ಜಲಾನಯನ ಇಲಾಖೆ ಅವ್ಯವಹಾರ ತನಿಖೆ ನಡೆಸಿ
ಕ.ಪ್ರ. ವಾರ್ತೆ ಕೋಲಾರ ಸೆ.1
ಜಲಾನಯನ ಇಲಾಖೆಯಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಸಾಕಷ್ಟು ಅವ್ಯವಹಾರ ಕಂಡು ಬಂದಿದ್ದು, ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲೂಕು ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ ಒತ್ತಾಯಿಸಿದರು.
ಕೋಲಾರ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, 2012- 13ನೇ ಸಾಲಿನಲ್ಲಿ ಜಲಾನಯನ ಇಲಾಖೆಯಿಂದ ರೈತರ ಹೊಲಗಳಲ್ಲಿ ಬದು ನಿರ್ಮಾಣ ಸೇರಿದಂತೆ ಎಸ್‌ಸಿಪಿ ಯೋಜನೆಯಡಿ ಫಲಾನುಭವಿಗಳ ಆಯ್ಕೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.
ಇದಕ್ಕೆ ಉತ್ತರಿಸಿದ ತಾಪಂ ಅಧ್ಯಕ್ಷೆ ಭಾಗ್ಯಲಕ್ಷ್ಮೀ ನಾರಾಯಣಮೂರ್ತಿ, ಅಗತ್ಯ ದಾಖಲೆ ನೀಡಿದಲ್ಲಿ ಖಂಡಿತ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.
ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಕೇಶವ ಮಾತನಾಡಿ, ಭಾರತ ಸರ್ಕಾರ ರೈತರ ಮತ್ತು ಹೈನೋದ್ಯಮದ ಹಿತ ಗಮನದಲ್ಲಿಟ್ಟುಕೊಂಡು ಜಾನುವಾರುಗಳಿಗೆ ವಿಮಾ ಯೋಜನೆ ಜಾರಿಗೆ ತಂದಿದೆ. ಇದರಡಿ ವಿಮಾ ಕಂತಿನಲ್ಲಿ ಶೇ. 50ರಷ್ಟು ಸಹಾಯಧನವನ್ನು ಕೇಂದ್ರ ಸರ್ಕಾರ ಭರಿಸುತ್ತದೆ. ಉಳಿಕೆ ಶೇ.50 ರಷ್ಟು ಪ್ರೀಮಿಯಂ ಮೊತ್ತ ಹಾಗೂ ಸೇವಾ ತೆರಿಗೆಯನ್ನು ರೈತರು ಭರಿಸಬೇಕಾಗುತ್ತದೆ ಎಂದರು.
ಫಲಾನುಭವಿಯೊಬ್ಬರು ಗರಿಷ್ಠ 2 ರಾಸುಗಳಿಗೆ ಮಾತ್ರ ವಿಮಾ ಸೌಲಭ್ಯ ಪಡೆಯಬಹುದಾಗಿದೆ. ಒಂದೇ ಬಾರಿಗೆ ಮೂರು ವರ್ಷದ ಅವಧಿಗೆ ವಿಮೆ ಮಾಡಿಸಿದರೆ ರೈತರಿಗೆ ಲಾಭದಾಯಕವಾಗುತ್ತದೆ ಎಂದು ವಿವರಿಸಿದರು.
ತೋಟಗಾರಿಕೆ ಇಲಾಖೆಯ ಅಧಿಕಾರಿ ಮಾತನಾಡಿ, ವಿಶೇಷ ಘಟಕ ಯೋಜನೆಡಿ ಪ್ರತಿ ಸದಸ್ಯನಿಗೆ 240 ತೆಂಗಿನ ಸಸಿ ನೀಡಲಾಗುವುದು. ಸದಸ್ಯರು ಎಸ್ಸಿ, ಎಸ್ಟಿ ಮತ್ತು ಇತರೆ ಸಮುದಾಯದ ಪಟ್ಟಿಯನ್ನು 8 ದಿನಗಳಲ್ಲಿ ನೀಡುವಂತೆ ಮನವಿ ಮಾಡಿದರು.
ಸಿಡಿಪಿಒ ಕಿರಣ್‌ಕುಮಾರ್ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ 19 ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸುವಂತೆ ಸರ್ಕಾರದಿಂದ ಸೂಚನೆ ಬಂದಿದ್ದು, ಬುಸನಹಳ್ಳಿ, ಅಲ್ಲಿಕುಂಟೆ, ವಿಟ್ಟಪ್ಪನಹಳ್ಳಿ, ಸೀತಿ ಹೊಸೂರು, ತ್ಯಾವನಹಳ್ಳಿ, ಅರಾಭಿಕೊತ್ತನೂರು, ಮಠಪುರ, ನೀಲಕಂಠಪುರ, ಸೋಮಸಂದ್ರ, ಕೆಂಬೋಡಿ, ಸುಗಟೂರು, ವೇಮಗಲ್, ನೆರ್ನಹಳ್ಳಿ,ಗುಂಡನಪುರ ಸೇರಿದಂತೆ 19 ಗ್ರಾಮಗಳನ್ನು ಪಟ್ಟಿ ಮಾಡಲಾಗಿದೆ ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಗಾಯಿತ್ರಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

