಾರದಲ್ಲಿ ಸಂಭ್ರಮದ ಸ್ವಾಗತ ದೊರೆಯಿತು. ನಗರದ ಅಂತಗಂಗೆ ರಸ್ತೆಯಲ್ಲಿ ಈಶ್ವರೀಯ ವಿಶ್ವವಿದ್ಯಾಲಯದ ಮುಂಭಾಗದಿಂದ ಸೋಮವಾರ ಸೈಕಲ್ ಯಾತ್ರೆ ಮುಂದುವರಿಸಿತು. ಈಶ್ವರೀಯ ಮಹಾವಿದ್ಯಾಲಯದ ಸಂಚಾಲಕಿ ಬಿ.ಕೆ. ಸರ್ವಮಂಗಳಾ, ಚಂದ್ರಶೇಖರ್, ನಾರಾಯಣಸ್ವಾಮಿ, ಪಾವನಿ ಹಾಜರಿದ್ದು ಬೀಳ್ಕೊಟ್ಟರು.
ಸಮಸ್ಯೆ ನಿವಾರಿಸದಅಧಿಕಾರಿಗಳು; ಆರೋಪ
ಗುಡಿಬಂಡೆ: ಪಟ್ಟಣದ ವಿವಿಧೆಡೆ ಕುಡಿಯುವ ನೀರಿನ ಪೈಪ್ ಲೈನ್ ಹಾಗೂ ಗೇಟ್ ವಾಲ್ವ್ಗಳಿಂದ ಅಪಾರ ಪ್ರಮಾಣದ ನೀರು ಸೋರಿಕೆಯಾಗಿ ರಸ್ತೆ ಮತ್ತು ಚರಂಡಿಗಳಲ್ಲಿ ಹರಿದಾಡುತ್ತಿದ್ದರೂ ಸಂಬಂಧಪಟ್ಟವರು ಗಮನಹರಿಸದೇ ನಿರ್ಲಕ್ಷ್ಯ ತೋರಿಸುತ್ತಿದ್ದಾರೆಂದು ಪಪಂ ಸದಸ್ಯ ದ್ವಾರಕಿನಾಥ ನಾಯ್ಡು ದೂರಿದ್ದಾರೆ. ಪಟ್ಟಣದ ಮುಖ್ಯರಸ್ತೆಯಲ್ಲಿ ಹಲವಡೆ ಹಾಗೂ 4ನೇ ವಾರ್ಡಿನಲ್ಲಿರುವ ಚಿತ್ರಮಂದಿರ ಬಳಿಯ ಗೇಟ್ ವಾಲ್ವ್ಗಳಲ್ಲಿ ನೀರು ಚರಂಡಿ ಪಾಲಾಗುತ್ತಿದೆ. ಈ ಬಗ್ಗೆ ತಾವು ದುರಸ್ತಿ ಕೈಗೊಳ್ಳುವಂತೆ ಹಲವಾರು ಬಾರಿ ಲಿಖಿತ ಮೂಲಕ ಮನವಿ ಮಾಡಿದ್ದರೂ ಕ್ರಮಕೈಗೊಂಡಿಲ್ಲ. ಇನ್ನುಳಿದ ಸಮಸ್ಯೆಗಳಾದ ಬೀದಿ ದೀಪ ಮತ್ತು ಪಟ್ಟಣದ ಸ್ವಚ್ಛತೆ ನಿರ್ವಹಣೆಯಲ್ಲಿ ಪಪಂ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಮಳೆಗಾಲದ ಈ ದಿನಗಳಲ್ಲಿ ಚರಂಡಿಗಳಲ್ಲಿ ಹೂಳು ತೆಗೆಯದ ಪರಿಣಾಮ ಮಳೆ ನೀರು ಚರಂಡಿಗಳಲ್ಲಿ ಉಕ್ಕಿ ಹರಿದು ರಸ್ತೆಗಳನ್ನು ಮಲಿನಗೊಳಿಸುತ್ತಿದೆ. ಇದರಿಂದಾಗಿ ಜನಸಂಚಾರಕ್ಕೆ ಅಡ್ಡಿಯುಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.
ಬೀದಿ ನಾಯಿಗಳ ಕಾಟ: ಪಟ್ಟಣದ ಮುಖ್ಯ ರಸ್ತೆ ಸೇರಿದಂತೆ ಹಲವಡೆ ಬೀದಿ ನಾಯಿಗಳ ಹಾಗೂ ಬಿಡಾಡಿ ದನಗಳ ಕಾಟ ಹೆಚ್ಚಾಗಿದ್ದು, ಸಣ್ಣ ಪುಟ್ಟ ಅಪಘಾತಗಳಾಗೆ ಕಾರಣವಾಗುತ್ತಿವೆ. ಇನ್ನೊಂದೆಡೆ ಹಂದಿ ಮತ್ತು ಕೋತಿಗಳ ಹಾವಳಿ ನಿಯಂತ್ರಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಇಷ್ಟೆಲ್ಲಾ ಸಮಸ್ಯೆಗಳು ಪಟ್ಟಣದ ಜನತೆಯನ್ನು ಕಾಡುತ್ತಿರುವ ಅರಿವು ಅಧಿಕಾರಿಗಳಿಗಿದ್ದರೂ ಜಾಣ ಕಿವುಡು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಜಯದಶಮಿ; ಪಥ ಸಂಚಲನ
ಮುಳಬಾಗಲು: ರಾಷ್ಟೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಗಣವೇಷ ಧರಿಸಿ ವಿಜಯದಶಮಿ ಪ್ರಯುಕ್ತ ಮುತ್ಯಾಲಪೇಟೆ ಗಂಗಮ್ಮನ ದೇವಾಲಯದಿಂದ ಪಥ ಸಂಚಲನ ನಡೆಸಿ ನೇತಾಜಿ ಕ್ರೀಡಾಂಗಣದಲ್ಲಿ ಸಮಾವೇಶಗೊಂಡರು. ರಸ್ತೆಗಳ ಸ್ವಚ್ಛಗೊಳಿಸಿ ಮಹಿಳೆಯರು ರಂಗೋಲಿ ಹಾಕಿ ಭಗವಾಧ್ವಜಕ್ಕೆ ಹೂಗಳನ್ನು ಸಮರ್ಪಿಸಿದರು. ಡಿವೈಎಸ್ಪಿ ಟಿ. ಸಿದ್ದಪ್ಪ, ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣಪ್ಪ, ಸಬ್ ಇನ್ಸ್ಪೆಕ್ಟರ್ಗಳಾದ ಮೆಲ್ವಿನ್ ಪ್ರಾನ್ಸಿಸ್, ಶಂಕರಪ್ಪ ಮತ್ತು ಸಿಬ್ಬಂದಿ ಬಿಗಿ ಬಂದೋಬಸ್ತು ಏರ್ಪಡಿಸಿದ್ದರು.
ಕಾಂಗ್ರೆಸ್ಗೆ ನೇಮಕ
ಮುಳಬಾಗಲು: ತಾಲೂಕಿನ ಆವಣೆ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಪಂಗಡ ಕಾಂಗ್ರೆಸ್ ಅಧ್ಯಕ್ಷರಾಗಿ ಕಳ್ಳಸರಹಳ್ಳಿ ವಿ. ನಾರಾಯಣಪ್ಪ, ಉಪಾಧ್ಯಕ್ಷರಾಗಿ ಬಲ್ಲಪಲ್ಲಿ ಮುನಿವೆಂಕಟಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಕುನಿಬಂಡೆ ಪಿ. ವೆಂಕಟರಾಮಪ್ಪ, ಸಂಘಚನಾ ಕಾರ್ಯದರ್ಶಿಯಾಗಿ ಬಾಯಿಪಲ್ಲಿ ನರಸಿಂಹಪ್ಪ, ಖಜಾಂಚಿಯಾಗಿ ನಾಚಹಳ್ಳಿ ಚಲಪತಿ ಮತ್ತು ಕಾರ್ಯದರ್ಶಿಗಳನ್ನಾಗಿ ಅಗರ ನರಸಿಂಹಮೂರ್ತಿ, ಚಿಕ್ಕನಪಲ್ಲಿ ನಾರಾಯಣಸ್ವಾಮಿ, ಉತ್ತನೂರು ಶ್ರೀನಿವಾಸ್, ಬೇಸ್ತರಹಳ್ಳಿ ನರಸಿಂಹಪ್ಪ, ಗುಟ್ಟಹಳ್ಳಿ ರಘುಪತಿ ಅವರನ್ನು ನೇಮಕ ಮಾಡಲಾಗಿದೆ ಎಂದು ಕೋಲಾರ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಪಂಗಡದ ಅಧ್ಯಕ್ಷ ನಾಗರಾಜ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

