ಕೋಲಾರ

ವಿವಿಧ ಬೇಡಿಕೆಗೆ ಸಂಘಟನೆಗಳ ಪ್ರತಿಭಟನೆ

Published On :

ಬಂಗಾರಪೇಟೆ: ಶುಕ್ರವಾರ ಒಂದೇ ದಿನ ಪಟ್ಟಣದಲ್ಲಿ ವಿವಿಧ ಸಂಘ ಸಂಸ್ಥೆಗಳು ಪ್ರತ್ಯೇಕವಾಗಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಮಾಡಿದವು.
ನವಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ, ರೈತ ಸಂಘದ ಕಾರ್ಯಕರ್ತರು ಜಂಟಿಯಾಗಿ ಪುರಸಭೆ ಕನ್ನಡ ಶಾಲೆಗಾಗಿ ಮಂಜೂರಾಗಿದ್ದ ನಿವೇಶನವನ್ನು ಪ್ರಭಾವಿಗಳ ಒತ್ತಡಕ್ಕೆ ಮಣಿದು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿರುವುದನ್ನು ವಿರೋಧಿಸಿ ಪ್ರಗತಿ ಪರ ಸಂಘಟನೆಗಳು ಪುರಸಭೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದವು.
ಪಟ್ಟಣದ ಸೇಠ್ ಕಾಂಪೌಂಡ್ ಬಡಾವಣೆಯಲ್ಲಿರುವ ಕನ್ನಡ ಶಾಲೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಹಾಗೂ ಕಟ್ಟಡ ಸಹ ಖಾಸಗಿಯಾಗಿದ್ದರಿಂದ ಈ ಹಿಂದೆ ಒಬ್ಬಟ್ಟು ಕೆರೆಯಲ್ಲಿ ಪುರಸಭೆಯಿಂದ ನಿವೇಶ ನೀಡಲಾಗಿತ್ತು. ಆ ಸ್ಥಳದಲ್ಲಿ ಶಾಲೆ ಕಟ್ಟಡ ನಿರ್ಮಾಣ ಕಾರ್ಯ ವಿಳಂಬವಾಗಿದ್ದರಿಂದ ಪುರಸಭೆ ಮತ್ತೆ ಗುಪ್ತವಾಗಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದೆ. ಈಗ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾರ್ಯನಡೆಯುತ್ತಿದ್ದರೂ ಬಿಇಒ ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯವಹಿಸಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು. ಕೂಡಲೆ ಕನ್ನಡ ಶಾಲೆಗೆ ಮಂಜೂರಾಗಿರುವ ಜಾಗವನ್ನು ಶಾಲೆಗೆ ಉಳಿಸುವ ದೃಷ್ಟಿಯಿಂದ ಕಾಮಗಾರಿಯನ್ನು ನಿಲ್ಲಿಸಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.
ಮತ್ತೊಂದೆಡೆ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಎಪಿಎಂಸಿ ಮಾರುಕಟ್ಟೆಯಲ್ಲಿ ಆಲೂಗಡ್ಡೆ ವ್ಯಾಪಾರಸ್ಥರು ರೈತರಿಗೆ ನೀಡುವ ಬಿತ್ತನೆ ಬೀಜದಲ್ಲಿ ಮೋಸ ಮಾಡುತ್ತಿದ್ದಾರೆ. 50 ಕೆಜಿ ತೂಕದ ಚೀಲದಲ್ಲಿ ಕೇವಲ 45 ಕೆಜಿ ಮಾತ್ರ ಇರುತ್ತದೆ. ಇದಲ್ಲದೆ ಒಂದೇ ಕಂಪನಿಯ ಬೀಜಗಳಿಗೆ ಒಬ್ಬೊಬ್ಬರಿಂದ ಒಂದೊಂದು ದರ ನಿಗದಿಪಡಿಸಿ ರೈತರನ್ನು ವಂಚಿಸುತ್ತಿದ್ದಾರೆ. ನಿರಂತರವಾಗಿ ಶೋಷಣೆಗೆ ಒಳಗಾಗುತ್ತಿರುವ ರೈತರ ರಕ್ಷಣೆಯನ್ನು ಎಪಿಎಂಸಿ ಅಧಿಕಾರಿಗಳು ಮಾಡಬೇಕು. ಇಲ್ಲದಿದ್ದರೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಅಧ್ಯಕ್ಷ ರಾಮೇಗೌಡರು ಅಧಿಕಾರಿಗಳಿಗೆ ಮನವಿ ಪತ್ರ ನೀಡಿದರು.
ಇದಲ್ಲದೆ ಸಿಐಟಿಯು ನೇತೃತ್ವದಲ್ಲಿ ತಾಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು, ತಮಗೆ ಸರ್ಕಾರದ ಆದೇಶ ಪ್ರಕಾರ ಯಾವುದೇ ಮೂಲ ಸೌಲಭ್ಯ ಕಲ್ಪಿಸದೆ ನಿರ್ಲಕ್ಷ್ಯವಹಿಸಲಾಗಿದೆ.  ಸಮಯಕ್ಕೆ ವೇತನ ನೀಡುವುದಿಲ್ಲ ಪ್ರಶ್ನಿಸಿದರೆ ದಬ್ಬಾಳಿಕೆ ಮಾಡಲಾಗುತ್ತಿದೆ. ಪ್ರತಿಯೊಂದಕ್ಕೂ ಲಂಚ ನೀಡಬೇಕು. ಈ ಬಗ್ಗೆ ಹಲವು ಬಾರಿ ಹೋರಾಟಗಳನ್ನು ಮಾಡಿದರೂ ಉಪಯೋಗವಾಗಿಲ್ಲ. ನಮಗೂ ಎಲ್ಲ ನೌಕರರಂತೆ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಮೆರವಣಿಗೆ ಮಾಡಿ ನಂತರ ತಾಪಂ ಕಚೇರಿ ಮುಂದೆ ಧರಣಿ ಮಾಡಿದರು.
ಪ್ರತಿಭಟನೆ ಮುಂದಾಳತ್ವವನ್ನು ನವ ಕರ್ನಾಟಕ ರಾಜ್ಯದ್ಯಕ್ಷ ರಾಜಗೋಪಾಲಗೌಡ, ಜಿಲ್ಲಾಧ್ಯಕ್ಷ ಚಿನ್ನಿವೆಂಕಟೇಶ್, ತಾಲೂಕು ಅಧ್ಯಕ್ಷ ಕೆ.ಸಿ. ಗೋಪಾಲ್, ರೈತ ಸಂಘದ ರಾಮೇಗೌಡ, ಅಬ್ಬಣಿ ಶಿವಪ್ಪ ಮತ್ತಿತರರು ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.