ಕೋಲಾರ

ಅಪೂರ್ಣ ಕಟ್ಟಡ ಉದ್ಘಾಟನೆ ವಿರೋಧಿಸಿ ಪ್ರತಿಭಟನೆ

Published On :

ಬಂಗಾರಪೇಟೆ; ಪಟ್ಟಣದಲ್ಲಿ ನಿರ್ಮಾಣವಾಗಿರುವ ಕ್ಷೇತ್ರದ ಜನರ ಬಹುನಿರೀಕ್ಷಿತ ಮಿನಿ ವಿಧಾನಸೌಧವನ್ನು ಕೋಲಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುತ್ತಿರುವುದನ್ನು ವಿರೋಧಿಸಿ ಮಿನಿವಿಧಾನಸೌದ ಕಟ್ಟಡ ಮುಂದೆ ಬಿಜೆಪಿ ಮುಖಂಡರು ಕಪ್ಪು ಭಾವುಟ ಪ್ರದರ್ಶಿಸಿ ಪ್ರತಿಭಟನೆ ಮಾಡಿದರು.
ಬಿಜೆಪಿ ಆಡಳಿತದಲ್ಲಿ ಮಿನಿವಿಧಾನಸೌಧ ಕಟ್ಟಡಕ್ಕೆ ಅನುದಾನ ಮಂಜೂರಾಗಿತ್ತು ಇದರಲ್ಲಿ ಕಾಂಗ್ರೆಸ್ ಸರ್ಕಾರದ ಪಾತ್ರವೇನೂ ಇಲ್ಲ. ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಎರಡು ತಿಂಗಳಾದರೂ ಬೇಕು ಆತುರವಾಗಿ ಕಟ್ಟಡವನ್ನು ವೇಮಗಲ್‌ನಲ್ಲಿ ಲೋಕಾರ್ಪಣೆ ಮಾಡುವುದರ ಹಿಂದಿನ ಗುಟ್ಟೇನು ಎಂದು ಕೆಜಿಎಫ್ ಮಾಜಿ ಶಾಸಕ ವೈ. ಸಂಪಂಗಿ ಪ್ರಶ್ನಿಸಿದರು. ಮುಖ್ಯಮಂತ್ರಿಗಳದ್ದು ಸರ್ಕಾರಿ ಕಾರ್ಯಕ್ರಮವಾಗಿದ್ದರೂ ಇತರೇ ಪಕ್ಷದ ಜನಪ್ರತಿನಿಧಿಗಳನ್ನು ಕಡೆಗಣಿಸಿ ಕಾಂಗ್ರೆಸ್ ಕಾರ್ಯಕ್ರಮವೆಂದು ಬಿಂಬಸಲಾಗುತ್ತಿದೆ ಎಂದು ಟೀಕಿಸಿದರು. ಕೂಡಲೆ ಕೋಲಾರದಲ್ಲಿ ಚಾಲನೆ ದೊರೆಯುತ್ತಿರುವ ಎಲ್ಲಾ ಕಾಮಗಾರಿಗಳನ್ನು ರದ್ದುಪಡಿಸಬೇಕು ಮತ್ತೊಮ್ಮೆ ಎಲ್ಲಾ ಕಾಮಗಾರಿ ಪೂರ್ಣಗೊಂಡ ಬಳಿಕ ಕಂದಾಯ ಸಚಿವರನ್ನು ಕರೆಸಿ ಸ್ಥಳೀಯ ಪ್ರತಿನಿಧಿಗಳನ್ನು ಆಹ್ವಾನಿಸಿ ಅದ್ದೂರಿಯಾಗಿ ಚಾಲನೆ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕಾಂಗ್ರೆಸ್ ಪಕ್ಷದಲ್ಲಿ ಒಳ ಜಗಳ ಶುರುವಾಗಿದ್ದು ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುವ ಭೀತಿಯಿಂದ ನಾಮಫಲಕದಲ್ಲಿ ತಮ್ಮ ಹೆಸರು ಬರಲೆಂದು ಅಪೂರ್ಣವಾಗಿರುವ ಕಾಮಗಾರಿಗಳನ್ನು ಆತುರವಾಗಿ ಉದ್ಘಾಟಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಮಾನವಾಗಿದೆ ಎಂದು ತರಾಟೆಗೆ ತೆಗೆದುಕೊಂಡರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾದರೂ ಅಭಿವೃದ್ದಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಆದ್ದರಿಂದ ಕೂಡಲೆ ಮುಖ್ಯಮಂತ್ರಿಗಳಿಂದ ಬುಧವಾರ ಚಾಲನೆ ದೊರೆಯುತ್ತಿರುವ ಮಿನಿವಿಧಾಸೌಧ ಕಟ್ಟಡ ಹಾಗೂ ಯರಗೋಳ್ ಅಣೆಕಟ್ಟು ನಿರ್ಮಾಣದ ಕಾರ್ಯಗಳನ್ನು ರದ್ದು ಮಾಡಬೇಕು ಎಂದು ಪಟ್ಟುಹಿಡಿದರು. ಈ ವೇಳೆ ಜಿಪಂ ಸದಸ್ಯ ಆನಂದ್, ತಾ ಬಿಜೆಪಿ ಅಧ್ಯಕ್ಷ ಮಾರ್ಕಂಡೇಗೌಡ, ಪುರಸಭೆ ಸದಸ್ಯ ಬಿ.ಸಿ. ಮೂರ್ತಿ, ವೇದಾವತಿಪ್ರಭಾಕರ್, ಮೋಹನ್ ಮೂರ್ತಿ, ವಿಜಯಕುಮಾರ್, ರಮೇಶ್, ಚಂಗಲರಾಯರೆಡ್ಡಿ, ಬಾಲಚಂದ್ರ ಹಾಗೂ ಶಶಿಕುಮಾರ್ ಇದ್ದರು.

ಪರಿಶುದ್ಧರಾದಾಗ ಭ್ರಷ್ಟಾಚಾರ ತಡೆ ಸಾಧ್ಯ
ಕೋಲಾರ: ರಾಜಕಾರಣಿಗಳು ಭ್ರಷ್ಟಾಚಾರದಿಂದ ದೂರವಿದ್ದಲ್ಲಿ ಮಾತ್ರ ಭ್ರಷ್ಟಾಚಾರ ಕಡಿಮೆ ಮಾಡಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ತಾಲೂಕಿನ ವೇಮಗಲ್ ಗ್ರಾಮದಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಹಮ್ಮಿಕೊಂಡಿದ್ದ, ಬೃಹತ್ ಕಾರ್ಯಕ್ರಮದಲ್ಲಿ ವಿಧಾನಸಭೆ ಮಾಜಿ ಅಧ್ಯಕ್ಷ, ಹಾಲಿ ಶಾಸಕ ಕೆ.ಆರ್.ರಮೇಶ್‌ಕುಮಾರ್ ಅವರು ಪ್ರಸ್ತಾಪಿಸಿದ ಭ್ರಷ್ಟಾಚಾರ ವಿಷಯಕ್ಕೆ ಅವರು ಉತ್ತರ ನೀಡಿದರು.
ನಮ್ಮ ಸರ್ಕಾರ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದ ರೀತಿಯಲ್ಲಿ ಉತ್ತಮ ಆಡಳಿತ ನೀಡಲು ಬದ್ಧವಾಗಿದೆ. ಆದರೆ, ರಾಜಕಾರಣಿಗಳೇ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ, ಕುಮ್ಮಕ್ಕು ನೀಡಿದರೆ ಸುಧಾರಣೆ ಹೇಗೆ ಸಾಧ್ಯವೆಂದು ಪ್ರಶ್ನಿಸಿದರು.
ನಾನು ಇಲ್ಲವೇ ಶಾಸಕ ರಮೇಶ್‌ಕುಮಾರ್ ಪ್ರಮಾಣಿಕರಾಗಿದ್ದರೆ ಸಾಲದು, ಪ್ರತಿಯೊಬ್ಬ ವ್ಯಕ್ತಿ ಅದರಲ್ಲೂ ರಾಜಕಾರಣಿಗಳು ಪರಿಶುದ್ಧರಾದಾಗ ಮಾತ್ರ ಭ್ರಷ್ಟಾಚಾರ ತಡೆಯಬಹುದು. ನಮ್ಮಲ್ಲಿ ಪ್ರಾಮಾಣಿಕರೂ ಇದ್ದಾರೆ. ಅದೇ ರೀತಿ ಅಪ್ರಾಮಾಣಿಕ ರಾಜಕಾರಣಿಗಳು ಇರುವುದರಿಂದಲೇ ಜೈಲಿಗೆ ಹೋಗುತ್ತಿದ್ದಾರೆ ಎಂದು ಯಾರ ಹೆಸರನ್ನು ಪ್ರಸ್ತಾಪಿಸದೆ ಸೂಚ್ಯವಾಗಿ ನುಡಿದರು.
ಸಮ್ಮನೆ ಜೈಲಿಗೆ ಯಾರೂ ಹೋಗುವುದಿಲ್ಲ. ತಪ್ಪು ಮಾಡಿರುವುದರಿಂದಲೇ ಶಿಕ್ಷೆ ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಕೆಲ ಶಾಸಕರು ಜೈಲಿಗೆ ಹೋಗಿರುವುದಕ್ಕೆ ಅವರು ಮಾಡಿರುವ ತಪ್ಪುಗಳೇ ಕಾರಣವೆಂದು ಗಣಿ ಹಗರಣದಲ್ಲಿ ಸಿಬಿಐನಿಂದ ಬಂಧಿಸಲ್ಪಟ್ಟಿರುವ ರಾಜಕಾರಣಿಗಳ ಕುರಿತು ಮಾರ್ಮಿಕವಾಗಿ ಹೇಳಿದರು.

ಜನಪ್ರತಿನಿಧಿ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸುಗ್ರೀವಾಜ್ಞೆ ನಿರ್ಧಾರಕ್ಕೆ ಬದ್ಧ: ಸಿಎಂ
ಕೋಲಾರ: ಕಳಂಕಿತ ಸಂಸದರು ಮತ್ತು ಶಾಸಕರ ಸದಸ್ಯತ್ವ ಅನೂರ್ಜಿತಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಕೈಗೊಂಡಿರುವ ನಿರ್ಧಾರಕ್ಕೆ ತಾವು ಬದ್ಧರಾಗಿರುವುದಾಗಿ ಸಿದ್ಧರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಸುಪ್ರೀಂ ಕೋರ್ಟಿನ ತೀರ್ಪಿನ ಬಗ್ಗೆ ಕಾಂಗ್ರೆಸ್ ಮಾತ್ರವಲ್ಲದೆ ಅನೇಕ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿರುವುದರಿಂದ ಕೇಂದ್ರ ಸಚಿವ ಸಂಪುಟದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಲಾಗಿದೆ ಎಂದರು.
ಗಣಿ ಹಗರಣದಲ್ಲಿ ಸಚಿವ ಸಂತೋಷ್ ಲಾಡ್‌ರನ್ನು ವಜಾ ಮಾಡುವಂತೆ ಬಿಜೆಪಿಯ ಮುಖಂಡರು ರಾಜ್ಯಪಾಲರಿಗೆ ದೂರು ನೀಡಿರುವ ಬಗ್ಗೆ ಪ್ರಶ್ನಿಸಿದಾಗ, ಗಣಿ ಅವ್ಯವಹಾರದಲ್ಲಿ ಸಂತೋಷ್ ಲಾಡ್ ಭಾಗಿಯಾಗಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಒಂದು ವೇಳೆ ಬಿಜೆಪಿಯವರು ಸೂಕ್ತ ದಾಖಲೆ ನೀಡಿದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದರು.
ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ನೀಡಿರುವ ವರದಿಯಲ್ಲಿ ಸಚಿವ ಸಂತೋಷ್ ಲಾಡ್ ಹೆಸರು ಪ್ರಸ್ತಾಪವಿಲ್ಲದಿದ್ದರೂ ಏಕೆ ಅವರ ರಾಜಿನಾಮೆಗೆ ಒತ್ತಾಯ ಮಾಡುತ್ತಿದ್ದಾರೋ ಅರ್ಥವಾಗುತ್ತಿಲ್ಲವೆ ಎಂದು ಸಮರ್ಥಿಸಿಕೊಂಡರು.

ಮರಳು ದಂಧೆ ತಡೆಯದಿದ್ದರೆ ಡಿಸಿ, ಎಸ್ಪಿ ಹೊಣೆ: ಮುಖ್ಯಮಂತ್ರಿ
ಕೋಲಾರ: ಜಿಲ್ಲೆ ಸೇರಿದಂತೆ ರಾಜ್ಯದ ಇತರ ಕಡೆ ಮರಳು ಲೂಟಿ ತಪ್ಪಿಸಲು ಸರ್ಕಾರ ಹೊಸ ಮರಳು ನೀತಿ ಜಾರಿಗೆ ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಬುಧವಾರ ವೇಮಗಲ್‌ನಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ಮರಳು ನೀತಿ ಜಾರಿ ಮಾಡದ ಕಾರಣ ಮರಳು ಲೂಟಿ ನಡೆಯುತ್ತಿದೆ. ನಮ್ಮ ಸರ್ಕಾರ ಈಗ ಸ್ಪಷ್ಟವಾದ ಮರಳು ನೀತಿ ಜಾರಿಗೆ ಸಿದ್ಧತೆ ನಡೆಸುತ್ತಿದ್ದು, ಇದಕ್ಕಾಗಿ ಉಪ ಸಮಿತಿ ರಚಿಸಲಾಗಿದೆ ಎಂದರು.
ಲೋಕೋಪಯೋಗಿ ಸಚಿವರು ಮರಳು ನೀತಿಗೆ ಸಂಬಂಧಿಸಿದಂತೆ ವರದಿ ನೀಡಿದ ಬಳಿಕ ಜಾರಿಗೆ ತರುತ್ತೇವೆಂದ ಸಿದ್ದರಾಮಯ್ಯ, ಅಲ್ಲಿಯವರೆಗೆ ಅಕ್ರಮವಾಗಿ ಮರಳು ಸಾಗಾಣೆ ಆಗುವುದನ್ನು ನಿಯಂತ್ರಿಸುವುದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಹೊಣೆಯಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು. ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರ, ಹಾಸ್ಟೆಲ್‌ಗಳಲ್ಲಿನ ಸಮಸ್ಯೆ ಇದೆಲ್ಲಾ ಹಿಂದಿನ ಸರ್ಕಾರದ ಬಳುವಳಿ ಎಂದು ಇದೇ ಸಂದರ್ಭದಲ್ಲಿ ಶಾಸಕ ವರ್ತೂರ್ ಪ್ರಕಾಶ್ ಆರೋಪಕ್ಕೆ ಸೂಚ್ಯವಾಗಿ ಪ್ರತ್ಯುತ್ತರ ನೀಡಿದರು.

ಮುನಿಯಪ್ಪರಿಗೆ ಹೊಗಳಿಕೆಯ ಸರಮಾಲೆ
ಕೋಲಾರ: ನಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪರನ್ನು ಹೊಗಲಿ ಅಟ್ಟಕ್ಕೇರಿಸಿದಾಗ ಪಕ್ಕದಲ್ಲೇ ಇದ್ದ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಮುನಿಯಪ್ಪ ಜಯಭೇರಿ ಬಾರಿಸುವುದರಲ್ಲಿ ಸಂಶಯವಿಲ್ಲ ಎಂದಾಗ ಸಭೆಯಲ್ಲಿ ಕಾರ್ಯಕರ್ತರಿಂದ ಚಪ್ಪಾಳೆಗಳನ್ನು ಹೊಡೆಯುವ ಮೂಲಕ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.