ಕೋಲಾರ

ಉತ್ತಮ ಸಮಾಜ ನಿರ್ಮಾಣಕ್ಕೆ ಯುವಕರು ಮುಂದಾಗಲಿ

Published On :

ಬಾಗೇಪಲ್ಲಿ: ಉತ್ತಮ ಸಮಾಜ ನಿರ್ಮಾಣ ಮಾಡಲು ಯುವ ಜನಾಂಗ ಮುಂದಾಗಬೇಕೆಂದು ನೆಹರೂ ಯುವ ಕೇಂದ್ರ ಜಿಲ್ಲಾ ಯುವ ಸಮನ್ವಾಧಿಕಾರಿ ಜಿ.ನಾರಾಯಣಗೌಡ ಕರೆ ನೀಡಿದರು. ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನೆಹರೂ ಯುವ ಕೇಂದ್ರ, ಸ್ವಾಮಿ ವಿವೇಕಾನಂದ ಕಲಾ ಬಳಗ ಮತ್ತು ಕಲಾ ಕೇಂದ್ರ ಡಾ. ಜಚನಿ ಸಾಂಸ್ಕೃತಿಕ ಸಂಘ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 'ಯುವಮುಂದಾಳತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ನೆಹರೂ ಯುವ ಕೇಂದ್ರದಿಂದ ಪ್ರತಿವರ್ಷ ಆಯ್ಕೆಯಾದ ವಿದ್ಯಾರ್ಥಿಗಳನ್ನು ರಾಷ್ಟ್ರೀಯ- ಅಂತಾರಾಷ್ಟ್ರೀಯ ಶಿಬಿರಗಳಿಗೆ ಕಳುಹಿಸಲಾಗುವುದು. ಕಲೆ ಮತ್ತು ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಪರಸ್ಪರ ವಿನಿಮಯ ಮಾಡಿಕೊಳ್ಳುವುದರಿಂದ ಐಕ್ಯತೆ, ಸಮಗ್ರತೆ, ಭಾವೈಕ್ಯ ಕಾಪಾಡಬಹುದು. ಇದರಿಂದ ಜೀವನದಲ್ಲಿ ಒಳ್ಳೆಯ ನಡತೆಯುಳ್ಳ ನಾಯಕತ್ವದ ಗುಣ ಮೈಗೂಡಿಸಿಕೊಂಡು ಸತ್ಪ್ರಜೆಗಳಾಗಿ ಹೊರಹೊಮ್ಮಬಹುದು ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಸಿ.ನಂಜುಂಡಗೌಡ ಮಾತನಾಡಿ, ಯುವಕರು ದೇಶದ ಸಂಪತ್ತು ಇದ್ದಂತೆ. ಯುವಶಕ್ತಿ ದೇಶದ ಪ್ರಗತಿಗೆ ಪಾತ್ರರಾಗಿದ್ದಾರೆ. ಯುವ ಜನಾಂಗ ದೇಶಭಕ್ತಿ ಬೆಳೆಸಿಕೊಳ್ಳಬೇಕು. ಇದರಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು. ಕಾರ್ಯನಿರತ ಪತ್ರಕರ್ತರ ಸಂಘ ತಾಲ್ಲೂಕು ಅಧ್ಯಕ್ಷ ಡಿ.ಎನ್. ಕೃಷ್ಣಾರೆಡ್ಡಿ ಮಾತನಾಡಿ, ಪಠ್ಯಪುಸ್ತಕಗಳು ಕೇವಲ ಉದ್ಯೋಗಕ್ಕೆ ಮಾತ್ರ ಸಿಮಿತವಾಗದೆ ನಾಯಕತ್ವವಿರುವ ರಾಷ್ಟ್ರ ನಾಯಕರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.  ಯುವಕರು ದುಶ್ಟಟಗಳಿಗೆ ಬಲಿಯಾಗದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದ ಅವರು, ಸಿನಿಮಾ, ಮೊಬೈಲ್, ಇಂಟರ್‌ನೆಟ್‌ಗಳಿಂದ ಯುವಜನರು ದಾರಿ ತಪ್ಪುತ್ತಿದ್ದಾರೆ. ಇದರಿಂದ ಅಮೂಲ್ಯ ಜೀವನ ಹಾಳಾಗುತ್ತಿದೆ ಎಂದರು. ಕಾಲೇಜಿನ ಪ್ರಾಧ್ಯಾಪಕ ಡಾ. ಕೆ.ಎಂ. ನಯಾಜ್ ಅಹಮದ್ ಮಾತನಾಡಿ, ದೇಶದಲ್ಲಿ ಶೇ. 80 ರಷ್ಟು ಮಂದಿ ಯುವಜನರಿದ್ದು, ಆದರೆ, ಇಂದಿನ ಯುವಜನರ ಆಲೋಚನೆ, ಆಚಾರ- ವಿಚಾರ, ಸಂಸ್ಕೃತಿ ಮುಂದಿನ ದಿನಗಳಲ್ಲಿ ಅಧಃಪತನದತ್ತ ಸಾಗುತ್ತಿರುವುದು ವಿಷಾದನೀಯವಾಗಿದೆ ಎಂದರು. ಭಗತ್‌ಸಿಂಗ್, ರಾಜಗುರು, ಸುಖದೇವ್‌ರಂತಹ ಆದರ್ಶಗಳು ಇಂದಿನ ಯುವಕರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಯುವ ಪ್ರಶಸ್ತಿ ಪುರಸ್ಕೃತ ಮುನಿರಾಜು ಅವರು ಜಾನಪದ, ದೇಶಭಕ್ತಿಗೀತೆ ಹಾಡಿದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಬಿ.ಎನ್. ಪ್ರಭಾಕರ್,ನಾಗರಾಜ್, ಅಶ್ವಥ್ಥನಾರಾಯಣ, ಎಚ್. ನಂಜಪ್ಪ, ಕೇಶವಮೂರ್ತಿ, ಮೋಹನ್, ಸ್ವಾಮಿ ವಿವೇಕಾನಂದ ಕಲಾ ಬಳಗ ಅಧ್ಯಕ್ಷ ಸೋ.ಸು.ನಾಗೇಂದ್ರನಾಥ್, ಪತ್ರಕರ್ತರಾದ ಪಿ.ಎಸ್. ರಾಜೇಶ್, ಮಣಿಕಂಠ ಮತ್ತಿತರರು ಉಪಸ್ಥಿತರಿದ್ದರು.

ಆಸ್ಪತ್ರೆ ಮೇಲ್ದರ್ಜೆಗೆ ಆಗ್ರಹ
ಮಧುಗಿರಿ: ತಾಲೂಕಿನ ಮಿಡಿಗೇಶಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಪರಿವರ್ತಿಸಿ ಮೇಲ್ದರ್ಜೆಗೇರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ವಿಚಾರ ಸರ್ಕಾರದ ಮುಂದಿದ್ದು ಇತ್ತೀಚೆಗೆ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ  ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲೆಯ ಎಲ್ಲಾ ತಾಲೂಕು ಆರೋಗ್ಯಧಿಕಾರಿಗಳ ಸಭೆಯಲ್ಲಿ ಅಗತ್ಯ ದಾಖಲಾತಿ ಒದಗಿಸುವಂತೆ ತಿಳಿಸಿದ್ದರು. ಅದರಂತೆ  ತಾಲೂಕಿನ ಮಿಡಿಗೇಶಿ ಹೋಬಳಿ  ಆಂದ್ರದ ಗಡಿ ಭಾಗಕ್ಕೆ ಹೊಂದಿದ್ದು ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಆ ಕಾರಣಕ್ಕಾಗಿ  ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವಂತೆ  ಈಗಾಗಲೇ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದ ಕಾರಣ ಸಾರ್ವಜನಿಕರ ಹಿತದೃಷ್ಟಿಯಿಂದ ಮಿಡಿಗೇಶಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಅಗತ್ಯವಾದ ಎಲ್ಲ ಮೂಲ ಸೌಕರ್ಯ ಹಾಗೂ ವೈದ್ಯಧಿಕಾರಿಗಳನ್ನು ನೇಮಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ಪಡಿತರ ಚೀಟಿ ಸಮಸ್ಯೆ ನಿವಾರಿಸಿ: ಮಂಜುನಾಥಗೌಡ
ಟೇಕಲ್: ಮಾಲೂರು ತಾಲೂಕಿನಲ್ಲಿ ಇನ್ನೆರಡು ತಿಂಗಳೊಳಗಾಗಿ ರೇಷನ್ ಕಾರ್ಡ್ ಸಮಸ್ಯೆ ಪರಿಹರಿಸಬೇಕೆಂದು ಅಧಿಕಾರಿಗಳಿಗೆ ಶಾಸಕ ಮಂಜುನಾಥಗೌಡ ಸೂಚಿಸಿದರು.  ಆನೇಪುರದಲ್ಲಿ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇದಕ್ಕೆ ನಾನು ಹೊಸಕೋಟೆಯಲ್ಲಿ ಕೆಲಸ ನಿರ್ವಹಿಸುತ್ತಿರುವ 10 ಜನ ಕಂಪ್ಯೂಟರ್ ಆಪರೇಟರ್‌ಗಳನ್ನು ನೇಮಿಸಿಕೊಡುವುದಾಗಿ ತಿಳಿಸಿದರು. ಈ ಹಿಂದೆ ಆಲಂಬಾಡಿ, ಹುಳದೇನಹಳ್ಳಿಯಲ್ಲಿ ನಡೆದ ಜನಸ್ಪಂದನಕ್ಕೆ ಜನರ ಒಲವಿತ್ತು. ಆದರೆ, ಆನೇಪುರದಲ್ಲಿ ಜನರ ಕೊರತೆಯಿದೆ ಎಂದರು. ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ ಮಾತನಾಡಿ, ಟೇಕಲ್ ಜಿಪಂ ಕ್ಷೇತ್ರದಲ್ಲಿ ಹಳ್ಳಿಹಳ್ಳಿಗೂ ಒಟ್ಟಾರೆ 38 ಓವರ್‌ಹೆಡ್ ಟ್ಯಾಂಕರ್ ನೀಡಿದ್ದು, ಇದಕ್ಕೆ 4.50 ಕೋಟಿ ಖರ್ಚಾಗಿದೆ ಎಂದರು. ಜನಸ್ಪಂದನದಲ್ಲಿ ಸ್ಥಳದಲ್ಲೇ ಜನರಿಗೆ ಸಮಸ್ಯೆ ನಿವಾರಿಸುವಂತಿರಬೇಕು ಎಂದರು. ತಹಸೀಲ್ದಾರ್ ಡಾ. ಸುಧಾ ಅವರು ಜನತೆಯ ಕೆಲವು ಅಹವಾಲುಗಳನ್ನು ಸ್ಥಳದಲ್ಲೆ ನಿವಾರಿಸಿದರು. ಜಿಪಂ ಮಾಜಿ ಸದಸ್ಯ ಹನುಮಂತಪ್ಪ, ನಾರಾಯಣಸ್ವಾಮಿ, ಮುಖಂಡ ಮುನಿಶಾಮಿಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್‌ಗೌಡ ಇತರರು ಇದ್ದರು.

ರಸಗೊಬ್ಬರ ಖರೀದಿ: ಸೂಚನೆ
ಕೋಲಾರ: ರೈತರು ರಸಗೊಬ್ಬರಗಳನ್ನು ಯಾವಾಗಲು ಅಧಿಕೃತ ಮಾರಾಟಗಾರರಿಂದಲೇ ಖರೀದಿಸಬೇಕು. ಯಾರಾದರೂ ಹೊರಗಿನವರು ನೇರವಾಗಿ ಹಳ್ಳಿಗಳಿಗೆ ಬಂದು ರಸಗೊಬ್ಬರ ಮಾರಾಟ ಮಾಡಿದರೆ ರೈತರು ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕೆಂದು ಬಂಗಾರಪೇಟೆಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.ದೂರು ನೀಡಲು ಮತ್ತು ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರು 759005571 ಇಲ್ಲವೆ ತಾಲೂಕಿನ ಹೋಬಳಿ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಿಸರ ಮಿತ್ರ ಶಾಲೆ;  ಅರ್ಜಿ ಆಹ್ವಾನ
ಕೋಲಾರ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೋಲಾರ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ಕೋಲಾರ ಸಹಯೋಗದಲ್ಲಿ ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಶಾಲೆಗಳನ್ನು ಗುರುತಿಸಿ ಅವುಗಳಿಗೆ ಪ್ರಶಸ್ತಿ ನೀಡುವ ಮೂಲಕ ಜಿಲ್ಲೆಯ ಶಾಲೆಗಳಲ್ಲಿ ಪರಿಸರ ಸ್ನೇಹಿ ವಾತಾವರಣವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ 2011-12  ಮತ್ತು 2012-13ನೇ ಸಾಲಿನಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದ್ದು ಪ್ರಸ್ತುತ ವರ್ಷದ ಪ್ರಶಸ್ತಿಗಾಗಿ ಕೋಲಾರ ಜಿಲ್ಲೆಯಲ್ಲಿರುವ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು ಆಸಕ್ತರು ನೇರವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೋಲಾರ ಇವರಲ್ಲಿ ಸೆ.30ರ ಒಳಗೆ ಹೆಸರು ನೋಂದಾಯಿಸಿಕೊಳ್ಳಲು ಪರಿಸರ ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.