ಮಳ್ಳೂರಮ್ಮ ಕೆರೆ ಅಭಿವೃದ್ಧಿಗೆ ಚಾಲನೆ
ಶಿಡ್ಲಘಟ್ಟ: ದೇವರಮಳ್ಳೂರು ಗ್ರಾಮದ ಮಳ್ಳೂರಮ್ಮ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಹಮ್ಮಿಕೊಂಡಿದ್ದು, ಮಳೆ ನೀರು ವ್ಯರ್ಥವಾಗದಂತೆ 50 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳುತ್ತಿರುವುದಾಗಿ ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲೂಕಿನ ದೇವರಮಳ್ಳೂರು ಗ್ರಾಮದ ಮಳ್ಳೂರಮ್ಮನ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಂಕ್ ಮುನಿಯಪ್ಪ, ಪಿ.ವಿ. ನಾಗರಾಜ್, ಮುನಿನಾರಾಯಣಸ್ವಾಮಿ, ಕೆಂಪಣ್ಣ, ರೆಡ್ಡಿಸ್ವಾಮಿ, ಎಂಜಿನಿಯರಗಳಾದ ಶ್ರೀನಿವಾಸ್, ರವೀಂದ್ರ ಮತ್ತಿತರರು ಹಾಜರಿದ್ದರು.
ಹೋರಾಟದಿಂದ ಮಾತ್ರ ರೈತರಿಗೆ ನ್ಯಾಯ: ರಘುನಾಥರೆಡ್ಡಿ
ಚಿಂತಾಮಣಿ: ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಗ್ರಾಮದಿಂದ ಪಟ್ಟಣದ ಪ್ರದೇಶದವರೆಗೂ ವಿವಿಧ ಯೋಜನೆಗಳಿಗಾಗಿ ಜಾರಿಗೆಯಾಗಲು ಹೋರಾಟ ನಡೆಸಿದ್ದಲ್ಲಿ ಮಾತ್ರ ರೈತರಿಗೆ ನ್ಯಾಯ ಒದಗಿಸಲು ಸಾಧ್ಯವೆಂದು ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ರಘುನಾಥರೆಡ್ಡಿ ಕರೆ ನೀಡಿದರು.
ತಾಲೂಕಿನ ಚಿಲಕಲನೇರ್ಪು ಹೋಬಳಿ ಬುರುಡಗುಂಟೆ ಗ್ರಾಮದಲ್ಲಿ ಹೋಬಳಿ ಮಟ್ಟದ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಮಾತನಾಡಿ, ರಾಜ್ಯ ನಾಯಕ ಪುಟ್ಟಣ್ಣಯ್ಯ ಬಣದ ತಾಲೂಕಿನ ಮತ್ತು ಜಿಲ್ಲಾ ಮಟ್ಟದವರೆಗೂ ರೈತ ಸಂಘವನ್ನು ಬಲಿಷ್ಠಗೊಳಿಸಲು ಹಂತ ಹಂತವಾಗಿ ರೈತರ ಪರ ಹೋರಾಟಗಳನ್ನು ಮಾಡುತ್ತಿರುವುದಾಗಿ ಹೇಳಿದರು. ಚಿಲಕಲನೇರ್ಪು ಬುರುಡಗುಂಟೆ ಗ್ರಾಮದ ನಾಗರಾಜ್, ಚಿನ್ನಪ್ಪಯ್ಯ, ಬಿ.ಕೆ. ರವಿ, ವೆಂಕಟರವಣಪ್ಪ, ಮೌಲಾಸಾಬಿ ಸೇರಿದಂತೆ ಪದಾಧಿಕಾರಿಗಳನ್ನಾಗಿ ಸುರೇಶ್, ಚಿಕ್ಕ ಕೋನಪ್ಪ ಇದ್ದರು.
22ರಂದು ವಯೋಲಿನ್ ವಾದನ
ಕೋಲಾರ: ನಗರದ ಶ್ರೀ ಕೋದಂಡರಾಮ ಸೇವಾ ಮಂಡಳಿ ಮತ್ತು ಗೆಳೆಯರ ಬಳದಿಂದ ಸೆ.22ರಂದು ಸಂಜೆ 6.30ಕ್ಕೆ ನಗರದ ಕೆಇಬಿ ಗಣಪತಿ ದೇವಾಲಯದ ಆವರಣದಲ್ಲಿ ಮೈಸೂರು ನಾಗರಾಜ್ ಮತ್ತು ಡಾ. ಮಂಜುನಾಥ್ ತಂಡದಿಂದ ವಯೋಲಿನ್ ವಾದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಕಷ್ಟಹರ ಚತುರ್ಥಿ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬ್ಯಾಡ್ಮಿಂಟನ್ ತಂಡ ವಿಭಾಗ ಮಟ್ಟಕ್ಕೆ
ಚಿಂತಾಮಣಿ: ಚಿಕ್ಕಬಳ್ಳಾಪುರದಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಡ್ಮಿಂಟನ್ ಸ್ಪರ್ಧೆಯಲ್ಲಿ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಚಿಂತಾಮಣಿ ತಾಲೂಕಿನ ಮೈಲಾಂಡ್ಲಹಳ್ಳಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಬ್ಯಾಡ್ಮಿಂಟನ್ ತಂಡವು ಪ್ರಥಮ ಸ್ಥಾನ ಗಳಿಸಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದೆಯೆಂದು ಶಾಲೆಯ ಮುಖ್ಯ ಶಿಕ್ಷಕಿ ಹಸೀನಾ ಬೇಗಂ ತಿಳಿಸಿದ್ದಾರೆ. ಇದು ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಸಂದ ಗೌರವವಾಗಿದ್ದು, ತಂಡದ ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿದ ಶಿಕ್ಷಕ ಎಸ್.ಪಿ. ರಮೇಶ್ ಅವರನ್ನು ಅಭಿನಂದಿಸಿದ್ದಾರೆ.
ಸಹಕಾರ ಸಂಘಕ್ಕೆ ಆಯ್ಕೆ
ಚಿಕ್ಕಬಳ್ಳಾಪುರ: ತಾಲೂಕಿನ ಹೊಸುಹುಡ್ಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಎಂ. ವೆಂಕಟನಾರಾಯಣಪ್ಪ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಸತ್ಯನಾರಾಯಣ ಉಸ್ತುವಾರಿಯಲ್ಲಿ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಎಚ್.ಎಂ. ವೆಂಕಟನಾರಾಯಣಪ್ಪ ಮತ್ತು ಸದಸ್ಯರಾಗಿ ಜಿ.ಎನ್. ಶ್ರೀರಾಮರೆಡ್ಡಿ, ಟಿ.ಎ. ರಾಮಯ್ಯ, ಎಸ್. ವೀರಪ್ಪ, ತ್ಯಾಗರಾಜ ಚಾರಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ ಎಚ್.ಎಂ. ವೆಂಕಟನಾರಾಯಣಪ್ಪ ಮಾತನಾಡಿ, ಸಹಕಾರ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಎಂ. ಮುನಿರಾಜು, ಪಿಎಲ್ಡಿ ಬ್ಯಾಂಕಿನ ಉಪಾಧ್ಯಕ್ಷ ವೈ. ವೆಂಕಟರಾಮ, ಮಾಜಿ ಸದಸ್ಯ ಎಚ್.ಎನ್. ನಾರಾಯಣಸ್ವಾಮಿ, ಮುಖಂಡರಾದ ನಾರಾಯಣಸ್ವಾಮಿ, ಎಚ್.ಎಂ. ನಾರಾಯಣಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ಅಜೋಲ್ಲಾ ಬೆಳೆಯ ಮಾದರಿ ಪ್ರಾತ್ಯಕ್ಷಿಕೆ
ಟೇಕಲ್: ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಹಸುಗಳಿಗೆ ಮೇವಿನ ಜೊತೆಗೆ ಅಜೋಲ್ಲಾ ಬೆಳೆಯನ್ನು ನೀಡುವುದರಿಂದ ಸಮೃದ್ಧಿಯ ಹಾಲು ನೀಡುತ್ತದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಗಾಂಧೀ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಡಾ. ವಿ. ಕೃಷ್ಣಮೂರ್ತಿ ತಿಳಿಸಿದರು. ಅವರು ಟೇಕಲ್ನ ಬನಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಅಜೋಲ್ಲಾ ಬೆಳೆಯ ಮಾದರಿ ಪ್ರಾತ್ಯಕ್ಷಿಕೆಯನ್ನು ಪ್ರಗತಿಪರ ರೈತರಾದಂತಹ ಬೈರಪ್ಪನವರ ತೋಟದಲ್ಲಿ ನಡೆಸಲಾಯಿತು. ಹೆಚ್ಚುತ್ತಿರುವ ಮೇವಿನ ಸಮಸ್ಯೆಯನ್ನು ಪರಿಹರಿಸಲು ಈ ಬೆಳೆ ಬಹಳ ಪೂರಕವಾಗಿದ್ದು ರೈತರಿಗೆ ಇದರ ಪ್ರಾಮುಖ್ಯತೆ ಉಪಯೋಗಗಳನ್ನು ತಿಳಿಸಲು ಸ್ಥಳದಲ್ಲೆ ಈ ಬೆಳೆಯ ಬಗ್ಗೆ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಬನಹಳ್ಳಿಯ ಸುತ್ತಮುತ್ತಲಿನ ಹಲವಾರು ರೈತರು ಇದರ ಉಪಯೋಗ ಪಡೆದುಕೊಂಡರು ಹಾಗೂ ಈ ಅಜೋಲ್ಲಾ ಬೆಳೆಯನ್ನು ಬೆಳೆಯುವ ರೀತಿಯನ್ನು ತಿಳಿದರು. ಈ ಸಂದರ್ಭದಲ್ಲಿ ಕೀಟಶಾಸ್ತ್ರ ತಜ್ಞರಾದ ಶಿವಮೂರ್ತಿ ನಾಯಕ್ ಹಾಗೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಶಿಲ್ಪಶ್ರೀ ವಾಸ್ತವ್, ರಮೇಶ್, ಶಶಿಕುಮಾರ್, ಶಿವಶಂಕರ್, ಶೃತಿ, ಶುಭ, ಸುಮಂತ್, ಸುಧಾಕರ್, ಸೌಮ್ಯ ಮುಂತಾದವರು ಉಪಸ್ಥಿತರಿದ್ದರು.
ಆತ್ಮವಿಶ್ವಾಸದಿಂದ ಮುನ್ನುಗ್ಗಿ: ಮಹೇಶ್
ಶಿಡ್ಲಘಟ್ಟ: ಆತ್ಮವಿಶ್ವಾಸದಿಂದ ಮುನ್ನುಗ್ಗಿ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕೆಂದು ವಿದ್ಯಾಥರ್ಗಳಿಗೆ ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್. ಮಹೇಶ್ ಹೇಳಿದರು. ತಾಲೂಕಿನ ದ್ಯಾವಪ್ಪನಗುಡಿಯ ರಂಗಮಂದಿರದಲ್ಲಿ ಮಂಗಳವಾರ ತಾಲೂಕು ಸೇವಾ ಸಮಿತಿ ಹಾಗೂ ದ್ಯಾವಪ್ಪನಗುಡಿ ಸರ್ಕಾರಿ ಪ್ರೌಢಶಾಲೆಯ ಕಲಾ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ ಕಾನೂನು ಅರಿವು- ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ಸಚಿವ ಭೇಟಿ
ಚಿಕ್ಕಬಳ್ಳಾಪುರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಸೆ.19ರಂದು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡುತ್ತಿದ್ದು, ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬೆಳಗ್ಗೆ 10.30 ಕ್ಕೆ ಆರೋಗ್ಯ ಇಲಾಖೆಗೆ ಸಂಬಂಧಪಟ್ಟಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

