ರೈತರ ಸಮಸ್ಯೆ ಆಲಿಸಿದ ಸಚಿವ ಕೃಷ್ಣ ಬೈರೇಗೌಡ
ಚಿಕ್ಕಬಳ್ಳಾಪುರ: ತಾಲೂಕಿನ ವಿವಿಧೆಡೆ ರೈತರ ಜಮೀನುಗಳಿಗೆ ಕೃಷಿ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ ಕೃಷಿ ಸಚಿವ ಕೃಷ್ಣ ಬೈರೇಗೌಡ ರೈತರೊಂದಿಗೆ ನೇರವಾಗಿ ಚರ್ಚೆ ನಡೆಸಿದರ ಜತೆಗೆ ಕೃಷಿಗೆ ಸಂಬಂಧಪಟ್ಟಂತೆ ಎದುರಾಗುತ್ತಿರುವ ಸಮಸ್ಯೆಗಳನ್ನು ತಿಳಿದುಕೊಂಡರು.
ಬಯಲು ಸೀಮೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಸಕಾಲದಲ್ಲಿ ಮಳೆ ಬಿದ್ದಿಲ್ಲ. ಇದರಿಂದ ಈ ಬಾರಿಯೂ ಕೃಷಿ ಚಟುವಟಿಕೆಗಳಲ್ಲಿ ಹಿನ್ನಡೆ ಎದುರಾಗಿದೆ. ಈ ನಡುವೆ ಅಂತರ್ಜಲ ಮಟ್ಟ ದಿನೇ ದಿನೇ ಪಾತಾಳಕ್ಕೆ ಕುಸಿದು ತಲೆನೋವಾಗಿ ಪರಿಣಿಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೃಷಿ ಸಚಿವರು ತಾಲೂಕಿನಲ್ಲಿ ಕ್ಷೇತ್ರ ಪ್ರವಾಸವನ್ನು ಕೈಗೊಂಡು ಕೃಷಿಯಲ್ಲಿನ ಪ್ರಗತಿಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದರು.
ಚಿಕ್ಕಬಳ್ಳಾಪುರದಿಂದ ಗೌರಿಬಿದನೂರು ಮಾರ್ಗವಾಗಿ ತಮ್ಮ ಕ್ಷೇತ್ರ ಪ್ರವಾಸವನ್ನು ಪ್ರಾರಂಭಿಸಿ, ಮೊದಲಿಗೆ ಶ್ರೀನಿವಾಸ ಸಾಗರಕ್ಕೆ ಭೇಟಿ ನೀಡಿದರು. ಅಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಜಲಾಶಯದಲ್ಲಿ ನೀರು ಭರ್ತಿಯಾಗಿರುವುದನ್ನು ವೀಕ್ಷಿಸಿ, ರೈತರೊಂದಿಗೆ ಕೆಲ ಸಮಯ ಮಾತುಕತೆ ನಡೆಸಿದರು.
ಅರಿವು ಮೂಡಿಸಬೇಕು: ಯರುಕುಲನಾಗೇನಹಳ್ಳಿ ಮಾತನಾಡಿದ ಸಚಿವರು, ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆಗಳಾಗುತ್ತಿವೆ. ಆಧುನಿಕ ತಂತ್ರಜ್ಞಾನದ ಮೂಲಕ ಹೆಚ್ಚು ಇಳುವರಿಯನ್ನು ಪಡೆದುಕೊಳ್ಳುವುದಲ್ಲದೇ ಎದುರಾಗುವ ಸಮಸ್ಯೆಗಳನ್ನು ನಿಯಂತ್ರಿಸಬಹುದು. ಆದರೆ, ರೈತರಿಗೆ ವಿನೂತನ ಪದ್ಧತಿ, ತಂತ್ರಜ್ಞಾನದ ಪರಿಚಯವಾಗುತ್ತಿಲ್ಲ. ಬಹಳಷ್ಟು ಮಂದಿ ರೈತರು ತಿಳಿವಳಿಕೆಯ ಕೊರತೆಯಿಂದ ಸಾಕಷ್ಟು ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿಗಳು 15 ದಿನಗಳಿಗೊಮ್ಮೆ ನಿಗದಿತ ಪ್ರದೇಶಕ್ಕೆ ಭೇಟಿ ನೀಡಿ ಪ್ರಾತ್ಯಕ್ಷಿತೆ ಮೂಲಕ ರೈತರಲ್ಲಿ ಅರಿವು ಮೂಡಿಸಬೇಕು. ತಂತ್ರಜ್ಞಾನದ ಬಗ್ಗೆ ಪರಿಚಯ ಮಾಡಿಕೊಡಬೇಕು ಎಂದು ಕೃಷಿ ಸಚಿವರು ತಿಳಿಸಿದರು.
ಕರೆಂಟು ಕೊಟ್ಟರಷ್ಟೇ: ನೀರಾವರಿ ಸಮಸ್ಯೆಯಿಂದ ತೊಂದರೆಯನ್ನು ಅನುಭವಿಸುವಂತಾಗಿದೆ. ಈ ಮಧ್ಯೆ ಸಮರ್ಪಕವಾಗಿ ವಿದ್ಯುತ್ ಸರಬರಾಜಾಗುತ್ತಿಲ್ಲ. ಕರೆಂಟ್ ಇಲ್ಲದೆ ಕೊಳವೆ ಬಾವಿಯಿಂದ ನೀರನ್ನು ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಹೋಗಿದೆ. ಹಿಂದೆ 600 ಅಡಿಗೆ ನೀರು ಸಿಗುತ್ತಿದ್ದದ್ದು, ಈಗ 1500 ಅಡಿ ಕೊಳವೆ ಬಾವಿ ಕೊರೆದರೂ ಸಹ ಸಿಗುತ್ತಿಲ್ಲ. ಇನ್ನೂ ಕರೆಂಟು ಕೊಟ್ಟರೆ ಇರೋ ನೀರೆಲ್ಲಾ ಬಗೆದುಬಿಡುತ್ತೀರಿ, ಆಗ ಇನ್ನೂ ಹೆಚ್ಚಿಗೆ ಅಂತರ್ಜಲ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಸಮಜಾಯಿಷಿ ನೀಡಿದರು.
ಬೇರೆಯವರು ಬರಬೇಕಾ?: ಬಾಲಕುಂಟಹಳ್ಳಿಯಲ್ಲಿ ಅಕ್ರಮ ಮರಳು ಗಣಿಗಾರಿಕೆಯ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು. ರಾತ್ರಿಯಾಯಿತೆಂದರೆ 15-20 ಟ್ರ್ಯಾಕ್ಟರುಗಳಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜನ ಆರೋಪಿಸಿದರು.
ನಿಮ್ಮ ಊರಿನ ಮರಳನ್ನು ಕಳವು ಮಾಡುತ್ತಿದ್ದರೆ ಬೇರೆಯವರು ಬಂದು ಉಳಿಸಬೇಕಾ ನೀವು ಆ ಕೆಲಸವನ್ನು ಮಾಡಬೇಕು. ಬೆಳಗ್ಗೆ ದೂರು ಕೊಡುವುದು. ಆ ಮೇಲೆ ಸುಮ್ಮನಾಗುವುದು. ಕೆಲವೆಡೆ ರೈತರೇ ಮರಳು ಗಣಿಗಾರಿಕೆಗೆ ಬೆಂಬಲ ಕೊಡುತ್ತಿದ್ದಾರೆ. ಇನ್ನೂ ಎಲ್ಲಿ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದು ಸಚಿವರು ರೈತರನ್ನೇ ಪ್ರಶ್ನಿಸಿದರು. ವಿಧಾನಸಭೆಯ ಉಪ ಸಭಾಪತಿ ಎನ್.ಎಚ್. ಶಿವಶಂಕರರೆಡ್ಡಿ, ಜಿಪಂ ಅಧ್ಯಕ್ಷ ಚಿನ್ನಪ್ಪ, ಮಾಜಿ ಅಧ್ಯಕ್ಷ ಎಂ.ವಿ. ಕೃಷ್ಣಪ್ಪ, ಸದಸ್ಯ ಕೇಶವರೆಡ್ಡಿ, ಕೃಷಿ ವಿಜ್ಞಾನಿಗಳು ಉಪಸ್ಥಿತರಿದ್ದರು.
ಯೋಜನೆ ಯಶಸ್ಸಿಗೆ ಅಧಿಕಾರಗಳ ಪಾತ್ರ ದೊಡ್ಡದು
ಚಿಕ್ಕಬಳ್ಳಾಪುರ: ಸರ್ಕಾರ ಯಾವುದೇ ಯೋಜನೆಯಾಗಲೀ ಜನರನ್ನು ತಲುಪಲು ಅಧಿಕಾರಿಗಳ ಪಾತ್ರ ದೊಡ್ಡದು. ಇದನ್ನರಿತು ಅಧಿಕಾರಿಗಳು ಸಕಾಲದಲ್ಲಿ ಫಲಾನುಭವಿಗಳಿಗೆ ಸವಲತ್ತು ಒದಗಿಸಿ, ಯೋಜನೆ ಯಶಸ್ವಿಗೊಳಿಸಬೇಕೆಂದು ರಾಜ್ಯ ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಬುಧವಾರದಂದು ಜಿಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ ಒಟ್ಟು 153.9 ಮಿ.ಮೀ.ನಷ್ಟು ಮಳೆಯಾಗಿದ್ದು, ವಾಸ್ತವಿಕ ಮಳೆ 175.4 ಮಿ.ಮೀ. ನಷ್ಟಾಗಬೇಕಿತ್ತು. ಜಿಲ್ಲೆಯು ಮಳೆ ಕೊರತೆಯನ್ನು ಎದುರಿಸುತ್ತಿದೆ. ಕೃಷಿ ಬೆಳೆಗಳು 23,748 ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ. ಜುಲೈ ಮತ್ತು ಆಗಸ್ಟ್ ಮಾಹೆಯಲ್ಲಿ ಕ್ರಮವಾಗಿ ಶೇ.20 ಮತ್ತು ಶೇ.54ರಷ್ಟು ಮಳೆ ಕೊರತೆಯಿಂದಾಗಿ ರಾಗಿ, ಮುಸುಕಿನ ಜೋಳ, ತೊಗರಿ, ನೆಲಗಡಲೆ ಬೆಳೆಗಳು ಒಟ್ಟು ಶೇ.50ಕ್ಕಿಂತ ಹೆಚ್ಚು ಹಾನಿಗೊಳಗಾಗಿದ್ದು, ಸೆಪ್ಟೆಂಬರ್ ಮಾಹೆಯಿಂದ ಬಿದ್ದ ಮಳೆಯಿಂದ ಬೆಳೆಗಳು ಚೇತರಿಕೆಯಾದರೂ ನಷ್ಟದ ಪ್ರಮಾಣ ಹಾಗೆ ಉಳಿದಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದರು.
ಜಿಲ್ಲಯಲ್ಲಿ ಬಿತ್ತನೆ ಬೀಜ, ರಸಗೊಬ್ಬರಗಳಿಗೆ ಕೊರತೆ ಇರುವುದಿಲ್ಲ. ಆದರೆ ಯೂರಿಯಾ ಕೊರತೆ ಉಂಟಾಗಿದ್ದು, ಸಿಐಎಲ್ ಮತ್ತು ಐಎಫ್ಎಸಿಒ ಸಂಸ್ಥೆಯಿಂದ 1940 ಮೆಟ್ರಿಕ್ ಟನ್ ಯುರಿಯಾ ಸರಬರಾಜಾಗುತ್ತಿದೆ. ಆದರೂ ಅಕ್ಟೋಬರ್ ವೇಳೆಗೆ ಸುಮಾರು 4 ಸಾವಿರದಿಂದ 5 ಸಾವಿರ ಮೆಟ್ರಿಕ್ ಟನ್ ಯುರಿಯಾ ರಸಗೊಬ್ಬರದ ಅವಶ್ಯಕತೆ ಇದೆ ಎಂದು ಅಧಿಕಾರಿಗಳು ತಿಳಿಸಿದರು.
ಕೃಷಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಜಲಾನಯನ ಇಲಾಖೆಯು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಚೆಕ್ ಡ್ಯಾಂ ಹಾಗೂ ನಾಲೆಗಳ ನಿರ್ಮಾಣದಲ್ಲಿ ಲೋಪ ದೋಷಗಳು ಕಾಣುತ್ತಿವೆ. ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕೆಂದು ಎಚ್ಚರಿಕೆ ನೀಡಿದರು.
ಕೋಲಾರ ಹಾಗೂ ಚಿಕ್ಕಬಳ್ಳಾಪುರದ ರೈತರು ಬೇರೆ ಜಿಲ್ಲೆಗಳಿಗಿಂತ ಹಿಂದೆ ಉಳಿದಿದ್ದಾರೆ. ಆದರೆ ಕೆಲ ವರ್ಷಗಳ ಹಿಂದೆ ಈ ಜಿಲ್ಲೆಗಳು ಕೃಷಿ ಚಟುವಟಿಕೆಗಳಲ್ಲಿ ಮುಂದಿತ್ತು ಎಂದ ಅವರು, ಭೂಚೇತನ ಅನುಷ್ಠಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಅಕ್ರಮ ಮರಳು ಸಾಗಾಣಿಕೆಯಿಂದ ಕೆಲವು ತಾಲೂಕುಗಳಲ್ಲಿ ಕೃಷಿ ಚಟುವಟಿಕೆಗಳು ಕುಂಠಿತವಾಗಿದೆ. ಪೊಲೀಸ್ ಹಾಗೂ ಕಂದಾಯ ಇಲಾಖೆಯವರು ಈ ಬಗ್ಗೆ ಎಚ್ಚರ ವಹಿಸಬೇಕು ಎಂದ ಅವರು, ಪ್ರತಿ ರೈತ ಸಂಪರ್ಕ ಕೇಂದ್ರಕ್ಕೆ ಒಬ್ಬ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಸರ್ಕಾರ ಅನುಮೋದನೆ ನೀಡಿದೆ. ಅಲ್ಲದೇ 2 ವಾರಕ್ಕೆ ಒಮ್ಮೆ ಒಬ್ಬ ವಿಜ್ಞಾನಿಯನ್ನು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಲು ಸೂಚಿಸಲಾಗಿದೆ ಎಂದರು.
ಕಳೆದ ವರ್ಷ ಕೃಷಿ ಇಲಾಖೆಗೆ ಬಜೆಟ್ನಲ್ಲಿ 2 ಸಾವಿರ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಆದರೆ ಅದರಲ್ಲಿ 1 ಸಾವಿರ ಕೋಟಿ ರೂ ಮಾತ್ರ ಖರ್ಚಾಗಿದೆ. ಯೋಜನೆಗಳು ಆರ್ಥಿಕವಾಗಿಯೂ ಜನರಿಗೆ ತಲುಪಿಸಬೇಕು. ಜಿಲ್ಲೆಯಲಿ ರಾಗಿ, ನೆಲೆಗಡಲೆ, ಮುಸುಕಿನ ಜೋಳ, ಅವರೆ ಮುಂತಾದ ಬೆಳೆಗಳು ಪ್ರಮುಖವಾಗಿದ್ದು, ರೈತರಿಗೆ ಈ ಬೆಳೆಗಳನ್ನು ಬೆಳೆಯಲು ಅಧಿಕಾರಿಗಳು ಪ್ರೋತ್ಸಾಹಿಸಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

