ಪ.ಪಂಗಡಕ್ಕೆ ಶೇ.6.55 ಮೀಸಲಾತಿಗೆ ಒತ್ತಾಯ
ಕೋಲಾರ: ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಒತ್ತಾಯಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿದೆ. ಜಿಲ್ಲೆಗೆ ಸೆ.25 ರಂದು ಆಗಮಿಸಿದ್ದ ಮುಖ್ಯಮಂತ್ರಿಗಳಿಗೆ ಈ ಸಂಬಂಧ ಮನವಿ ಸಲ್ಲಿಸಿರುವ ಮಹಾಸಭಾದ ಮುಖಂಡರು ರಾಜ್ಯದಲ್ಲಿ ಸುಮಾರು 80 ಲಕ್ಷಕ್ಕೂ ಹೆಚ್ಚು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರಿದ್ದು ಕಾಡು ಸಂಸ್ಕೃತಿಯಿಂದ ನಾಡು ಸಂಸ್ಕೃತಿಯನ್ನು ಬೆಳೆಸುತ್ತಿರುವ ಈ ಜನಾಂಗಕ್ಕೆ ಸರ್ಕಾರ ಹೆಚ್ಚಿನ ಸಹಾಯ ಮಾಡಬೇಕೆಂದು ಕೋರಿದ್ದಾರೆ. 1917ರಲ್ಲಿ ಎಸ್.ಸಿ.ಮಿಲ್ಲರ್ ಸಮಿತಿ, 1961ರಲ್ಲಿ ನಾಗನಗೌಡ ಆಯೋಗ, 1971ರಲ್ಲಿ ಎಲ್.ಜಿ. ಹಾವನೂರು, 1975ರಲ್ಲಿ ಟಿ. ವೆಂಕಟಸ್ವಾಮಿ ಹಾಗೂ 1989ರಲ್ಲಿ ಚಿನ್ನಪ್ಪರೆಡ್‌ಡಿ ಆಯೋಗ ಜನಾಂಗದ ಪರವಾಗಿ ನೀಡಿರುವ ವರದಿಯನ್ನು ಸರ್ಕಾರ ಪುರಸ್ಕರಿಸಿಲ್ಲವೆಂದಿರುವ ಮುಖಂಡರು ಶೇ.3ರಿಂದ ಶೇ.6.55 ಮೀಸಲಾತಿ ಜಾರಿಗೆ ತರುವಂತೆ ಮಹಾಸಭಾದ ಮಾಲೂರು ತಾಲೂಕಿನ ಅಧ್ಯಕ್ಷ ನಾರಾಯಣಸ್ವಾಮಿ, ಕಾಡೇನಹಳ್ಳಿ ಗಣೇಶ, ದೊಡ್ಡ ಶಿವಾರ ನಾರಾಯಣಸ್ವಾಮಿ, ಮಾಸ್ತಿ ಟಿ. ಮುನಿಯಪ್ಪ ಆಗ್ರಹಿಸಿದ್ದಾರೆ.
60 ಶೌಚಾಲಯ ನಿರ್ಮಾಣಕ್ಕೆ ಚಾಲನೆ
ಕೋಲಾರ: ತಾಲೂಕಿನ ಶೆಟ್ಟವಾರಹಳ್ಳಿಯನ್ನು ಬಯಲು ಮಲವಿಸರ್ಜನೆ ನಿಷಿದ್ಧ ಗ್ರಾಮವನ್ನಾಗಿಸಲು 60 ಮನೆಗಳಿಗೆ ಶೌಚಾಲಯ ನಿರ್ಮಿಸುವ ಕಾಮಗಾರಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಿ.ಎಸ್.ಶ್ರೀನಾಥಗೌಡ ಚಾಲನೆ ನೀಡಿದ್ದಾರೆ.
ತಾಲೂಕಿನ ಮದನಹಳ್ಳಿ ಗ್ರಾಪಂಗೆ ಸೇರಿದ ಶೆಟ್ಟಿವಾರಹಳ್ಳಿ ಗ್ರಾಮ ಒಟ್ಟು 88 ಕುಟುಂಬಗಳಿದ್ದು, ಇದರಲ್ಲಿ 28 ಮನೆಗಳಿಗೆ ಮಾತ್ರವೇ ಶೌಚಾಲಯವಿತ್ತು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾದ ಗ್ರಾಮ ಪಂಚಾಯಿತಿ ನಿರ್ಮಲ ಭಾರತ ಅಭಿಯಾನದ ವತಿಯಿಂದ ಶೌಚಾಲಯ ರಹಿತ ಎಲ್ಲಾ 60 ಮನೆಗಳಿಗೂ ತಲಾ 4700 ಹಾಗೂ ಉದ್ಯೋಗ ಖಾತ್ರಿ ಯೋಜನೆಯಿಂದ ತಲಾ 4500 ನೀಡುತ್ತಾರೆಂಬ ಚಿಂತನೆಯೊಂದಿಗೆ ಪ್ರತಿ ಮನೆಗೂ ಭೇಟಿ ಮಾಡಿ ಮನವೊಲಿಸಲಾಯಿತು.
ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಗ್ರಾಪಂ ಅಧ್ಯಕ್ಷ ರಾಧಮ್ಮ, ಸದಸ್ಯರಾದ ನರೇಂದ್ರಬಾಬು, ಮಹೇಶ್ ಮತ್ತು ಮುಖಂಡರಾದ ಗೋಪಾಲಪ್ಪ ಇತರರ ನೇತೃತ್ವದಲ್ಲಿ ಗುದ್ದಲಿ ಪೂಜೆ ನೆರವೇರಿಸಿ 2 ತಿಂಗಳೊಳಗೆ ಎಲ್ಲ ಮನೆಗಳಿಗೆ ಶೌಚಾಲಯ ನಿರ್ಮಿಸಿ ಗ್ರಾಮಕ್ಕೆ ನಿರ್ಮಲ ಗ್ರಾಮ ಪುರಸ್ಕಾರ ಪಡೆಯುವ ಘನತೆ ತಂದು ಕೊಡಲು ನಿರ್ಧರಿಸಲಾಗಿದೆ.
ಈಗಾಗಲೇ ನಿರ್ಮಲ ಭಾರತ ಅಭಿಯಾನದ ವತಿಯಿಂದ 10 ದಿನಗಳ ಜಾಗೃತಿ ಕಾರ್ಯಾಗಾರ ತಾಲೂಕಿನ ಎಲ್ಲಾ ಗ್ರಾಪಂ ಸದಸ್ಯರಿಗೆ ನಗರದ ತಾಪಂ ಕಚೇರಿ ಆವರಣದಲ್ಲಿರುವ ಸಾಮರ್ಥ್ಯಸೌಧದಲ್ಲಿ ಹಮ್ಮಿಕೊಂಡಿದ್ದು, ಬಯಲು ಮಲ ವಿಸರ್ಜನೆ ರಹಿತ ಗ್ರಾಮಗಳ ನಿರ್ಮಾಣಕ್ಕೆ ಒತ್ತು ನೀಡುವಂತೆ ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಶೆಟ್ಟಿವಾರಹಳ್ಳಿಯನ್ನು ಪ್ರಥಮವಾಗಿ ಆಯ್ಕೆ ಮಾಡಿಕೊಂಡು ಗ್ರಾಮದ ಎಲ್ಲಾ ಮನೆಗಳಿಗೂ ಶೌಚಾಲಯ ನಿರ್ಮಾಣದ ಮಹತ್ವದ ಅರಿವು ಮೂಡಿಸಿದ್ದಲ್ಲದೇ ನಿರ್ಮಾಣಕ್ಕೆ ಗ್ರಾಮಸ್ಥರನ್ನು ಒಪ್ಪಿಸಿರುವುದು ಶ್ಲಾಘನೆಗೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

