ರಾಜ ಕಾಲುವೆಗಳ ರಕ್ಷಣೆ: ಜಿಲ್ಲಾಡಳಿತಕ್ಕೆ ಸಲಹೆ
ಕ.ಪ್ರ.ವಾರ್ತೆ ಕೋಲಾರ ಅ.15
ನಗರ ವ್ಯಾಪ್ತಿಯ ರಾಜ ಕಾಲುವೆಗಳ ಸಂರಕ್ಷಣೆಗಾಗಿ ಶಾಶ್ವತವಾದ ಕ್ರಮಗಳನ್ನು ಕೈಗೊಳ್ಳದಿದ್ದರೆ ಕಾಲುವೆಗಳ ಒತ್ತುವರಿ ತಡೆಗಟ್ಟಲು ಮತ್ತು ಸಮಗ್ರ ನಿರ್ವಹಣೆ ಅಸಾಧ್ಯವೆಂದು ಜಲ ಸಂಪನ್ಮೂಲ(ಸಣ್ಣ ನೀರಾವರಿ)ಇಲಾಖೆ ಕಾರ್ಯಪಾಲಕ ಅಭಿಯಂತರರು ಜಿಲ್ಲಾಧಿಕಾರಿ ಮತ್ತು ನಗರಸಭೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಕಳೆದ ವಾರ ನಗರದಲ್ಲಿ ಸುರಿದ ಭಾರೀ ಮಳೆಯಿಂದ ರಾಜ ಕಾಲುವೆಗಳ ಅಜು ಬಾಜಿನ ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ನಗರ ಪ್ರದೇಶ ವ್ಯಾಪ್ತಿಯ ರಾಜ ಕಾಲುವೆಗಳ ಸಂರಕ್ಷಣೆ, ನಿರ್ವಹಣೆ ಹಾಗೂ ಒತ್ತುವರಿ ತೆರವು ಯಾರ ಹೊಣೆ ಎಂದು ಅಧಿಕಾರಿಗಳಲ್ಲಿ ಜಿಜ್ಞಾಸೆ ಮೂಡಿಸಿತ್ತು.
ಕಂದಾಯ ಇಲಾಖೆಯ ಮತ್ತು ನಗರಸಭೆಯ ಅಧಿಕಾರಿಗಳು ರಾಜ ಕಾಲುವೆಗಳ ನಿರ್ವಹಣೆಯ ಹೊಣೆ ನಮ್ಮದು ಎಂದು ಹೇಳಿಕೊಳ್ಳುವುದಕ್ಕೆ ಧೈರ್ಯ ಸಾಲದೆ ಜಲ ಸಂಪನ್ಮೂಲ ಇಲಾಖೆಯ ಕಡೆ ಕೈ ತೋರಿಸಿ ಬಿಸೋ ದೋಣ್ಣೆಯಿಂದ ತಪ್ಪಿಸಿಕೊಂಡಿದ್ದರು.
ಕೆರೆಗಳಿಗೆ ನೀರು ಹರಿಯುವುದು ರಾಜ ಕಾಲುವೆಗಳ ಮೂಲಕ. ಹಾಗಾಗಿ ಈ ಕಾಲುವೆಗಳು ಜಲ ಸಂಪನ್ಮೂಲ ಇಲಾಖೆಗೆ ಸೇರಿರುತ್ತದೆ ಎಂದು ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಸ್.ಎನ್. ಕೃಷ್ಣಪ್ಪರವರನ್ನು ಅ.10 ರಂದು ತಮ್ಮ ಕಚೇರಿಗೆ ಬರ ಮಾಡಿಕೊಂಡ ಜಿಲ್ಲಾಧಿಕಾರಿಗಳು ರಾಜ ಕಾಲುವೆಗಳು ಒತ್ತುವರಿಯಾಗಿದೆ. ಸಮರ್ಪಕವಾಗಿ ನಿರ್ವಹಣೆ ಮಾಡದೆ ಹೂಳು ತುಂಬಿಕೊಂಡಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದರು.
ತಾತ್ಕಾಲಿಕ ಕಾಮಗಾರಿ: ಇಷ್ಟೇ ಅಲ್ಲದೆ, ಸಿಆರ್ಪಿಸಿ 133ನೇ ನಿಯಮದಡಿ ಸಣ್ಣ ನೀರಾವರಿ ಇಲಾಖೆಯ ಇಇ ಎಸ್.ಎನ್. ಕೃಷ್ಣಪ್ಪನವರಿಗೆ ತುರ್ತು ನೋಟಿಸ್ ಜಾರಿ ಮಾಡಿ, ಕೂಡಲೇ ನಗರ ವ್ಯಾಪ್ತಿಯ ಎಲ್ಲಾ ರಾಜ ಕಾಲುವೆಗಳನ್ನು ಸರ್ವೆ ಮಾಡಿಸಿ ವರದಿ ನೀಡಬೇಕು, ಕಾಲುವೆಗಳಲ್ಲಿ ತುಂಬಿರುವ ಹೂಳು ವಿಲೇವಾರಿ ಮಾಡಿಸಬೇಕು, ಒತ್ತುವರಿ ಯಾವ ಪ್ರಮಾಣದಲ್ಲಿ ಆಗಿದೆ ಎಂಬುದನ್ನು ತಿಳಿಸುವವರೆಗೆ ಕೇಂದ್ರ ಸ್ಥಾನ ಬಿಟ್ಟು ಎಲ್ಲಿಗೂ ಹೋಗದಂತೆ ಆದೇಶಿಸಿದ್ದರು. ಜಿಲ್ಲಾಧಿಕಾರಿಗಳಿಂದ ನೋಟಿಸ್ ಬಂದ ತಕ್ಷಣ ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು 2.5 ಕಿ.ಮೀ ಉದ್ದದ ರಾಜ ಕಾಲುವೆಯ ಸರ್ವೆ ಕಾರ್ಯ ಆರಂಭಿಸಲಾಗಿದೆ. ಇದರಲ್ಲಿ ಸುಮಾರು 2 ಕಿ.ಮೀ ರಾಜ ಕಾಲುವೆ ಕೋಲಾರ ನಗರಸಭೆ ವ್ಯಾಪ್ತಿಗೆ ಸೇರಿದೆ. ಮಳೆಯ ನೀರು ಸರಾಗವಾಗಿ ಹರಿದು ಕೆರೆಗಳಿಗೆ ಸೇರಲು ಅಡ್ಡಿಯಾಗಿರುವ ಕಸ-ಕಡ್ಡಿಯನ್ನು ವಿಲೇವಾರಿ ಮಾಡಿಸಲಾಗುತ್ತಿದೆ. ಸುಮಾರು 550ಕ್ಕೂ ಹೆಚ್ಚು ಲೋಡ್ ಹೂಳನ್ನು ಲಾರಿಗಳಲ್ಲಿ ತುಂಬಿ ನಗರದ ಹೊರ ವಲಯದಲ್ಲಿ ವಿಲೇವಾರಿ ಮಾಡಲಾಗಿದೆ.
ಇದು ತಾತ್ಕಾಲಿಕ ಪರಿಹಾರವೇ ಹೊರತು ರಾಜ ಕಾಲುವೆಗಳ ಶಾಶ್ವತ ಸಂರಕ್ಷಣೆ, ಒತ್ತುವರಿ ತೆರವು ಹಾಗೂ ನಿರ್ವಹಣೆ ಇದರಿಂದ ಸಾಧ್ಯವಿಲ್ಲವೆಂದು ಅರಿತಿರುವ ಸಣ್ಣ ನೀರಾವರಿ ಇಲಾಖೆಯ ಇಇ ಕೃಷ್ಣಪ್ಪನವರು ನಗರ ವ್ಯಾಪ್ತಿಗೆ ಸೇರಿದ 2 ಕಿ.ಮೀ ಕಾಲುವೆಗೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ಪತ್ರ ಮುಖೇನ ನಗರಸಭೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ರಾಜ ಕಾಲುವೆಗಳ ಅಜು ಬಾಜಿನ ನಿವಾಸಿಗಳು ಶೌಚಾಲಯಗಳ ತ್ಯಾಜ್ಯಗಳನ್ನು ಕಾಲುವೆಗಳಿಗೆ ಹರಿಸುತ್ತಿರುವುದರಿಂದ ಸ್ವಚ್ಛತೆಗೆ ಅನಾನುಕೂಲವಾಗಿದೆ, ಕಸ-ಕಡ್ಡಿಗಳನ್ನು, ಪ್ಲಾಸ್ಟಿಕ್ ಹಾಗೂ ಗಾಜಿನ ವಸ್ತುಗಳನ್ನು ಕಾಲುವೆಗೆ ಎಸೆಯುತ್ತಿರುವುದರಿಂದ ಕಾಲುವೆ ಮುಚ್ಚಿಕೊಂಡು ನೀರು ಹರಿಯುವ ಜಾಗದ ಅಗಲ ಕಡಿಮೆ ಆಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಾಶ್ವತ ಪರಿಹಾರ: ಕಾಲುವೆಗಳಿಗೆ ಶೌಚಾಲಯದ ತ್ಯಾಜ್ಯ ಬಿಡುವುದನ್ನು ತಪ್ಪಿಸಬೇಕು, ಇದಕ್ಕಾಗಿ ಜನತೆಯಲ್ಲಿ ಜಾಗೃತಿ ಮೂಡಿಸಬೇಕು, ರಾಜ ಕಾಲುವೆ ಒತ್ತುವರಿ ತಡೆಯಲು ಮತ್ತು ಸಂರಕ್ಷಣೆಗಾಗಿ ಕಾಲುವೆಯ ಎರಡೂ ಕಡೆ ಕಾಂಕ್ರೀಟ್ ಗೋಡೆ ನಿರ್ಮಿಸಬೇಕು, ಕಾಲುವೆಯ ತಳ ಹದಿಯಲ್ಲಿ ಹೂಳು ನಿಲ್ಲದಂತೆ ಸರಾಗವಾಗಿ ಹರಿದು ಹೋಗುವುದಕ್ಕಾಗಿ ಕಾಂಕ್ರೀಟ್ ಬಿಡ್ ನಿರ್ಮಿಸಬೇಕಾಗಿದೆ ಎಂದು ಶಿಫಾರಸು ಮಾಡಿದ್ದಾರೆ. ಈ ಕಾಮಗಾರಿಗೆ ಸುಮಾರು 5 ರಿಂದ 8 ಕೋಟಿ ರು.ಬೇಕಾಗುತ್ತದೆ, ರಾಜ ಕಾಲುವೆಗೆ ಗೋಡೆ ನಿರ್ಮಿಸಿ ಅದರ ಮೇಲೆ ತಂತಿ ಬೇಲಿ ಅಳವಡಿಸುವುದರಿಂದ ಕಸ-ಕಡ್ಡಿ ಕಾಲುವೆಯಲ್ಲಿ ಬೀಳುವುದನ್ನು ತಪ್ಪಿಸಬಹುದು, ಜೊತೆಗೆ ಒತ್ತುವರಿ ನಿಯಂತ್ರಿಸಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ.
ಕಾಲುವೆಗಳಿಗೆ ತ್ಯಾಜ್ಯಗಳನ್ನು ಎಸೆಯುತ್ತಿರುವುರಿಂದ ಕಾಲುವೆಯ ಅಗಲ ಕಡಿಮೆ ಆಗುತ್ತಿದೆ. ಕಾಲುವೆಯ ಅಭಿವೃದ್ಧಿ ಕಾಮಗಾರಿ ನಮ್ಮ ಇಲಾಖೆಯಿಂದ ಮಾಡಲು ಸಾಧ್ಯವಿದೆ. ನಗರಸಭೆಯವರು ತಾವೇ ಮಾಡುವುದಾಗಿ ಹೇಳುತ್ತಿದ್ದಾರೆ. ಈ ಕೆಲಸ ಆರಂಭಿಸುವ ಮೂಲಕ ರಾಜ ಕಾಲುವೆಗಳ ಅಗಲವನ್ನು ನಿಗಧಿ ಮಾಡಿ ಕೆಲಸ ಆರಂಭಿಸಲಿದ್ದರೆ ನೀರು ಹರಿಯುವುದು ಕಷ್ಟವಾಗುತ್ತದೆ ಎಂದು ಸಲಹೆ ನೀಡಿದ್ದಾರಲ್ಲದೆ, ಜಿಲ್ಲಾಧಿಕಾರಿಗಳಿಗೂ ರಾಜ ಕಾಲುವೆಗಳ ಸ್ಥಿತಿಗತಿಯ ಮಾಹಿತಿ ನೀಡಿದ್ದಾರೆ.
ರಾಜಕಾಲುವೆ ಒತ್ತುವರಿ ತೆರವು ಖಚಿತ: ಡಿಸಿ
ಕೋಲಾರ: ನಗರದ ರಾಜ ಕಾಲುವೆಗಳ ಒತ್ತುವರಿ ತೆರವು ಖಚಿತವೆಂದು ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದ್ದಾರೆ. ಮಂಗಳವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು ಯಾವುದೇ ಕಾರಣಕ್ಕೂ ಹಿಂದೆ ಸಹಿಯುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಇತ್ತೀಚಿಗೆ ಬಿದ್ದ ಮಳೆಯಿಂದ ಜನರಿಗೂ ರಾಜಕಾಲುವೆ ಒತ್ತುವರಿ ಮಾಡಿಕೊಂಡರೆ ಏನೆಲ್ಲಾ ತೊಂದರೆ ಆಗುತ್ತದೆ ಎಂಬುದು ಅನುಭವವಾಗಿರುವುದರಿಂದ ಒತ್ತುವರಿ ತೆರವಿಗೆ ಸ್ವಯಂ ಪ್ರೇರಣೆಯಿಂದ ಸಹಕಾರ ನೀಡುತ್ತಿದ್ದಾರೆ ಎಂದರು.
ರಾಜಕಾಲುವೆಗಳ ಬಗ್ಗೆ ಸರ್ವೇ ನಡೆಸಲು ಗ್ರಾಮಠಾಣೆ ವ್ಯಾಪ್ತಿಯಲ್ಲಿ ಕೆಲವು ಕಡತಗಳು ಇರುವುದಾಗಿ ತಿಳಿದು ಬಂದಿದ್ದು , ಕೂಡಲೇ ಇದನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದ ಅವರು, ತೆರವು ಕಾರ್ಯಕ್ಕೆ ಯಾರಿಂದಲೂ ಸಹ ಒತ್ತಡ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜಕಾಲುವೆಗಳ ನಂತರ ಕೆರೆಗಳ ಒತ್ತುವರಿ ಕಾರ್ಯವನ್ನು ಪ್ರಾರಂಭಿಸಲಾಗುವುದು. ಹಂತ ಹಂತವಾಗಿ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಜಿಲ್ಲೆಯ ಅಂತರ್ಜಲ ಸಮಸ್ಯೆ ನಿವಾರಣೆಯ ಜೊತೆಗೆ ಅಭಿವೃದ್ಧಿಗೂ ಅದ್ಯತೆ ನೀಡುವುದಾಗಿ ತಿಳಿಸಿದರು.
ನೀಲಗಿರಿ ಸಸಿಗಳನ್ನು ಬೆಳೆಸುವುದರಿಂದ ಅಂತರ್ಜಲದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಪರ್ಯಾಯವಾಗಿ ಶ್ರೀಗಂಧ ಸೇರಿದಂತೆ ಲಾಭದಾಯಕವಾದ ಬೇರೆ ಮರಗಳನ್ನು ಬೆಳಸುವಂತೆ ಜಿಲ್ಲಾಧಿಕಾರಿಗಳು ರೈತರಲ್ಲಿ ಮನವಿ ಮಾಡಿದರು.
ನೀಲಿಗಿರಿ ಸಸಿಗಳನ್ನು ನಿಷೇಧಿಸಲು ಕಾನೂನು ಜಾರಿಯಾಗಿಲ್ಲ, ರೈತರ ಮನವೊಲಿಸಬಹುದು, ಒಂದು ವೇಳೆ ಅನಧಿಕೃತವಾಗಿ ನೀರಿಗಿರಿ ಸಸಿಗಳನ್ನು ಮಾರಾಟ ಮಾಡಿದಲ್ಲಿ ಎಚ್ಚರಿಕೆ ನೀಡಲು ಅಧಿಕಾರಿಗಳು ಮುಂದಾಗಬಹುದೆಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

