ಸಾಂಕ್ರಾಮಿಕ ರೋಗಗಳ ಭೀತಿ, ಕ್ರಮಕ್ಕೆ ಆಗ್ರಹ
ಕೆಜಿಎಫ್: ಕೆಜಿಎಫ್ ನಗರಸಭೆ ವ್ಯಾಪ್ತಿಯ ಮಸ್ಕಂ ವಾರ್ಡ್ಗೆ ಪೌರಾಯುಕ್ತ ವಿ. ಬಾಲಚಂದ್ರ ಹಾಗೂ ಅಧಿಕಾರಿಗಳ ತಂಡ ಮತ್ತು ನಗರಸಭಾ ಸದಸ್ಯ ಲಾರೆನ್ಸ್ ಮತ್ತಿತರರು ಭೇಟಿ ನೀಡಿ ಮೂಲ ಸೌಲಭ್ಯ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಪರಿಶೀಲಿಸಿದರು.
ಮೇಲ್ ಮಸ್ಕಂನ ನೂರಾರು ಮಹಿಳೆಯರು ಪೌರಾಯುಕ್ತ ಹಾಗೂ ನಗರಸಭಾ ಸದಸ್ಯ ಲಾರೆನ್ಸ್ ಅವರನ್ನು ತಡೆದು ಇಲ್ಲಿ ತಮಗೆ ಸರಿಯಾಗಿ ಯಾವುದೆ ಮೂಲ ಸೌಕರ್ಯಗಳಿಲ್ಲ, ಚರಂಡಿ, ರಸ್ತೆ, ವಿದ್ಯುತ್ ದೀಪ, ಕಸ ವಿಲೇವಾರಿ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಮಕ್ಕಳಿಗೆ ಮತ್ತು ಹಿರಿಯರಿಗೆ ವಿವಿಧ ರೀತಿಯ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ. ಆದ್ದರಿಂದ ತಾವು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದರು.
ಈ ವೇಳೆ ಮಾತನಾಡಿದ ಪೌರಾಯುಕ್ತ ವಿ. ಬಾಲಚಂದ್ರ ಮುಂದಿನ 15 ದಿನಗಳೊಳಗೆ ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದು ಅಧಿಕಾರಿಗಳಿಗೆ ವಿದ್ಯುತ್ ದೀಪ, ಚರಂಡಿ, ಕಸ ವಿಲೇವಾರಿ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಕ್ರಮ ಜರುಗಿಸಲು ಸೂಚಿಸಿದರು.
ಲೋಯರ್ ಮಸ್ಕಂ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 120 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಐವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಈ ಶಾಲೆಯಲ್ಲಿ ಕೇವಲ ಮೂರು ಕೊಠಡಿಗಳು ಮಾತ್ರವಿದ್ದು ಶಾಲಾ ಮಕ್ಕಳಿಗೆ ಸರಿಯಾದ ಆಟದ ಮೈದಾನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇತರೆ ಮೂಲ ಸೌಕರ್ಯಗಳಿಲ್ಲದೆ ಮಕ್ಕಳು ಹಾಗೂ ಶಿಕ್ಷಕರು ಪರದಾಡುವಂತಾಗಿದ್ದು ಶಾಲೆಯ ಹಿಂಭಾಗದಲ್ಲಿರುವ ಸ್ಥಳವನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು ಶಾಲಾ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಬಿಡುಗಡೆಯಾಗಿದ್ದ ಅನುದಾನ ಸಹ ವಾಪಸಾಗಿದೆ. ಆದ್ದರಿಂದ ತಾವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಲೆಯ ಮುಖ್ಯ ಶಿಕ್ಷಕಿ ಸರಸ್ವತಮ್ಮ ಪೌರಾಯುಕ್ತ ವಿ. ಬಾಲಚಂದ್ರ ಹಾಗೂ ನಗರಸಭೆ ಸದಸ್ಯ ಲಾರೆನ್ಸ್ ಬಳಿ ದೂರು ಸಲ್ಲಿಸಿದರು. ಈ ವೇಳೆ ಶಾಲೆಯ ಶಿಕ್ಷಕರನ್ನು ಹಾಗೂ ಮಕ್ಕಳನ್ನು ಕುರಿತು ಮಾತನಾಡಿದ ಪೌರಾಯುಕ್ತರು ತಮ್ಮ ನಗರಸಭೆ ವತಿಯಿಂದ ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯವನ್ನು ಒದಗಿಸಲು ಎಲ್ಲಾ ರೀತಿಯ ಕ್ರಮ ಜರುಗಿಸಲಾಗುವುದು ಮತ್ತು ಸರ್ಕಾರಿ ಸ್ಥಳವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದಾಖಲಾತಿಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

