ಸಿಎಂ ಸ್ವಾಗತಕ್ಕೆ ತೇಪೆ ಕಾರ್ಯಕ್ರಮ!
ಕ.ಪ್ರ.ವಾರ್ತೆ ಕೋಲಾರ ಸೆ.24
ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಭೇಟಿ ನೀಡುತ್ತಿರುವುದರಿಂದ ಅದ್ಧೂರಿ ಸ್ವಾಗತಕ್ಕೆ ಜಿಲ್ಲಾ ಆಡಳಿತ ಸಕಲ ಸಿದ್ಧತೆ ನಡೆಸುತ್ತಿದೆ. ತಾಲೂಕಿನ ವೇಮಗಲ್ ಮತ್ತು ಕೋಲಾರದಲ್ಲಿ ರಸ್ತೆ, ಚರಂಡಿ ಹಾಗೂ ಪ್ರಮುಖ ವೃತ್ತಗಳನ್ನು ನವ ವಧುವಿನಂತೆ ಸಿಂಗರಿಸಲಾಗುತ್ತಿದೆ. ಗುಂಡಿ ಬಿದ್ದ ರಸ್ತೆಗಳಿಗೆ ತೇಪೆ ಹಾಕುವ ಮೂಲಕ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಲಾಗುತ್ತಿದೆ.
ನಗರದ ರಸ್ತೆಗಳ ಸ್ಥಿತಿಗತಿಗಳ ಕುರಿತು 'ಕನ್ನಡಪ್ರಭ' ಪ್ರಕಟಿಸಿದ ಸುದ್ದಿಗೆ ಈ ಮೂಲಕ ಮಾನ್ಯತೆ ಸಿಕ್ಕಂತಾಗಿದೆ. ಮೆಕ್ಕೆ ವೃತ್ತ, ಚಿಕ್ಕಬಳ್ಳಾಪುರ ರಸ್ತೆಯಲ್ಲೂ ರಸ್ತೆಗಳ ದುರಸ್ತಿ ಕಾರ್ಯ ಶರವೇಗದಲ್ಲಿ ನಡೆಸಲಾಗುತ್ತಿದೆ. ನಗರಸಭೆಯ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ. ಪೌರ ಕಾರ್ಮಿಕರು ನಗರದ ಪ್ರಮುಖ ಕಡೆ ಕಸ ವಿಲೇವಾರಿಯಲ್ಲಿ ನಿರತರಾಗಿದ್ದಾರೆ. ಮುಖ್ಯಮಂತ್ರಿಗಳನ್ನು ಹಾಗೂ ರಾಜ್ಯ ಸಚಿವ ಸಂಪುಟದ ಸಚಿವರಿಗೆ ಸ್ವಾಗತ ಕೋರಲು ಕಾಂಗ್ರೆಸ್ ಮುಖಂಡರು ಹಾಗೂ ಅಭಿಮಾನಿಗಳು ಕಟೌಟ್‌ಗಳ ಪ್ರದರ್ಶನದಲ್ಲಿ ಪೈಪೋಟಿ ನಡೆಸಿದ್ದಾರೆ.
ಇಡೀ ಕೋಲಾರದಲ್ಲಿ ನೂರಾರು ಕಟೌಟ್‌ಗಳು ರಾರಾಜಿಸುತ್ತಿವೆ. ಮುಖ್ಯಮಂತ್ರಿಗಳ ಆಗಮನದ ನೆಪದಲ್ಲಿ ಕೋಲಾರದಲ್ಲಿ ರಸ್ತೆಗಳ ದುರಸ್ತಿ ಹಾಗೂ ಸ್ವಚ್ಛತಾ ಕೆಲಸ ನಡೆಯುತ್ತಿರುವುದಕ್ಕೆ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗಳ ಪ್ರವಾಸದ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಬೇರೆ ಕಡೆಗಳಿಂದ ಭದ್ರತಾ ಕಾರ್ಯಕ್ಕಾಗಿ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳ ಕಾರ್ಯಕ್ರಮ ಯಶಸ್ವಿಗಾಗಿ ಜಿಲ್ಲಾಧಿಕಾರಿ ಡಿ.ಕೆ.ರವಿ ನೇತೃತ್ವದಲ್ಲಿ ಅಧಿಕಾರಿಗಳ ಸಮನ್ವಯ ಸಮಿತಿ ರಚನೆಯಾಗಿದ್ದು, ಜಿಪಂ ಸಿಇಒ ಝುಲ್ಫಿಖಾರ್ ಉಲ್ಲಾ ಹಾಗೂ ಜಿಲ್ಲಾ ಎಸ್‌ಪಿ ಡಾ.ರಾವ್‌ನಿವಾಸ್ ಪಟ್ಟೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಯಾವುದೇ ಲೋಪ ಬರದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹಾಗೂ ಕಾಂಗ್ರೆಸ್ ಮುಖಂಡರು ಸಹ ಪ್ರಥಮ ಬಾರಿಗೆ ಕೋಲಾರಕ್ಕೆ ಬರುತ್ತಿರುವ ಮುಖ್ಯಮಂತ್ರಿಗಳು ಹಾಗೂ ವಿವಿಧ ಇಲಾಖೆಗಳ ಸಚಿವರನ್ನು ಸ್ವಾಗತಿಸಲು ಭರ್ಜರಿಯಾಗಿ ತಯಾರಿ ನಡೆಸಿದ್ದಾರೆ.
ಮುಖ್ಯಮಂತ್ರಿಗಳ ಕಾರ್ಯಕ್ರಮ
ಸೆ.25ರಂದು ಬೆಳಗ್ಗೆ 10.15ಕ್ಕೆ ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಕೋಲಾರ ತಾಲೂಕಿನ ವೇಮಗಲ್‌ಗೆ ಆಗಮಿಸುವರು. ವೇಗಮಲ್ ಕೈಗಾರಿಕಾ ಪ್ರದೇಶ ಶಿಲಾನ್ಯಾಸ ಸಮಾರಂಭವನ್ನು ವೇಮಗಲ್ ಕ್ರೀಡಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 1 ಗಂಟೆಗೆ ವೇಗಮಲ್‌ನಲ್ಲಿ ಕೆಲ ನಿಮಿಷ ತಂಗಲಿರುವ ಸಿದ್ದರಾಮಯ್ಯನವರು 1.30ಕ್ಕೆ ಅಲ್ಲಿಂದ ರಸ್ತೆ ಮೂಲಕ ಕೋಲಾರಕ್ಕೆ ಆಗಮಿಸಿ, ಮಧ್ಯಾಹ್ನ 1.45ಕ್ಕೆ ಕೋಲಾರ-ಬೆಂಗಳೂರು ರಸ್ತೆಯಲ್ಲಿನ ಸಾಯಿನಾರಾಯಣ ಕನ್ವೆನ್ಷನ್ ಹಾಲ್‌ನಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸುವರು. ಮ. 2.30ಕ್ಕೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕರ ಕುಂದು ಕೊರತೆ ಅಹವಾಲು ಸ್ವೀಕರಿಸಿದ ಬಳಿಕ ಸಂಜೆ 4 ಗಂಟೆಗೆ ಕೋಲಾರದ ಟಿ.ಚನ್ನಯ್ಯ ರಂಗ ಮಂದಿರದಲ್ಲಿ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಿಂದ ಏರ್ಪಡಿಸಿರುವ ವಿಚಾರ ಗೋಷ್ಠಿಯ ಸಮಾರೋಪದಲ್ಲಿ ಭಾಗವಹಿಸಿ 4.45ಕ್ಕೆ ಕೋಲಾರದಿಂದ ಬೆಂಗಳೂರಿಗೆ ತೆರಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

