ಬೈಕ್ನಿಂದ ಆಯತಪ್ಪಿ ಬಿದ್ದು ಒಬ್ಬ ಸಾವು
ಗೌರಿಬಿದನೂರು: ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಆಯತಪ್ಪಿ ಕೆಳಕ್ಕೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೆ ಮೃತಪಟ್ಟ ಘಟನೆ ಪಟ್ಟಣಕ್ಕೆ 4 ಕಿ.ಮೀ. ಸಮೀಪದ ಚಿಕ್ಕಕುರುಗೋಡು ರೈಲ್ವೆ ಗೇಟ್ ಬಳಿ ಗುರುವಾರ ರಾತ್ರಿ 9.30ರಲ್ಲಿ ಸಂಭವಿಸಿದೆ. ಮೃತನನ್ನು ಶ್ರೀನಿವಾಸಬಾಬು(47) ಎನ್ನಲಾಗಿದ್ದು ಈತ ಹೊಸಕೋಟೆ ತಾಲೂಕಿನ ವಾಸಿಯಾಗಿದ್ದು ವಿದುರಾಶ್ವತ್ಥದ ತನ್ನ ಅಕ್ಕನ ಮನೆಗೆ ಬಂದಿದ್ದ ಎನ್ನಲಾಗಿದೆ. ಸ್ನೇಹಿತನೊಂದಿಗೆ ಹಿಂಬದಿಯಲ್ಲಿ ಕುಳಿತ್ತಿದ್ದು ರೈಲ್ವೆ ಗೇಟ್ ಬಳಿಯ ಹಂಪ್ ಮೇಲೆ ಬೈಕ್ ಎಗರಿದಾಗ ಹಿಂದಕ್ಕೆ ಬಿದ್ದ ಶ್ರೀನಿವಾಸ ಬಾಬುಗೆ ತಲೆಗೆ ತೀವ್ರ ಪೆಟ್ಟಾಗಿ ಕೆಲವು ನಿಮಿಷಗಳ ನಂತರ ಸಾವನ್ನಪ್ಪಿದ್ದಾನೆ. ಬೈಕ್ ಓಡಿಸುತ್ತಿದ್ದ ಸ್ನೇಹಿತ ಪರಾರಿಯಾಗಿದ್ದು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಮಗಾರಿಯಲ್ಲಿ ಅವ್ಯವಹಾರ: ಆರೋಪ
ಮಾಲೂರು: ತಾಲೂಕಿನ ಡಿ.ಎನ್. ದೊಡ್ಡಿ ಗ್ರಾಮದಲ್ಲಿ ಕೆರೆ ಬಳಕೆದಾರರ ಸಂಘವು ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಅವ್ಯವಹಾರ ನಡೆಸಿದೆ ಎಂದು ತಾಪಂ ಸದಸ್ಯೆ ಆಶಾ ರಾಜಪ್ಪ ಆರೋಪಿಸಿದ್ದಾರೆ. ಕೆರೆ ಅಭಿವೃದ್ಧಿ ಮಾಡುವುದಾಗಿ ತಮ್ಮ ಸುಪರ್ದಿಗೆ ತೆಗೆದುಕೊಂಡ ಕೆರೆ ಬಳೆಕೆದಾರರ ಸಂಘವು ಹಣ ಕಬಳಿಸಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ತಾಪಂ ಕಾರ್ಯನಿರ್ವಹಣಾಧಿಕಾರಿಯನ್ನು ಒತ್ತಾಯಿಸಿದ್ದಾರೆ. ತಾಪಂ ಸದಸ್ಯೆ ಆಶಾ ರಾಜಪ್ಪ ಜತೆಗೆ ನಿವಾಸಿಗಳಾದ ಬಿ.ರಾಜಪ್ಪ, ಎ.ಬಿ. ಶ್ರಿನಾಥ್, ವೆಂಕಟೇಶ್, ವಿ.ಎನ್.ರಾಜಪ್ಪ ಹಾಗೂ ಇತರರು ಮನವಿ ಪತ್ರದಲ್ಲಿ ಸಹಿ ಮಾಡಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರ
ಕೆಜಿಎಫ್: ಬಾಲಕಿ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯೊಬ್ಬನು ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆ ಬೆಮೆಲ್ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಿನ್ನಕೋಟೆ ಗ್ರಾಮದ ಶಿವಕುಮಾರ್(23) ಬಾಲಕಿ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿ. ಇದೀಗ ಬಾಲಕಿ ಎರಡು ತಿಂಗಳು ಗರ್ಭಿಣಿಯಾಗಿದ್ದು, ಆರೋಪಿ ಶಿವಕುಮಾರ್ ಮದುವೆಯಾಗುವುದಾಗಿ ನಂಬಿಸಿದ್ದ ಎನ್ನಲಾಗಿದೆ. ಕಳೆದ 2 ತಿಂಗಳಿಂದ ಆರೋಪಿ ನಾಪತ್ತೆಯಾಗಿದ್ದಾನೆ. ಬೆಮೆಲ್ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಜಾನುವಾರುಗಳ ಸಂತೆ ನಡೆಯದಂತೆ ಆದೇಶ
ಕೋಲಾರ: ಜಿಲ್ಲೆಯಲ್ಲಿ ಕಾಲು ಮತ್ತು ಬಾಯಿ ಜ್ವರ ಹಾಗೂ ಗಳಲೆ ರೋಗಗಳು ಜಾನುವಾರುಗಳಲ್ಲಿ ಕಾಣಿಸಿಕೊಂಡಿದ್ದು ಈ ರೋಗಗಳು ಸಾಂಕ್ರಾಮಿಕವಾಗಿರುವುದರಿಂದ ಇನ್ನೂ ಹೆಚ್ಚಿನ ಜಾನುವಾರುಗಳಿಗೆ ಹರಡುವ ಸಾಧ್ಯತೆಯಿರುವುದರಿಂದ ಕರ್ನಾಟಕ ಪ್ರಾಣಿ ರೋಗ ನಿಯಂತ್ರಣ ಕಾಯಿದೆ 1961 ಸೆಕ್ಷನ್ 20ರ ಅನ್ವಯ ಜಿಲ್ಲೆಯಲ್ಲಿನ ಎಲ್ಲಾ ಜಾನುವಾರು ಸಂತೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಇಂದು ಮಹಿಳಾ ಮಕ್ಕಳ ಅಭಿವೃದ್ಧಿ ಸಚಿವೆ ಭೇಟಿ
ಕೋಲಾರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ಅವರು ಸೆ.21 ರಂದು ಬೆಳಿಗ್ಗೆ 9 ಗಂಟೆಗೆ ಕೋಲಾರಕ್ಕೆ ಭೇಟಿ ನೀಡಲಿದ್ದಾರೆ. ಪ್ರವಾಸಿ ಮಂದಿರಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಭೇಟಿ ನಂತರ 10 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಮತ್ತು ಮಹಿಳಾ ಅಭಿವೃದ್ಧಿ ನಿಗಮದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಗತಿ ಪರಿಶೀಲನೆ ಮಾಡಿ ಸಂಜೆ ನಾಲ್ಕು ಗಂಟೆಗೆ ಕೋಲಾರದಿಂದ ಚೆನ್ನೈಗೆ ನಿರ್ಗಮಿಸಲಿದ್ದಾರೆ.
ಮೇಲ್ವಿಚಾರಕರ ಹುದ್ದೆಗೆ ಅರ್ಜಿ
ಕೋಲಾರ: ಮಾಲೂರು ತಾಲೂಕಿನ ಡಿ.ಎನ್. ದೊಡ್ಡಿ ಗ್ರಾಮ ಪಂಚಾಯತಿಯಲ್ಲಿ ಮೇಲ್ವಿಚಾರಕರ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿದ್ದು ಸಾಮಾನ್ಯ ಮಹಿಳಾ ಅಭ್ಯರ್ಥಿಗೆ ಮೀಸಲಿಡಲಾಗಿದೆ. ಹೆಚ್ಚಿನ ವಿವರಗಳನ್ನು ಕೋಲಾರದ ಮುಖ್ಯ ಗ್ರಂಥಾಲಯ ಅಧಿಕಾರಿಗಳ ಕಚೇರಿಯಲ್ಲಿ ಪಡೆಯಬಹುದು.
ಬಿಜಿಎಂಎಲ್ ಕಾರ್ಮಿಕರ ಸೌಲಭ್ಯ ಕುರಿತು ಸ್ಪಷ್ಟನೆ ನೀಡಲಿ: ಜಯಕುಮಾರ್
ಕೆಜಿಎಫ್: ಬಿಜಿಎಂಎಲ್ ಚಿನ್ನದ ಗಣಿಯ ಆಸ್ತಿಯನ್ನು ಟೆಂಡರ್ ಮೂಲಕ ಮಾರಾಟ ಮಾಡಲು ಹೊರಟಿರುವ ಕೇಂದ್ರ ಗಣಿ ಸಚಿವಾಲಯ ಮೊದಲು ಕಾರ್ಮಿಕರಿಗೆ ನೀಡಬೇಕಾದ ಶೇ. 100 ವಿಆರ್ಎಸ್ ಬಡ್ಡಿ ಹಣ 52 ಕೋಟಿ ಮತ್ತು 20 ಕೋಟಿ ಸರ್ವೀಸ್ ಗ್ರಾಚ್ಯುಟಿ ಹಣ ನೀಡುವ ಕುರಿತು ಸ್ಪಷ್ಟಪಡಿಸಲಿ ಎಂದು ಬಿಜಿಎಂಎಲ್ ಕಾರ್ಮಿಕ ಅಧಿಕಾರಿಗಳ ಒಕ್ಕೂಟ ಸಂಘದ ಅಧ್ಯಕ್ಷ ಜಿ.ಜಯಕುಮಾರ್ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2006ರಲ್ಲಿ ಕೇಂದ್ರ ಸಂಪುಟ ಬಿಜಿಎಂಎಲ್ ಕಾರ್ಖಾನೆ ಬಗ್ಗೆ ಕೈಗೊಂಡಿರುವ ತೀರ್ಮಾನವೇ ಸರಿಯಿಲ್ಲ. ಇದರಿಂದ ಕಾರ್ಮಿಕರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಲಿದೆ ಎಂದು ಆರೋಪಿಸಿದರು. ಗ್ಲೋಬಲ್ ಟೆಂಡರ್ನಲ್ಲಿ ಭಾಗವಹಿಸುವ ಕಂಪನಿಗಳು ಅತಿ ಹೆಚ್ಚು ಬಿಡ್ ಮೂಲಕ ಕಾರ್ಖಾನೆ ಮುನ್ನಡೆಸಿದರೂ ಕಾರ್ಮಿಕರಿಗೆ ನೀಡಬೇಕಾದ ಬಾಕಿ ಹಣ ಬಗ್ಗೆ ಯಾವುದೇ ಪ್ರಸ್ತಾವನೆಯನ್ನು ಕೇಂದ್ರ ಸಂಪುಟ ಸಭೆಯಲ್ಲಿ ಕೈಗೊಂಡಿರುವ ತೀರ್ಮಾನದಲ್ಲಿ ಸೂಚಿಸಿಲ್ಲ. ಇದರಿಂದ ಕಾರ್ಮಿಕರಿಗೆ ಅನ್ಯಾಯವಾಗಲಿದೆ ಎಂದರು. ಬಿಜಿಎಂಎಲ್ ಕಾರ್ಮಿಕರಿಗೆ ಸಿಗಬೇಕಾದ ಬಾಕಿ ಬಡ್ಡಿ ಹಣ ಮತ್ತು ಗ್ಲೋಬಲ್ ಟೆಂಡರ್ ಮೂಲಕ ಚಿನ್ನದ ಗಣಿಯನ್ನು ಪುನರಾರಂಭಿಸಲು 2006ರ ಕ್ಯಾಬಿನೆಟ್ ತೀರ್ಮಾನದ ಬಗ್ಗೆ ಗಣಿ ಕಾರ್ಮಿಕರೊಂದಿಗೆ ಚರ್ಚಿಸಲು ಇದೇ ತಿಂಗಳು 22 ರಂದು ನಗರದ ಕಿಂಗ್ಜಾಜ್ ಹಾಲ್ನಲ್ಲಿ ಕಾರ್ಮಿಕರ ಜತೆ ಸಂವಾದ ಆಯೋಜಿಸಲಾಗಿದೆ ಎಂದು ತಿಳಿಸಿದರು. ಈ ವೇಳೆ ಕಾರ್ಮಿಕ ಸಂಘಟನೆಯ ಮುಖಂಡ ಗೋಪಿನಾಥ್, ಶಿವಕುಮಾರ್, ಜಯಪಾಂಡಿಯನ್, ಸೇಲ್ವರಾಜ್ ಮತ್ತಿತರರು ಹಾಜರಿದ್ದರು.
ವಿದ್ಯುತ್ ವ್ಯತ್ಯಯ
ಮಾಲೂರು: ಪಟ್ಟಣದಲ್ಲಿ ದಿನನಿತ್ಯ ಕಾಡುತ್ತಿರುವ ಸಣ್ಣಪುಟ್ಟ ತಾಂತ್ರಿಕ ದೋಷ ಸರಿಪಡಿಸುವ ಸಲುವಾಗಿ ಕಾಮಗಾರಿ ಪ್ರಾರಂಭಿಸಲಾಗಿದ್ದು, ಈ ಸಂಬಂಧ ಇದೇ ತಿಂಗಳ ಅಂತ್ಯದವರೆಗೆ ಪಟ್ಟಣದಲ್ಲಿ ಪ್ರತಿನಿತ್ಯ 2- 3 ಗಂಟೆ ವಿದ್ಯುತ್ ಅಡಚಣೆವುಂಟಾಗಲಿದೆ ಎಂದು ಇಲ್ಲಿನ ಬೆಸ್ಕಾಂನ ಎಇಇ ವಾಸುದೇವ ತಿಳಿಸಿದ್ದಾರೆ. ಅಪಾಯಕಾರಿ ಸ್ಥಳಗಳ ಪರಿಶೀಲನೆ, ಎಬಿಸಿ ಕೇಬಲ್ ಜೋಡಣೆ ಹಾಗೂ ಬದಲಾವಣೆ ಸೇರಿದಂತೆ ಹತ್ತು ಹಲವು ರೀತಿಯ ಕಾಮಗಾರಿಗಳು ಪಟ್ಟಣದ ವಿವಿದೆಢೆ ನಡೆಯುತ್ತಿದ್ದು, ಪ್ರತಿನಿತ್ಯ ಅಗಾಗ್ಗೆ 2- 3 ಗಂಟೆ ವಿದ್ಯುತ್ ಪ್ರಸಾರದಲ್ಲಿ ಅಡಚಣೆಯಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ವೃದ್ಧ ನೇಣಿಗೆ ಶರಣು
ಚಿಂತಾಮಣಿ: ಕುಟುಂಬ ಕಲಹದಿಂದ ಬೇಸತ್ತು ವೃದ್ಧನೊಬ್ಬ ನೇಣಿಗೆ ಶರಣಾಗಿರುವ ಘಟನೆ ಕೈವಾರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ತಾಲೂಕಿನ ಕೈವಾರ ಗ್ರಾಮದ ಹೊರವಲಯದಲ್ಲಿ ಬೆಂಗಳೂರಿನ ಶೀಗಳ್ಳಿ ಗ್ರಾಮದ ನಿವಾಸಿ ಅಣ್ಣಯ್ಯಚಾರಿ(60) ಎಂಬಾತನು ಶುಕ್ರವಾರ ಬೆಳಗ್ಗೆ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗ್ರಾಮಾಂತರ ಠಾಣೆಯ ಪೊಲೀಸರು ತಿಳಿಸಿದ್ದಾರೆ. ಶವವನ್ನು ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಶವಗಾರದಲ್ಲಿ ಇಡಲಾಗಿದೆ. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರವೇ ಹೋಬಳಿ ಘಟಕಕ್ಕೆ ಆಯ್ಕೆ
ಚಿಂತಾಮಣಿ: ಕರವೇ ಹೋಬಳಿ ಮಟ್ಟದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಎಂ.ಆರ್. ಲೋಕೇಶ್ ಹೇಳಿದರು. ಪಟ್ಟಣದ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಕಚೇರಿಯಲ್ಲಿ ಕೈವಾರ ಹೋಬಳಿ ಘಟಕದ ನೂತನ ಅಧ್ಯಕ್ಷ ಕೆ.ವಿ. ಶಂಕರ್ ಅವರನ್ನು ನೇಮಕ ಮಾಡಲಾಗಿದೆ.
ತಾಲೂಕು ಅಧ್ಯಕ್ಷ ಅಂಬರೀಷ್, ನೂತನ ಅಧ್ಯಕ್ಷರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕರವೇ ಜಿಲ್ಲಾ ಉಪಾಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಚಂದ್ರಕುಮಾರ್, ಗೋಪಿ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇಂದು ನಾಟಕ
ಕೋಲಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಲಾರ, ಹಾಗೂ ಕರಾವಳಿ ಕನ್ನಡ ಸಂಘ ಕೋಲಾರ ಇವರ ಸಂಯುಕಾಶ್ರಯದಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಡಿಯಲ್ಲಿ ಶ್ರೀ ಶನೇಶ್ವರ ಮಹಾತ್ಮೆ ಎಂಬ ಪೌರಾಣಿಕ ಪುಣ್ಯ ಕಥಾಭಾಗವನ್ನು ಯಕ್ಷಗಾನ ರೂಪದಲ್ಲಿ ನಡೆಯಲಿದೆ. ಕೆ.ಗೋವಿಂದಭಟ್ ನೇತೃತ್ವದಲ್ಲಿ ನಿಡ್ಲೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯವರಿಂದ ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಸೆ.21ರಂದು ಶನಿವಾರ ಸಂಜೆ 6 ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

