ಕೋಲಾರ

ಸಾಂಬಾರ್ ಪಾತ್ರೆಗೆ ಬಿದ್ದಿದ್ದ ಬಾಲಕಿ ಸಾವು

Published On :

ಗೌರಿಬಿದನೂರು: ತಾಲೂಕಿನ ಡಿ.ಪಾಳ್ಯ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಬಿಸಿಯೂಟದ ಸಾಂಬಾರ್ ಪಾತ್ರೆಯಲ್ಲಿ ಬಿದ್ದು ಶೇ.80ರಷ್ಟು ಗಾಯಗಳಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿನಿ ಕು.ಅನುಷಾ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಕೊನೆಯುಸಿರೆಳೆದ ಘಟನೆ ನಡೆದಿದೆ.
 ಮೃತ ಬಾಲಕಿ ಶವವನ್ನು ಬೆಂಗಳೂರಿನಿಂದ ಬುಧವಾರ ಮಧ್ಯಾಹ್ನ 1ಗಂಟೆಗೆ ಗ್ರಾಮಕ್ಕೆ ತಂದು ಶಾಲೆ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲು ಮುಂದಾದಾಗ ಸಂಬಂಧಿಕರ ಆಕ್ರೋಶ ಮುಗಿಲುಮುಟ್ಟಿತು.
ಶಿಕ್ಷಣ ಸಚಿವರೇ ಇಲ್ಲಿಗೆ ಬರಬೇಕು. ನಮಗಾಗಿರುವ ಅನ್ಯಾಯವನ್ನು ಪರಿಹರಿಸಬೇಕು, ಸೂಕ್ತ ಪರಿಹಾರ ನೀಡಬೇಕು, ಹಾಲಿ ಇರುವ ಶಿಕ್ಷಕರನ್ನು ಅಮಾನತುಗೊಳಿಸಿ ಶಿಕ್ಷಕರನ್ನು ಬದಲಿಸಬೇಕು ಎಂದು ಮೃತ ಬಾಲಕಿಯ ಮಾವ ಕೆಂಚಪ್ಪ ಮತ್ತು ಬಂಧುಗಳು ಒಂದು ಗಂಟೆ ಕಾಲ ಪ್ರತಿಭಟನಾ ಧರಣಿ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ತಂದೆ, ತಾಯಿಗೆ ಉದ್ಯೋಗ: ಮೃತ ಅನುಷಳ ತಂದೆ ಅಶ್ವತ್ಥಪ್ಪನಿಗೆ ಪಂಚಾಯ್ತಿಯಲ್ಲಿ ವಾಟರ್‌ಮನ್ ಕೆಲಸವನ್ನು ಕೊಡಿಸಲಾಗುವುದು ಹಾಗೂ ತಾಯಿ ವೆಂಕಟಲಕ್ಷ್ಮಿಗೆ ಇದೇ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ನೇಮಕ ಮಾಡಲಾಗುವುದು ಎಂದು ಶಾಸಕ ಶಿವಶಂಕರರೆಡ್ಡಿ ಭರವಸೆ ನೀಡಿದರು.
ಶಿಕ್ಷಕರ ಎತ್ತಂಗಡಿ: ಶಾಲೆಯಲ್ಲಿ ಈಗಿರುವ ಎಲ್ಲಾ ಶಿಕ್ಷಕರನ್ನು ವರ್ಗಾಯಿಸಿ ಬೇರೆ ಶಿಕ್ಷಕನ್ನು ನಿಯೋಜಿಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಸ್ಥಳಕ್ಕೆ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ತಹಶೀಲ್ದಾರ್ ಡಾ. ಭಾಸ್ಕರ್, ಕಾಂಗ್ರೆಸ್ ಮುಖಂಡ ವೇಣುಗೋಪಾಲರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಕೆ. ಸತೀಶ್, ಡಿಡಿಪಿಐ ಅಜಿತ್ ಪ್ರಸಾದ್, ಪ್ರಬಾರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಸಿಪಿಐ ಲಕ್ಷ್ಮಯ್ಯ ಮುಂತಾದವರು ಆಗಮಿಸಿದ್ದರು.

ಶಾಸಕರ ಸಾಂತ್ವನ, ಪರಿಹಾರ ಘೋಷಣೆ
ಸ್ಥಳಕ್ಕೆ ಭೇಟಿ ನೀಡಿದ ವಿಧಾನಸಭಾ ಉಪಸಭಾಧ್ಯಕ್ಷ ಹಾಗೂ ಶಾಸಕ ಎನ್.ಹೆಚ್. ಶಿವಶಂಕರರೆಡ್ಡಿ ಮೃತ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಅಲ್ಲದೆ ಈ ಘಟನೆ ನಡೆಯಬಾರದಾಗಿತ್ತು. ಮೃತರ ಕುಟುಂಬಕ್ಕೆ ಸಿಗಬೇಕಿರುವ ಎಲ್ಲಾ ರೀತಿಯ ಸಹಾಯ ಸಿಗುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು. ತಕ್ಷಣಕ್ಕೆ ಸರ್ಕಾರದಿಂದ 50 ಸಾವಿರ ಪರಿಹಾರವನ್ನು ನೀಡಲಾಗಿದೆ ಇನ್ನೂ 2ಲಕ್ಷ ರು. ಪರಿಹಾರ ಸಿಗಲಿದೆ ಪಂಚಾಯ್ತಿಯಿಂದ 15 ಸಾವಿರ ರು. ನೀಡಲಾಗಿದೆ.

ಮುಖ್ಯ ಶಿಕ್ಷಕ ಅಮಾನತು: ಡಿಡಿಪಿಐ
ಕರ್ತವ್ಯ ಲೋಪ ಹಾಗೂ ಬಿಸಿಯೂಟ ನಿರ್ವಹಣೆಯಲ್ಲಿ ನಿರ್ಲಕ್ಷ್ಯದ ಅನ್ವಯ ಹಾಗೂ ಮಕ್ಕಳ ಬಗ್ಗೆ ಗಮನಹರಿಸದಿರುವ ಬೇಜವಾಬ್ದಾರಿ ಕಾರಣದಿಂದ ಪ್ರಭಾರ ಮುಖ್ಯಶಿಕ್ಷಕ ಕೃಷ್ಣಪ್ಪ ಅವರನ್ನು ಅಮಾನತ್ತು ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಅಜಿತ್ ಪ್ರಸಾದ್ ತಿಳಿಸಿದ್ದಾರೆ. ಸದರಿ ಶಾಲೆಗೆ ಪ್ರಭಾರಿ ಮುಖ್ಯಶಿಕ್ಷಕರನ್ನಾಗಿ ಶಿಕ್ಷಣ ಸಂಯೋಜಕರಾಗಿದ್ದ ರಾಮಕೃಷ್ಣಪ್ಪ ಅವನ್ನು ನಿಯೋಜಿಸಲಾಗಿದ್ದು ಡಿಡಿಪಿಐ ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳು ಹಾಗೂ ಹೊಸದಾಗಿ ನಿಯೋಜನೆಗೊಂಡಿರುವ  ಪ್ರಭಾರಿ ಮುಖ್ಯಶಿಕ್ಷಕರೂ  ಸೇರಿದಂತೆ 10 ಜನ ಸಹಶಿಕ್ಷಕರೊಂದಿಗೆ ಗುರುವಾರ 10.30ಕ್ಕೆ ಶಾಲೆಯು ಎಂದಿನಂತೆ ಪ್ರಾರಂಭವಾಗಲಿದ್ದು ಬಿಸಿ ಊಟವನ್ನು ಸರ್ಕಾರಿ ಪ್ರೌಢಶಾಲೆಯಿಂದ 5  ದಿನಗಳ ಮಟ್ಟಿಗೆ  ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಡಿ.ಪಾಳ್ಯ ಗ್ರಾಮಪಂಚಾಯ್ತಿ ಅಧ್ಯಕ್ಷರು ಕಾರ್ಯದರ್ಶಿ ಮತ್ತು ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಹೊಸದಾಗಿ ಅಡುಗೆಯವರನ್ನು ಆಯ್ಕೆ ಮಾಡಲಿದ್ದಾರೆ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ತಿಳಿಸಿದ್ದಾರೆ. ಪ್ರಸ್ತುತ ಶಾಲೆಯಲ್ಲಿ ಊಟ ವಿತರಣಾ ಕೊಠಡಿಯನ್ನು ಉಪಯೋಗಿಸುತ್ತಿರಲಿಲ್ಲ ಎಂದು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಆರೋಪಸಿದ್ದಾರೆ. ಈ ಬಗ್ಗೆ ನಿಮ್ಮ ಹೇಳಿಕೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಡಿಡಿಪಿಐ ಅಜಿತ್ ಪ್ರಸಾದ್ ಕೊಠಡಿಯನ್ನು ಶುಚಿ ಮಾಡಲು ಆಗುವುದಿಲ್ಲ ಎಂಬ ಕಾರಣ ನೀಡಿ ಮುಚ್ಚಿದ್ದರು. ಈಗ ನಾಳೆಯಿಂದಲೇ ಅದನ್ನು ತೆರೆಯುವಂತೆ ಆದೇಶಿಸಲಾಗಿದೆ. ಈಗಿರುವ ಶಿಕ್ಷಕ ಸಿಬ್ಬಂದಿಯನ್ನು ಬೇರೆ ಹೋಬಳಿಗಳಿಗೆ ನಿಯೋಜಿಸಲಾಗಿದೆ. ಬೇರೆ ಹೋಬಳಿಯಲ್ಲಿರುವ ಹೊಸಬರನ್ನು ಈ ಶಾಲೆಗೆ ನಿಯೋಜಿಸಲಾಗಿದೆ ಎಂದು ವಿವರಿಸಿದರು.
ತಾತ್ಕಾಲಿಕ ಪರಿಹಾರ ನಿಧಿಯಿಂದ 50 ಸಾವಿರ:  ತಾತ್ಕಾಲಿಕ ಪರಿಹಾರ  ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿಯಿಂದ 50 ಸಾವಿರ ಪರಿಹಾರವನ್ನು ನೀಡಲಾಗಿದ್ದು ವಿದ್ಯಾರ್ಥಿನಿ ಸಾವಿನ ಪ್ರಕರಣ ಪೊಲೀಸ್ ಪ್ರಕರಣ ದಾಖಲಾಗಿರುವುದರಿಂದ ಕೋರ್ಟ್‌ನಲ್ಲಿ ನೀಡುವ ತೀರ್ಪಿನಂತೆ ಮೃತಳ ಕುಟುಂಬಕ್ಕೆ ಪರಿಹಾರ ಸಿಗಲಿದೆ ಎಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ತಿಳಿಸಿದ್ದಾರೆ.

ಭೋಜನ ಶಾಲೆ ಇದ್ದರೂ ಬಳಸುತ್ತಿಲ್ಲ
ಮಾಜಿ ಸಚಿವ ಮಮ್ತಾಜ್ ಅಲಿ ಖಾನ್ ಅವರು ಸಚಿವರಾಗಿದ್ದಾಗ ಕಟ್ಟಿಸಿದ್ದ ಭೋಜನ ಶಾಲೆ, ಸಮುದಾಯ ಭವನ ಇದೆ. ಆದರೆ ಈ ಕೊಠಡಿಯನ್ನು ಉಪಯೋಗಿಸದೇ ಶಾಲಾ ಆವರಣದ ಮುಂಭಾಗದಲ್ಲಿ ಬಿಸಿ ಊಟ ವಿತರಿಸುವ ಮೂಲಕ ಇಂತಹ ಘಟನೆಗೆ ಕಾರಣರಾಗಿದ್ದಾರೆ. ಶಾಲೆಯಲ್ಲಿ 400ರಿಂದ 500 ಮಕ್ಕಳಿದ್ದರೂ ಶಾಲೆಯಲ್ಲಿ ಪ್ರತಿದಿನ 150ರಿಂದ 200 ಮಕ್ಕಳಿಗೆ ಮಾತ್ರ ಬಿಸಿ ಊಟ ಸೇವಿಸುತ್ತಿದ್ದರು. ಇದಕ್ಕೆ ಕಾರಣ ಗುಣಮಟ್ಟವಿಲ್ಲದ ಊಟ ಶಿಕ್ಷಕರ ಗುಂಪುಗಾರಿಕೆ, ಅಡುಗೆ ಸಹಾಯಕರು ಯಾರಿಗೂ ಬಡಿಸುತ್ತಿರಲಿಲ್ಲ, ವಿದ್ಯಾರ್ಥಿಗಳೇ ಊಟ ಬಡಿಸುತ್ತಿದ್ದರು, ಎಲ್ಲಾ ಶಿಕ್ಷಕರೂ ಆಫೀಸ್ ರೂಂ ಸೇರಿದ್ರೆ ಹೊರಕ್ಕೆ ಬರುತ್ತಿರಲಿಲ್ಲ. ಶಾಲೆಯ ಭೋಜನ ಶಾಲೆಯನ್ನು ಮಕ್ಕಳಿಗಾಗಿ ಉಪಯೋಗಿಸುವುದನ್ನು ಬಿಟ್ಟು ಬೇರೆ ಕಾರ್ಯಕ್ರಮಗಳಿಗೆ ನೀಡುತ್ತಿದ್ದರು ಎಂದು ಗ್ರಾಮ ಪಂಚಾಯ್ತಿ ಸದಸ್ಯರು ಇದೇ ಸಂದರ್ಭದಲ್ಲಿ ದೂರಿದರು.

ಬಡಕುಟುಂಬ ವರ್ಗ
ಪರಿಶಿಷ್ಟ ವರ್ಗದ ಬಡಕುಟುಂಬ ಮೃತ ಅನುಷಾಳ ತಂದೆ ಅಶ್ವತ್ಥಪ್ಪನ ಕುಟುಂಬ ತಾಯಿ ವೆಂಕಟಲಕ್ಷ್ಮಿ ಒಬ್ಬ ಗಂಡು ಅನಂತ 4ನೇ ತರಗತಿ. ಪ್ರತಿದಿನ ಕೂಲಿ ಮಾಡಬೇಕು ತುತ್ತಿನ ಚೀಲವನ್ನು ತುಂಬಿಕೊಳ್ಳಬೇಕು, ಬಡತನದ ಕಾರಣದಿಂದ ಎಲ್ಲಾ ಸೌಲಭ್ಯ ಸಿಗುತ್ತದೆ ಎಂಬ ಕಾರಣದಿಂದ ತನ್ನ ಮಗಳು ಅನುಷಾಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದ ತಂದೆ ಅಶ್ವತ್ಥಪ್ಪ. ಅನುಷಾ ಕ್ರಿಡೆಯಲ್ಲಿಯೂ ಪಾಲ್ಗೊಳ್ಳುತ್ತಿದ್ದಳು. ಓದಿನಲ್ಲಿಯೂ ಮುಂದೆ ಇದ್ದಳು ಎನ್ನತ್ತಾರೆ ಅವಳ ಸ್ನೇಹಿತರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಆಯ್ಕೆ
ಮಾಲೂರು: ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ವರ್ಗಗಳ  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.  ಪಟ್ಟಣದ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ದೊಡ್ಡಿ ಸಿಆರ್‌ಪಿ ಸಂಕೀರ್ಣದ ವಿ. ವೆಂಕಟೇಶ್ ರವರನ್ನು ಅಧ್ಯಕ್ಷರಾಗಿ,ಚಿಕ್ಕಮಲ್ಲೆ ಶಾಲೆಯ ಟಿ.ಎ.ರಾಮಪ್ಪ ರವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ. ಗೇರುಪುರದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಚಿಕ್ಕರಾಮಾಂಜಿನೇಯ ಉಪಾಧ್ಯಕ್ಷರಾಗಿ, ಎಂ. ಹೂಸಹಳ್ಳಿಯ ಪ್ರಾಥಮಿಕ ಶಾಲೆಯ ಸುರೇಶ್ ಅವರನ್ನು ಸಹಕಾರ್ಯದರ್ಶಿಯಾಗಿ, ಹುಲ್ಕೂರು ಶಾಲೆಯ ಎಸ್.ಹೆಚ್.ನಾರಾಯಣಸ್ವಾಮಿ ರವರನ್ನು ಸಂಘಟನಾ ಕಾರ್ಯದರ್ಶಿ, ಗೋಣೂರು ಶಾಲೆಯ ಸಿ.ಎಂ. ನಾರಾಯಣಸ್ವಾಮಿ ಖಜಾಂಚಿಯಾಗಿ ಅವಿರೋಧವಾಗಿ ಆರಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎ. ರಾಮಪ್ಪ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ವಿ. ವೆಂಕಟೇಶ್ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಂಘಟನೆ ದುಡಿಯಲಿದ್ದು, ಡಾ. ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ಸದಸ್ಯರುಗಳು ಮೈಗೊಡಿಸಿಕೊಂಡು ಸಂಘಟಿತರಾಗಬೇಕೆಂದು ಅಧ್ಯಕ್ಷ ವೆಂಕಟೇಶ್ ಅವರು ಇದೇ ತಿಂಗಳು ನಡೆಯಲಿರುವ ಪ.ಜಾತಿ ಮತ್ತು ಪ.ವರ್ಗ ಕ್ಷೇಮಾಭಿವೃದ್ಧಿ ಕಾರ್ಯಕ್ರಮಕ್ಕೂ ಹಾಗೂ ನಮ್ಮ ಸಂಘಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

22ರಂದು ಮನೆಗೊಂದು ಕವಿಗೋಷ್ಠಿ
ಚಿಂತಾಮಣಿ: ಚಿಂತಾಮಣಿ ತಾಲೂಕು ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ವತಿಯಿಂದ ಸೆ.22ರಂದು ಬೆಳಗ್ಗೆ 11.30ಕ್ಕೆ ಪಟ್ಟಣದ ಶಿಲ್ಪಾ ಶಾಲೆಯ ಸಮೀಪದ ಟೀಚರ್ಸ್ ಕಾಲೋನಿ ರಸ್ತೆಯಲ್ಲಿರುವ ಅನ್ನಪೂರ್ಣೇಶ್ವರಿ ಹೋಟೆಲ್ ಮಾಲೀಕ ಎಚ್.ಎಸ್. ಭಾಸ್ಕರ್ ಅವರ ನಿವಾಸದಲ್ಲಿ ಮನೆಗೊಂದು ಕವಿಗೋಷ್ಠಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆಯೆಂದು ಚು.ಸಾ.ಪ ಪ್ರಧಾನ ಕಾರ್ಯದರ್ಶಿ ರಾಯಲ್ ಶಿ.ಮ. ಮಂಜುನಾಥ್ ತಿಳಿಸಿದ್ದಾರೆ. ವಿವರಕ್ಕೆ 94494 66788, 93426 45541 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.