'ಆರೋಗ್ಯ, ಶಿಕ್ಷಣದಿಂದ ಉತ್ತಮ ಸಮಾಜ'
ಚಿಕ್ಕಬಳ್ಳಾಪುರ: ಜೀವನದಲ್ಲಿ ಆರೋಗ್ಯವನ್ನು ಕಾಪಾಡಿಕೊಂಡು ಗುಣಮಟ್ಟದ ಶಿಕ್ಷಣ ಪಡೆಯುವುದಕ್ಕೆ ಆದ್ಯತೆ ನೀಡಬೇಕೆಂದು ಶಾಸಕ, ಸಾಯಿಕೃಷ್ಣ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಡಾ. ಕೆ.ಸುಧಾಕರ್ ಹೇಳಿದರು.
ತಾಲೂಕಿನ ತಿಪ್ಪೇನಹಳ್ಳಿಯ ಸರ್ಕಾರಿ ಶಾಲೆ ಆವರಣದಲ್ಲಿ ವೈದೇಹಿ ಆಸ್ಪತ್ರೆ ಮತ್ತು ಸಾಯಿಕೃಷ್ಣ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. ಒಳ್ಳೆಯ ಸಮಾಜ ನಿರ್ಮಾಣವಾಗಬೇಕಾದರೆ ಮೊದಲು ಆರೋಗ್ಯ ಮತ್ತು ಶಿಕ್ಷಣದಲ್ಲಿ ಪ್ರಗತಿ ಸಾಧಿಸಬೇಕಾಗುತ್ತದೆ. ಬಹಳಷ್ಟು ಮಂದಿ ಆರ್ಥಿಕ ಸಮಸ್ಯೆಯಿಂದ ಆರೋಗ್ಯದ ಕಡೆ ಹೆಚ್ಚು ಗಮನಕೊಡುವುದಿಲ್ಲ. ಆರೋಗ್ಯ ಸೇವೆ ಸಿಗದೆ ಮುಂದೆ ಗಂಭೀರ ಕಾಯಿಲೆಗಳಿಗೆ ತುತ್ತಾಗಿ ತೊಂದರೆ ಅನುಭವಿಸುತ್ತಾರೆ ಎಂದರು.
ಎಸ್ಪಿ ಎನ್.ಶಿವಪ್ರಸಾದ್ ಮಾತನಾಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ರೋಗಿ ಸಾವನ್ನಪ್ಪಿದ್ದಾಗ ಮೃತನ ಸಂಬಂಧಿಕರು ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ವೈದ್ಯರ ಮೇಲೆ ಹಲ್ಲೆ ಮಾಡಿ, ಸಾರ್ವಜನಿಕ ಆಸ್ತಿಪಾಸ್ತಿಯನ್ನು ನಾಶ ಮಾಡುತ್ತಾರೆ. ಇದರಿಂದ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಲು ವೈದ್ಯರು ಮತ್ತು ಸಿಬ್ಬಂದಿ ಹಿಂಜರಿಯುತ್ತಿದ್ದು, ಇದರಿಂದ ಜನರಿಗೇ ತೊಂದರೆಯಾಗುತ್ತಿದೆ.
ಜನರು ಸಂಯಮದಿಂದ ವರ್ತಿಸಿ ದೂರು ಕೊಡಬೇಕೇ ಹೊರತು ಗಲಾಟೆ, ಹಲ್ಲೆ ಮಾಡಬಾರದು ಎಂದರು.
ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಕಾಂಗ್ರೆಸ್ನ ಹಿರಿಯ ಮುಖಂಡರಾದ ಪಿ.ಎನ್.ಕೇಶವರೆಡ್ಡಿ, ಗ್ರಾಪಂ ಅಧ್ಯಕ್ಷೆ ನಾರಾಯಣಮ್ಮ, ಮಂಡಿಕಲ್ ಬ್ಲಾಕ್ ಅಧ್ಯಕ್ಷ ಗೋವಿಂದಸ್ವಾಮಿ, ಮುಖಂಡರಾದ ಬಿ. ಮುನಿಯಪ್ಪ, ರಾಮಸ್ವಾಮಿ, ದೇವಿಕುಮಾರಿ, ನಂದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಮೂರ್ತಿ, ನಗರಸಭೆ ಸದಸ್ಯ ಗಜೇಂದ್ರ, ಮುಖಂಡ ಜಯರಾಮ್, ವೈದೇಹಿ ಆಸ್ಪತ್ರೆ ವೈದ್ಯ ಸಮೂಹದ ಮುಖಂಡ ಡಾ. ನಾಗರಾಜ್, ಉದ್ಯಮಿ ಪ್ರಸಾದ್ ಇದ್ದರು.
'ಗಣಪತಿ ಉತ್ಸವದಲ್ಲಿ ಶಾಂತಿ ಇರಲಿ'
ಬಾಗೇಪಲ್ಲಿ: ಬಾಲಗಂಗಾಧರ್ ತಿಲಕ್ ಅವರು ಸ್ವಾತಂತ್ರ್ಯಾ ಸಂಗ್ರಾಮದಲ್ಲಿ ಜನರನ್ನು ಒಂದುಗೂಡಿಸಲು ಪ್ರತಿ ಗ್ರಾಮದಲ್ಲೂ ಸಾಮೂಹಿಕ ಗಣಪತಿ ಉತ್ಸವ ಆಚರಣೆಗೆ ತಂದರು. ಇಂತಹ ಗಣೇಶನ ಉತ್ಸವ ಕೋಮು ಸೌಹಾರ್ದ ವಾತಾವರಣ ಹಾಳು ಮಾಡುವ ವ್ಯವಸ್ಥೆಯತ್ತ ತಲುಪುತ್ತಿರುವುದು ವಿಷಾದನೀಯ ಎಂದು ವೃತ್ತ ನಿರೀಕ್ಷಕ ಬಿ.ಎಲ್. ಶ್ರೀನಿವಾಸಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಜನರ ಕೊರತೆಯಿತ್ತು.
ಇದನ್ನು ಗಮನಿಸಿ ಅವರು ವಿವಿಧ ಜಾತಿಗಳ ಹೆಸರಿನಲ್ಲಿ ಹಂಚಿ ಹೋಗಿದ್ದ ಹಿಂದೂಗಳನ್ನು ಒಗ್ಗೂಡಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ಪಡೆಯಲು ಗಣೇಶ ಉತ್ಸವಗಳನ್ನು ಸಾಮೂಹಿಕವಾಗಿ ಆಚರಣೆ ಮಾಡಲು ವ್ಯವಸ್ಥೆ ಮಾಡಿದ್ದರು ಎಂದರು.
ಗಣಪತಿಗಳನ್ನು ವಿಸರ್ಜನೆ ಮಾಡಲು ನೀರಿನ ಸಮಸ್ಯೆ ಹೆಚ್ಚಾಗಿರುವುದರಿಂದ ನಾಗರಿಕರೊಂದಿಗೆ ಚರ್ಚಿಸಿ ಪಟ್ಟಣದಲ್ಲಿ ಸಾಮೂಹಿಕವಾಗಿ ಒಂದೇ ಕಡೆ ಎಲ್ಲಾ ಗಣಪತಿಗಳನ್ನು ಪ್ರತಿಷ್ಠಾಪನೆ ಮಾಡಲು ಸಹಕರಿಸುವಂತೆ ಹಾಗೂ ಶಾಂತಿ ಸೌಹಾರ್ದತೆ ಕಾಪಾಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಉಪ ನಿರೀಕ್ಷಕ ವಿ.ಮುನಿರೆಡ್ಡಿ ಮಾತನಾಡಿ, ಗಣಪತಿ ಪ್ರತಿಷ್ಠಾಪನೆ ಮಾಡಲು ಸರ್ಕಾರದ ಎಲ್ಲಾ ನೀತಿ ನಿಯಮಗಳನ್ನು ಪಾಲನೆ ಮಾಡಬೇಕು. ಮಾತ್ರವಲ್ಲ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಧ್ವನಿ ವರ್ಧಕ ಬಳಸಬೇಕು. ರಾತ್ರಿ 9 ರ ನಂತರ ಬಳಸಬಾರದು ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಎನ್. ಕೃಷ್ಣಾರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡ, ಪುರಸಭೆ ಮಾಜಿ ಅಧ್ಯಕ್ಷ, ಬಿ.ಆರ್. ನರಸಿಂಹನಾಯ್ಡು,
ಜಿ.ಎನ್. ಅಂಜನಪ್ಪ, ವಿ.ಎನ್. ಸೋಮಶೇಖರ್ರೆಡ್ಡಿ ಅದಿಮೂರ್ತಿ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

