ಶೀಘ್ರ ನೂತನ ಮರಳು ನೀತಿ: ಸಿಎಂ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಸೆ.20
ರಾಜ್ಯದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳು ಸಾಗಾಣಿಕೆ ತಡೆಯುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖರಾಗಿದ್ದು, ಶೀಘ್ರ ಹೊಸ ಮರಳು ನೀತಿ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿರುವ ನಂದಿ ರಂಗಮಂದಿರದದಲ್ಲಿ ಜಿಲ್ಲಾಡಳಿತ, ಜಿಪಂ ಮತ್ತು ಕರ್ನಾಟಕ ಗೃಹ ಮಂಡಳಿಯ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾಡಳಿತ ಭವನ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಒಳಾಂಗಣ ಕ್ರೀಡಾಂಗಣದ ಉದ್ಘಾಟನೆ ಹಾಗೂ ಚಿಕ್ಕಬಳ್ಳಾಪುರ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣದ ಮತ್ತು ಚಿಂತಾಮಣಿ ಮಿನಿ ವಿಧಾನಸೌಧದ 1ನೇ ಮತ್ತು 2ನೇ ಮಹಡಿಯ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ರಮ ಮರಳುಗಾರಿಕೆಗೆ ಅಧಿಕಾರಿಗಳೂ ಬೆಂಬಲ ನೀಡುತ್ತಿದ್ದಾರೆ. ಇದನ್ನು ತಡೆಯಬೇಕೆಂಬ ಒತ್ತಾಯ ವ್ಯಾಪಕವಾಗಿ ಕೇಳಿ ಬರುತ್ತಿದೆ. ಮತ್ತೊಂದೆಡೆ ಪ್ರಸ್ತುತ ರಾಜ್ಯದಲ್ಲಿ ಜಾರಿಯಲ್ಲಿರುವ ಮರಳು ನೀತಿಯಿಂದ ಮರಳು ಬಳಸುವವರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಚಿವರನ್ನೊಳಗೊಂಡಂತೆ ಸಮಿತಿ ರಚನೆ ಮಾಡಿ ಹೊಸ ಮರಳು ನೀತಿ ರೂಪಿಲು ಮುಂದಾಗಿದ್ದು ವರದಿ ತಯಾರಾಗಿದೆ. ಇದರ ಬಗ್ಗೆ ಕೂಲಂಕಷ ಚರ್ಚೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಹೊಸ ಮರಳು ನೀತಿ ಜಾರಿಗೆ ತಂದು ಗೊಂದಲ, ಸಮಸ್ಯೆ ದೂರ ಮಾಡಲಾಗುವುದು ಎಂದು ಭರವಸೆ ನೀಡಿದರು.
ವೈದ್ಯಕೀಯ ಕಾಲೇಜು: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಒಂದು ವೈದ್ಯಕೀಯ ಕಾಲೇಜು ಇರಬೇಕೆನ್ನುವುದು ಸರ್ಕಾರದ ಆಶಯ. ಇದರಿಂದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಸುಲಭವಾಗುತ್ತದೆ. ಈಗಾಗಲೇ ಈ ಸಾಲಿನ ಆಯವ್ಯಯದಲ್ಲಿ 6 ವೈದ್ಯಕೀಯ ಕಾಲೇಜು ಸ್ಥಾಪನೆ ಘೋಷಣೆ ಮಾಡಲಾಗಿದೆ. ಮುಂದಿನ ಬಜೆಟ್ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೂ ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಲಾಗುವುದು. ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಸುವಂತಾಗಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಮ್ಮದು ಹೇಳಿದಂತೆ ನಡೆದುಕೊಳ್ಳುವ ಸರ್ಕಾರ ಎಂದರು.
ಪಿಂಚಣಿ ಅದಾಲತ್: ಸಾಮಾಜಿಕ ಭದ್ರತೆ ಒದಗಿಸಲು ಸರ್ಕಾರ ನೀಡುತ್ತಿರುವ ಮಾಸಾಶನ ಪಡೆಯಲು ಸಮಸ್ಯೆಯಾಗಿದೆ ಎಂಬ ದೂರು ಕೇಳಿ ಬರುತ್ತಿವೆ. ಜನತಾದರ್ಶನದಲ್ಲಿ ಹೆಚ್ಚಿಗೆ ಬಿಪಿಎಲ್ ಕಾರ್ಡು, ಉದ್ಯೋಗ, ವಸತಿ ಸೇರಿದಂತೆ ಮಾಸಾಶನ ಬಗ್ಗೆ ಜನರು ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲೂ ಪಿಂಚಣಿ ಅದಾಲತ್ ಸಭೆಗಳನ್ನು ಉಪ ವಿಭಾಗಾಧಿಕಾರಿಗಳು ಕಡ್ಡಾಯವಾಗಿ ನಡೆಸಿ ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಬೇಕು. ಸತಾಯಿಸದೇ ಆಗಲೇ ಅರ್ಹರಿಗೆ ಪಿಂಚಣಿ ಆದೇಶ ಪತ್ರ ನೀಡಬೇಕೆಂದು ಸೂಚನೆ ನೀಡಲಾಗಿದೆ. ಇದರಲ್ಲಿ ಲೋಪವೆಸಗಿದರೆ ಉಪ ವಿಭಾಗಾಧಿಕಾರಿಗಳೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಜಿಲ್ಲಾಡಳಿತ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದರೆ ಮುಖ್ಯಮಂತ್ರಿಗಳವರೆಗೂ ಹೋಗುವ ಅವಶ್ಯಕತೆ ಜನರಿಗೆ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಬೆಂಗಳೂರಿಗೆ ಸಮೀಪವಿರುವ ಚಿಕ್ಕಬಳ್ಳಾಪುರ ಜಿಲ್ಲೆ ರಚನೆಯಾಗಿ 6 ವರ್ಷ ಕಳೆದರೂ ಹಿಂದುಳಿದಿದೆ. ಈ ನಿಟ್ಟಿನಲ್ಲಿ ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಿ ವಿಶೇಷ ಪ್ಯಾಕೇಜನ್ನು ಘೋಷಿಸಬೇಕೆಂದು ಒತ್ತಾಯಿಸಿದರು. ಶಾಸಕ ಡಾ. ಕೆ. ಸುಧಾಕರ್ ಮಾತನಾಡಿ, ಸಿಲ್ಕ್, ಮಿಲ್ಕ್, ದ್ರಾಕ್ಷಿ ಮತ್ತು ತರಕಾರಿ ಬೆಳೆಯುವುದರಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳು ಕಾಡುತ್ತಿವೆ. ನೀರಾವರಿ ಮತ್ತು ಅಕ್ರಮ ಮರಳು ಗಣಿಗಾರಿಕೆ ಸಮಸ್ಯೆ, ಜತೆಗೆ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಒಂದು ರಸ್ತೆಯೂ ಸರಿಯಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿ, ಜಿಲ್ಲೆಯಲ್ಲಿರುವ ಐತಿಹಾಸಿಕ ಮತ್ತು ಪುರಾಣ ಪ್ರಸಿದ್ಧ ಪ್ರವಾಸಿ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿ ಎಲ್ಲರ ಗಮನ ಇತ್ತ ಸೆಳೆಯುವಂತೆ ಮಾಡಬೇಕು. ಮೆಗಾಡೇರಿ ನಿರ್ಮಾಣಕ್ಕೆ ಬಾಕಿ ಹಣ 6 ಕೋಟಿ ಮತ್ತು ಹಾಲಿನ ಪುಡಿ ಘಟಕ ಸ್ಥಾಪನೆಗೆ 30 ಕೋಟಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಕೇಂದ್ರ ಸಚಿವರಾದ ಎಂ.ವೀರಪ್ಪ ಮೊಯ್ಲಿ ಮತ್ತು ಕೆ.ಎಚ್. ಮುನಿಯಪ್ಪ ಮಾತನಾಡಿ, ಶಾಶ್ವತ ನೀರಾವರಿ ಯೋಜನೆಯ ಬಗ್ಗೆ ಪ್ರಸ್ತಾಪಿಸಿದರು. ಸಚಿವರಾದ ಎಚ್.ಕೆ. ಪಾಟೀಲ್, ರಾಮಲಿಂಗಾರೆಡ್ಡಿ, ವಿ.ಶ್ರೀನಿವಾಸ್ ಪ್ರಸಾದ್, ವಿಧಾನಸಭೆ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ, ಶಾಸಕರಾದ ಎಂ.ರಾಜಣ್ಣ, ಎಸ್.ಎನ್. ಸುಬ್ಬಾರೆಡ್ಡಿ, ಎಂ.ಕೃಷ್ಣಾರೆಡ್ಡಿ, ಪಿಳ್ಳಮುನಿಶಾಮಪ್ಪ, ವಿಧಾನಪರಿಷತ್ ಸದಸ್ಯರಾದ ಡಾ.ಎ.ಎಚ್. ಶಿವಯೋಗಿಸ್ವಾವು, ವೈ.ಎ. ನಾರಾಯಣಸ್ವಾಮಿ, ನಸೀರ್ ಅಹಮದ್, ಡಿ.ಎಸ್. ವೀರಯ್ಯ, ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್. ಮಂಜುನಾಥ್ ಪ್ರಸಾದ್, ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಆಯುಕ್ತ ರವಿಶಂಕರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ವಿಕಾಸ್ಕುಮಾರ್, ಜಿಲ್ಲಾಧಿಕಾರಿ ವಿಶಾಲ್ ಆರ್, ಸಿಇಒ ನೀಲಾ ಮಂಜುನಾಥ್ ಭಾಗವಹಿಸಿದ್ದರು.
ಶಾಶ್ವತ ನೀರಾವರಿ ಅನುಷ್ಠಾನ ಪಕ್ಕಾ
ಬಯಲು ಸೀಮೆಯ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ವಿಷಯದಲ್ಲಿ ಜನರಿಗೆ ಯಾವುದೇ ಗೊಂದಲ ಬೇಡ. ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಂಡಿದೆ. ಎತ್ತಿನಹೊಳೆ ಮತ್ತು ಡಾ.ಪರಮಶಿವಯ್ಯನವರ ವರದಿಯಾಧಾರಿತ ನೀರಾವರಿ ಯೋಜನೆಗಳೆರಡನ್ನು ಖಂಡಿತವಾಗಿ ಅನುಷ್ಠಾನಕ್ಕೆ ತರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಇಲ್ಲಿ 1200 ಅಡಿ ಕೊಳವೆ ಬಾವಿ ಕೊರೆಸಿದರೂ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಸಿಕ್ಕರೂ ತ್ವರಿತವಾಗಿ ಬತ್ತಿ ಹೋಗುತ್ತಿವೆ. ಇದರಿಂದ ರೈತರು ನೀರಾವರಿ ಸಮಸ್ಯೆ ಮತ್ತು ಜನರು ಶುದ್ಧ ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಿದ್ದಾರೆ ಎನ್ನುವುದು ಸರ್ಕಾರಕ್ಕೆ ತಿಳಿದಿದೆ. ಈಗಾಗಲೇ ಎತ್ತಿನಹೊಳೆ ಯೋಜನೆಗೆ ಹಣವನ್ನು ಮೀಸಲಿಟ್ಟಿರುವುದಲ್ಲದೇ ಡಾ. ಪರಮಶಿವಯ್ಯನವರ ವರದಿಯ ಬಗ್ಗೆ ವಿಸ್ಕೃತ ವರದಿಯನ್ನು ತಯಾರಿಸಲು 50 ಕೋಟಿ ನೀಡಲಾಗಿದೆ ಎಂದರು.
ಸಿಎಂ ಭರವಸೆ
- ವೈದ್ಯಕೀಯ ಕಾಲೇಜು
- ವಿಶೇಷ ಅನುದಾನ 25 ಕೋಟಿ
- ಮೆಗಾ ಡೇರಿಗೆ 6 ಕೋಟಿ
- ಹಾಲಿನ ಪುಡಿ ತಯಾರು ಘಟಕ ನಿರ್ಮಾಣಕ್ಕೆ 30 ಕೋಟಿ
- ಜಿಲ್ಲಾಡಳಿತ ಭವನ ನಿರ್ವಹಣೆಗೆ 5 ಕೋಟಿ
-300 ಹಾಸಿಗೆಗಳ ಆಸ್ಪತ್ರೆಗೆ ನೆರವು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

