ನೀರು, ರಸ್ತೆ, ಕಸ ವಿಲೇವಾರಿ ಸಮಸ್ಯೆ ಪರಿಹರಿಸಿ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಸೆ. 22
ಕುಡಿಯುವ ನೀರಿನ ಸಮಸ್ಯೆಯ ಜತೆಗೆ ನಗರದಲ್ಲಿ ಕಾಡುತ್ತಿರುವ ಅಸಮರ್ಪಕ ಕಸ ವಿಲೇವಾರಿ, ಹದಗೆಟ್ಟ ರಸ್ತೆಗಳ ಕಿರಿಕಿರಿಗೆ ರೋಸಿ ಹೋಗಿರುವ ಜನರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದ ಸರ್ ಎಂ.ವಿ. ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಜಲ್ಲಿ ಮಣ್ಣಿನ ಮೂಲಕ ತಾತ್ಕಾಲಿಕ ತೇಪೆ ಹಾಕಿ ಕ್ರೀಡಾಂಗಣ ಮಾರ್ಗದ ರಸ್ತೆಯ ಗುಂಡಿ ಮುಚ್ಚಲಾಗಿತ್ತು. ಈ ಹಿಂದೆ ಜನರು ಈ ಹದಗೆಟ್ಟ ರಸ್ತೆಯಲ್ಲಿ ಓಡಾಡುತ್ತ ಸದಾ ಕಿರಿಕಿರಿ ಅನುಭವಿಸುತ್ತಿದ್ದರೂ ತಲೆ ಕೆಡಿಸಿಕೊಂಡಿರಲಿಲ್ಲ. ಈಗ ಮತ್ತೆ ರಸ್ತೆ ಹಾಳಾಗಿದ್ದು, ಕ್ರೀಡಾಂಗಣಕ್ಕೆ ಹೋಗುವ ಕ್ರೀಡಾಪಟುಗಳಿಂದ ಹಿಡಿದು ಸಾರ್ವಜನಿಕರು ರಸ್ತೆಯ ದುಸ್ಥಿತಿ ನೋಡಿ ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಇದೊಂದೇ ಅಲ್ಲ, ಎಪಿಎಂಸಿ ಯಾರ್ಡು, ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ಮುಂಭಾಗದ ವೃತ್ತ, ಸಿಎಸ್ಐ ಆಸ್ಪತ್ರೆ ರಸ್ತೆ, ವೇಣುಗೋಪಾಲಸ್ವಾಮಿ ರಸ್ತೆ, ಸಾಧುಮಠ ರಸ್ತೆ, ಹೊಸ ಬಸ್ ನಿಲ್ದಾಣ ರಸ್ತೆ... ಹೀಗೆ ಬಹುತೇಕ ರಸ್ತೆಗಳ ಪಾಡು ಹೇಳತೀರದಾಗಿದೆ. ಇತ್ತೀಚೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೊಬೈಲ್ ಕಂಪನಿಯೊಂದು ಕೇಬಲ್ ವೈರ್ಅನ್ನು ಅಳವಡಿಸಲು ರಸ್ತೆ ಅಗೆದಿದ್ದು, ನಂತರ ಸರಿಪಡಿಸುವುದನ್ನು ಮರೆತಿರುವ ಹಿನ್ನೆಲೆಯಲ್ಲಿ ರಸ್ತೆಗಳು ಇನ್ನಷ್ಟು ಗಬ್ಬೆದ್ದು ಹೋಗಿವೆ.
ಕಳಪೆ ಚರಂಡಿ ಕಾಮಗಾರಿ: ಇತ್ತೀಚಿನ ದಿನಗಳಲ್ಲಿ ಮಳೆ ಹೆಚ್ಚಿಗೆ ಬೀಳುತ್ತಿದೆ. ಆದರೆ, ಮಳೆಯ ನೀರಾಗಲಿ, ಕೊಳಚೆ ನೀರಾಗಲಿ ನಗರದ ಯಾವುದೇ ಚರಂಡಿಗಳಲ್ಲಿ ಹರಿಯುತ್ತಲೇ ಇಲ್ಲ. ಕಸ- ಕಡ್ಡಿಯಿಂದ ತುಂಬಿ ತುಳುಕಾಡುತ್ತ ನೀರು ಒಂದೇ ಕಡೆ ನಿಂತು ಹೋಗುತ್ತದೆ. ಇದಕ್ಕೆಲ್ಲಾ ಕಾರಣವಾಗಿರುವುದು ಗುತ್ತಿಗೆದಾರರು ಮತ್ತು ನಗರಸಭೆಯ ಪರಸ್ಪರ ಹೊಂದಾಣಿಕೆಯಿಂದ ಬಹುತೇಕ ಚರಂಡಿ ಕಾಮಗಾರಿ ಕಳಪೆ ಗುಣಮಟ್ಟದಿಂದ ನಡೆದಿರುವುದು. ಎಲ್ಲೂ ಸಮತಟ್ಟಾಗಿ ಚರಂಡಿ ನಿರ್ಮಾಣವಾಗಿಲ್ಲ. ಒಂದು ಕಡೆ ತಗ್ಗು, ಮತ್ತೊಂದೆಡೆ ಏರುಮಟ್ಟದ ಅಂತರದಲ್ಲಿದ್ದು, ಹೀಗೆ ಅನೇಕ ಕಡೆ ಕಳಪೆ ಕಾಮಗಾರಿಯಲ್ಲಿ ಚರಂಡಿಗಳು ನಿರ್ಮಾಣವಾದರೂ ಪ್ರಶ್ನಿಸದ ಕಾರಣ ಜನರು ಸಮಸ್ಯೆ ಅನುಭವಿಸುವಂತಾಗಿದೆ. ಇನ್ನೂ ಸಾಧುಮಠದ ರಸ್ತೆ, ನಗರದ ಹೊಸ ಬಸ್ ನಿಲ್ದಾಣದ (ತಿಮ್ಮೇಗೌಡನ ಕೆರೆ) ಮತ್ತು ಲಕ್ಕಮ್ಮ ದೊಡ್ಡ ಮುನಿಯಪ್ಪ ಕಲ್ಯಾಣ ಮಂಟಪ, ಸರ್ಕಾರಿ ಮಾದರಿ ಹೊಸ ಹಿರಿಯ ಪ್ರಾಥಮಿಕ ಶಾಲೆಯ ಮಾರ್ಗವಾಗಿ ನಿರ್ಮಿಸಲಾಗಿರುವ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೇ ತ್ಯಾಜ್ಯದೊಂದಿಗೆ ಕೊಳಚೆ ನೀರು ನಿಂತುಕೊಂಡಿರುತ್ತದೆ. ಕಸ- ಕಡ್ಡಿಯಿಂದ ಕೂಡಿರುವ ಈ ನೀರಿನಿಂದ ಹರಡುತ್ತಿರುವ ಗಬ್ಬು ವಾಸನೆಗೆ ಅಲ್ಲಿನ ನಿವಾಸಿಗಳು ಪರಿತಪಿಸುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಸಂಚರಿಸುತ್ತಿದ್ದಾರೆ. ಈ ಬಗ್ಗೆ ದೂರು ನೀಡುತ್ತಿದ್ದರೂ ನಗರಸಭೆ ಮಾತ್ರ ತಲೆ ಕೆಡಿಸಿಕೊಳ್ಳದೇ ಕೇವಲ ಚರ್ಚೆಗೆ ಮಾತ್ರ ಸೀಮಿತಗೊಳಿಸಿಕೊಂಡು ಬರುತ್ತಿದೆ. ಕೊಳಚೆ ನೀರಿನಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಜತೆಗೆ ಈ ಚರಂಡಿಗಳ ನಡುವೆಯೇ ಕುಡಿಯುವ ನೀರಿನ ಪೈಪ್ಲೈನ್ ಹಾದು ಹೋಗಿರುವುದರಿಂದ ಕುಡಿಯುವ ನೀರಿಗೂ ಮತ್ತು ಚರಂಡಿ ನೀರು ಮಿಶ್ರಣವಾಗಿ ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ.
ನೀರಿನ ಸಮಸ್ಯೆ ಕಾಟ: ಮಳೆಗಾಲದಲ್ಲೂ ಕುಡಿಯುವ ನೀರಿನ ಸಮಸ್ಯೆ ಮಿತಿ ಮೀರಿದ್ದು, ನಗರದ ಜನರು ಖಾಸಗಿ ಟ್ಯಾಂಕರುಗಳ ಮೂಲಕ ನೀರನ್ನು ಕೊಂಡುಕೊಳ್ಳುತ್ತಿದ್ದಾರೆ. ಒಂದು ಬಿಂದಿಗೆ 5 ತೆರುತ್ತಿದ್ದು, ಮತ್ತೆ ಕೆಲವರು ನಗರದ ಹೊರ ವಲಯದ ಕಂದವಾರ ಬಳಿರುವ ನಗರಸಭೆಯ ಪಂಪ್ಸೆಟ್, ಅಗಲಗುರ್ಕಿ, ತಿಪ್ಪೇನಹಳ್ಳಿ ಸೇರಿದಂತೆ ಬೇರೆ ಕಡೆಗೆ ಬೆಳಗ್ಗೆ ಮತ್ತು ರಾತ್ರಿ ತೆರಳಿ ನೀರನ್ನು ತರುತ್ತಿದ್ದಾರೆ. ಹೀಗಿದ್ದರೂ ನೀರಿನ ಕರ ವಸೂಲಿ ಮಾಡಲು ನಿರ್ಲಕ್ಷ್ಯ ತೋರುತ್ತಿರುವ ನಗರಸಭೆ ನೀರಿನ ಸಮಸ್ಯೆಯ ಬಗ್ಗೆಯೂ ಜಾಣ ಕುರುಡತನ ಪ್ರದರ್ಶಿಸುತ್ತಿದೆ. ಎರಡ್ಮೂರು ವಾರಗಳಿಗೊಮ್ಮೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ನೀರಿಗಾಗಿ ಕೊಳಾಯಿಗಳ ಮುಂದೆ ದಿನಗಟ್ಟಲೇ ಕಾದು ಕುಳಿತುಕೊಳ್ಳುವ ಅನಿವಾರ್ಯ ವಾತಾವರಣ ನಿರ್ಮಾಣವಾಗಿದೆ.
ನಗರಸಭಾ ಸದಸ್ಯರ ಮುಂದೆ ಅಳಲು
ಚಿಕ್ಕಬಳ್ಳಾಪುರ: ವಾರ್ಡಿನಲ್ಲಿ ಕಳೆದ ಕೆಲ ತಿಂಗಳುಗಳಿಂದ ಕುಡಿಯುವ ನೀರು, ಕಸ ವಿಲೇವಾರಿ ಸಮಸ್ಯೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದು, ಇದನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಅಮ್ ಆದ್ಮಿ ಪಕ್ಷದ ಮುಖಂಡರ ನೇತೃತ್ವದಲ್ಲಿ ಸಾರ್ವಜನಿಕರು 17ನೇ ವಾರ್ಡಿನ ಸದಸ್ಯ ರಫಿಕ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ವಾರ್ಡಿನಲ್ಲಿ ಜನರು ಮೂಲ ಸೌಕರ್ಯಗಳ ಕೊರತೆಯಿಂದ ತತ್ತರಿಸುತ್ತಿದ್ದಾರೆ. ಅಸಮರ್ಪಕ ಕಸ ವಿಲೇವಾರಿಯಿಂದ ಎಲ್ಲೆಡೆ ಅಸ್ವಚ್ಛತೆ ರಾರಾಜಿಸುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಿದೆ. ಇನ್ನೂ ನೀರಿನ ಸಮಸ್ಯೆ ಹಿಂಡಿ ಹಿಪ್ಪೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಜನರಿಗೆ ಮೂಲ ಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ರಫಿಕ್, ನಗರಸಭೆಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷ ಸ್ಥಾನ ಖಾಲಿಯಿದ್ದು, ಸಮರ್ಪಕವಾಗಿ ಆಡಳಿತ ನಡೆಯುತ್ತಿಲ್ಲ.ಅಧಿಕಾರಿಗಳು ಸಹ ತಲೆ ಕೆಡಿಸಿಕೊಳ್ಳದಿರುವುದರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಯಾದ ನಂತರ ಸಂಬಂಧಪಟ್ಟವರ ಮೇಲೆ ಒತ್ತಡ ಹೇರಿ ಸಮಸ್ಯೆ ಬಗೆಹರಿಸಿ ಜನರಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

