ಬರಡು ನಾಡಿನಲ್ಲಿ ಓಯಾಸಿಸ್ ಚಿಮ್ಮಿಸಲಿ!
-ಪಾ. ಶ್ರೀ.ಅನಂತರಾಮ್
ಕೋಲಾರ: ನೀರಿಲ್ಲದ ನಾಡು, ಬೆಳೆ ಇಲ್ಲದ ಬೀಡು, ಅಭಿವೃದ್ಧಿ ಕಾಣದ ಊರು... ಸ್ಮಶಾನಕ್ಕಿಂತ ಕೀಳು.
ಈ ನುಡಿಗಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಿಳಿಯದ ಸಂಗತಿಯೇನಲ್ಲ. ಸಮಾಜವಾದಿಯಾಗಿ, ಹೋರಾಟಗಾರರಾಗಿ, ಆಡಳಿತಗಾರರಾಗಿ ಸಾಕಷ್ಟು ಅನುಭವ ಹೊಂದಿರುವ ನಾಡಿನ ದೊರೆಗೆ ವಿಶ್ವಕ್ಕೆ ಚಿನ್ನ ಕೊಟ್ಟ ಕೋಲಾರದ ಸ್ಥಿತಿ ಈಗ ಏನಾಗಿದೆ ಎಂಬುದು ಗೊತ್ತಿರಲೇಬೇಕು. ಮಳೆಯನ್ನು ಆಧರಿಸಿ ಬದುಕುತ್ತಿರುವ ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆ ಅವಲಂಬಿತ ಜನರ ಸಂಕಟ ಅರ್ಥ ಮಾಡಿಸಬೇಕಾದ ಅವಶ್ಯಕತೆಯಿಲ್ಲ.
ಕಳೆದ 15-20 ವರ್ಷಗಳಿಂದ ಕೋಲಾರದ ಪರಿಸ್ಥಿತಿ ಶೋಚನಿಯವಾಗಿದೆ. ಅತಿ ಹೆಚ್ಚು ಕೆರೆಗಳು ಇರುವ ಜಿಲ್ಲೆ ಎಂದು ಹೆಗ್ಗಳಿಕೆ ಹೊಂದಿದೆಯಾದರೂ ಜಲ ಗಣಿಗಳಾಗಬೇಕಾಗಿದ್ದ ಕೆರೆಗಳು ಮಳೆಯ ಅಭಾವ, ಭೂಗಳ್ಳರು ಮತ್ತು ಮರಳು ಮಾಫಿಯಾಗಳ ಹಣದ ದಾಹದಿಂದ ಕೆರೆಗಳು ಬರಡಾಗಿರುವುದರಿಂದ ನೀರಿಗೆ ಪರದಾಡುವಂತಾಗಿದೆ.
ಜಿಲ್ಲೆಗೆ ಸರ್ಕಾರ ಅಗ್ಗದ ಯೋಜನೆಗಳನ್ನು ನೀಡುವ ಬದಲು ಶಾಶ್ವತ ನೀರಾವರಿ ಯೋಜನೆಯ ಜಾರಿಗೆ ದಿಟ್ಟ ನಿರ್ಧಾರ ಕೈಗೊಂಡಲ್ಲಿ ಜಿಲ್ಲೆಯ ಅಸ್ತಿತ್ವ ಉಳಿಯಲು ಸಾಧ್ಯವಾಗುತ್ತದೆ. ಯರಗೋಳ್ ಯೋಜನೆ ರೂಪಿಸಿ ಐದಾರು ವರ್ಷಗಳು ಕಳೆದರೂ ಕಾಮಗಾರಿ ಅನುಷ್ಠಾನಗೊಂಡಿಲ್ಲ. ಪರಮಶಿವಯ್ಯ ವರದಿ ಜಾರಿಗೆ ನೂರೆಂಟು ವಿಘ್ನಗಳು ಎದುರಾಗಿವೆ. ಎತ್ತಿನಹೊಳೆ ಘೋಷಣೆಯಾಗಿದ್ದರೂ ಜಾರಿ ವಿಳಂಬವಾಗುತ್ತಿದೆ. ಕೆಲವರು ಈ ಯೋಜನೆಗಳ ಮೇಲೆ ನಂಬಿಕೆ ಇಲ್ಲವೆಂದು ತಾವೇ ಹೊಸ ಯೋಜನೆಗಳನ್ನು ಸೃಷ್ಟಿ ಮಾಡಿ ಗೊಂದಲಕ್ಕೆ ಎಡೆ ಮಾಡುತ್ತಿದ್ದಾರೆ. ವರ್ತೂರು ಕೆರೆ ನೀರನ್ನು ಜಿಲ್ಲೆಗೆ ಹರಿಸುವ ಬಗ್ಗೆಯೂ ಚಿಂತನೆ ನಡೆದಿದೆ.
ಮುಖ್ಯಮಂತ್ರಿಗಳು ಜನತೆಯಲ್ಲಿನ ಅನುಮಾನ ನಿವಾರಣೆ ಮಾಡಲು ಸ್ಪಷ್ಟ ಭರವಸೆಯನ್ನು ನೀಡುವ ಮೂಲಕ ಭಗೀರಥನಾಗಬೇಕಾಗಿದೆ. ಜಿಲ್ಲೆಗೆ ನೀರು ಕೊಟ್ಟಲ್ಲಿ ಬದುಕಿನ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಿರುವ ಜನತೆಗೆ ನೆಮ್ಮದಿ ಸಿಕ್ಕಿದಂತಾಗುತ್ತದೆ. ಶಾಶ್ವತ ನೀರಾವರಿ ಯೋಜನೆ ಯಾವುದೇ ಆಗಿರಲಿ ಅಲ್ಪಾವಧಿಯಲ್ಲಿ ಕಾಮಗಾರಿಗಳು ಮುಗಿದು ಜನತೆಯ ದಾಹ ನೀಗಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಆಗಬೇಕಾಗಿದೆ. ಸರ್ಕಾರದ ಬಳಿ ಕೋಟಿಗಟ್ಟಲೆ ಹಣ ವ್ಯಯ ಮಾಡುವುದಕ್ಕೆ ಶಕ್ತಿ ಇಲ್ಲದಿದ್ದಲ್ಲಿ ಬಾಂಡ್‌ಗಳನ್ನು ಮಾರಾಟ ಮಾಡಿ ಹಣ ಸಂಗ್ರಹಿಸುವುದಕ್ಕೆ ಅವಕಾಶಗಳು ಇವೆ.
ಕೇಂದ್ರ ಸರ್ಕಾರದ ಮುಂದೆ ಅವಳಿ ಜಿಲ್ಲೆಗಳಿಗೆ ಸೇರಿದ ಕೆರೆಗಳ ಸಮಗ್ರ ಅಭಿವೃದ್ಧಿಗಾಗಿ 11 ಸಾವಿರ ಕೋಟಿ ಯೋಜನೆಯನ್ನು ಕಳುಹಿಸಲಾಗಿದೆ. ಮುಖ್ಯಮಂತ್ರಿಗಳು ಈ ಯೋಜನೆಗೆ ಮಂಜೂರಾತಿ ದೊರಕಿಸಿಕೊಟ್ಟಲ್ಲಿ ಜಿಲ್ಲೆಯ ಜನತೆ ಗುಳೆ ಹೋಗುವುದು ತಪ್ಪುತ್ತದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಶಾಸಕರನ್ನು ದೆಹಲಿಗೆ ಕರೆದೊಯ್ದು ಸಂಬಂಧಪಟ್ಟ ಜನಸಂಪನ್ಮೂಲ ಸಚಿವರೊಟ್ಟಿಗೆ ಚರ್ಚಿಸಲು ಅವಕಾಶ ಮಾಡಿಕೊಟ್ಟಲ್ಲಿ ಕೆರೆಗಳ ಅಭಿವೃದ್ಧಿಗೆ ಬೇಕಾದ ಆರ್ಥಿಕ ನೆರವು ಪಡೆಯಬಹುದಾಗಿದೆ.
ಜತೆಗೆ ಪಶ್ಚಿಮಘಟ್ಟದಿಂದ ಬಯಲು ಸೀಮೆ ಜಿಲ್ಲೆಗಳಿಗೆ ನೀರು ಪಡೆಯುವ ವಿಚಾರದಲ್ಲಿ ಕರಾವಳಿ ಭಾಗದ ಜನತೆಯಲ್ಲಿ ಅನುಮಾನ, ಆತಂಕ ಸೃಷ್ಟಿಯಾಗಿರುವುದರಿಂದ ಕೂಡಲೇ ಮುಖ್ಯಮಂತ್ರಿಗಳು ಆ ಭಾಗದ ಮತ್ತು ಬಯಲು ಸೀಮೆಯ ಜನಪ್ರತಿನಿಧಿಗಳ ಸಭೆಯನ್ನು ಕರೆದು ಪರಮಶಿವಯ್ಯ ವರದಿಯ ಬಗ್ಗೆ ಸಮಗ್ರವಾಗಿ ಚರ್ಚಿಸಿ ಗೊಂದಲ ನಿವಾರಣೆ ಮಾಡುವ ಮೂಲಕ ಯಾವುದೇ ನದಿ ನಾಲೆ ಇಲ್ಲದೆ ಮಳೆಯನ್ನು ಆಧರಿಸಿರುವ ಕೋಲಾರ ಜಿಲ್ಲೆಯ ಹಿತ ಕಾಪಾಡಲು ಗಟ್ಟಿ ಮನಸ್ಸು ಮಾಡುವುದರ ಜತೆಗೆ ಸೆ.25ರಂದು ಈ ಕುರಿತು ತಮ್ಮ ಸ್ಪಷ್ಟ ಅಭಿಪ್ರಾಯ, ನಿಲುವು ಪ್ರಕಟಿಸುವ ಮೂಲಕ ಜನತೆ ಕಾಂಗ್ರೆಸ್ ನೇತೃತ್ವ ಸರ್ಕಾರದ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳಬೇಕಾಗಿದೆ.
ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಪರ್ವ ಆರಂಭವಾಗಿದೆ. ಉದ್ದಿಮೆದಾರರು ಕನಿಷ್ಟ 50 ವರ್ಷಗಳ ಕಾಲ ಯಾವುದೇ ಅಡೆತಡೆಗಳು ಇಲ್ಲದೆ ಕೈಗಾರಿಕೆಗಳನ್ನು ನಡೆಸಬೇಕಾದರೆ ನೀರು ಅತಿ ಮುಖ್ಯ. ಹಾಗೆಯೇ ಕೃಷಿ ಚಟುವಟಿಕೆಗಳಿಗೂ ನೀರಾವರಿ ಅತ್ಯಗತ್ಯವಾಗಿರುವುದರಿಂದ ಅದಷ್ಟು ಬೇಗನೆ ನೀರಿಗೆ ಹೆಚ್ಚಿನ ಅದ್ಯತೆ ನೀಡುವ ಯೋಜನೆಗೆ ಚಾಲನೆ ನೀಡುವುದು ಅತ್ಯಗತ್ಯ. ಜಿಲ್ಲೆಯ ಜನತೆ ಮುಖ್ಯಮಂತ್ರಿಗಳಿಂದ ಬೇರೆ ಏನನ್ನು ಅಪೇಕ್ಷೆ ಮಾಡುತ್ತಿಲ್ಲ. ನೀರಿನ ಸೌಕರ್ಯ ಕಲ್ಪಿಸಿದರೆ ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಸಿಗುವಂತೆ ಮಾಡಬಲ್ಲ ಶಕ್ತಿ ಹೊಂದಿರುವುದರಿಂದ ಮುಖ್ಯಮಂತ್ರಿಗಳು ಜಿಲ್ಲೆಯ ಪಾಲಿಗೆ ಭಗೀರಥನಾಗಲಿ ಎಂಬುದು ಜನತೆಯ ಆಶಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

