ಕೋಲಾರ

ಜೈಲು ಸೇರಿದ ಕೊಲೆ ಆರೋಪಿ

Published On :

ಕೋಲಾರ: ಹೆಂಡತಿ ಮತ್ತು ಮಗಳ ಸಾವಿನ ಪ್ರಕರಣದಲ್ಲಿ ಕೊಲೆ ಆರೋಪ ಹೊತ್ತಿರುವ ಸಂತೋಷ್‌ಕುಮಾರ್ ಅವರಿಗೆ ಜಿಲ್ಲಾ ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕೊಲೆ ಆರೋಪ ಹೊತ್ತಿರುವ ಸಂತೋಷ್‌ಕುಮಾರ್‌ನನ್ನು ಡಿವೈಎಸ್ಪಿ ಶ್ರೀಹರಿ ಬರಗೂರು ಹಾಗೂ ತಂಡ ಬುಧವಾರ ಬಂಧಿಸಿ ಕೋಲಾರಕ್ಕೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಿದ ನಂತರ ಗುರುವಾರ ಜಿಲ್ಲಾ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರು ಪಡಿಸಿದ್ದರು. ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಶಿಕ್ಷಕರು ಡಾ. ರಾಧಾಕೃಷ್ಣನ್ ತತ್ವ ಮೈಗೂಡಿಸಿಕೊಳ್ಳಲಿ: ಕೃಷ್ಣಾರೆಡ್ಡಿ
ಚಿಂತಾಮಣಿ: ಡಾ. ರಾಧಾಕೃಷ್ಣನ್ ಅವರ ತತ್ವ ಮೈಗೂಡಿಸಿಕೊಂಡು ಶಿಕ್ಷಕರು ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಸ್ಥಳೀಯ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಮನವಿ ಮಾಡಿದರು. ಪಟ್ಟಣದ ಕೆಎಂಡಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳಿಗೆ ಯೋಗ, ಸಂಗೀತ, ಕ್ರೀಡೆ, ದಿನಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳುವಂತೆ ಶಿಕ್ಷಕರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಹೆಚ್ಚು ಒತ್ತು ನೀಡಿ ಸಮಾಜದಲ್ಲಿ ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು. ವಿಧಾನಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕ ಉತ್ತಮ ಪ್ರಶಸ್ತಿ ಹಾಗೂ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಪ್ರಶಸ್ತಿ ವಿಜೇತರಾದ ಪ್ರಭಾವತಮ್ಮ,ದೇವರಾಜ್ ಶಿಕ್ಷಕರನ್ನು ಸನ್ಮಾನಿಸಲಾಯಿತು. ಉತ್ತಮ ಬಿಆರ್‌ಪಿ ಮಹದೇವರೆಡ್ಡಿ ಮತ್ತು ಕೈವಾರ ಸಿಆರ್‌ಪಿ ಶಿವಾರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ನಂತರ ಇತ್ತೀಚೆಗೆ ನಿವೃತ್ತಿ ಹೊಂದಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಶಿವಾರೆಡ್ಡಿ, ಚೌಡಪ್ಪ, ಮರಬಳ್ಳಿ ರಮೇಶ್, ರವಣಪ್ಪ, ಜಗದೀಶ್ವರರೆಡ್ಡಿ, ನಾರಾಯಣಪ್ಪ, ಆಂಜನಪ್ಪ ಇತರರು ಭಾಗವಹಿಸಿದ್ದರು.

ಸರ್ಕಾರಿ ಬಸ್ಸಿಗೆ ಕಲ್ಲು ತೂರಾಟ
ಕೋಲಾರ: ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಬಂದಿದ್ದ ನರಸಾಪುರದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ಸಂಜೆ ಊರಿಗೆ ಹೋಗಲು ಸರ್ಕಾರಿ ಬಸ್‌ನಿಲ್ದಾಣಕ್ಕೆ ಬಂದಿದ್ದ ಸಂದರ್ಭದಲ್ಲಿ ಬಸ್ಸಿನ ನಿರ್ವಾಹಕ ಕೇವಲ ವಿದ್ಯಾರ್ಥಿನಿಯರನ್ನು ಮಾತ್ರ ಬಸ್ಸಿಗೆ ಹತ್ತಿಸಿಕೊಂಡು ಹುಡುಗರನ್ನು ಬಸ್ಸಿಗೆ ಹತ್ತಿಸಿಕೊಳ್ಳಲು ನಿರಾಕರಿಸಿದ್ದರಿಂದ ಕುಪಿತರಾದ ವಿದ್ಯಾರ್ಥಿಗಳು ಬಸ್ಸಿಗೆ ಕಲ್ಲು ತೂರಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಮುಳಬಾಗಲು ಡಿಪೋಗೆ ಸೇರಿದ ಸದರಿ ಬಸ್ ಕೋಲಾರದಿಂದ ವಯಾ ನರಸಾಪುರ ಮಾರ್ಗವಾಗಿ ಬೆಂಗಳೂರಿಗೆ ಹೋಗಬೇಕಾದ ಬಸ್‌ನಲ್ಲಿ  ಹತ್ತಲು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮುಂದಾಗಿದ್ದಾರೆ. ವಿದ್ಯಾರ್ಥಿನಿಯರು ಮೊದಲು ಹತ್ತಿದ್ದು, ಹುಡುಗರು ಬಸ್ ಹತ್ತುತ್ತಿದ್ದಂತೆ ನಿರ್ವಾಹಕ ವಿದ್ಯಾರ್ಥಿಗಳ ಕತ್ತು ಹಿಡಿದು ಬಸ್ಸಿನಿಂದ ಕೆಳಕ್ಕೆ ತಳ್ಳಿದ್ದರಿಂದ ವಿದ್ಯಾರ್ಥಿಗಳು ಕುಪಿತರಾಗಿ ಬಸ್ಸಿಗೆ ಕಲ್ಲು ಎಸೆದಿರುವುದರಿಂದ ಬಸ್ಸಿನ ಹಿಂಭಾಗ ಖಜಂಗೊಂಡಿತು. ಬಸ್‌ನಿಲ್ದಾಣದಲ್ಲಿದ್ದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಸ್ಥಿತಿ ನಿಯಂತ್ರಿಸಿದರಲ್ಲದೆ ಕಲ್ಲು ತೂರಾಡಿದ ವಿದ್ಯಾರ್ಥಿಗಳನ್ನು  ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಪಡಿತರ ಸೀಮೆಎಣ್ಣೆ ಅಕ್ರಮ ಸಾಗಾಟ: ಒಬ್ಬನ ಬಂಧನ
ಚಿಂತಾಮಣಿ: ಪಡಿತರ ಚೀಟಿದಾರರಿಗೆ ವಿತರಿಸುವ ಸರ್ಕಾರಿ ಸೀಮೆಎಣ್ಣೆಯನ್ನು ಅಕ್ರಮವಾಗಿ ಟೆಂಪೋ ಒಂದರಲ್ಲಿ ಹಾಡಹಗಲೇ ಸಾಗಿಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 10 ಬ್ಯಾರರ್ ಸೀಮೆ ಎಣ್ಣೆ ವಾಹನ ಸಮೇತ ಚಾಲಕನನ್ನು ಬಂಧಿಸಿರುವ ಘಟನೆ ಪಟ್ಟಣದಲ್ಲಿ ಗುರುವಾರ ಬೆಳೆಗ್ಗೆ ನಡೆದಿದೆ.
ಪಟ್ಟಣದ ಯೋಗಿ ನಾರಾಯಣ ವೃತ್ತದ ಬಳಿ(ಪೆಟ್ರೋಲ್ ಬಂಕ್ ಹತ್ತಿರ) ಸೊಣ್ಣಶೆಟ್ಟಹಳ್ಳಿ ನಿವಾಸಿ ನೂರ್‌ಪಾಷ ಎಂಬ ಚಾಲಕ ಖಾಸಗಿ 407 ಟೆಂಪೋದಲ್ಲಿ ಅಕ್ರಮವಾಗಿ ಸಾರ್ವಜನಿಕರ ಪಡಿತರ ಚೀಟಿದಾರರಿಗೆ ವಿತರಿಸುವ ಸರ್ಕಾರಿ ಸೀಮೆಎಣ್ಣೆಯನ್ನು 10 ಬ್ಯಾರೆಲ್ ಸೇರಿ ವಾಹನ ಸಮೇತ ಪೊಲೀಸರು ಚಾಲಕನನ್ನು ಬಂಧಿಸಿ ಸಾವಿರಾರು ರು. ಬೆಲೆ ಬಾಳುವ ಸೀಮೆ ಎಣ್ಣೆಯನ್ನು ಪೊಲೀಸರು ವಶಪಡಿಸಿಕೊಂಡು ವಿಚಾರಣೆಯನ್ನು ನಗರ ವೃತ್ತ ನಿರೀಕ್ಷಕ ನಂಜಪ್ಪ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೇಸ್ ದಾಖಲಿಸಿಕೊಂಡು ವಿಚಾರಣೆ ಮುಂದುವರೆಸಿದ್ದಾರೆ.
ಸಾರ್ವಜನಿಕರ ಆಕ್ರೋಶ: ಪಟ್ಟಣದ ಗುರುಭವನ ಮುಂಬಾಗದ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಸಾರ್ವಜನಿಕರಿಗೆ ವಿತರಿಸುವ ನೀಲಿ ಸೀಮೆಎಣ್ಣೆ 2200 ಲೀಟರ್(10 ಬ್ಯಾರಲ್‌ನಷ್ಟು ಮಾಲು ಸಮೇತ ಅಕ್ರಮವಾಗಿ ಚಿಂತಾಮಣಿ ಪಟ್ಟಣದಿಂದ ಬೆಂಗಳೂರು ಮಾರ್ಗವಾಗಿ ಹೆಚ್.ಕ್ರಾಸ್‌ಗೆ ಪಟ್ಟಣದ ಸೊಣ್ಣಶೆಟ್ಟಹಳ್ಳಿ ಹಲವು ರಾಜಕೀಯ ಹಿಂಬಾಲಕರು ಮತ್ತು ಬಲಾಢ್ಯರು ಬಡ ಕುಟುಂಬಗಳಿಗೆ ವಿತರಿಸುವ ಸೀಮೆ ಎಣ್ಣೆಯನ್ನು ಕಾಳು ಸಂತೆಯಲ್ಲಿ ಪ್ರತಿ ಲೀಟರ್‌ಗೆ 50 ರು. ನಂತೆ ಮಾರಾಟ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮೌನವಾಗಿರುವ ಬಗ್ಗೆ ಇಂತಹ ಘಟನೆ ಉದಾಹರಣೆಯಾಗಿದೆಯೆಂದು ಸಾರ್ವಜನಿಕರು ಸ್ಥಳೀಯ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನೈತಿಕ ಸಂಬಂಧ: ವ್ಯಕ್ತಿ ಕೊಲೆ
ಮಧುಗಿರಿ: ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ  ಇಟ್ಟುಕೊಂಡಿದ್ದ  ವ್ಯಕ್ತಿಯನ್ನು ಆಕೆಯ ಸಹೋದರರು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ  ಘಟನೆ ಮಧುಗಿರಿ ತಾಲೂಕಿನ ಸಿಂಗರಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸರ್ದಾರ್ ಸಾಬ್ (45) ಕೊಲೆಯಾದ ವ್ಯಕ್ತಿ, ಈತ ಅದೇ ಗ್ರಾಮದ ಪಾರ್ವತಿ ಎಂಬಾಕೆ ಜತೆ  ಅನೈತಿಕ ಸಂಬಂಧ ಹೊಂದಿದ್ದ.  ಪಾರ್ವತಿ  ಸಹೋದರರು ಮಂಜುನಾಥ್, ಆನಂದ್ ಸೇರಿಕೊಂಡು  ವ್ಯಾಪಾರ ಮುಗಿಸಿಕೊಂಡು ಬರುತ್ತಿದ್ದ ಸರ್ದಾರ್ ಸಾಬನನ್ನು  ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.