ಕೋಲಾರ

ಕಾಡುತ್ತಿರುವ ಅಸಮರ್ಪಕ ಪೈಪ್‌ಲೈನ್ ಸಮಸ್ಯೆ

Published On :

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಜಕ್ಕಲಮಡಗು ಜಲಾಶಯದ ಕಾಮಗಾರಿ ಬಹುತೇಕ ಪೂರ್ಣವಾಗಿದ್ದರೂ ಅಸಮರ್ಪಕವಾಗಿರುವ ಪೈಪ್ ಲೈನ್ ಸಮಸ್ಯೆ ಪ್ರಮುಖವಾಗಿ ಕಾಡುತ್ತಿದೆ.
 ಈ ನಡುವೆ ನಗರಸಭಾ ಸದಸ್ಯರ ನಿಯೋಗ ಗುರುವಾರ ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ, ನೂತನವಾಗಿ ಹಳೆಯ ಪೈಪ್ ಲೈನನ್ನು ಬದಲಾಯಿಸಿ ಹೊಸ ಪೈಪ್ ಲೈನ್ ಅಳವಡಿಸುವ ಸಲುವಾಗಿ 28 ಕೋಟಿ ರು.ಗಳ ಯೋಜನೆಗೆ ಅನುಮೋದನೆ ಪಡೆದಿದೆ.
ಸಚಿವರ ಭೇಟಿ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ. ಆಂಜಿನಪ್ಪ ನೇತೃತ್ವದಲ್ಲಿ 11 ಮಂದಿಯನ್ನೊಳಗೊಂಡ ಸದಸ್ಯರ ನಿಯೋಗ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರಕ್ಕೆ ಜಕ್ಕಲಮಡಗು ಜಲಾಶಯ ಕುಡಿಯುವ ನೀರಿನ ಪ್ರಮುಖ ಮೂಲವಾಗಿದೆ. ಇದೀಗ ಜಲಾಶಯವನ್ನು ಮೇಲ್ದರ್ಜೆಗೇರಿಸಿದ್ದು ಕಾಮಗಾರಿ ಪೂರ್ಣಗೊಂಡು ನೀರಿನ ಹಂಚಿಕೆಗೆ ಸಂಬಂಧಪಟ್ಟಂತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ,ಪ್ರಸ್ತುತ ದುರಸ್ತಿಯಲ್ಲಿರುವ ಪೈಪ್ ಲೈನ್ ಮಾರ್ಗದ ಮೂಲಕ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಜಲಾಶಯದಿಂದ ನೀರು ಸರಬರಾಜು ಮಾಡಲು ಚಿಕ್ಕಬಳ್ಳಾಪುರ ನಗರದಲ್ಲಿ ಪೈಪ್ ಲೈನ್ ಕಾಮಗಾರಿಯನ್ನು ಕೈಗೊಳ್ಳಬೇಕಾಗಿದೆ. ಇದಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ನೀರು ಸಿಗುತ್ತಿಲ್ಲ: ಈಗಾಗಲೇ ಜಿಲ್ಲಾ ಕೇಂದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿರುವ ಸಂದರ್ಭದಲ್ಲಿ ಕೊಳವೆ ಬಾವಿಗಳನ್ನು ಕೊರೆಸಿದರೂ ನೀರು ಸಿಗುತ್ತಿಲ್ಲ. ಇನ್ನು ಲಭ್ಯವಾದರೂ ತ್ವರಿತವಾಗಿ ಬತ್ತಿ ಹೋಗುತ್ತಿವೆ. ಇದಕ್ಕೆಲ್ಲಾ ಪರಿಹಾರ ಜಕ್ಕಲಮಡಗು ಜಲಾಶಯದಿಂದ ನೀರನ್ನು ಸರಬರಾಜು ಮಾಡಲು ತ್ವರಿತವಾಗಿ ಪೈಪ್ ಲೈನ್ ಹೊಸದಾಗಿ ಅಳವಡಿಸಬೇಕೆನ್ನುವುದನ್ನು ಸಚಿವರು ಗಮನಕ್ಕೆ ತಂದಿದ್ದಾರೆ. ಸಚಿವರ ಶಿಫಾರಸ್ಸಿನಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ,ಚಿಕ್ಕಬಳ್ಳಾಪುರ ನಗರದಲ್ಲಿ ಪೈಪ್ ಲೈನ್ ವ್ಯವಸ್ಥೆ ಹೊಸದಾಗಿ ಅಳವಡಿಸಲು 28 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ದಾಖಲೆ ಸಮೇತ ತಿಳಿಸಿದ್ದಾರೆ.
ನಿಯೋಗದಲ್ಲಿ ನಗರಸಭಾ ಸದಸ್ಯರಾದ ಎಸ್.ಎಂ. ರಫಿಕ್, ಮಂಜುನಾಥಾಚಾರಿ, ಕೆ.ವಿ. ಮಂಜುನಾಥ್, ಲೀಲಾವತಿ, ರತ್ನಮ್ಮ, ಮಹಾಕಾಳಿ ಬಾಬು, ಜಿ.ಎನ್. ನಾರಾಯಣಸ್ವಾಮಿ, ಮುನಿಕೃಷ್ಣ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.