ಕೋಲಾರ

ಮೌಢ್ಯಗಳಿಂದ ಮುಕ್ತರಾಗಲು ಜಾಗೃತಿ ಅಗತ್ಯ

Published On :

ಕ.ಪ್ರ. ವಾರ್ತೆ,ಕೋಲಾರ,ಸೆ.26
ಮೂಢ ನಂಬಿಕೆಗಳಿಂದ ಕೆಳ ವರ್ಗದ ಜನತೆ ದಾರಿ ತಪ್ಪುತ್ತಿದ್ದಾರೆ, ಸಮಾಜದಲ್ಲಿ ಮೌಢ್ಯಗಳನ್ನು ಬಿತ್ತುವ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆಯುತ್ತಿರುವುದರಿಂದ ಮೌಢ್ಯವನ್ನೇ ಸತ್ಯ ಎಂದು ಕೆಳ ವರ್ಗದ ಜನರು ತಿಳಿಯುತ್ತಿರುವುದರಿಂದ ಈ ವರ್ಗದ ಜನರನ್ನು ಮೌಢ್ಯದಿಂದ ಮುಕ್ತರನ್ನಾಗಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರವಂತರಿಗೆ ಸಲಹೆ ನೀಡಿದರು.
ಇಲ್ಲಿನ ಟಿ. ಚನ್ನಯ್ಯ ರಂಗಮನಂದಿರದಲ್ಲಿ ರಾಷ್ಟ್ರೀಯ ಕವಿ ಸಂತ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಹಿಂ.ವರ್ಗಗಳ ಇಲಾಖೆ ಹಾಗೂ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ  ಹಮ್ಮಿಕೊಂಡಿದ್ದ ಕಾಲುದಾರಿ ಸಂತ ಪರಂಪರೆ ಮತ್ತು ಕನಕದಾಸರು ಕುರಿತ ಎರಡು ದಿನಗಳ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮೌಢ್ಯಗಳನ್ನು ಸರಿ ಎನ್ನುವ ಜನ ಇರುವುದರಿಂದ  ಮಡೆಸ್ನಾನದಂತಹ ಅನಿಷ್ಟ ಪದ್ದತಿ ಇನ್ನೂ ಉಳಿದಿದೆ. ಅದನ್ನು ಸಮರ್ಥನೆ ಮಾಡಿಕೊಂಡು ಸರಿ ಎಂದು ವಾದಿಸುವವರು ಇದ್ದಾರೆ. ಮೌಢ್ಯತೆಯತೆಯನ್ನು ಬೆಳೆಸುವ ಪ್ರಯತ್ನವೂ ನಡೆದಿದೆ ಎಂದರು. ಒಂದು ಸುಳ್ಳನ್ನು ನೂರು ಬಾರಿ ಹೇರಿ ಸತ್ಯ ಎಂದು ಬಿಂಬಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಬಗ್ಗೆ ವಿಚಾರವಂತರು ಎಚ್ಚೆತ್ತುಕೊಂಡು  ಜನರಿಗೆ ವೈಚಾರಿಕತೆಯ ತಿಳಿವಳಿಕೆ ಮೂಡಿಸುವ ಕೆಲಸ ಮಾಡಬೇಕು ಎಂದು ನುಡಿದರು.
ಯಾರು ಹಸಿವನ್ನು ಅನುಭವಿಸುತ್ತಾರೆಯೋ ಅವರಿಗೆ  ಹಸಿವಿನ ಕಷ್ಟ ತಿಳಿಯುತ್ತದೆ.  ಬಟ್ಟೆ ಇಲ್ಲದೆಯೇ  ಚಳಿ, ಮಳೆ ಗಾಳಿಗೆ ನೊಂದಿರುವವರಿಗೆ ಅದರ ಅನುಭವ ಆಗುತ್ತದೆಯೇ ವಿಣ  ಸುಖದ ಸುಪ್ಪತ್ತಿಗೆಯಲ್ಲಿ ಅರಮನೆಯಲ್ಲಿ ಬೆಳೆದವರಿಗೆ ಅದರ ಅನುಭವ ಆಗಲು ಸಾಧ್ಯವಿಲ್ಲ ಎಂದು ನುಡಿದರು.
ಕನಕದಾಸರು  ಹಿಂದುಳಿದ ವರ್ಗದಿಂದ ಬಂದವರು. ಅವರಿಗೆ ಅನುಕೂಲ ಏನಿತ್ತು ಎಂದರೆ ಪಾಳೆಗಾರಿಕೆ  ಮನೆತನದಿಂದ ಬಂದವರವಾದರೂ ನೊಂದವರ ಬಗೆಗೆ ಸೆಳೆತವಿತ್ತು. ಶ್ರೀಮಂತ-ಬಡವ ಎಂಬ ಸಂಘರ್ಷ ನೋಡಲು ಹಾಗೂ  ರಾಮದಾಸ ಚರಿತೆಯಂತಹ ಮಹತ್ವದ ಕೃತಿಯನ್ನು ಸಮಾಜಕ್ಕೆ ನೀಡಲು ಸಾಧ್ಯವಾಯಿತು ಎಂದರು.
ಕೆಳಜಾತಿಯಲ್ಲಿಹುಟ್ಟಿದರು ಎಂಬ ಕಾರಣಕ್ಕೆ ಮೇಲ್ಜಾತಿಯಿಂದ ಆದ ಅವಮಾನವನ್ನು ಸಹಿಸದ ಕನಕದಾಸರು  ಮೇಲ್ವರ್ಗದವರ ಜತೆಯಲ್ಲಿ ಇದ್ದುಕೊಂಡು ಶೋಷಣೆ, ಜಾತಿ ಪದ್ದತಿ ವಿರುದ್ದ  ಶಾಂತಿಯ ಬಂಡಾಯ ಸಾರಿ ಜೀವನದರ್ಶನ ಮಾಡಿಸಿದ್ದು ಅವರ ಅದ್ಬುತ ಸಾಧನೆ ಎಂದು ಅಭಿಪ್ರಾಯ ಪಟ್ಟರು. ಖ್ಯಾತ ಜನಪದ ಗಾಯಕ ಪಿಚ್ಚಹಳ್ಳಿ ಶ್ರೀನಿವಾಸ್ ಜಾನಪದ ಶೈಲಿಯಲ್ಲಿ ಹಾಡಿರುವ ಕನಕದಾಸರ ಕೀರ್ತನೆಗಳ  ಮುತ್ತು ಬಂದಿದೆ ಕೇರಿಗೆಧ್ವನಿಸುರಳಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ  ಅವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್,  ಜಿಲ್ಲಾಧಿಕಾರಿ ಡಿ.ಕೆ. ರವಿ,  ರಾಷ್ಟ್ರೀಯ ಕವಿ ಸಂತ ಕನಕದಾಸ ಅಧ್ಯಯನ  ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ  ಕಾ.ತ. ಚಿಕ್ಕಣ್ಣ,  ಕಸಾಪ ಜಿಲ್ಲಾಧ್ಯಕ್ಷ ಜೆ.ಜಿ. ನಾಗರಾಜ್, ಸಾಹಿತಿ ಮರುಳ ಸಿದ್ದಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.