ಕೋಲಾರ

ಅಲೋಪತಿ ಜತೆ ಆಯುಷ್ ಪದ್ಧತಿ ಜಾರಿಯಾಗಲಿ

Published On :

ಕ.ಪ್ರ.ವಾರ್ತೆ ಕೋಲಾರ ಸೆ.20
ಚೀನಾ ದೇಶದ ಮಾದರಿಯಲ್ಲಿ ಭಾರತದಲ್ಲಿನ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಅಲೋಪತಿಯ ಶಿಕ್ಷಣದ ಜೊತೆಗೆ ಆಯುಷ್‌ಗೆ ಸಂಬಂಧಿಸಿದ ಚಿಕಿತ್ಸಾ ಪದ್ಧತಿಯನ್ನು ಜಾರಿಗೆ ತರಬೇಕೆಂದು ಬೆಂಗಳೂರಿನ ಎಸ್.ವ್ಯಾಸ ಯೋಗ ವಿಶ್ವ ವಿದ್ಯಾಲಯದ ಯೋಗ ಮತ್ತು ಜೀವ ವಿಜ್ಞಾನ ಶಾಸ್ತ್ರ ವಿಭಾಗದ ನಿವೃತ್ತ ಡೀನ್ ಡಾ. ನಾಗರತ್ನ ಒತ್ತಾಯಿಸಿದರು.
ನಗರದ ಟಮಕದಲ್ಲಿನ ಶ್ರೀ ದೇವರಾಜ ಅರಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಶ್ರೀ ದೇವರಾಜ ಅರಸ್ ವೈದ್ಯಕೀಯ ಕಾಲೇಜಿನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಮನ್ವಯ ಪರ್ಯಾಯ ಚಿಕಿತ್ಸಾ ಪದ್ಧತಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿ, ಅಲೋಪತಿ ಮತ್ತು ಆಯುಷ್ ಚಿಕಿತ್ಸಾ ಪದ್ಧತಿಯಲ್ಲಿ ಸಮನ್ವಯತೆ ಸಾಧಿಸಲು ಸರ್ಕಾರಗಳು ಹೆಚ್ಚಿನ ಒತ್ತು ನೀಡುವ ಮೂಲಕ ಜನತೆಯ ಆರೋಗ್ಯ ವೃದ್ಧಿಗೆ ಸಹಕಾರ ನೀಡಬೇಕಾಗಿದೆ ಎಂದರು.
ಆಯುರ್ವೇದ ಔಷಧಿ ಪದ್ಧತಿಗೆ 33 ಸಾವಿರ ವರ್ಷಗಳ ಇತಿಹಾಸವಿದೆ. ಇದರಿಂದ ಅನೇಕ ಕಾಯಿಲೆಗಳು ಗುಣಮುಖವಾಗುತ್ತಿವೆ. ಆದರೆ ಅಲೋಪತಿ ಮತ್ತು ಆಯುಷ್ ವೈದ್ಯರ ನಡುವೆ ಸಮನ್ವಯತೆಯ ಕೊರತೆ ಇರುವುದರಿಂದ ರೋಗಿಗಳು ಗೊಂದಲಕ್ಕೆ ಸಿಲುಕುವಂತಾಗಿದೆ ಎಂದು ಅಭಿಪ್ರಾಯಿಸಿದರು.
ಚೀನಾ ದೇಶದಲ್ಲಿ ಚೈನಾ ಮೆಡಿಸನ್ ಜೊತೆಗೆ ಕಡ್ಡಾಯವಾಗಿ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಅನುಷ್ಠಾನಕ್ಕೆ ತರಲಾಗಿರುವುದರಿಂದ ಜನತೆಗೆ ಅನುಕೂಲವಾಗಿದೆ. ಅದೇ ರೀತಿ ಭಾರತದಲ್ಲೂ ಸಮನ್ವಯತೆಯ ಮೂಲಕ ಪರ್ಯಾಯ ಚಿಕಿತ್ಸಾ ಪದ್ಧತಿ ಜಾರಿಗೆ ತಂದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಸುಲಭ ರೀತಿಯಲ್ಲಿ ಪರಿಹಾರ ಸಿಗುತ್ತದೆ ಎಂದರು.
ನಮ್ಮಲ್ಲಿ ಜಾರಿಯಲ್ಲಿ ಇರುವ ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಹಾಗೂ ಹೋಮಿಯೋಪತಿಗಳ ಚಿಕಿತ್ಸೆಯನ್ನು ಅಲೋಪತಿ ಪದ್ಧತಿಯ ಬಗ್ಗೆ ಶಿಕ್ಷಣ ನೀಡುವ ವೈದ್ಯಕೀಯ ಕಾಲೇಜುಗಳಲ್ಲೂ ಜಾರಿಗೆ ತಂದರೆ ವೈದ್ಯಕೀಯ ರಂಗದಲ್ಲಿ ಇರುವ ಅನುಮಾನ, ಗೊಂದಲ ನಿವಾರಣೆ ಆಗುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು.
ಶ್ರೀ ದೇವರಾಜ್ ಅರಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಆರ್.ಎಲ್. ಜಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪ ಕುಲಪತಿ ಡಾ. ಪ್ರೇಮನಾಥ್ ಎಫ್. ಕೊಟ್ಟೂರ್ ಪರ್ಯಾಯ ಚಿಕಿತ್ಸಾ ಪದ್ಧತಿ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಬಿ.ಸಾಣಿಕೊಪ್, ತಮಿಳುನಾಡಿನ ಕೊಯ್ಯಂಬತ್ತೂರಿನ ಎವಿಪಿ ಸಂಶೋಧನಾ ಸಂಸ್ಥೆಯ ಡಾ.ಪಿ.ರಾಮ್‌ಮನೋಹರ್, ಆರ್.ಎಲ್.ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ಆಧೀಕ್ಷಕ ಡಾ.ಪಿ.ಎನ್.ಶ್ರೀರಾಮುಲು, ವೈದ್ಯಕೀಯ ಕಾಲೇಜಿನ ಸಮನ್ವಯಾಧಿಕಾರಿ ಡಾ.ಎಂ.ಎಚ್. ಚಂದ್ರಪ್ಪ, ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ.ಎನ್.ಎಸ್.ಅನಿಲ್, ಕುಲಸಚಿವ ಡಾ.ಎ.ವಿ.ಎಂ. ಕುಟ್ಟಿ ಇದ್ದರು. ಮೆಡಿಸನ್ ವಿಭಾಗದ ಸಮನ್ವಯಾಧಿಕಾರಿ ಡಾ.ಸಿ. ಮುನಿನಾರಾಯಣ ವಂದಿಸಿದರು.

ಆಯುರ್ವೇದ ಔಷಧಿ ಪದ್ಧತಿಗೆ 33 ಸಾವಿರ ವರ್ಷಗಳ ಇತಿಹಾಸವಿದೆ. ಇದರಿಂದ ಅನೇಕ ಕಾಯಿಲೆಗಳು ಗುಣಮುಖವಾಗುತ್ತಿವೆ. ಆದರೆ ಅಲೋಪತಿ ಮತ್ತು ಆಯುಷ್ ವೈದ್ಯರ ನಡುವೆ ಸಮನ್ವಯತೆಯ ಕೊರತೆ ಇರುವುದರಿಂದ ರೋಗಿಗಳು ಗೊಂದಲಕ್ಕೆ ಸಿಲುಕುವಂತಾಗಿದೆ
- ಡಾ. ನಾಗರತ್ನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.