ದೌರ್ಜನ್ಯ ತಡೆಗೆ ಮಹಿಳಾ ಠಾಣೆ ಸ್ಥಾಪಿಸಿ
ಕ.ಪ್ರ.ವಾರ್ತೆ ಕೋಲಾರ ಸೆ. 22
ಜಿಲ್ಲೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರುವುದರಿಂದ ಪ್ರತ್ಯೇಕ ಮಹಿಳಾ ಪೊಲೀಸ್ ಠಾಣೆ ಮತ್ತು ಇಲಾಖೆಯಲ್ಲಿ ಮಹಿಳಾ ಸಹಾಯವಾಣಿ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್. ರೇಣುಕಾಪ್ರಸಾದ್ ಆಶಯ ವ್ಯಕ್ತಪಡಿಸಿದರು.
ನಗರದ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಲೈಂಗಿಕ ವೃತ್ತಿಪರ ಮಹಿಳೆಯರ ವಿರುದ್ಧದ ದೌರ್ಜನ್ಯ ಹಾಗೂ ಮಹಿಳೆಯರ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ ಬಗ್ಗೆ ಕಾನೂನು ಅರಿವು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇತರೇ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಕೋಲಾರ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಸುಲಭವಾಗಿ ತಮ್ಮ ನೋವನ್ನು ಪೊಲೀಸ್ ಇಲಾಖೆಗೆ ಮನವರಿಕೆ ಮಾಡಿಕೊಟ್ಟು ನ್ಯಾಯ ಪಡೆಯುವ ವಾತಾವರಣವನ್ನು ನಿರ್ಮಾಣ ಮಾಡಬೇಕೆಂದು ಸಲಹೆ ನೀಡಿದರು. ಲೈಂಗಿಕ ಕಾರ್ಯಕರ್ತೆಯರೂ ಭಾರತೀಯ ಪ್ರಜೆಗಳೇ ಆಗಿದ್ದಾರೆ. ಅವರಿಗೂ ಎಲ್ಲಾ ಪ್ರಜೆಗಳಂತೆ ಬದುಕುವ ಹಕ್ಕಿದೆ. ಈ ಕಾರ್ಯಾಗಾರದಲ್ಲಿ ತರಬೇತಿ ಪಡೆಯುವ ಪೊಲೀಸರು ಇದನ್ನು ತಮ್ಮ ವೃತ್ತಿಯಲ್ಲಿ ಕಾರ್ಯರೂಪಕ್ಕೆ ತರಬೇಕೆಂದು ಸಲಹೆ ನೀಡಿದರು.
ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದ ನಂತರ ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯವೆಸಗುವರ ವಿರುದ್ಧ ಕಾನೂನು ಕಠಿಣಗೊಂಡಿದೆ. ಇದರ ಮಾಹಿತಿ ಅರಿತು ಪೊಲೀಸರು ಪ್ರಕರಣ ದಾಖಲಿಸಿ, ಆರೋಪಪಟ್ಟಿ ಸಲ್ಲಿಸಬೇಕೆಂದರು.
ಕಾರ್ಯಾಗಾರವನ್ನು ಉದ್ಘಾಟಿಸಿದ ಪೊಲೀಸ್ ವರಿಷ್ಠಾಧಿಕಾರಿ ರಾಮ್‌ನಿವಾಸ್ ಸಪಟ್ ಮಾತನಾಡಿ, ಮಹಿಳೆಯರ ಮೇಲೆ ನಡೆಯುವ ಯಾವುದೇ ದೌರ್ಜನ್ಯದ ಹೊಣೆಯನ್ನು ಪೊಲೀಸರು ಮೊದಲು ಹೊತ್ತುಕೊಳ್ಳಬೇಕಾಗುತ್ತದೆ. ಠಾಣೆಗಳಲ್ಲಿ ಲಿಂಗ ತಾರತಮ್ಯ ನಡೆಸದಂತೆ ಈಗಾಗಲೇ ಪೊಲೀಸರಿಗೆ ತರಬೇತಿ ನೀಡಲಾಗಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ಬಗ್ಗೆ ಪೊಲೀಸರು ಹೆಚ್ಚಿನ ಗಮನಹರಿಸಬೇಕೆಂದು ಸಲಹೆ ನೀಡಿದರು.
ಠಾಣೆಗಳಲ್ಲಿರುವ ಮಹಿಳಾ ಪೇದೆಗಳಿಂದಲೇ ದೂರು ಸ್ಪೀಕರಿಸುವಂತೆ ಮಾಡಿ ದೌರ್ಜನ್ಯದಿಂದ ಗಾಯಗೊಂಡಿದ್ದರೆ ಆಸ್ಪತ್ರೆ ಸೇರಿರುವ ಚಿಕಿತ್ಸೆ ಕೊಡಿಸುವ, ಅವರಿಗೆ ಮಾನಸಿಕ ಧೈರ್ಯ ತುಂಬುವ ಸಲುವಾಗಿ ಅಪ್ತ ಸಮಾಲೋಚನೆ ನಡೆಸುವುದನ್ನು ಮೈಗೂಡಿಸಿಕೊಳ್ಳಬೇಕು. ಈ ಕಾರ್ಯಾಗಾದ ನಂತರ ಠಾಣೆಗಳಲ್ಲಿ ಈ ರೀತಿಯ ಬದಲಾವಣೆಯನ್ನು ತಾವು ನಿರೀಕ್ಷಿಸುತ್ತಿರುವುದಾಗಿ ವಿವರಿಸಿದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ವಿ.ರೇಣುಕಾ ಮಾತನಾಡಿ, ಲೈಂಗಿಕ ವೃತ್ತಿಗೆ ಜಾಗ ಕೊಟ್ಟವರು, ಅವರನ್ನು ಬಲವಂತವಾಗಿ ದೂಡಿದವರ ವಿರುದ್ಧ ದಾಖಲಾಗಬೇಕಾದ ಪ್ರಕರಣಗಳು ಮಹಿಳೆಯರ ಮೇಲೆ ಮಾತ್ರ ದಾಖಲಾಗುತ್ತಿದೆ. ಮಹಿಳೆಯರು ಠಾಣೆಗಳಲ್ಲಿ ಮುಕ್ತವಾಗಿ ನ್ಯಾಯ ಕೇಳಲು ಪೊಲೀಸರ ಭಯ ಇಲ್ಲದಂತೆ ಮಾಡಬೇಕಾಗಿದೆಯೆಂದರು.
ನ್ಯಾಯಧೀಶರಾದ ಸಂಗಣ್ಣ ಬಿ. ಪಾಟೀಲ್, ಕೆಂಗಬಾಲಯ್ಯ, ಕೆ.ಜಿ. ಚಿಂತಾ, ಜಿ.ಕುಮಾರ್, ಆರ್. ನಟೇಶ್, ಕೆಎಚ್‌ಪಿಟಿ ರಾಜ್ಯ ಸಂಯೋಜಕಿ ಸುನೀತಾ, ಪ್ರಾದೇಶಿಕ ವ್ಯವಸ್ಥಾಪಕ ಪರಮೇಶ್ವರ ಹೊಳ್ಳ ಇದ್ದರು. ಸುಬ್ರಮಣಿ ಸ್ಪಾಗತಿಸಿ, ಕೆ.ಬಿ. ಬಾಲಸುಬ್ರಮಣ್ಯ ನಿರೂಪಿಸಿ, ಸರ್ಕಲ್ ಇನ್ಸ್‌ಪೆಕ್ಟರ್ ರಮೇಶ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

