ನೀರಿನ ಸಮಸ್ಯೆ ನಿವಾರಣೆ ಎಂದು?
-ಪಾ.ಶ್ರೀ. ಅನಂತರಾಮ್
ಕೋಲಾರ: ಕಾಂಗ್ರೆಸ್ ಸರ್ಕಾರ ರಚನೆಯಾದ ಕೂಡಲೇ ಬಯಲು ಸೀಮೆ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಬರಲಿದೆ, ಇದು ಕಾಂಗ್ರೆಸ್ ಪ್ರಣಾಳಿಕೆಯ ಬಳುವಳಿ, ಸರ್ಕಾರ ಮಾತು ತಪ್ಪಿದರೆ ಹೋರಾಡುವುದಾಗಿ ವೀರಾವೇಶದಿಂದ ಮಾತನಾಡಿದ್ದ ಜನಪ್ರತಿನಿಧಿಗಳು ನೀರಿನ ಸಮಸ್ಯೆ ನಿವಾರಣೆಗಾಗಿ ಕಾಲಮಿತಿ ನಿಗದಿಪಡಿಸುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುವುದನ್ನು ಏಕೆ ಮರೆತರು ಎಂಬುದು ಜಿಜ್ಞಾಸೆ ಮೂಡಿಸಿದೆ.
ಜಿಲ್ಲೆಗೆ ಬುಧವಾರ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಯಾವುದೇ ಜಿಜ್ಞಾಸೆ ಇಲ್ಲವೆಂದು ಹೇಳಿದರು. ಆದರೆ, ಯಾವ ಯೋಜನೆಯಿಂದ ಜನತೆಯ ಸಂಕಷ್ಟ ನಿವಾರಣೆ ಆಗುತ್ತದೆ, ಇದಕ್ಕೆ ಸರ್ಕಾರ ನಿಗದಿ ಮಾಡಿರುವ ಕಾಲಮಿತಿ ಏನೆಂಬುದನ್ನು ಮಾತ್ರ ತಿಳಿಸಲಿಲ್ಲ.
ವೇದಿಕೆಯಲ್ಲಿದ್ದ ಜಿಲ್ಲೆಯ ಜನಪ್ರತಿನಿಧಿಗಳು ಸಹ ನೀರು ಕೊಡಿ ಎಂದು ಬೇಡಿಕೆ ಮಂಡಿಸಿದರೆ ಹೊರತು ಸಮಸ್ಯೆ ನಿವಾರಣೆಗಾಗಿ ಒಂದು ನಿರ್ಧಿಷ್ಠವಾದ ಕಾಲಮಿತಿ ಘೋಷಣೆ ಮಾಡಿ ಎಂದು ಹೇಳುವುದಕ್ಕೆ ಧೈರ್ಯ ತೋರಲಿಲ್ಲ. ಮುಖ್ಯಮಂತ್ರಿಗಳು ಸಹ ಸ್ಪಷ್ಟ ಭರವಸೆ ನೀಡದಿರುವುದರಿಂದ ಜಿಜ್‌ಞಾಸೆ ಮುಂದುವರೆಯುವಂತಾಗಿದೆ.
ಮುಖ್ಯಮಂತ್ರಿಗಳೇ ಹೇಳಿರುವಂತೆ ಜಿಲ್ಲೆಯ ಅಂತರ್ಜಲ ಮಟ್ಟ ಪಾತಾಳ ಸೇರಿದೆ, 1200 ಅಡಿ ಭೂಮಿ ಕೊರೆದರೂ ಹನಿ ನೀರು ಸಿಗುತ್ತಿಲ್ಲ. ಫ್ಲೋರೈಡ್‌ನೀರಿನ ಬಳಕೆಯಿಂದ ಜನತೆಯ ಆರೋಗ್ಯ ಹದೆಗೆಡುತ್ತಿದೆ, ಜಾನುವಾರುಗಳ ಜೀವಕ್ಕೂ ಹಾನಿಯಾಗುತ್ತಿದೆ. ಕನಿಷ್ಠ ಎತ್ತಿನಹೊಳೆ ಯೋಜನೆಯನ್ನಾದರೂ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಕೋಲಾರಕ್ಕೆ ಕನಿಷ್ಠ 10 ಟಿಎಂಸಿ ನೀರನ್ನು ಕೊಡುವುದಕ್ಕೆ ಪ್ರಯತ್ನಿಸದಿದ್ದರೆ ಕೋಲಾರ ಜಿಲ್ಲೆ ಮತ್ತಷ್ಟು ಬರಡಾಗುವುದರಲ್ಲಿ ಅನುಮಾನವಿಲ್ಲ.
ಮುಖ್ಯಮಂತ್ರಿಗಳು ಜಿಲ್ಲೆಗೆ ಬಂದಿದ್ದ ಸಂದರ್ಭದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ನೀರಿಗಾಗಿಯೇ ಹೆಚ್ಚಿನ ಒತ್ತು ನೀಡಬೇಕಾಗಿತ್ತು. ನೀರಿಲ್ಲದೆ ಕೈಗಾರಿಕೆಗಳು ಬಂದರೂ ಪ್ರಯೋಜನವಾಗದು ಎಂದು ಮನವರಿಕೆ ಮಾಡಿಕೊಡಬೇಕಾಗಿತ್ತು, ಎತ್ತಿನ ಹೊಳೆ ಮತ್ತು ಡಾ.ಪರಮಶಿವಯ್ಯ ಯೋಜನೆ ಅನುಷ್ಠಾನಕ್ಕೆ ಇರುವ ಅಡೆ-ತಡೆ ನಿವಾರಣೆಗಾಗಿ ಆದ್ಯತೆ ನೀಡಿ, ಜನಪ್ರತಿನಿಧಿಗಳ ಸಭೆಯನ್ನು ನಡೆಸಲು ದಿನಾಂಕ ಪ್ರಕಟಿಸಿ, ಸಭೆಯಲ್ಲೇ ಸ್ಪಷ್ಟ ನಿರ್ಧಾರ ಪ್ರಕಟಿಸುವಂತೆ ಆಗ್ರಹಿಸಬೇಕಾಗಿತ್ತು.
ಮುಖ್ಯಮಂತ್ರಿಗಳು ಜಿಲ್ಲೆಗೆ ಮತ್ತೆ ಯಾವಾಗ ಭೇಟಿ ನೀಡುತ್ತಾರೋ ಹೇಳಲಾಗದು, ಮುಖಾಮುಖಿಯಾದ ಸಂದರ್ಭದಲ್ಲೇ ವಚನ ಬದ್ಧತೆ ಮಾಡಿಸಿದ್ದರೆ ಜನತೆಯಲ್ಲಿ ಭರವಸೆ ಮೂಡುತ್ತಿತ್ತು.
ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರು ಎತ್ತಿನ ಹೊಳೆ ಮತ್ತು ಡಾ.ಪರಮಶಿವಯ್ಯ ವರದಿಯ ಬಗ್ಗೆ ಉಂಟಾಗಿರುವ ಗೊಂದಲ ನಿವಾರಣೆಗಾಗಿ ಜನಪ್ರತಿನಿಧಿಗಳ ಸಭೆಯನ್ನು ಕರೆಯುವಂತೆ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಗಳು ಸಹ ಸಭೆ ನಡೆಸುವುದಕ್ಕೆ ಸಮ್ಮತಿ ನೀಡಿದ್ದಾರೆ. ಈ ಕೆಲಸ ಬೇಗನೆ ಆಗಬೇಕಾಗಿದೆ. ಶಾಶ್ವತ ನೀರಾವರಿ ಯೋಜನೆಯ ಹಾದಿಯನ್ನು ತಪ್ಪಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ, ನೀರಿನ ಹೆಸರಿನಲ್ಲಿ ರಾಜಕಾರಣ ಮಾಡುವ ದುರ್ಬುದ್ಧಿ ಹೊಂದಿರುವ ಕೆಲವರು ಸೃಷ್ಟಿ ಮಾಡುತ್ತಿರುವ ಗೊಂದಲದಿಂದ ಜನತೆಯ ಪ್ರಾಣ ಪಕ್ಷಿ ಹಾರಿ ಹೋಗುವಂತಾಗುತ್ತಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ಜನತೆಯಲ್ಲಿನ ಸಂಶಯ, ರಾಜಕೀಯ ಲಾಭಕ್ಕಾಗಿ ಹಂಬಲಿಸುತ್ತಿರುವ ವ್ಯಕ್ತಿಗಳಿಗೆ ಕಡಿವಾಣ ಹಾಕಿ ಜನತೆಯ ಹಿತ ಕಾಪಾಡಬೇಕಾಗಿದೆ. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಇದ್ದು ಶಾಶ್ವತ ನೀರಾವರಿ ಯೋಜನೆ ಕಾಲಮಿತಿಯಲ್ಲಿ ಅನುಷ್ಠಾನಕ್ಕೆ ತರಲು ಶ್ರಮಿಸಬೇಕಾಗಿದೆ. ಚಿಕ್ಕಬಳ್ಳಾಪುರ ಸಂಸದ,ಕೇಂದ್ರ ಸಚಿವ ವೀರಪ್ಪ ಮೊಯ್ಲಿಯವರು ಶಾಶ್ವತ ನೀರಾವರಿ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸಲು ಮನಮೊಲಿಸಬೇಕು, ಕೆ.ಎಚ್.ಮುನಿಯಪ್ಪ ಹಾಗೂ ವೀರಪ್ಪಮೊಯ್ಲಿ ಅವರಿಗೆ ಹೆಚ್ಚಿನ ಜವಾಬ್ದಾರಿ ವಹಿಸಿ ಇವರಿಬ್ಬರ ಮೂಲಕವೇ ಬಯಲು ಸೀಮೆ ಹಾಗೂ ಕರಾವಳಿ ಪ್ರದೇಶದ ಜನಪ್ರತಿನಿಧಿಗಳು ಒಂದೇ ವೇದಿಕೆಗೆ ಬರುವಂತೆ ಮಾಡಿದಾಗ ಮಾತ್ರ ಸಮಸ್ಯೆ ನಿವಾರಣೆಯಾಗಲು ಸಾಧ್ಯ.
ಎತ್ತಿನ ಹೊಳೆಗೆ ಆಡಳಿತಾತ್ಮಕ ಮಂಜೂರಾತಿ, ಟೆಂಡರ್ ಪ್ರಕ್ರಿಯೆ ಮುಗಿದಿರುವುದಾಗ ಕಾಮಗಾರಿಗೆ ಚಾಲನೆ ನೀಡುವುದಕ್ಕೆ ವಿಳಂಬ ಏಕೆ. ಲೋಕಸಭಾ ಚುನಾವಣೆಗೆ ಆಧಿಸೂಚನೆ ಹೊರಡಿಸಿದ ಮೇಲೆ ನೀತಿ ಸಂಹಿತೆಯ ನೆಪದಲ್ಲಿ ಯೋಜನೆ ಜಾರಿಗೆ ಮತ್ತಷ್ಟು ತೊಡಕು ಉಂಟಾಗಬಹುದು. ಚುನಾವಣೆ ಮುಗಿದ ಬಳಿಕ ರಾಜಕಾರಣದ ದಿಕ್ಕು ದೆಸೆ ಬದಲಾದರೆ ನೀರು ಸಿಗುವುದು ಇನ್ನಷ್ಟು ಕಷ್ಟವಾಗಬಹುದು. ಜಿಲ್ಲೆಯ ಜನಪ್ರತಿನಿಧಿಗಳು ಕೂಡಲೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಜನಪ್ರತಿನಿಧಿಗಳು ಸಭೆಗೆ ಕಾರ್ಯೋನ್ಮುಖರಾಗಬೇಕು. ಸಭೆಯಲ್ಲಿ ಅಂತಿನ ನಿರ್ಧಾರವಾಗಬೇಕು. ಕನಿಷ್ಠ ಮುಂದಿನ ಜನವರಿ ವೇಳೆಗಾದರೂ ಯೋಜನೆ ಅನುಷ್ಟಾನಕ್ಕೆ ಬರುವಂತೆ ಬದ್ಧತೆ ತೋರದಿದ್ದರೆ ಜನತೆ ಕ್ಷಮಿಸುವುದಿಲ್ಲ. ಕೃಷಿ ಸಚಿವ ಕೃಷ್ಣಬೈರೇಗೌಡರು ನುಡಿದಂತೆ ಜನಪ್ರತಿನಿಧಿಗಳು ಜನತೆಯ ಬಳಿ ಬರುವುದಕ್ಕೆ ಕಷ್ಟವಾಗಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

