ಕೋಲಾರ

ನಗರದಾದ್ಯಂತ ಸಮಸ್ಯೆಗಳ ಸರಮಾಲೆ!

Published On :

ಚಿಕ್ಕಬಳ್ಳಾಪುರ: ನಗರಸಭಾ ಸದಸ್ಯರ ವಿರೋಧದ ನಡುವೆಯೂ ಗುರುವಾರ ಶಾಸಕ ಕೆ. ಸುಧಾಕರ್ ಸುಡು ಬಿಸಿಲಿನ ನಡುವೆಯೂ ಕೈಗೊಂಡ ನಗರ ಪ್ರದಕ್ಷಿಣೆ ಕಾರ್ಯಕ್ರಮ ಸಂದರ್ಭದಲ್ಲಿ ಹಲವೆಡೆ ಅಸ್ವಚ್ಛತೆ, ಗಿಡಗಂಟೆಗಳು, ಕಸಕಡ್ಡಿಯಿಂದ ತುಂಬಿ ತುಳುಕಾಡುತ್ತಿದ್ದ ಚರಂಡಿಗಳು, ಟ್ಯುಬುಲೈಟ್‌ಗಳಿಲ್ಲದೇ ಕೇವಲ ನೆಪಕ್ಕೆ ಮಾತ್ರವಿದ್ದ ವಿದ್ಯುತ್ ಕಂಬಗಳು, ಹಾಳಾದ, ಜತೆಗೆ ಅಕ್ರಮವಾಗಿ ಒತ್ತುವರಿಯಾದ ರಸ್ತೆಗಳು ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಕಂಡು ಬಂದು ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿತು.
ನಗರದ ವಾಪಸಂದ್ರ ಬಳಿ ಇರುವ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶಾಸಕ ಸುಧಾಕರ್ ಅವರು ನಗರ ಪ್ರದಕ್ಷಿಣೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಮೊದಲನೇ ವಾರ್ಡಿನ ವಾಪಸಂದ್ರದ ಬಹುತೇಕ ಚರಂಡಿಗಳಲ್ಲಿ ಕೊಳಚೆ ನೀರು ಹರಿಯದೇ ನಿಂತುಕೊಂಡು ಗಬ್ಬು ವಾಸನೆ ಹರಡುತ್ತಿತ್ತು. ಅಲ್ಲಲ್ಲಿ ಬೆಳಿಗ್ಗೆ 11 ಗಂಟೆಯಾದರೂ ಕಸ ವಿಲೇವಾರಿಯಾಗಿರಲಿಲ್ಲ. ಇನ್ನೂ ಕಸ ಸಂಗ್ರಹಣೆಯ ಕಂಟೈನರ್ ಇಲ್ಲದ ಕಾರಣ ಮನೆಗಳವರು ಕಸವನ್ನು ತಂದು ಒಂದೆಡೆ ಹಾಕಿದ್ದರಿಂದ ರಾಶಿ ರಾಶಿಯಾಗಿ ಕಸ ಹಾಗೆಯೇ ಬಿದ್ದಿತ್ತು. ರಸ್ತೆಗಳ ಬದಿಗಳಲ್ಲಿ ಗಿಡಗಂಟೆಗಳು ಬೆಳೆದ ತ್ಯಾಜ್ಯ ವಸ್ತುಗಳಿಂದ ತುಂಬಿತ್ತು. ಇಂತಹ ದೃಶ್ಯ ಎಲ್ಲೆಡೆ ಕಂಡು ಬಂತು. ಇದರಿಂದ ಶಾಸಕ ಸುಧಾಕರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪ್ರತಿದಿನ ಕಸ ವಿಲೇವಾರಿಯಾಗುತ್ತಿದೆ ಎನ್ನುವುದಾದರೆ ಎಲ್ಲಿ ನೋಡಿದರೂ ರಾಶಿಗಟ್ಟಲೇ ಕಸ ಏಕೆ ಕಾಣುತ್ತದೆ. ಸಮರ್ಪಕವಾಗಿ ಕಸ ವಿಲೇವಾರಿಯಾಗದೇ ಸಾಂಕ್ರಾಮಿಕ ಕಾಯಿಲೆಗಳು ಹರಡಿದರೆ ಯಾರು ಜವಾಬ್ದಾರಿ, ಇನ್ನೆರಡು ದಿನಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಎಚ್ಚರಿಕೆ ನೀಡಿದರು.
ಒಂದು ಕಡೆ ಕ್ಲೀನಿಂಗ್: ಒಂದು ಕಡೆಯಿಂದ ಶಾಸಕರು ಜನರ ಸಮಸ್ಯೆಗಳನ್ನು ಆಲಿಸಿಕೊಂಡು ಬರುತ್ತಿದ್ದರೆ, ಮತ್ತೊಂದೆಡೆ ನಗರದ ಸಮಸ್ಯೆಗಳ ಬಗ್ಗೆ ಇಷ್ಟು ದಿನ ತಲೆ ಕೆಡಿಸಿಕೊಳ್ಳದೇ ಸುಮ್ಮನೆ ಇದ್ದ ಅಧಿಕಾರಿಗಳು ದೂರವಾಣಿ ಮೂಲಕ ಸಿಬ್ಬಂದಿಯನ್ನು ಎಚ್ಚರಿಸುವ ಕೆಲಸವನ್ನು ಮಾಡಿದರು. ಕಸ ವಿಲೇವಾರಿ ಮಾಡುವುದು ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಬೇಗ ಮುಗಿಸಿ ಎಂದೇಳುತ್ತಿದ್ದರು. ಸಮಸ್ಯೆಗಳನ್ನು ಎತ್ತಿ ತೋರಿಸುತ್ತಿದ್ದ ಸಂದರ್ಭದಲ್ಲಿ ನುಣುಚಿಕೊಳ್ಳಲು ಪ್ರಯತ್ನಿಸಿದರು. ಈ ನಡುವೆ 15 ದಿನಗಳಾದರೂ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ಕಸ ವಿಲೇವಾರಿಗೂ ಸಿಬ್ಬಂದಿಯೂ ಬರುತ್ತಿಲ್ಲ. ಗಬ್ಬು ವಾಸನೆಯಿಂದ ತೊಂದರೆಯನ್ನು ಅನುಭವಿಸುತ್ತಿರುವ ಬಗ್ಗೆ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಜನರು ಖುದ್ದು ಆರೋಪಿಸಿದಾಗ ಇನ್ನೆರಡು ದಿನಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಿ ಬಿಡುತ್ತೇವೆ ಎಂಬ ಸಹಜ ಉತ್ತರವನ್ನು ನೀಡಿ ಸಮಸ್ಯೆಯ ಬಗ್ಗೆ ಪಟ್ಟಿ ಮಾಡಿಕೊಳ್ಳಲು ಯತ್ನಿಸಿದರು.
ಬಹುತೇಕ ರೇಷನ್: ನಗರದ ಅಸ್ವಚ್ಛತೆ, ಕುಡಿಯುವ ನೀರಿನ ಸಮಸ್ಯೆ ಕುರಿತು ಅಹವಾಲುಗಳನ್ನು ಸ್ವೀಕರಿಸಲು ತೆರಳಿದ ಶಾಸಕರಿಗೆ ಹೆಚ್ಚಿಗೆ ಪಡಿತರ ಚೀಟಿ ಸಮಸ್ಯೆಯೇ ದೊಡ್ಡದಾಗಿ ಕಾಡಿತು. ಪಡಿತರ ಚೀಟಿಯನ್ನು ಕೊಟ್ಟಿದ್ದರೂ ನಮಗೆ ಪಡಿತರ ಪದಾರ್ಥಗಳನ್ನು ವಿತರಿಸುತ್ತಿಲ್ಲ. ನ್ಯಾಯಬೆಲೆ ಅಂಗಡಿಗಳಲ್ಲಿ ಸಬೂಬು ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ಇತ್ತ ಅಧಿಕಾರಿಗಳನ್ನು ಕೇಳಿದರೆ ಮುಂದಿನ ತಿಂಗಳು ನಿಮಗೆ ಪಡಿತರ ಕೊಡಲಾಗುತ್ತದೆ ಎಂದೇಳು ಎರಡ್ಮೂರು ತಿಂಗಳಿಂದ ಸತಾಯಿಸುತ್ತಿದ್ದಾರೆ ಎಂದು ಬಹುತೇಕ ಜನರು ಆರೋಪಿಸಿದರು. ಇದರ ನಡುವೆ ನಿವೇಶನ ಮತ್ತು ಮನೆಯನ್ನು ಕಟ್ಟಿಕೊಳ್ಳಲು ನೆರವು ನೀಡಬೇಕೆಂಬ ಮನವಿ ಸಹ ಕೇಳಿ ಬಂತು. ಇದಕ್ಕೆ ಅರ್ಜಿಗಳನ್ನು ಸ್ಥಳದಲ್ಲಿಯೇ ಸ್ವೀಕರಿಸಿ ಇತ್ಯರ್ಥಪಡಿಸಲು ಶಾಸಕರು ಸೂಚನೆ ನೀಡಿದರು.

ನನಗೆ ಅನುಮತಿ ಬೇಕಾಗಿಲ್ಲ
ಶಾಸಕರ ನಡಿಗೆ ಜನರ ಬಳಿಗೆ ಎನ್ನುವಂತೆ ಶಾಸಕನಾಗಿ ಜನರು ಬಳಿಗೆ ಹೋಗಿ ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ. ಇದಕ್ಕೆ ನಗರಸಭೆ ಸದಸ್ಯರ ಅನುಮತಿ ಬೇಕಾಗಿಲ್ಲ ಎಂದು ಶಾಸಕ ಕೆ. ಸುಧಾಕರ್ ತಿಳಿಸಿದರು. ನಗರದ ಪ್ರದಕ್ಷಿಣೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಮ್ಮ ಮೇಲೆ ನಂಬಿಕೆಯಿಟ್ಟು ಶಾಸಕನನ್ನಾಗಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸಮಸ್ಯೆಗಳನ್ನು ಆಲಿಸುವುದರ ಜತೆಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ನಗರ ಪ್ರದಕ್ಷಿಣೆ ನಡೆಸುತ್ತಿರುವಾಗ ಬಹುತೇಕ ಎಲ್ಲಾ ಕಡೆ ಸಮಸ್ಯೆಗಳು ಜಾಸ್ತಿ ಕಂಡು ಬರುತ್ತಿವೆ. ನಿಜವಾಗಲೂ ನಗರಸಭಾ ಸದಸ್ಯರು ತಮ್ಮ ಕೆಲಸಗಳನ್ನು ಸರಿಯಾಗಿ ಮಾಡುತ್ತ ತಮ್ಮ ವಾರ್ಡುಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದ್ದರೆ ಜನರು ವಾರ್ಡುಗಳಲ್ಲಿನ ಸಮಸ್ಯೆಗಳನ್ನು ಶಾಸಕರ ಬಳಿಗೆ ಏಕೆ ತೆಗೆದುಕೊಂಡು ಬರುತ್ತಾರೆ ಎಂದು ಪ್ರಶ್ನಿಸಿದರು. ಬೇರೆ ಯಾರೇ ಏನೇ ಎಂದುಕೊಂಡರೂ, ಸಹಕಾರ ಸಿಗದಿದ್ದರೂ ಒಬ್ಬ ಜನಪ್ರತಿನಿಧಿಯಾಗಿ ನಾನು ಜನರ ಸಮಸ್ಯೆಗಳನ್ನು ಆಲಿಸಿ ಪ್ರಾಮಾಣಿಕವಾಗಿ ಪರಿಹರಿಸಲು ಗಮನ ಕೊಡುತ್ತೇನೆ. ಇದಕ್ಕೆ ಪ್ರತಿಯೊಬ್ಬರು ಸಹಕಾರ ಕೊಡಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಪೌರಾಯುಕ್ತ ರುದ್ರಮುನಿ, ಸದಸ್ಯ ಗಜೇಂದ್ರ, ನಗರಸಭೆ ಅಧಿಕಾರಿಗಳಾದ ಈರಣ್ಣ, ನಾಗೇಶ್, ರಾಮಯ್ಯ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.