ಕೋಲಾರ

ಎಸ್ಸಿ, ಎಸ್ಟಿ ಸೌಲಭ್ಯ ಅರ್ಹರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ

Published On :

ಕ.ಪ್ರ.ವಾರ್ತೆ ಮಾಲೂರು ಸೆ. 21
ಇಂದಿನ ಸ್ಪರ್ಧಾತ್ಮಕ ಶಿಕ್ಷಣದ ಯುಗದಲ್ಲಿ ಗ್ರಾಮಾಂತರ ಪ್ರದೇಶದ ಬಡ ಮಕ್ಕಳನ್ನು ತಯಾರು ಮಾಡುವ ಜವಾಬ್ದಾರಿಯನ್ನು ಶಿಕ್ಷಕರು ಹೊರಬೇಕು ಎಂದು ಶಾಸಕ ಮಂಜುನಾಥ್ ಗೌಡ ಹೇಳಿದರು.
ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಪ.ಜಾ. ಹಾಗೂ ಪ.ಪಂ. ಶಿಕ್ಷಕರ- ನೌಕರರ ಕ್ಷೇಮಾಭಿವೃದ್ಧಿ ಸಂಘ ಶನಿವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಉಚಿತ ಬೋಧನಾ ತರಗತಿಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರವು ಎಸ್ಸಿ ಹಾಗೂ ಎಸ್ಟಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಆದರೆ, ಅದು ಅರ್ಹ ಫಲಾನುಭವಿಗಳಿಗೆ ತಲುಪುದು ಯೋಜನೆಯ ಶೇ. 30 ರಷ್ಟು ಭಾಗ ಮಾತ್ರ. ಇದರಲ್ಲಿ ರಾಜಕೀಯ ವ್ಯಕ್ತಿಗಳ ಹಾಗೂ ಅಧಿಕಾರಿಗಳ ಪಾತ್ರವಿದೆ ಎಂದರು.
ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಹಮ್ಮಿಕೊಳ್ಳುತ್ತಿರುವ ಇಂತಹ ಸಮಾರಂಭಗಳಲ್ಲಿ ಜನಪ್ರತಿನಿಧಿಗಳ, ಮುಖಂಡರ ಸನ್ಮಾನ ಮಾಡುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಇಂತಹ ಸಮಾರಂಭವನ್ನು ಸನ್ಮಾನರಹಿತವಾಗಿ ಮಾಡಬೇಕೆಂದು ಸಂಘಟಕರಲ್ಲಿ ಕೋರಿದರು.
ಪುರಸಭೆ ಮುಖ್ಯಾಧಿಕಾರಿ ರೇಣುಕಾ ಮಾತನಾಡಿ, ಎಸ್ಸಿ ಹಾಗೂ ಎಸ್ಟಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಒಂದು ಲಕ್ಷ ರು.ಗಳನ್ನು ಈ ಸಂಘಟನೆಯ ಶಿಕ್ಷಕರಿಗೆ ನೀಡಲಾಗುತ್ತಿದ್ದು, ಶಿಕ್ಷಕರು ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕೆಂದರು.
ಪಟ್ಟಣದಲ್ಲೇ ಬೋಧನಾ ತರಗತಿ ನಡೆಯುವುದರಿಂದ ಆಗಾಗ್ಗೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು. ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಭವನಕ್ಕೆ ಕಾಂಪೌಂಡ್‌ಅನ್ನು ಪುರಸಭೆ ವತಿಯಿಂದ ಹಂತ- ಹಂತವಾಗಿ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಡಾ.ಹನುಮಪ್ಪ, ಟಿ.ಗುಂಡಪ್ಪ, ಟಿ.ವೆಂಕಟಸ್ವಾಮಿ ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಕೆ. ವೆಂಕಟೇಶ್, ರಾಮಚಂದ್ರ, ವೆಂಕಟಾಪಸತ್ಯಂ, ಬಿಇಒ ಸುಬ್ರಮಣ್ಯ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ನಾರಾಯಣಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ನಂಜೇಗೌಡ, ಪುರಸಭೆ ಸದಸ್ಯರಾದ ಭಾರತಮ್ಮ ನಂಜುಂಡಪ್ಪ, ಮುರಳಿಧರ್, ಟಿ.ಕೆ. ಆಶ್ವಥ್‌ನಾರಾಯಣ್ ಗೌಡ, ಎಂ.ಮುನಿನಾರಾಯಣ, ಎಂ. ಜಯರಾಂ, ಮು.ತಿಮ್ಮಯ್ಯ, ಕೆ.ಪಿ.ನಾಗರಾಜ್, ಮುನಿಯಪ್ಪ, ವೆಂಕಟಸ್ವಾಮಿ, ಎಚ್. ನಾರಾಯಯಣಪ್ಪ ಎಂ.ರಾಮಕೃಷ್ಣ, ವಿ.ತಿಮ್ಮರಾಯಪ್ಪ, ರಮೇಶ್, ಗುರುಮೂರ್ತಿ ಇದ್ದರು. ಎ.ಕೆ.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.  

ಪಿಟಿಸಿಎಲ್ ಕಾಯ್ದೆಗೆ ವಿರೋಧ
ಮಾಲೂರು: ಪಿಟಿಸಿಎಲ್ ಕಾಯ್ದೆ ದಲಿತರ ಶ್ರೇಯೋಭಿವೃದ್ಧಿಗೆ ವಿರೋಧವಾಗಿದ್ದು, ಅದನ್ನು ರದ್ದುಗೊಳಿಸುವಂತೆ ದಲಿತ ಸಂಘಟನೆಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಬೇಕಾದ ಪರಿಸ್ಥಿತಿ ಉದ್ಬವವಾಗಿದೆ ಎಂದು ಶಾಸಕ ಮಂಜುನಾಥ್‌ಗೌಡ ಹೇಳಿದರು. ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ವರ್ಗ, ಪಂಗಡದ ಶಿಕ್ಷಕರ-ನೌಕರರ ಕ್ಷೇಮಾಭಿವೃದ್ಧಿ ಸಂಘ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿ, ಸರ್ಕಾರವು ಹಿಂದಿನಿಂದ ದಲಿತರ ಅಭಿವೃದ್ಧಿಗಾಗಿ ಜಮೀನು ನೀಡಿದೆ. ನೀರಿಲ್ಲದೆ ಕೃಷಿ ಮಾಡಲಾಗದೆ ಬಡ ದಲಿತರು ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ. ಈ ಬಗ್ಗೆ ದಲಿತ ಸಂಘಟನೆಗಳು ಆಲೋಚನೆ ಮಾಡಬೇಕು. ಪಿಟಿಸಿಎಲ್ ಕಾಯ್ದೆ ತೆಗೆಯುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲು ಅಂದೋಲನ ರೀತಿಯಲ್ಲಿ ಹೋರಾಟ ನಡೆಸಬೇಕು. ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.