3 ಬಾಲಕರು ನೀರುಪಾಲು
ನಾಗಮಂಗಲ: ಈಜಲು ಹೋಗಿ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ತಾಲೂಕಿನ ಶೆಟ್ಟಹಳ್ಳಿ ಗ್ರಾಮದ ಚೇತನ್ ಅವರ ಪುತ್ರ ಹರೀಶ್ (13), ಚೊಟ್ಟನಹಳ್ಳಿ ಗ್ರಾಮದ ನಂಜೇಗೌಡರ ಪುತ್ರ ಮನು(13) ಹಾಗೂ ಮಹೇಶ್ ಅವರ ಪುತ್ರ ಶಿವಕುಮಾರ್ (14) ಮೃತಪಟ್ಟ ದುರ್ದೈವಿಗಳು. ಶೆಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 8ನೇ ತರಗತಿ ವಿದ್ಯಾರ್ಥಿಗಳಾದ ಹರೀಶ್, ಮನು, 9ನೇ ತರಗತಿ ವಿದ್ಯಾರ್ಥಿ ಶಿವಕುಮಾರ್ ಶನಿವಾರ ಶಾಲೆ ಮುಗಿಸಿಕೊಂಡು ವಾಪಸ್ ಗ್ರಾಮಕ್ಕೆ ತೆರಳುವಾಗ ಚೊಟ್ಟನಹಳ್ಳಿ ಸಮೀಪವಿರುವ ನೀರಿನ ಕಟ್ಟೆಯಲ್ಲಿ ಈಜಲು ಹೋದಾಗ ಈ ದುರಂತ ಸಂಭವಿಸಿದೆ. ಶಿವಕುಮಾರ್ ಎಂಬ ವಿದ್ಯಾರ್ಥಿಗೆ ಈಜು ಬರುತ್ತಿತ್ತು. ಹರೀಶ್ ಮತ್ತು ಮನು ವಿದ್ಯಾರ್ಥಿಗಳಿಗೆ ಈಜು ಬರುತ್ತಿರಲಿಲ್ಲ. ಈ ಮೂವರು ನೀರಿನಲ್ಲಿ ಮುಳುಗುತ್ತಿದ್ದುದನ್ನು ಪ್ರತ್ಯಕ್ಷವಾಗಿ ನೋಡಿದ ಇತರೆ ವಿದ್ಯಾರ್ಥಿಗಳು ಗ್ರಾಮಸ್ಥರಿಗೆ ತಕ್ಷಣ ಸುದ್ದಿ ತಿಳಿಸಿದರಾದರೂ ಗ್ರಾಮಸ್ಥರು ಕಟ್ಟೆ ಬಳಿಗೆ ಬರುವಷ್ಟರಲ್ಲಿ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದರು. ಸ್ಥಳಕ್ಕೆ ಆಗಮಿಸಿದ ಬಾಲಕರ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಶಾಸಕ ಎನ್. ಚಲುವರಾಯಸ್ವಾಮಿ, ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ, ಜಿಪಂ ಸಿಇಒ ಪಿ.ಸಿ. ಜಯಣ್ಣ, ಡಿವೈಎಸ್ಪಿ ಶೋಭಾರಾಣಿ, ವೃತ್ತ ನಿರೀಕ್ಷಕ ಬಿ. ರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಅನಂತರಾಜು, ಪಿಎಸ್ಐ ವಿನಯ್ ಭೇಟಿ ನೀಡಿದ್ದರು. ಸ್ಥಳದಲ್ಲಿಯೇ ಶವಗಳ ಪಂಚನಾಮೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಗಾರಪೇಟೆ ತಾಪಂ ಬೇಟೆಗೆ ಕಾಂಗ್ರೆಸ್ ಸಜ್ಜು
ಬಂಗಾರಪೇಟೆ: ಕ್ಷೇತ್ರದ ಶಾಸಕ ಸ್ಥಾನವನ್ನು ಮತ್ತೆ ಕಾಂಗ್ರೆಸ್ ತನ್ನ ಮಡಲಿಗೆ ಹಾಕಿಕೊಂಡಿರುವ ಬೆನ್ನಲ್ಲೇ ಇದೀಗ ಬಿಜೆಪಿ ವಶದಲ್ಲಿರುವ ತಾಪಂ ಆಡಳಿತ ಮಂಡಳಿಯನ್ನು ಕಾಂಗ್ರೆಸ್ ವಶಪಡಿಸಿಕೊಳ್ಳಲು ಆಪರೇಷನ್ ಹಸ್ತಕ್ಕೆ ಮುಖಂಡರು ಚಾಲನೆ ನೀಡಿದ್ದಾರೆ. ಇದರ ಪರಿಣಾಮವಾಗಿ ಹಾಲಿ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ 13 ಸದಸ್ಯರು ಸಹಿ ಹಾಕಿ ಉಪ ವಿಭಾಗಾಧಿಕಾರಿಗೆ ಸಲ್ಲಿಸಿದ್ದಾರೆ.
ಈ ಹಿಂದೆ ಕ್ಷೇತ್ರದಲ್ಲಿ ಕಾಂಗ್ರೆಸ್ನಲ್ಲಿನ ಗುಂಪುಗಾರಿಕೆಯಿಂದ ಪಕ್ಷ ಸಂಪೂರ್ಣವಾಗಿ ನೆಲ ಕಚ್ಚಿ ಬಿಜೆಪಿ ಮಯವಾಗಿತ್ತು. ನಾಲ್ಕು ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಬಿಜೆಪಿ ಅಭ್ಯರ್ಥಿ ಎಂ. ನಾರಾಯಣಸ್ವಾಮಿ ಅವರನ್ನು ಪರಾಭವಗೊಳಿಸುವ ಮೂಲಕ ಮತ್ತೆ ಕ್ಷೇತ್ರದಲ್ಲಿ ಕಾಂಗ್ರೆಸ್ ಯುಗ ಆರಂಭಿಸಿದ್ದಾರೆ. ಇದರ ಪರಿಣಾಮವಾಗಿ ಬಿಜೆಪಿ ವಶದಲ್ಲಿರುವ ಸ್ಥಳೀಯ ಸಂಸ್ಥೆಗಳನ್ನು ಕೈ ವಶ ಮಾಡಿಕೊಳ್ಳಲು ಸದ್ದಿಲ್ಲದೆ ಆಪರೇಷನ್ ಹಸ್ತಕ್ಕೆ ಕೈ ಹಾಕಿದ್ದಾರೆ. ತಾಪಂ ಹಾಲಿ ಅಧ್ಯಕ್ಷ ರೇಣುಕಾಬಾಲಚಂದ್ರ ಮತ್ತು ಉಪಾಧ್ಯಕ್ಷ ಸಂಪಂಗಿ ಇತ್ತೀಚೆಗೆ ಶಾಸಕರೊಂದಿಗೆ ಗುರುತಿಸಿಕೊಂಡು ಕಾಂಗ್ರೆಸ್ ಸೇರುವರು ಎಂದು ಶಾಸಕರೇ ಹೇಳಿದ್ದರು. ಆದರೆ ಅವರು ಉಲ್ಟಾ ಹೊಡೆದಿದ್ದರಿಂದ ತಾಪಂನಲ್ಲಿ ಕೈ ದರ್ಬಾರು ಮಾಡಲು ಮೊದಲ ಹಂತವಾಗಿ ತಾಪಂ ವಶಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್ ಸದಸ್ಯರು 7 ಮಂದಿ ಇದ್ದರೂ, ಶಾಸಕರು ತಮ್ಮ ಪ್ರಭಾವ ಬಳಸಿ ಬಿಜೆಪಿಯ ಮೂವರನ್ನು ಹಾಗೂ ಪಕ್ಷೇತರ ಇಬ್ಬರು ಸದಸ್ಯರನ್ನು ಸೆಳೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ. ಸದ್ದಿಲ್ಲದೆ ಗುರುವಾರ 13 ಮಂದಿ ಸದಸ್ಯರಾದ ಚಂದ್ರಮ್ಮ, ಶ್ರೀಶೈಲವಾಸ, ಜೈನಾಬ್, ಲಕ್ಷ್ಮೀದೇವಮ್ಮ, ಕೆ.ವಿ.ನಾರಾಯಣರೆಡ್ಡಿ, ರಮೇಶ್, ಸುಮಿತ್ರ, ಬಿಜೆಪಿಯ ಬಾಬು, ವಿಜಯಲಕ್ಷ್ಮೀ, ರಾಮಚಂದ್ರಾರೆಡ್ಡಿ, ಪಕ್ಷೇತರಾದ ಶಾಂತಕುಮಾರಿ, ವರಲಕ್ಷ್ಮೀ ಮತ್ತು ಲಕ್ಷ್ಮಮ್ಮ ಅವಿಶ್ವಾಸ ಪತ್ರಕ್ಕೆ ಸಹಿ ಹಾಕಿ ಎಸಿರವರಿಗೆ ಸಲ್ಲಿಸಿದ್ದಾರೆ. ಈ ಬೆಳವಣಿಗೆಯಿಂದ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತೆ ಗರಿಗೆದರಿಕೊಂಡು ಕೂತೂಹಲ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

