ಕೋಲಾರ

ಖುಷ್ಕಿ ಬೆಳೆಗಾರರಿಗೆ ಖುಷಿ ತಂದ ಮಳೆ

Published On :

-ವಿ.ಡಿ.ಗಣೇಶ್
ಗೌರಿಬಿದನೂರು: ಮುಂಗಾರಿನಲ್ಲಿ ಬಿದ್ದ ಅಲ್ಪ- ಸ್ವಲ್ಪ ಮಳೆಗೆ ಬಿತ್ತನೆ ಮಾಡಿದ್ದ ಈ ತಾಲೂಕಿನ ರೈತರು ಸಕಾಲಕ್ಕೆ ಉಳಿಕೆ ಮಳೆ ಬೀಳದೆ ಹತಾಶರಾಗುವಷ್ಟರಲ್ಲಿಯೇ ವರುಣ ಕೃಪೆ ತೋರಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕಳೆದ ನಾಲ್ಕು ವರ್ಷದಿಂದ ಸರಿಯಾದ ಮಳೆ ಬಾರದೇ ರೈತರು ಖುಷ್ಕಿ ಮಳೆಯಾಧಾರಿತ ಬೆಳೆಗಳಲ್ಲಿ ಪ್ರಧಾನವಾದ ಶೇಂಗಾವನ್ನು ಕೆಲವು ರೈತರು ಮಾತ್ರ ಬಿತ್ತನೆ ಮಾಡಿದ್ದರೆ, ತಾಲೂಕಿನ ಹೆಚ್ಚು ಮಂದಿ ರೈತರು ಮೆಕ್ಕೆ ಜೋಳದ ಬಿತ್ತನೆಗೆ ಒಗ್ಗಿ ಹೋಗಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಈ ಬೆಳೆ ಸ್ವಲ್ಪ ಮಳೆಗೆ ಹೆಚ್ಚು ಖರ್ಚಿಲ್ಲದೆ ಬೆಳೆಯಬಹುದಾಗಿದೆ.
ನೆಲದಲ್ಲಿ ತೇವಾಂಶ ಕಡಿಮೆ ಇದ್ದರೂ ಬೆಳೆಯುತ್ತದೆ. ಮುಂದಿನ ದಿನಗಳಲ್ಲಿ ಮೂರು ಅಥವಾ ನಾಲ್ಕು ಸಲ ಮಳೆಯಾದರೆ ಬೆಳೆ ಸುಮಾರು ಶೇ. 80ರಷ್ಟು ರೈತರಿಗೆ ಸಿಗಲಿದೆ.
ಈ ವರ್ಷದ ಮಳೆ ವಿವರ:  ತಾಲೂಕಿನಲ್ಲಿ ವಾಡಿಕೆ ಮಳೆ 633.3 ಮಿಮೀ. ಕಳೆದ ಬಾರಿ 563.30 ಮಿಮೀ ಮಳೆ ಬಿದ್ದಿದೆ. ಈ ಸಾಲಿನಲ್ಲಿ ಮೇ ತಿಂಗಳಲ್ಲಿ 254.78 ಮಿಮೀ, ಜೂನ್‌ನಲ್ಲಿ 351.7 ಮಿಮೀ, ಜುಲೈನಲ್ಲಿ 535.22 ಮಿಮೀ, ಆಗಸ್ಟ್‌ನಲ್ಲಿ 396.7 ಮಿಮೀ ಮಳೆ ಆಗಿದ್ದು, ಈ ತನಕ 1355.04 ಮಿಮೀ ಮಳೆ ದಾಖಲಾಗಿದೆ.
ಸರಾಸರಿ 193.6 ಮಿಮೀ ಮಳೆ ದಾಖಲಾಗಿದೆ. ಇಷ್ಟು ಮಳೆ ಬಿದ್ದಿದ್ದರೂ ತಾಲೂಕಿನ ಜನರ ಜೀವಾಳವಾಗಿರುವ ಉತ್ತರ ಪಿನಾಕಿನಿ ಹರಿಯಲಿಲ್ಲ. ಕೆರೆ ತುಂಬಲೂ ಸಾಧ್ಯವಾಗಿಲ್ಲ. ನದಿ ಹರಿದು ಕೆರೆ- ಕುಂಟೆಗಳು ತುಂಬಿದರೆ ಕೊಳವೆ ಬಾವಿಗಳಲ್ಲಿ ಜಲ ಮರುಪೂರಣವಾಗುತ್ತದೆ ಎಂಬುದು ಈ ಭಾಗದ ರೈತರ ನಿರೀಕ್ಷೆಯಾಗಿದೆಯಾದರೂ ಹೆಚ್ಚಿನ ಮಳೆಯಾಗುತ್ತಿಲ್ಲ.
ಬೆಳೆ ವಿವರ: ಮಳೆಯಾಧಾರಿತ ಖುಷ್ಕಿ ಭೂಮಿಗಳಲ್ಲಿ 20,130ಹೆಕ್ಟೆರ್‌ಗಳಲ್ಲಿ ಮೆಕ್ಕೆ ಜೋಳ, ತರಿ ಭೂಮಿಯಲ್ಲಿ 4535ಹೆಕ್ಟೆರ್‌ಗಳಲ್ಲಿ ಬಿತ್ತನೆ ಮಾಡಲಾಗಿದೆ. ರಾಗಿ ಖುಷ್ಕಿ ಭೂಮಿಯಲ್ಲಿ 2705 ಹೆಕ್ಟೆರ್‌ನಲ್ಲಿ ತರಿ ಭೂಮಿಯಲ್ಲಿ 415 ಹೆಕ್ಟೆರ್ ಬಿತ್ತನೆ ಮಾಡಲಾಗಿದೆ. ಏಕದಳ ಧಾನ್ಯಗಳು ತರಿ ಜಮೀನಿನಲ್ಲಿ 5150, ಖುಷ್ಕಿ ಜಮೀನಿನಲ್ಲಿ 22,895 ಹೆಕ್ಟೆಕ್‌ನಲ್ಲಿ, ದ್ವಿದಳ ಧಾನ್ಯಗಳು 100 ಹೆಕ್ಟೇರ್, ಖುಷ್ಕಿ ಜಮೀನಿನಲ್ಲಿ 1395 ಹೆಕ್ಟೆರ್‌ನಲ್ಲಿ  ಬಿತ್ತನೆ ಮಾಡಲಾಗಿದೆ. ಎಣ್ಣೆಕಾಳು 750 ಹೆಕ್ಟೇರ್‌ನಲ್ಲಿ, ವಾಣಿಜ್ಯ ಬೆಳೆಗಳಾದ ಕಬ್ಬು ತರಿ ಭೂಮಿಯಲ್ಲಿ 44 ಹೆಕ್ಟೇರ್, ಹತ್ತಿಯನ್ನು 25 ಹೆಕ್ಟೆರ್‌ನಲ್ಲಿ ಬೆಳೆಯಲಾಗುತ್ತಿದೆ.
ಬೆಳವಣಿಗೆ: ಜುಲೈ ಮೊದಲ ವಾರದವರೆಗೆ ಮಳೆ ಇಲ್ಲದೇ ಒಣುಗುತ್ತಿದ್ದ ಬೆಳೆಗಳಿಗೆ ಇತ್ತೀಚೆಗೆ ಬಿದ್ದ ಮಳೆಯಿಂದ ಚೈತನ್ಯ ನೀಡಿದ್ದು, ಬತ್ತ ನಾಟಿ ಮಾಡುವ ಹಂತದಿಂದ ತೆನೆ ಬಿಡುವ ಹಂತಕ್ಕೆ ತಲುಪಿದೆ. ರಾಗಿ ಬೆಳವಣಿಗೆ ಹಂತದಿಂದ ತೆನೆ ಬಿಡುವ ಹಂತ, ನೀರಾವರಿಯ ಮುಸುಕಿನ ಜೋಳ ಬೆಳವಣಿಗೆ ಹಂತದಿಂದ ತೆನೆ ಬಿಡುವ ಹಂತ ತಲುಪಿದೆ. ಖುಷ್ಕಿ ಜಮೀನಿನಲ್ಲಿ ಬಿತ್ತಿದ ಮುಸುಕಿನ ಜೋಳ ಇದೇ ಹಂತದಲ್ಲಿದೆ. ತೊಗರಿ ಅಂತರ ಬೇಸಾಯ ಹಾಗೂ ಬೆಳವಣಿಗೆ ಹಂತದಲ್ಲಿದೆ. ನೆಲಗಡಲೆ ಹೂ ಬಿಡುವ ಹಂತದಿಂದ ಹೀಚು ಬಿಡುವ ಹಂತದಲ್ಲಿದ್ದು, ಪ್ರಮುಖವಾದ ಕೀಟ ಹಾಗೂ ರೋಗ ಬಾಧೆ ಕಂಡುಬಂದಿಲ್ಲವಾದರೂ ಯಾವುದೇ ಕ್ಷಣದಲ್ಲಿ ರೋಗಬಾಧೆ ತಗಲಬಹುದಾಗಿದ್ದು, ಇದಕ್ಕೆ ಸೂಕ್ತ ಔಷಧೋಪಚಾರಕ್ಕೆ ಸಿದ್ದರಿರಬೇಕಿದ್ದು, ಯೂರಿಯಾ ಪೂರೈಕೆಯಲ್ಲಿ ತೊಂದರೆ ಹೆಚ್ಚಾಗಿದ್ದು, ಕಾಳಸಂತೆಯಲ್ಲಿ ಮಾರಾಟ ರಾಜರೋಷವಾಗಿಯೇ ನಡೆಯುತ್ತಿದೆ. ವಿದ್ಯುತ್ ಅಭಾವ ರೈತರನ್ನು ಕಾಡುತ್ತಿದೆ.
ರಸಗೊಬ್ಬರ ವಿವರ: ಈಸಾಲಿನಲ್ಲಿ ರಸಗೊಬ್ಬರ ಏಪ್ರಿಲ್ 1ರಿಂದ ಆಗಸ್ಟ್ ಅಂತ್ಯದವರೆಗೆ ಖಸಗಿ ಮಾರಾಟಗಾರರು ಹಾಗೂ ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ಯೂರಿಯಾ 4229 ಟನ್ ಸರಬರಾಜಾಗಿದ್ದು, 4105 ಟನ್  ವಿತರಿಸಲಾಗಿದೆ. 124 ಟನ್ ಉಳಿದಿದೆ. ಡಿಎಪಿ 818 ಟನ್ ಸರಬರಾಜಾ ಗಿದ್ದು, 696 ಟನ್ ವಿತರಿಸಲಾಗಿದೆ. ಎಂಬಿಪಿ 384 ಟನ್‌ನಲ್ಲಿ 309 ಟನ್ ವಿತರಿಸಲಾಗಿದೆ. ಎಸ್‌ಎಸ್ಪಿ 90 ಟನ್ ಸರಬರಾಜಾಗಿದ್ದು, 10 ಟನ್ ವಿರಿಸಲಾಗಿದೆ. ಕಾಂಪ್ಲೆಕ್ಸ್ 4434 ಟನ್ ಸರಬರಾಜಾಗಿದ್ದು, 3778 ಟನ್ ವಿತರಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.