ಕೋಲಾರ

ಕನಕ ಅಧ್ಯಯನ ಕೇಂದ್ರಕ್ಕೆ 5 ಕೋಟಿ ನೀಡಿ

Published On :

ಕ.ಪ್ರ.ವಾರ್ತೆ ಕೋಲಾರ ಸೆ.24
ಬಿಜೆಪಿ ಸರ್ಕಾರವಿದ್ದಾಗ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಕ್ಕೆ ಯಾವುದೇ ರೀತಿಯಲ್ಲಿ ಸಹಕಾರ ಸಿಕ್ಕಿಲ್ಲ. ಹಿಂದುಳಿದ ವರ್ಗಕ್ಕೆ ಸೇರಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಸಂಸ್ಥೆಗೆ ಆರ್ಥಿಕ ಸಹಾಯ ನೀಡಲಿ ಎಂದು ಶಾಸಕ ಆರ್.ವರ್ತೂರ್ ಪ್ರಕಾಶ್ ಒತ್ತಾಯಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 'ಕಾಲುದಾರಿ ಸಂತ ಪರಂಪರೆ ಮತ್ತು ಕಸನದಾಸರು' ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುರಂದರದಾಸರ ನಂತರ ಕನಕದಾಸರು ಸಂತರಲ್ಲಿ ಅಗ್ರಗಣ್ಯರಾಗಿದ್ದಾರೆ. ಇವರ ಕುರಿತು ಅಧ್ಯಯನ ಮತ್ತು ಸಂಶೋಧನೆಗಾಗಿ ಸ್ಥಾಪಿತವಾಗಿರುವ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಕ್ಕೆ ಕಾಂಗ್ರೆಸ್ ನೇತೃತ್ವದ ಸರ್ಕಾರ 5 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಈ ಸಂಬಂಧ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸುತ್ತೇನೆ. ಮಹಾ ಪುರುಷರಾದ ಕನಕದಾಸರ ಆಧ್ಯಯನ ಕೇಂದ್ರದ ಕಟ್ಟಡಕ್ಕೆ ಮುಖ್ಯಮಂತ್ರಿಗಳು ಅನುದಾನ ಬಿಡುಗಡೆ ಮಾಡಿ ಇನ್ನೊಂದು ವರ್ಷದಲ್ಲಿ ಬೆಂಗಳೂರಿನಲ್ಲಿ ಸ್ವಂತ ಕಟ್ಟಡ ಹೊಂದಲು ಸಹಕಾರ ನೀಡಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಕೃತಿ ಚಿಂತಕರಾದ ಡಾ.ಜಿ.ರಾಮಕೃಷ್ಣ ಉದ್ಘಾಟಿಸಿದರು. ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ ಪ್ರಸ್ತಾವಿಕವಾಗಿ ಮಾತನಾಡಿ, ಅಲಕ್ಷಿತ ಸಮುದಾಯದ ದನಿಯಾಗಿದ್ದ ಸಂತ ಕನಕದಾಸರು ಮತ್ತು ಕಾಲುದಾರಿ ಸಂತ ಪರಂಪರೆಯನ್ನು ಜನತೆಗೆ ತಿಳಿಸುವ ಉದ್ದೇಶದಿಂದ ವಿಚಾರ ಸಂಕಿರಣವನ್ನು ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿದೆ. ಎರಡು ದಿನಗಳ ವಿಚಾರಗೋಷ್ಠಿಯಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಬಂದಿರುವ ಪಂಡಿತರು ಪ್ರಬಂಧಗಳನ್ನು ಮಂಡನೆ ಮಾಡಲಿದ್ದಾರೆಂದು ವಿವರಿಸಿದರು.
ರಾಜ್ಯ ಉದ್ಯೋಗ ತರಬೇತಿ ಇಲಾಖೆಯ ನಿರ್ದೇಶಕರಾದ ಡಾ.ಡಿ.ಎಸ್.ವಿಶ್ವನಾಥ್ ಇದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜೆ.ಜಿ.ನಾಗರಾಜ ಸ್ವಾಗತಿಸಿ, ಗೌರವ ಕಾರ್ಯದರ್ಶಿ ಮಾಲೂರು ಅಶ್ವತ್ಥರೆಡ್ಡಿ ವಂದಿಸಿ, ನಿರ್ಮಲ ನಿರೂಪಿಸಿದರು.

ಇಂದು 'ಮುತ್ತು ಬಂದಿದೆ ಕೇರಿಗೆ' ಧ್ವನಿ ಸುರುಳಿ ಬಿಡುಗಡೆ
ಕೋಲಾರ: ನಾಡಿನ ಖ್ಯಾತ ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಜಾನಪದ ಶೈಲಿಯಲ್ಲಿ ಹಾಡಿರುವ ಕನಕದಾಸರ ಕೀರ್ತನೆಗಳ ಧ್ವನಿಸುರಳಿ 'ಮುತ್ತು ಬಂದಿದೆ ಕೇರಿಗೆ'ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೆ.25ರಂದು ಸಂಜೆ 4 ಗಂಟೆಗೆ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬಿಡುಗಡೆ ಮಾಡಲಿದ್ದಾರೆ.
ಸಾಮಾಜಿಕ ಅಸಮಾನತೆ ಬಗ್ಗೆ ತಲ್ಲಣಿಸಿದ ಕನಕದಾಸರು ತಮ್ಮ ಕಾವ್ಯ ಹಾಗೂ ಕೀರ್ತನೆಗಳ ಮೂಲಕ ತಮ್ಮ ಜೀವನ ದರ್ಶನದ ಮೂಲಕ ಉತ್ತರ ನೀಡಿದ್ದಾರೆ. ಹಸನು ಬದುಕು, ಸಮಾಜದ ಬಗ್ಗೆ ಮಾನವೀಯ ಮೌಲ್ಯದ ಕನಸು ಬಿತ್ತಿದ್ದರು. ಹೋರಾಟ ಮತ್ತು ಜಾನಪದೀಯ ನೆಲೆಯಲ್ಲಿ ರೂಪುಗೊಂಡ ಪಿಚ್ಚಳ್ಳಿ ಶ್ರೀನಿವಾಸ್ ಅವರು ಕನಕದಾಸರ ಆಯ್ದ ಕೀರ್ತನೆಗಳಿಗೆ ರಾಗ ಸಂಯೋಜಿಸಿ ಧ್ವನಿ ಸುರಳಿಯನ್ನು ಹೊರತಂದಿದ್ದಾರೆ.
ಧ್ವನಿಸುರುಳಿಯನ್ನು ದಲಿತ ಸಂಘರ್ಷ ಸಮಿತಿ ವತಿಯಿಂದ ಅಣ್ಣಯ್ಯ ಮತ್ತು ಮಂಜುನಾಥ ನಿರ್ಮಾಣ ಮಾಡಿದ್ದಾರೆಂದು ದಸಂಸ ಜಿಲ್ಲಾ ಸಂಚಾಲಕ ದೊಡ್ಡಮಲ್ಲೆ ರವಿಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.